ADVERTISEMENT

ಪ್ರವಾಸ: ಹೋಡೆನ್ ಹಾಗೆನ್ ಸಫಾರಿ- ವನ್ಯಾಲಯದ ದಿವ್ಯಾನುಭವ..

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಇದ್ದಾಗ ಹತ್ತಿರದ ಹೋಡೆನ್ ಹಾಗೆನ್ ಸಫಾರಿ

ಅತ್ತಿಹಳ್ಳಿ ದೇವರಾಜ್ ಹಾಸನ
Published 25 ನವೆಂಬರ್ 2023, 20:51 IST
Last Updated 25 ನವೆಂಬರ್ 2023, 20:51 IST
ಘೇಂಡಾಮೃಗ
ಘೇಂಡಾಮೃಗ   

ಅತ್ತಿಹಳ್ಳಿ ದೇವರಾಜ್

ಮೃಗಾಲಯ ಎಂದರೆ ಪಂಜರದೊಳಗಿನ ಪ್ರಾಣಿಗಳನ್ನೇ ಹೆಚ್ಚಾಗಿ ಕಂಡ ನಮಗೆ ವನ್ಯದ ಆಲಯದೊಳಗೆ ಅವುಗಳು ಸಲೀಸಾಗಿ ವಿಹರಿಸುತ್ತಾ ಬಂದು, ಮುದ್ದು ಮಾಡಿಸಿಕೊಂಡು ಹೋಗುವುದು ಬೆರಗು. ಅಂತಹ ಅನನ್ಯ ಪ್ರಾಣಿಪ್ರೀತಿಯನ್ನು ಹೋಡೆನ್ ಹಾಗೆನ್ ಸಫಾರಿ ಕಾಣಿಸಿತು.

----

ADVERTISEMENT

ನಮ್ಮ ರಾಜ್ಯದ ಮೈಸೂರು ಮತ್ತು ಬನ್ನೇರುಘಟ್ಟದ ಮೃಗಾಲಯ (ಕೆಲವು ಪ್ರಾಣಿಗಳನ್ನು ನೋಡಲು ಮಾತ್ರ ಇರುವ ಸಫಾರಿ) ನೋಡಿದ್ದ ನನಗೆ ನೂರಾರು ಪ್ರಾಣಿಗಳು ಇರುವ ಸಫಾರಿ ನೋಡುವ ಕುತೂಹಲ ಇತ್ತು.

ಎರಡು ತಿಂಗಳ ಹಿಂದೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಇದ್ದಾಗ ಹತ್ತಿರದ ಹೋಡೆನ್ ಹಾಗೆನ್ ಸಫಾರಿ ನೋಡಲು ಹೋಗಿದ್ದೆವು. ಆಫ್ರಿಕಾದ ಸೆರೆಂಗೆಟಿಯಲ್ಲಿ ಪ್ರಾಣಿಗಳಿರುವ ಪ್ರದೇಶವನ್ನು, ಅಲ್ಲಿದ್ದ ಪ್ರಾಣಿಗಳ ಸಂರಕ್ಷಣೆ ಮಾಡಿ ಸಫಾರಿ ಪಾರ್ಕ್ ಮಾಡಲಾಗಿದೆ. ಆದರೆ, ಜರ್ಮನಿಯ ಹೋಡೆನ್ ಹಾಗೆನ್‌ನಲ್ಲಿ, ಬೇರೆ ಬೇರೆ ದೇಶಗಳಿಂದಲೂ ತಂದ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಸಫಾರಿ ಪಾರ್ಕ್ ನಿರ್ಮಿಸಿದ್ದಾರೆ.

