ADVERTISEMENT

ಜಟಾಯು ಅರ್ಥ್ ಸೆಂಟರ್

ಸಂತೋಷ್ ರಾವ್ ಪೆರ್ಮುಡ
Published 29 ಮೇ 2019, 19:30 IST
Last Updated 29 ಮೇ 2019, 19:30 IST
ಜಟಾಯು ಅರ್ಥ್ ಸೆಂಟರ್ 
ಜಟಾಯು ಅರ್ಥ್ ಸೆಂಟರ್    

ನಾವು ಕೇರಳದ ಕೊಲ್ಲಂ ಜಿಲ್ಲೆಯ ಚಾದಮಂಗಲಂನಲ್ಲಿನ ವಿಶಾಲವಾದ ಬೆಟ್ಟದ ಮೇಲೆ ನಿಂತಿದ್ದೆವು. ಎದುರಿಗಿರುವ ಅಷ್ಟೇ ವಿಶಾಲವಾದ ಬೆಟ್ಟದ ತುದಿಯಲ್ಲಿ ಬೆಟ್ಟದಷ್ಟೇ ಗಾತ್ರದ ಹದ್ದು ಕುಳಿತಂತೆ ಕಾಣಿಸುತ್ತಿತ್ತು. ಸ್ವಲ್ಪ ಕಣ್ಣು ಕಿರಿದು ಮಾಡಿ, ತದೇಕ ಚಿತ್ತದಿಂದ ಗಮನಿಸಿದಾಗ, ಆ ಹದ್ದಿನ ಮೈಮೇಲೆ ಜನ ಓಡಾಡಿದಂತೆ ಕಾಣುತ್ತಿತ್ತು !

‘ಅರೆ, ಇದೇನಿದು’ ಎಂದು ಉದ್ಘರಿಸುವ ಷ್ಟರಲ್ಲೇ ಪಕ್ಕದಲ್ಲಿದ್ದವರು, ‘ಅದು ಜೀವಂತ ಹದ್ದು ಅಲ್ಲ. ಹದ್ದಿನ ಪ್ರತಿಕೃತಿ. ಅದನ್ನು ಜಟಾಯು ಪ್ರಕೃತಿ ಧಾಮ ಎನ್ನುತ್ತಾರೆ. ಅದಕ್ಕೆ ‘ಜಟಾಯು ಅರ್ಥ್ ಸೆಂಟರ್’ ಎಂಬ ಹೆಸರೂ ಇದೆ. ರಾಮಾಯಣದಲ್ಲಿ ಸೀತಾಪಹರಣದ ವೇಳೆ ರಾವಣನೊಂದಿಗೆ ಕಾದಾಡಿದ ಜಟಾಯು, ಇದೇ ಚಾದಮಂಗಲಂ ಬೆಟ್ಟದ ಮೇಲೆ ರೆಕ್ಕೆ ಮುರಿದುಕೊಂಡು ಬಿದ್ದಿತ್ತೆಂಬ ನಂಬಿಕೆ ಇದೆ. ಇದೇ ಕಾರಣಕ್ಕಾಗಿ ಬೆಟ್ಟದ ಮೇಲೆ ಜಟಾಯು ರೂಪದ ಪ್ರತಿಕೃತಿ ಮಾಡಿ, ಅದಕ್ಕೆ ಜಟಾಯು ಅರ್ಥ್ ಸೆಂಟರ್ ಎಂದು ಹೆಸರಿಟ್ಟಿದ್ದಾರೆ’ ಎಂದು ವಿವರಿಸಿದರು.

ಈ ಎಲ್ಲ ವಿವರಣೆ ಕೇಳಿದಾಗ ಮನಸ್ಸಿನಲ್ಲಿ ಕುತೂಹಲ ಮೂಡಿತು. ಜಟಾಯು ಕೇಂದ್ರ ನೋಡಲು ಮನಸ್ಸಾಯಿತು. ತಕ್ಷಣ, ಗೆಳೆಯರೊಂದಿಗೆ ಆ ಬೆಟ್ಟದ ಬಳಿ ಹೋದೆವು.

