ಕಳೆದ ಬೇಸಿಗೆಯಲ್ಲಿ ಸಿಕ್ಕಿಂ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಕೆಲವು ಚಾರಣಿಗರು 5 ಸಾವಿರ ಮೀಟರ್ ಎತ್ತರದ ಪರ್ವತ ಏರುತ್ತಿದ್ದರು. 'ನಾನೂ ಒಮ್ಮೆ ಇಲ್ಲಿಗೆ ಕಾಲ್ನಡಿಗೆಯಲ್ಲಿ ಬರಲೇಬೇಕು' ಅಂತ ಅಂದೇ ತೀರ್ಮಾನಿಸಿದೆ. ಕಾಕತಾಳೀಯ ಎಂಬಂತೆ ನನ್ನ ಸ್ನೇಹಿತರು ಕೂಡ ಅಲ್ಲಿಗೆ ಚಾರಣ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಒಂಬತ್ತು ಮಂದಿ ಸಮವಯಸ್ಕರು ಸೇರಿ ಸಿಕ್ಕಿಂನ ಸ್ಥಳೀಯ ಚಾರಣ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡೆವು.
ನವೆಂಬರ್ 23 ರಂದು ಬೆಂಗಳೂರಿಂದ ಸಿಕ್ಕಿಂಗೆ ಪ್ರಯಾಣಿಸಿದೆವು. ಸಿಕ್ಕಿಂ ಮತ್ತು ವಿಮಾನ ನಿಲ್ದಾಣ ತುಸು ದೂರವಿದ್ದ ಕಾರಣ ಡಾರ್ಜಿಲಿಂಗ್ ಬಳಿಯ ಕಾಲಿಂಪಾಂಗ್ ನಲ್ಲಿ ರಾತ್ರಿ ತಂಗಿದೆವು. ಮರುದಿನ ಕಾಲಿಂಪಾಂಗ್ ನಲ್ಲಿ ಸೂರ್ಯೋದಯ ಕಣ್ತುಂಬಿಕೊಂಡೆವು. ಕಾಲಿಂಪಾಂಗ್ ಸ್ಥಳೀಯ ಮಾರ್ಕೆಟ್ ಸುತ್ತಿ, ಪಶ್ಚಿಮ ಸಿಕ್ಕಿಂ ಕಡೆಗೆ ಪ್ರಯಾಣ ಬಳಸಿದೆವು. ಸಂಜೆ 6 ಗಂಟೆ ಹೊತ್ತಿಗೆ ಯುಕ್ಸೋಮ್ ತಲುಪಿದೆವು. ಯುಕ್ಸೋಮ್, ಪಶ್ಚಿಮ ಸಿಕ್ಕಿಂನಲ್ಲಿ ಇರುವ ಒಂದು ಪುಟ್ಟ ಗ್ರಾಮ. ಕಾಂಚನಗಂಗಾ ರಾಷ್ಟೀಯ ಉದ್ಯಾನಕ್ಕೆ ಹೋಗಲು ಇದೇ ಹೆಬ್ಬಾಗಿಲು.
ಗೋಯೇಚಲ(Goechala), ಭಾರತದಲ್ಲೇ ಅತ್ಯಂತ ಕಠಿಣವಾದ ಚಾರಣದ ಹಾದಿ. ನಮಗೆ ನಿಗದಿಯಾಗಿದ್ದು ಒಟ್ಟು ಎಂಟು ದಿನಗಳ ಚಾರಣ. ಅಷ್ಟು ದಿನಗಳಿಗೆ ಬೇಕಾಗುವ ಪರಿಕರಗಳೊಂದಿಗೆ 'ಬ್ಯಾಗ್ ಪ್ಯಾಕ್' ಸಿದ್ಧವಾಯಿತು. ನಮ್ಮ ಟ್ರೆಕ್ ಗೈಡ್, ಚಾರಣದುದ್ದಕ್ಕೂ ನಾವು ಪಾಲಿಸಬೇಕಾದ ನೀತಿ ನಿಯಮಗಳನ್ನು ತಿಳಿಸಿದರು.
ಮೊದಲೆರಡು ದಿನ ಕಾಂಚನಗಂಗಾ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ. ಆ ದಟ್ಟ ಕಾಡಿನಲ್ಲಿ ನಡೆಯುತ್ತಾ, ಜಲಪಾತಗಳನ್ನು ದಾಟುತ್ತಾ ಸುಮಾರು 16 ಕಿ.ಮೀ ಕ್ರಮಿಸಿದೆವು. ಎರಡು ರಾತ್ರಿ ಟೆಂಟ್ ನಲ್ಲೇ ವಿಶ್ರಾಂತಿ. ಹುಣ್ಣಿಮೆಯ ಚಂದ್ರನನ್ನ ನೋಡುತ್ತಾ ರಾತ್ರಿ ಕಳೆಯುವುದೇ ಒಂದು ರೋಮಾಂಚನ.