ಎಲ್ಲ ಪ್ರಾಣಿಗಳೂ ಮುದ್ದು ಮುದ್ದು

ಸುಮಾರು 490 ಎಕರೆ ವಿಸ್ತಾರದಲ್ಲಿ ಸ್ವತಂತ್ರವಾಗಿ ನೂರಾರು ಬಗೆಯ ಪ್ರಾಣಿಗಳು ಓಡಾಡಿಕೊಂಡಿವೆ. ಸ್ಥಳೀಯವಲ್ಲದ ಅನೇಕ ಪ್ರಾಣಿಗಳನ್ನು ಹೊರದೇಶಗಳಿಂದಲೂ ತಂದು ಇಲ್ಲಿ ಬಿಡಲಾಗಿದೆ. ಸಫಾರಿ ವಾಹನಗಳಲ್ಲದೆ ನಮ್ಮ ಸ್ವಂತ ವಾಹನಗಳಲ್ಲೂ ಸಫಾರಿ ಒಳಗೆ ಯಾವುದೇ ಅಂಜಿಕೆ ಇಲ್ಲದೆ ಹೋಗಬಹುದು. ಅಲ್ಲಲ್ಲಿ ಪಾರ್ಕ್ ರೇಂಜರ್‌ಗಳು ಎಚ್ಚರಿಕೆಯಿಂದ ಪಹರೆ ಕಾಯುತ್ತಾರೆ. ನಾವು ಈ ಸಫಾರಿಯೊಳಗೆ ಹೋಗುವಾಗ ಒಂಟೆ, ಸಾರಂಗಗಳು, ಎಲ್ಯಾಂಡ್, ಹುಲ್ಲೇಕರ ಕಾರಿನ ಬಳಿ ಬಂದು ಕಾರಿನೊಳಗೆ ಮುಖ ಹಾಕಿ, ಮುದ್ದಾಡಿಸಿಕೊಂಡು ಹೋದವು. ಹುಲಿ, ಬಿಳಿ ಹುಲಿ, ಸಿಂಹಗಳು, ವೈಲ್ಡ್ ಬೀಸ್ಟ್‌, ಘೇಂಡಾಮೃಗ ಯಾವ ಹೆದರಿಕೆಯೂ ಇಲ್ಲದೆ ವಾಹನಗಳ ಪಕ್ಕದಲ್ಲಿಯೇ ಓಡಾಡಿಕೊಂಡಿರುತ್ತವೆ. ಬೃಹತ್ ಸಿಂಹವೊಂದು ನಮ್ಮ ಕಾರಿನ ಸುತ್ತಲೂ ಒಮ್ಮೆ ಸುತ್ತಿ, ಹಾಗೆಯೇ ಬಂದು ರಸ್ತೆ ಅಡ್ಡಲಾಗಿ ಬಂದು ಮಲಗಿ, ಕೆಲ ಹೊತ್ತು ನಮ್ಮನ್ನು ಕಾಯಿಸಿ, ಮತ್ತೆ ಎದ್ದು ದಾರಿ ಬಿಟ್ಟಿತು. ಚಿಂಪಾಂಜಿಗಳಿಗೆ ಮಾತ್ರ ಅತ್ತಿತ್ತ ಹೋಗದಂತೆ ದ್ವೀಪ ನಿರ್ಮಿಸಿದ್ದಾರೆ.