ADVERTISEMENT

ರಾಮಾಯಣದಲ್ಲಿ ಜಟಾಯು ರೆಕ್ಕೆ ಮುರಿದುಕೊಂಡು ಬಿದ್ದ ಆಕಾರದಲ್ಲೇ ನಿರ್ಮಿಸಿದ ಶಿಲ್ಪ ಕಂಡಿತು. 15 ಸಾವಿರ ಚ.ಡಿ(65 ಎಕರೆ)ಯ ತಳ ಹದಿಯ ಮೇಲೆ, ಸುಮಾರು 200 ಅಡಿ ಉದ್ದ, 150 ಅಡಿ ಅಗಲ, ಸುಮಾರು 70 ಅಡಿ ಎತ್ತರವಿರುವ ಈ ಶಿಲ್ಪ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪವೆಂಬ ಖ್ಯಾತಿ ಪಡೆದಿದೆ.

ಸಿನಿಮಾ ನಿರ್ದೇಶಕ, ಕಲಾ ನಿರ್ದೇಶಕ ಮತ್ತು ಶಿಲ್ಪಿ ರಾಜೀವ್ ಆಂಚಲ್ ಈ ಶಿಲ್ಪದ ನಿರ್ಮಾತೃ. ಹತ್ತು ವರ್ಷಗಳ ಸತತ ಪ್ರಯತ್ನದೊಂದಿಗೆ ಈ ಕೇಂದ್ರ ರೂಪುಗೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ತಾಣ, ಕೇರಳದ ಜನಪ್ರಿಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ.

ಕೇಂದ್ರದಲ್ಲಿ ಏನೇನಿದೆ?

ಇದು ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಈ ಕೇಂದ್ರದ ಮೊದಲ ಹಂತದಲ್ಲಿ ಶೂಟಿಂಗ್, ಆರ್ಚರಿ, ರಾಕ್‌ ಕ್ಲೈಂಬಿಗ್, ರಾಪ್ಪೆಲ್ಲಿಂಗ್, ಜಮ್ಮರಿಂಗ್, ವ್ಯಾಲಿ ಕ್ರಾಸಿಂಗ್, ಚಿಮಣಿ ಕ್ಲೈಂಬಿಂಗ್, ಜಿಪ್ ಲೈನ್, ಕಮಾಂಡೊ ನೆಟ್, ರೈಫಲ್ ಶೂಟಿಂಗ್, ಪಕ್ಷಿ ಶಿಲ್ಪದ ಸುತ್ತ ನಡಿಗೆ, ಸ್ಕೈ ಸೈಕ್ಲಿಂಗ್, ಕ್ಯಾಂಪ್ ಫೈರ್‌ನಂತಹ ಅಡ್ವೆಂಚರ್ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ. ಟೆಂಟ್ ಹಾಕಿ ರಾತ್ರಿ ಕಳೆಯುವ ಅವಕಾಶವಿದೆ.

ಎರಡನೇ ಹಂತದಲ್ಲಿ ತ್ರೀಡಿ ಥಿಯೇಟರ್, ಡಿಜಿಟಲ್ ಮ್ಯೂಸಿಯಂ, ರಾಕ್ ಥೀಮ್ ಪಾರ್ಕ್ ಇದೆ. ಇಲ್ಲಿಗೆ ಕೇಬಲ್ ಕಾರ್, ಹೆಲಿಟ್ಯಾಕ್ಸಿ ಮೂಲಕ ತಲುಪಬಹುದು. ಕೇಬಲ್ ಕಾರ್‌ನಲ್ಲಿ ಕುಳಿತು 1ಸಾವಿರ ಅಡಿ ಎತ್ತರದಲ್ಲಿರುವ 1 ಕಿ.ಮೀ ದೂರದ ಜಟಾಯು ಕೇಂದ್ರ ತಲುಪುವುದೇ ಒಂದು ರೋಮಾಂಚನ ಅನುಭವ. ಗಾಜಿನಿಂದ ಆವೃತವಾದ ಕೇಬಲ್‌ ಕಾರ್‌ನಲ್ಲಿ ಕುಳಿತು ಸಾಗುತ್ತಾ ಸುತ್ತಲಿನ ಕಣಿವೆ ಹಾಗೂ ಪರ್ವತಗಳ ದೃಶ್ಯ ನೋಡುತ್ತಿದ್ದರೆ, ಆಕಾಶದಲ್ಲಿ ತೇಲಿದಂತಹ ಅನುಭವವಾಗುತ್ತದೆ.