ಮೂರನೇ ದಿನದ ಚಾರಣ ತುಂಬ ಕಠಿಣವಾಗಿತ್ತು, ಚೋಕಾ ಕ್ಯಾಂಪ್ ಸೈಟ್ ನಿಂದ ದ್ಜೋಂಗ್ರಿ (Dzongri)12 ಕಿಲೋಮೀಟರ್. ದಾರಿಯುದ್ದಕ್ಕೂ ಎತ್ತರಿಸಿದ ಗುಡ್ಡ ಬೆಟ್ಟಗಳನ್ನು ದಾಟಿ, ಕಟ್ಟಿಕೊಂಡು ತಂದಿದ್ದ ಬುತ್ತಿ ತಿಂದು, ಸುಮಾರು 7 ಗಂಟೆಗಳ ಸುದೀರ್ಘ ಪಯಣದ ನಂತರ ದ್ಜೋಂಗ್ರಿ ತಲುಪಿದೆವು. ಇದು ನಾಲ್ಕುಸಾವಿರ ಮೀಟರ್ ಎತ್ತರದಲ್ಲಿದೆ. ಇಲ್ಲಿ ಆಮ್ಲಜನಕದ ಕೊರತೆ. ನನ್ನ ಕೆಲವು ಸ್ನೇಹಿತರಿಗೆ ತಲೆ ನೋವು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತು.
ಸ್ಥಳೀಯ ಚಾರಣಿಗರನ್ನು ವಿಚಾರಿಸಿದಾಗ ತಿಳಿಯಿತು; ಅದೆಲ್ಲ ಈ ವಾತಾವರಣದಲ್ಲಿ ಸಾಮಾನ್ಯ ಅಂತ. ಯಾವುದೇ ವ್ಯತ್ಯಾಸವಿರುವ ವಾತಾವರಣಕ್ಕೆ ಹೋದಾಗೆ ನಾವು ಆದಷ್ಟು ತಲೆ ಹಾಗೂ ದೇಹ ಕವರ್ ಮಾಡಿಕೊಂಡು ಮುಂಜಾಗ್ರತೆವಹಿಸಬೇಕು. ಕಿವಿಯನ್ನು ಸದಾ ತಗೆದಿರಬೇಕು (ಹತ್ತಿ ಅಥವಾ ಬಟ್ಟೆಯಿಂದ ಮುಚ್ಚಬಾರದು). ಕಿವಿ ನಮ್ಮ ದೇಹವನ್ನು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ನಾಲ್ಕನೇ ದಿನ ಬೆಳಿಗ್ಗೆ 4ಗಂಟೆಗೆ ಎದ್ದು ದ್ಜೋಂಗ್ರಿ ಪೀಕ್ ಕಡೆಗೆ ಹೊರಟೆವು. 4200 ಮೀಟರ್ ಎತ್ತರವಿರುವ ಪೀಕ್ ನಿಂದ ಕಾಂಚನಗಂಗಾ ಪರ್ವತಶ್ರೇಣಿಗಳ ಮೇಲೆ ಸೂರ್ಯ ಉದಯಿಸುವ ದೃಶ್ಯ ನೋಡುವುದೇ ಒಂದು ಸಂಭ್ರಮದ ಕ್ಷಣ. ದ್ಜೋಂಗ್ರಿ ಬೀಳ್ಕೊಟ್ಟು ಗೋಯೇಚಲ ಕಡೆಗೆ ಪ್ರಯಾಣ ಬೆಳೆಸಿದೆವು.
ಮುಂದಿನ ಎರಡು ದಿನ 15 ಕಿಲೊಮೀಟರ್ ಕ್ರಮಿಸಿ ತಂಗ್ಸಿಂಗ್ ಹಾಗೂ ಲಾಮುನೇ ಕ್ಯಾಂಪ್ ಸೈಟ್ ನಲ್ಲಿ ಟೆಂಟ್ ಹಾಕಿ 4500 ಮೀಟರ್ ಎತ್ತರ ವಾತಾವರಣಕ್ಕೆ ಒಗ್ಗಿಕೊಳ್ಳಲು ವಿಶ್ರಾಂತಿ ಪಡೆದೆವು. ಈ ಪ್ರದೇಶವು ಒಗ್ಲೆಂಥಂಗ್ ಕಣಿವೆ ಹಾಗೂ ಪ್ರೇಕ್ ಚು ನದಿಯ ಮಧ್ಯೆ ಹರಡಿಕೊಂಡಿದೆ. ಕ್ಷಣಕಾಲ ನನಗೆ ಲಡಾಕ್ ಬಯಲುಸೀಮೆ ನೋಡಿದಂತಾಯಿತು. ಮೋಡಚದುರಿದ ವಾತಾವರಣದಲ್ಲಿ ಪಂಧೀಮ್ ಹಾಗು ಕಾಂಚನಗಂಗಾ ಶಿಖರಗಳನ್ನು ನೋಡುತ್ತಾ ಮೈಮರೆತೆವು.
