ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳ ಪೈಕಿ ದೇವನಹಳ್ಳಿಯ ಕೋಟೆಯೂ ಒಂದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಈ ಕೋಟೆ ʼಟಿಪ್ಪು ಕೋಟೆʼ ಎಂದೇ ಪ್ರಸಿದ್ಧಿ.
ಸುಮಾರು 500 ವರ್ಷ ಹಳೆಯ ಕೋಟೆ ಇದಾಗಿದ್ದು, ಆಮೆ ಆಕಾರ ಹಾಗೂ ಅಂಡಾಕಾರದಲ್ಲಿ ಕೋಟೆಯನ್ನು ವಿನ್ಯಾಸ ಮಾಡಲಾಗಿದೆ. ಕೋಟೆಯ ಸುತ್ತಲೂ ಇಂಗ್ಲಿಷ್‌ನ ವಿ ಆಕಾರದ ಸಣ್ಣ ಸಣ್ಣ ರಂಧ್ರಗಳಿವೆ. ಇವು ಕೋಟೆಯ ಹೊರ ಭಾಗದಲ್ಲಿ ಶತ್ರುಗಳ ಚಲನವಲನಗಳ ಮೇಲೆ ನಿಗಾ ಇಡಲು ನಿರ್ಮಿಸಲಾಗಿತ್ತು ಎನ್ನುತ್ತಿದೆ ಇತಿಹಾಸ. ಕೋಟೆಯ ಮೇಲೆ ಕಾವಲು ಗೋಪುರಗಳಿವೆ. 20 ಎಕರೆ ವಿಸ್ತೀರ್ಣದಿಂದ ಕೂಡಿರುವ ಈ ಕೋಟೆ ಈಗಾಲೂ ದೇವನಹಳ್ಳಿಗೆ ಒಂದು ರೀತಿಯಲ್ಲಿ ರಕ್ಷಾ ಕವಚದಂತಿದೆ.
ಕೋಟೆಯ ಒಳಭಾಗದಲ್ಲಿ ಪುರಾತನ ವೇಣುಗೋಪಾಲ ಸ್ವಾಮಿ ದೇವಾಲಯವಿದೆ. ವರ್ಷಕೊಮ್ಮೆ ಬೇಸಿಗೆಯಲ್ಲಿ ಇಲ್ಲಿ ಅದ್ದೂರಿ ಜಾತ್ರಾ ಮಹೋತ್ಸವವೂ ನಡೆಯುತ್ತದೆ. ಈ ವೇಳೆ ಕೋಟೆಯ ಹಳೆಯ ವೈಭವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆ ದಿನ ಜಮಾಯಿಸುತ್ತಾರೆ.
ಕೋಟೆಯ ಇತಿಹಾಸ
ದೇವನಹಳ್ಳಿಗೆ ದೇವನದೊಡ್ಡಿ ಎಂಬ ಹೆಸರಿತ್ತು. 14ನೇ ಶತಮಾನದಲ್ಲಿ ಇಲ್ಲಿ ಊರು ಇತ್ತು ಎಂದು ಶಾಸನಗಳು ಹೇಳುತ್ತವೆ. ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಭೈರೇಗೌಡ ಕ್ರಿ.ಶ.1501ರಲ್ಲಿ ಈ ಕೋಟೆಯನ್ನು ಕಟ್ಟಿದರು. ಕ್ರಿ.ಶ 1747ರಲ್ಲಿ ನಂಜರಾಜನ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಈ ಕೋಟೆ ಮೈಸೂರು ರಾಜರ ಕೈಸೇರಿತು. ಬಳಿಕ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಕೋಟೆಯ ದುರಸ್ತಿ ಕಾರ್ಯ ನಡೆದು ಕಲ್ಲಿನ ಕೋಟೆ ತಲೆ ಎತ್ತಿತು ಎಂದು ಇತಿಹಾಸ ಹೇಳುತ್ತದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ ಕೇವಲ 37 ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಕೋಟೆಯನ್ನು ಕೇವಲ ಒಂದು ಗಂಟೆಯೊಳಗೆ ತಲುಪಬಹುದು. ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿಡ್ಲಘಟ್ಟ ಅಥವಾ ಚಿಕ್ಕಬಳ್ಳಾಪುರ ಮಾರ್ಗದ ಬಸ್ ಹತ್ತಿದರೆ ದೇವನಹಳ್ಳಿಯ ಮಾರ್ಗವಾಗಿಯೇ ಸಂಚರಿಸುತ್ತವೆ. ದೇವನಹಳ್ಳಿಯ ಹಳೆ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಸಾಗಿದರೂ ಕೋಟೆಯನ್ನು ಸೇರಿಕೊಳ್ಳಬಹುದು.
