ಅಂಟಾರ್ಕ್ಟಿಕಾ ಖಂಡವು ವಿಸ್ತೀರ್ಣದಲ್ಲಿ ಸರಿಸುಮಾರು ಆಸ್ಟ್ರೇಲಿಯಾದಷ್ಟೇ ಇದೆ. ಆದರೆ ಇದು ಅತ್ಯಂತ ಹೆಚ್ಚು ಗಾಳಿ ಬೀಸುವ, ಅತ್ಯಂತ ಕಡಿಮೆ ತಾಪಮಾನ ಹೊಂದಿರುವ ಹಾಗೂ ಮನುಷ್ಯನ ಪಾಲಿಗೆ ಅತ್ಯಂತ ದುರ್ಗಮವಾಗಿರುವ ಖಂಡ. ಈ ಖಂಡದಲ್ಲಿ ಅಲ್ಲಿನ ಮೂಲನಿವಾಸಿಗಳು ಎನ್ನುವ ಜನಾಂಗವೇ ಇಲ್ಲ.
ಆ ಖಂಡದ ಮುಖ್ಯವಾದ ಪ್ರದೇಶದಲ್ಲಿ ಮೊದಲ ನೆಲೆ ಸ್ಥಾಪಿಸಿದ ದೇಶ ಬ್ರಿಟನ್. ಅದು ಸಾಧ್ಯವಾಗಿದ್ದು ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ. ಆಗ ನಾಜಿ ಜರ್ಮನಿ ಅಥವಾ ಜರ್ಮನಿಯ ಪರ ಸಹಾನುಭೂತಿ ಹೊಂದಿದ್ದ ಅರ್ಜೆಂಟೀನಾ ದೇಶವು ಅಂಟಾರ್ಕ್ಟಿಕಾದಲ್ಲಿ ತಮ್ಮ ನೆಲೆ ಸ್ಥಾಪಿಸದಿರಲಿ ಎಂಬ ಕಾರಣಕ್ಕೆ ಬ್ರಿಟನ್ ತಾನು ಅಲ್ಲಿ ನೆಲೆ ಸ್ಥಾಪಿಸಿತು.
ಎರಡನೆಯ ವಿಶ್ವಯುದ್ಧದ ನಂತರದ ಅವಧಿಯಲ್ಲಿ ಹಲವು ದೇಶಗಳು ಅಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದವು. ಭಾರತೀಯರ ಮೊದಲ ತಂಡ ಆ ಖಂಡದ ಕಡೆ ಮೊದಲ ಬಾರಿಗೆ ಹೊರಟಿದ್ದು 1981ರ ಡಿಸೆಂಬರ್ 9ರಂದು. ಆ ತಂಡವು ಗೋವಾದ ಕಡಲ ತೀರದಿಂದ ಹೊರಟಿತ್ತು. ನಂತರ, ಜನವರಿ ತಿಂಗಳ ಆರಂಭದಲ್ಲಿ ಆ ತಂಡವು ಅಂಟಾರ್ಕ್ಟಿಕಾ ಖಂಡದ ಪೂರ್ವ ತೀರವನ್ನು ತಲುಪಿತು.
ಆ ಯಾನದ ನಾಯಕ ಆಗಿದ್ದ ವಿಜ್ಞಾನಿ ಡಾ. ಸೈಯದ್ ಜಹೂರ್ ಖಾಸಿಂ ಅವರು ಮಂಜುಗಡ್ಡೆಯ ಆ ಖಂಡದಲ್ಲಿ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜ ಹಾರಿಸಿದರು. ಇದು ಸಾಧ್ಯವಾಗಿದ್ದು 1982ರ ಜನವರಿ 9ರಂದು.
ಖಾಸಿಂ ಅವರ ತಂಡದಲ್ಲಿ 14 ಜನ ಸದಸ್ಯರು ಇದ್ದರು. ಅವರೆಲ್ಲ ವಿಜ್ಞಾನಿಗಳಾಗಿದ್ದರು ಅಥವಾ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಅಷ್ಟೂ ಜನರಿಗೆ ಹಿಮಾಲಯದಲ್ಲಿ ಮೂರು ತಿಂಗಳ ಅವಧಿಯ ತರಬೇತಿ ನೀಡಲಾಗಿತ್ತು. ಈ ತಂಡವು ಅಂಟಾರ್ಕ್ಟಿಕಾ ಖಂಡದಲ್ಲಿ ಹತ್ತು ದಿನ ಇತ್ತು.
ಇದಾದ ಎರಡು ವರ್ಷಗಳ ನಂತರ ಆ ಖಂಡದಲ್ಲಿ ಭಾರತದ ಶಾಶ್ವತ ಸಂಶೋಧನಾ ಕೇಂದ್ರ ‘ದಕ್ಷಿಣ ಗಂಗೋತ್ರಿ’ಯನ್ನು ಆರಂಭಿಸಲಾಯಿತು. ನಂತರದ ಎರಡು ದಶಕಗಳ ಅವಧಿಯಲ್ಲಿ ‘ಮೈತ್ರಿ’ ಹಾಗೂ ‘ಭಾರತಿ’ ಎನ್ನುವ ಸಂಶೋಧನಾ ಕೇಂದ್ರಗಳನ್ನು ಅಲ್ಲಿ ಆರಂಭಿಸಲಾಯಿತು.
ಅಷ್ಟೊಂದು ದೂರ ಇರುವ, ಬರೀ ಮಂಜುಗಡ್ಡೆಯಿಂದಲೇ ತುಂಬಿರುವ ಆ ಖಂಡದಲ್ಲಿ ಒಂದಕ್ಕಿಂತ ಹೆಚ್ಚಿನ ಶಾಶ್ವತ ನೆಲೆಗಳನ್ನು ಹೊಂದಿರುವ ದೇಶಗಳ ಸಂಖ್ಯೆ ಒಂಬತ್ತು. ಆ ದೇಶಗಳಲ್ಲಿ ಭಾರತವೂ ಒಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.