ಇದೇ ಕೇಂದ್ರಕ್ಕೆ ಹೊಂದಿ ಕೊಂಡಿರುವ ಅಡ್ವೆಂಚರ್‌ ಹಿಲ್‌ ರಾಕ್‌ಗೆ ಹೆಲಿಟ್ಯಾಕ್ಸಿ ಮೂಲಕ ತಲುಪಬಹುದು. ಕೇಬಲ್‌ ಕಾರ್ ಪಯಣಕ್ಕಿಂತ ಇದು ಇನ್ನಷ್ಟು ರೋಚಕ ಅನುಭವ ನೀಡುತ್ತದೆ.

ಬಂಡೆಯೊಳಗೆ ಗುಹೆಗಳು

ಈ ಬೆಟ್ಟದ ಬಂಡೆಗಳನ್ನು ಕೊರೆದು ಗುಹೆಗಳನ್ನು ಮಾಡಿದ್ದಾರೆ. ಇಲ್ಲಿ ಹೋಟೆಲ್‌ಗಳು, ಕೆಲವು ಕಚೇರಿಗಳಿವೆ. ಜತೆಗೆ, ಪಾರಂಪರಿಕ ಆಯುರ್ವೇದ ಸಿದ್ಧ ಚಿಕಿತ್ಸೆಯೂ ಲಭ್ಯವಿದೆ. ಸಂಸಾರ ನೌಕೆಯನ್ನೇರಿದ ಯುವಜೋಡಿಗಳು ಚಂದ್ರನ ಬೆಳಕಿನಲ್ಲಿ ರಾತ್ರಿ ಊಟ ಮಾಡಬಹುದು. ಇಲ್ಲಿ ಒಬ್ಬರಿಗೆ ₹ 3500 ಪ್ರವೇಶ ಶುಲ್ಕ ನಿಗದಿಪಡಿಸಿದ್ದಾರೆ. ಶುಲ್ಕ ಪಾವತಿಸಿದವರು 15ರಿಂದ 20 ವೈವಿಧ್ಯಮಯ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಉದ್ದನೆಯ ರೋಪ್‌ಗೆ ಒಂದೊಂದು ಅಡಿ ಅಂತರದಲ್ಲಿ ದೊಡ್ಡ ದೊಡ್ಡ ಮರದ ತುಂಡುಗಳನ್ನು ಅಳವಡಿಸಿದ್ದು, ಹಗ್ಗ ಹಿಡಿದುಕೊಂಡು ತುಂಡುಗಳ ಮೇಲ್ಭಾಗದಲ್ಲಿ ನಡೆಯುತ್ತಾ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗುವ ಸಾಹಸ ಕ್ರೀಡೆ ಮತ್ತೊಂದು ಥ್ರಿಲ್‌ ಅನುಭವ ನೀಡುತ್ತದೆ.

ಒಂದು ಗುಹೆಯನ್ನು ಧ್ಯಾನ ಮಂದಿರವಾಗಿಸಿದ್ದಾರೆ. ಇಲ್ಲಿ ಕಲ್ಲಿನ ಗೋಡೆಗಳ ನಡುವೆ ಕುಳಿತು ಧ್ಯಾನ ಮಾಡುತ್ತಿದ್ದರೆ, ಹೊಸ ಲೋಕವೊಂದರಲ್ಲಿ ವಿಹರಿಸಿದ ಅನುಭವವಾಗುತ್ತದೆ. ಬೆಟ್ಟದ ಮೇಲೆ ಅಳವಡಿಸಿರುವ ಬೃಹತ್ ಟೆಲಿಸ್ಕೋಪ್‌ನಿಂದ ದೂರದ ಮಳೆ ಕಾಡು ಹಾಗೂ ಅಲ್ಲಿನ ಪ್ರಾಣಿ ಪಕ್ಷಿಗಳ ಸಂಚಾರವನ್ನು ವೀಕ್ಷಿಸಬಹುದು.

