ADVERTISEMENT

ಕೈ ಬೀಸಿ ಕರೆಯುತ್ತಿದೆ ಪುಷ್ಕರಣಿ: ಮಳೆಗೆ ಚಿತ್ತಾಕರ್ಷಕಗೊಂಡ ಸ್ಮಾರಕ

ಸಂತೇಬೆನ್ನೂರು: ಸತತ ಮಳೆಗೆ ಚಿತ್ತಾಕರ್ಷಕಗೊಂಡ ಕಲಾತ್ಮಕ ಸ್ಮಾರಕ

ಕೆ.ಎಸ್.ವೀರೇಶ್ ಪ್ರಸಾದ್
Published 14 ಸೆಪ್ಟೆಂಬರ್ 2021, 6:24 IST
Last Updated 14 ಸೆಪ್ಟೆಂಬರ್ 2021, 6:24 IST
ಸತತ ಮಳೆಗೆ ತುಂಬಿರುವ ಮನಮೋಹಕ ಸಂತೇಬೆನ್ನೂರಿನ ಪುಷ್ಕರಣಿ
ಸತತ ಮಳೆಗೆ ತುಂಬಿರುವ ಮನಮೋಹಕ ಸಂತೇಬೆನ್ನೂರಿನ ಪುಷ್ಕರಣಿ   

ಸಂತೇಬೆನ್ನೂರು: ಎರಡು ತಿಂಗಳಿಂದ ನಿರಂತರ ಜಡಿ, ಬಿರು ಮಳೆಗೆ ಇಲ್ಲಿನ ಐತಿಹಾಸಿಕ ಪುಷ್ಕರಣಿ ತುಂಬಿ ತುಳುಕುತ್ತಿದೆ. ನೀಲಾಕಾಶದ ಜಲದ ವರ್ಣದ ನಡುವೆ ವಸಂತ ಮಂಟಪದ ಥಳುಕಿನ ಚಿತ್ತಾಕರ್ಷಕ ಕಲಾಕೃತಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಕಲಾತ್ಮಕತೆಯಿಂದ ಕೂಡಿದ ಪುಷ್ಕರಣಿಯನ್ನು ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಪುಷ್ಕರಣಿ ಬಳಿ ಸೆಲ್ಫಿ ಹಾಗೂ ಗುಂಪು ಫೋಟೊ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಪ್ರತಿದಿನ300–400 ಜನರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ 500ಕ್ಕೂ ಹೆಚ್ಚು ಜನರುಪುಷ್ಕರಣಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪುಷ್ಕರಣಿಯಲ್ಲಿ ಹೆಚ್ಚುವರಿ ನೀರು ಸಂಗ್ರಹ ಜಲಚರಗಳಿಗೆ ವರದಾನವಾಗಿದೆ. ವಿವಿಧ ಪ್ರಬೇಧದ ಮೀನುಗಳು, ಆಮೆ, ನೀರು ಹಾವುಗಳ ಆವಾಸಸ್ಥಾನವಾಗಿದೆ. ಇವುಗಳ ಆಹಾರ ಸರಪಳಿಯ ಕೊಂಡಿಯಂತೆ ಬಕ, ಕೊಕ್ಕರೆಯು ಮೀನುಗಳನ್ನು ತಿನ್ನಲು ಹಾರಾಟ ನಡೆಸುತ್ತಿರುವುದು ಕಾಣಲು ಚೆಂದ. ಗಿಳಿ, ಪಾರಿವಾಳಗಳ ಕಲರವದಿಂದ ಪುಷ್ಕರಣಿ ಪರಿಸರಕ್ಕೆ ಮೆರುಗು ನೀಡುತ್ತಿದೆ ಎನ್ನುತ್ತಾರೆ ಪ್ರವಾಸಿಗ ಮಧುಸೂದನ್.

ADVERTISEMENT

ಮನಮೋಹಕ ಸೊಬಗು: 235 ಅಡಿ ಉದ್ದ ಹಾಗೂ 245 ಅಡಿ ಅಗಲದ ಪುಷ್ಕರಣಿ ಗ್ರಾನೈಟ್ ಕಲ್ಲಿನ ಕಲಾತ್ಮಕ ಶಿಲೆಗಳ ಮೆಟ್ಟಿಲುಗಳಿಂದ ಆವೃತಗೊಂಡಿದೆ. ಪುಷ್ಕರಣಿಯಲ್ಲಿ 54 ಮೆಟ್ಟಿಲುಗಳಿವೆ. ಈಗಾಗಲೇ 28 ಮೆಟ್ಟಿಲುಗಳು ನೀರು ತುಂಬಿದೆ. ನೀರಿನ ಮಧ್ಯದ ವಸಂತ ಮಂಟಪದ ಒಟ್ಟು ಎತ್ತರ 60 ಅಡಿ. ಇದನ್ನು ನೆಲಮಹಡಿ, ರಹಸ್ಯಮಹಡಿ, ವೀಕ್ಷಣಾ ಮಹಡಿ, ಉಯ್ಯಾಲೆ ಮಹಡಿ, ಗೋಪುರ ಮಹಡಿ ಎಂದು 5 ಅಂತಸ್ತುಗಳಾಗಿ ವಿಂಗಡಿಸಲಾಗಿದೆ. ಈಗಾಗಲೇ ನೆಲಮಹಡಿ, ರಹಸ್ಯ ಮಹಡಿ ನೀರಿನಿಂದ ಆವೃತವಾಗಿದೆ. ಸುಮಾರು 20 ಅಡಿಗಳಷ್ಟು ನೀರು ತುಂಬಿದೆ ಎನ್ನುತ್ತಾರೆ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್.

ದಕ್ಷಿಣ ದಿಕ್ಕಿನ ಮೆಟ್ಟಿಲುಗಳು ನಡುವೆ ಜಲಹರಿ ಮಂಟಪ ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಇದರಿಂದ 100 ಮೀ.
ದೂರದಲ್ಲಿರುವ ಆನೆಗುಂಡಿಯಲ್ಲಿ ಸಂಗ್ರಹಗೊಂಡ ಮಳೆ ನೀರು ಧುಮುಕುತ್ತದೆ. ಮುಂಗಾರು ಪೂರ್ವ, ಹಿಂಗಾರು ಬಿರುಮಳೆಗೆ ಪುಷ್ಕರಣಿಗೆ ನೀರು ತುಂಬುವುದು ವಾಡಿಕೆ. ಮುಂಗಾರು ಜಡಿ ಮಳೆಯಲ್ಲೇ ಉತ್ತಮ ನೀರು ಸಂಗ್ರಹಗೊಂಡಿರುವುದು ಪ್ರವಾಸಿಗರಿಗೆ ಮುದ ನೀಡುತ್ತಿದೆ ಎನ್ನುತ್ತಾರೆ ಸಿಬ್ಬಂದಿ ಮಲ್ಲೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.