ಯಾವ ಪ್ರಾಣಿಗಳನ್ನೂ ಬಂಧಿಸಿಟ್ಟಿಲ್ಲ

ಘೇಂಡಾಮೃಗ, ಹೇಸರಗತ್ತೆ, ಚಿರತೆ, ಹುಲ್ಲೇಕರ, ಕಾಪಿಬಾರ, ಲಾಮಾ, ಬ್ಯಾಕ್ಟ್ರಿಯನ್ ಕ್ಯಾಮೆಲ್, ಬಾರ್ಬೇರಿ ಶೀಪ್, ವೈಲ್ಡ್ ಬೀಸ್ಟ್‌ಗಳು, ಚಿರತೆ, ಜೀಬ್ರಾ, ಜಿರಾಫ್, ಆಫ್ರಿಕನ್ ಆನೆ, ಆಫ್ರಿಕನ್ ಬೊಂಗೋ, ಜಿಂಕೆ, ಆಂಟಿಲೋಪ್, ಕೃಷ್ಣ ಮೃಗ, ಕಾಡೆಮ್ಮೆ, ಬಬೂನ್‌ಗಳು, ಮೊಸಳೆ, ಎಮು ಹಾಗೂ ಆಸ್ಟ್ರಿಚ್ ಹೀಗೆ ಅನೇಕ ದೊಡ್ಡ ಪ್ರಾಣಿಗಳು ಕೂಡ ನಿರ್ಭೀತವಾಗಿ ಓಡಾಡಿಕೊಂಡಿವೆ. ಸಣ್ಣ ಪ್ರಾಣಿಗಳಾದ ಕಬ್ಬೆಕ್ಕು, ಸೂರಿ ಕ್ಯಾಟ್, ಮೊಲಗಳು, ಸ್ಕ್ವಿರಿಲ್ ಮಂಕಿ (ಸಣ್ಣ ಕೋತಿ) ಯಾವ ಅಂಜಿಕೆಯೂ ಇಲ್ಲದೆ ಪ್ರವಾಸಿಗರ ಮೈ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ಸ್ನೇಹಪರವಾಗಿರುತ್ತವೆ. ಅಪರೂಪದ ಕುರಿ, ಕೋಳಿ ಮುಂತಾದ ನೂರಾರು ಪ್ರಾಣಿ–ಪಕ್ಷಿಗಳನ್ನು ಅಲ್ಲಿ ಸಾಕಿದ್ದಾರೆ. ವರ್ಷದ ಎಂಟು ತಿಂಗಳ ಕಾಲ ಚಳಿ ಹಾಗೂ ಹವಾಮಾನ ವೈಪರೀತ್ಯ ಇರುವ ಜರ್ಮನಿಯಲ್ಲಿ ಬೇರೆ ಬೇರೆ ದೇಶಗಳ ಬೇರೆ ಹವಾಮಾನದ ಪ್ರಾಣಿಗಳು ಇರುವುದು ಆಶ್ಚರ್ಯಕರ. ಮತ್ತು ಅವುಗಳನ್ನು ಸಾಕಿ, ರಕ್ಷಣೆ ಮಾಡುವುದು ಕೂಡ ಬಹಳ ಕಷ್ಟದ ಕೆಲಸ.

ಪ್ರಾಣಿಗಳ ಪ್ರತಿರೂಪ

ಇನ್ನೊಂದು ವಿಶೇಷವೆಂದರೆ, ಈ ಪಾರ್ಕಿನೊಳಗೆ ಗೌತಮಬುದ್ಧ, ಶಿವ ಮತ್ತು ಗಣಪತಿಯ ಮೂರ್ತಿಗಳನ್ನು ಕೂಡ ಇಟ್ಟಿದ್ದಾರೆ. ಸಂಸ್ಥೆಯ ತೆರೆದ ವಾಹನದಲ್ಲಿ ಅಲ್ಲಿಯ ಸಣ್ಣ ಕಾಡು ಪ್ರದೇಶದಲ್ಲಿ ವಿವಿಧ ಪ್ರಾಣಿಗಳ ಪ್ರತಿರೂಪಗಳನ್ನು ಅಲ್ಲಲ್ಲಿ ಇಟ್ಟು, ಅವುಗಳ ಸ್ವರದಲ್ಲಿ ಕೂಗಿಸುತ್ತಾ, ಆ ಪ್ರಾಣಿಗಳ ಬಗ್ಗೆ ವಿವರವನ್ನು ಹೇಳುತ್ತಾರೆ. ಅವುಗಳಿಂದ ನಮ್ಮ ಮೈ ಮೇಲೆ ಪಿಚಕಾರಿಯಿಂದ ನೀರು ಚಿಮ್ಮಿಸಿ, ಜೀಪ್ ಡ್ರೈವರ್ ನಮ್ಮನ್ನು ಪುಳಕಗೊಳಿಸುತ್ತಾನೆ.