ನಾವೆಲ್ಲ ಇಷ್ಟು ದಿನದಿನ ಕಾದಿದ್ದ ಗಳಿಗೆ ಬಂದೆ ಬಿಟ್ಟಿತು. -20 ಡಿಗ್ರಿ ಯಲ್ಲಿ ಗೋಯೇಚಲ ವ್ಯೂ ಪಾಯಿಂಟ್-1 (500 ಮೀಟರ್) ನತ್ತ ಹೊರಡಲು ಬೆಳಿಗ್ಗೆ 3 ಗಂಟೆಗೆ ಪ್ರಯಾಣ ಆರಂಭಿಸಿದೆವು. ಟಾರ್ಚ್ ಬೆಳಕಲ್ಲಿ ಕಡಿದಾದ ರಸ್ತೆ ದಾಟಿ, ಗಮ್ಯಸ್ಥಾನ ತಲುಪಿದಾಗ 6 ಗಂಟೆ. ಸೂರ್ಯನ ಕಿರಣಗಳು, ಕಾಂಚನಗಂಗಾ ಮೇಲೆ ಬಿದ್ದತಕ್ಷಣ, ಶುಭ್ರ ಬಿಳಿ ಪರ್ವತ, ಚಿನ್ನದ ಹಾಗೆ ಕಂಗೊಳಿಸಿತು. ವಾಹ್ ಅದೇ ಭೂಲೋಕದ ಸ್ವರ್ಗ ಅಂದುಕೊಂಡೆ. ಮೈ ನಡುಗುವ ಚಳಿಯಲ್ಲೂ, ಗೋಯೇಚಲದ ಮೇಲೆ ಕರ್ನಾಟಕದ ಧ್ವಜ ಹಾರಿಸಿ, ಗ್ರೂಪ್ ಫೋಟೊ ತಗಿಸಿಕೊಂಡು, ಅಲ್ಲಿಂದ ನಿರ್ಗಮಿಸಿದೆವು.
4500 ಮೀಟರ್ ಎತ್ತರದಲ್ಲಿ ಸಮಿತಿ ಅನ್ನೋ ಸೆಮಿ ಫ್ರೋಜನ್ - ಮಿರರ್ ಲೇಕ್ ಇದೆ. ಈ ಕೆರೆಯಲ್ಲಿ ಪಂಧೀಮ್ ಪರ್ವತವು ತನ್ನ ಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಂಡಂತೆ ಭಾಸವಾಗುತ್ತದೆ. ನಾವು ಅಲ್ಲಿ ಕ್ಷಣಕಾಲ ವಿರಮಿಸಿ ಕೆಳಗೆ ಇಳಿಯಲು ಶುರುಮಾಡಿದೆವು.
ಇನ್ನೇನು ಚಳಿಗಾಲ ಶುರುವಾಗುವ ಸೂಚನೆಯಂತೆ ದಟ್ಟ ಮೋಡಗಳು ಸೃಷ್ಟಿಯಾಗುತಿದ್ದವು. ದಾರಿಯಲ್ಲಿ ಅಲ್ಲಲ್ಲಿ ಮಂಜುಗಡ್ಡೆ ಸೂರ್ಯನ ಬೆಳಕಿಗೆ ಕಂಗೊಳಿಸುವುದನ್ನು ನೋಡುತ್ತಾ, ಮುಂದಿನ 3 ದಿನ 5 ಸಾವಿರ ಮೀಟರ್ ನಿಂದ ಒಂದು ಸಾವಿರ ಮೀಟರ್ ವರೆಗೂ ಇಳಿದು, ಚಾರಣ ಆರಂಭಿಸಿದ ಪಾಯಿಂಟ್ ಯುಕ್ಸೋಮ್ ಬಂದು ಸೇರಿದೆವು. ಯುಕ್ಸೋಮ್ ನಿಂದ ಬೆಂಗಳೂರು ಕಡೆಗೆ ಪಯಣ ಬೆಳೆಸಿದೆವು.
**
ಚಾರಣದ ವಿವರ
* ಎಂಟು ದಿನಗಳ ಚಾರಣ
* ಒಂದು ಸಾವಿರ ಕಿ.ಮೀ ಪ್ರಯಾಣ
* ಬೇಸಿಗೆ - ಚಾರಣಕ್ಕೆ ಸೂಕ್ತ ಸಮಯ
* ಸಿಕ್ಕಿಂ ಸರ್ಕಾರದ ಆದೇಶದ ಅನ್ವಯ ಕಾಂಚನಗಂಗಾ ನ್ಯಾಷನಲ್ ಪಾರ್ಕ್ ನಲ್ಲಿ ಯಾರು ಕಾಯಂ ಆಗಿ ನೆಲೆಸುವಂತಿಲ್ಲ.
* ಚಾರಣದ ಸಾಮಗ್ರಿಗಳನ್ನು ಸಾಗಿಸಲು ಮ್ಯೂಲ್ಸ್ (ಕುದುರೆ+ಕತ್ತೆ) ಬಳಕೆ
* ಗೋಯೇಚಲ ಹಾಗೂ ಚೋಕಾ ನಡುವೆ ಕೋಕ್ಚೂರಾಂಗ್ ಅನ್ನೋ ಪುಟ್ಟ ಸ್ವಿಟ್ಜರ್ಲ್ಯಾಂಡ್ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.