ನೇರವಾಗಿ ದೇವನಹಳ್ಳಿಗೇ ಸಂಪರ್ಕ ಕಲ್ಪಿಸುವ ಬಿಎಂಟಿಸಿ ಬಸ್‌ಗಳು ಸಾಕಷ್ಟಿವೆ. ಪ್ರವಾಸದ ಅನುಭವ ಇನ್ನು ಸೊಗಸಾಗಿರಬೇಕು ಎನ್ನುವವರು ದೇವನಹಳ್ಳಿಗೆ ಚುಕುಬುಕು ರೈಲಿನಲ್ಲಿಯೂ ಬಂದಿಳಿಯಬಹುದು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಂಚರಿಸುವ ರೈಲುಗಳು ದೇವನಹಳ್ಳಿಯಲ್ಲೂ ನಿಲುಗಡೆಯಾಗುತ್ತವೆ. ರೈಲು ನಿಲ್ದಾಣದ ಕೂಗಳತೆ ದೂರದಲ್ಲೇ ಟಿಪ್ಪು ಕೋಟೆ ಕಣ್ಣಿಗೆ ಕಾಣಿಸುತ್ತದೆ. ಕೋಟೆಯ ಒಳಗೆ ಟಿಪ್ಪು ಸುಲ್ತಾನ್ ಜನ್ಮಸ್ಥಳವೂ ಇದ್ದು, ಅದನ್ನೂ ನೋಡಬಹುದು. ಬೆಂಗಳೂರು ನೋಡಿ ಬೋರಾಗಿದೆ. ವಾರಾಂತ್ಯದಲ್ಲಿ ಅಥವಾ ಒಂದು ದಿನದಲ್ಲಿ ಯಾವುದಾದರೂ ಹೊಸ ಜಾಗವನ್ನು ನೋಡಿ ಬರಬೇಕು ಎನ್ನುವ ಆಲೋಚನೆಯಲ್ಲಿದ್ದವರಿಗೆ ಇದು ಸೂಕ್ತವಾದ ಆಯ್ಕೆ.
ದೇವನಹಳ್ಳಿಗೆ ಭೇಟಿ ನೀಡುವವರು ಇಲ್ಲಿಗೆ ಸಮೀಪದ ವಿಜಯಪುರದ ಚಿಕ್ಕವೀರಣ್ಣ ಸ್ವೀಟ್ಸ್‌ನ ಮೈಸೂರು ಪಾಕ್ ಸವಿಯದೇ ಬರುವುದಿಲ್ಲ. ವಿಜಯಪುರದ ಗಾಂಧಿ ಚೌಕದಲ್ಲಿರುವ ಈ ಸಿಹಿತಿನಿಸಿನ ಅಂಗಡಿಯಲ್ಲಿ ಮೈಸೂರುಪಾಕ್ ಜತೆಗೆ, ತುಪ್ಪದ ಅವಲಕ್ಕಿಯನ್ನೂ ಹೆಚ್ಚಿನ ಜನರು ಸವಿಯುವುದನ್ನು ಮರೆಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.