ಮಕ್ಕಳ ಮತ್ತು ದೊಡ್ಡವರ ಮನೋರಂಜನೆಯ ಪಾರ್ಕ್ ಇಲ್ಲಿಯೇ ಇದೆ. ಅತಿ ಎತ್ತರದ ಜಾರುಬಂಡೆ, ಗೋ ಕಾರ್ಟಿಂಗ್, ಆಳೆತ್ತರದ ಟೈರ್ ಉಳ್ಳ ಜೀಪಿನಲ್ಲಿ ಉಬ್ಬು ತಗ್ಗುಗಳಲ್ಲಿ ನೆಗೆದಾಡಿಸುತ್ತಾ, ಭಯ ಹುಟ್ಟಿಸುವ ಪ್ರವಾಸ, ನೀರಿನ ಮೇಲೆ ಬೋಟ್‌ಗಳನ್ನು ವೇಗವಾಗಿ ಚಾಲನೆ ಮಾಡಿ, ಪ್ರವಾಸಿಗರನ್ನು ಬೆಚ್ಚಿ ಬೀಳಿಸುತ್ತಾರೆ. ಅಲ್ಲದೆ ನೀರೊಳಗೆ ಟ್ರಾಲಿಯಲ್ಲಿ ಕುಳಿತು ಅತಿ ಎತ್ತರದಿಂದ ಕೆಳಕ್ಕೆ ಧುಮುಖಿಸುವ ಓಟ, ಕ್ಷಣ ಕಾಲ ನಮ್ಮನ್ನು ಭಯ ಬೀಳಿಸಿ, ಮಜಾ ಕೊಡುತ್ತದೆ. ದೊಡ್ಡವರಿಗೆ, ಮಕ್ಕಳಿಗೆ ಬೇಕಾದ ಅನೇಕ ಮನೋರಂಜನೆಯ ಕಾರ್ಯಕ್ರಮಗಳು ಕೂಡ ಇಲ್ಲಿವೆ. ಇಡೀ ದಿನ ಪ್ರವಾಸಿಗರು, ಸ್ವಲ್ಪವೂ ಬೇಸರವಾಗದ ರೀತಿ ಇಲ್ಲಿ ಕಾಲ ಕಳೆಯಬಹುದು. ಟಿಕೆಟ್ ಬೆಲೆ ದುಬಾರಿ ಅನ್ನಿಸಿದರೂ, ಹಣಕ್ಕೆ ತಕ್ಕಂತೆ ಬಹಳಷ್ಟು ಮನೋರಂಜನೆಗಳು ಇಲ್ಲಿವೆ.

ನಮ್ಮ ರಾಜ್ಯದಲ್ಲಿ ಚಳಿ, ಮಳೆ, ಬಿಸಿಲು ಹೀಗೆ ಹದವಾದ ವಾತಾವರಣ ಇರುವ ಬೆಂಗಳೂರು ಬಳಿಯ ಬನ್ನೇರುಘಟ್ಟದ ಝೂನಲ್ಲಿ ಪ್ರಾಣಿಗಳನ್ನು ಬಂಧಿಸಿಡುವ ಬದಲು ಇನ್ನಷ್ಟು ವಿವಿಧ ಪ್ರಾಣಿಗಳನ್ನು ವಿಸ್ತಾರವಾದ ಪ್ರದೇಶದಲ್ಲಿ ಓಡಾಡಲು ಬಿಡಬಹುದು ಮತ್ತು ಅಮೃತ್ ಮಹಲ್ ಕಾವಲಿನಂತಹ ವಿಸ್ತಾರ ಪ್ರದೇಶದಲ್ಲಿ ಕೂಡ ಇಂತಹ ಪ್ರಾಣಿಗಳ ಸಫಾರಿ ಮತ್ತು ಮನರಂಜನಾ ಪಾರ್ಕ್ ಅನ್ನು ಇದೇ ರೀತಿ ನಿರ್ಮಾಣ ಮಾಡಬಹುದಲ್ಲ ಎಂದೆನಿಸಿತು. 

ಮುದ್ದಾದ ರೆಡ್‌ ರಫ್ಡ್‌ ಲೆಮೂರ್‌ಗಳು
ರಸ್ತೆ ಮೇಲೆ ನಿರಾಳವಾಗಿ ಕುಂತಿದ್ದ ಸಿಂಹ
ಕಬ್ಬೆಕ್ಕಿಗೆ ಪ್ರೀತಿಯ ಸ್ಪರ್ಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.