ಬೆಟ್ಟದ ಪಕ್ಕದಲ್ಲೇ ಹೆಲಿಪ್ಯಾಡ್

ಜಟಾಯು ಪಕ್ಷಿ ಶಿಲ್ಪವಿರುವ ಬಂಡೆಯ ಅಕ್ಕಪಕ್ಕದಲ್ಲಿ ಮೂರು ಬೃಹತ್ ಬಂಡೆಗಳಿವೆ. ಅವುಗಳನ್ನು ಸಮಾನಾಂತರವಾಗಿ ಕೆತ್ತಿ ಹೆಲಿಪ್ಯಾಡ್ ಹಾಗೂ ಸಾಹಸ ಕ್ರೀಡೆಗಳ ತಾಣವನ್ನಾಗಿಸಿದ್ದಾರೆ. ಇಲ್ಲಿರುವ ಬೃಹತ್ ಬಂಡೆಗಳಿಗೆ ಅಲ್ಲಲ್ಲಿ ಉದ್ದನೆಯ ಹಗ್ಗಗಳನ್ನು ಇಳಿ ಬಿಟ್ಟು, ಫೈಬರ್ ಕ್ಲಿಪ್‌ಗಳನ್ನು ಅಳವಡಿಸಿದ್ದಾರೆ. ಸಾಹಸ ಚಟುವಟಿಕೆಯಲ್ಲಿ ಆಸಕ್ತಿಯಿರುವ ಪ್ರವಾಸಿಗರು ಸೇಫ್ಟಿ ಬೆಲ್ಟ್ ಅಳವಡಿಸಿಕೊಂಡು ರಾಕ್ ಕ್ಲೈಂಬಿಂಗ್ ಮಾಡಬಹುದು.

ಈ ಕೇಂದ್ರವನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (Public Private Partnership) ನಿರ್ಮಾಣ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ನೀರಿನ ಕೊರತೆ ಇತ್ತು. ಇದಕ್ಕಾಗಿ ಮಳೆ ನೀರು ಸಂಗ್ರಹಿಸಿ, ಆ ನೀರಿನಿಂದಲೇ ಉದ್ಯಾನ ಮಾಡಿದ್ದಾರೆ.

ಒಂದು ದಿನ ಭೇಟಿಗಾಗಿ ಈ ಪ್ರಕೃತಿಧಾಮಕ್ಕೆ ಭೇಟಿ ನೀಡುವುದಾದರೆ, ಅದು ಪರಿಪೂರ್ಣ ಪ್ರವಾಸವಾಗುವುದಿಲ್ಲ. ಹೊಸ ಅನುಭವಗಳನ್ನು ಪಡೆಯಬೇಕು, ಸಾಹಸಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸಕ್ತಿ ಇರುವವರು ಈ ತಾಣಕ್ಕೆ ಭೇಟಿ ನೀಡಬಹುದು.

ಸಮಯವಿದ್ದರೆ ಒಂದು ಗಂಟೆ ದಟ್ಟಾರಣ್ಯದಲ್ಲಿ ಚಾರಣ ಮಾಡಬಹುದು. ಹೆಚ್ಚಿನ ವಿವರಗಳಿಗೆ http://www.jatayuearthscenter.com ಗೆ ಭೇಟಿ ನೀಡ ಬಹುದು. ಕೇಂದ್ರದ ಆಡಳಿತ ಕಚೇರಿ ದೂರವಾಣಿ: +91-474 2477077 ಮೂಲಕ ಸಂಪರ್ಕಿಸಬಹುದು.

ಹೋಗುವುದು ಹೇಗೆ ?

ಬೆಂಗಳೂರಿನಿಂದ ತಿರುವನಂತಪುರದವರೆಗೆ ರೈಲು ಅಥವಾ ವಿಮಾನ ಸೌಲಭ್ಯವಿದೆ. ತಿರುವನಂತಪುರಂ ರೈಲು ನಿಲ್ದಾಣದಿಂದ ಅರ್ಥ್‌ ಸೆಂಟರ್‌ಗೆ 52 ಕಿ.ಮೀ. ಕೊಲ್ಲಂನಿಂದ 43 ಕಿ.ಮೀ, ಕೊಟ್ಟಾರಕರದಿಂದ 22ಕಿ.ಮೀ ದೂರವಿದೆ.

ತಿರುವನಂತಪುರದಿಂದ ಜಟಾಯು ಕೇಂದ್ರಕ್ಕೆ 200 ಕಿ.ಮೀ. ಕೇರಳ ರಾಜ್ಯ ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಸಾಕಷ್ಟು ಇವೆ.

ನಾವು ಬೆಂಗಳೂರಿನಿಂದ ತಿರುವನಂತಪುರದವರೆಗೂ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಕೊಲ್ಲಂಗೆ ರೈಲಿನಲ್ಲಿ ಹೋದೆವು. ಕೊಲ್ಲಂನಿಂದ ಅರ್ಥ್‌ ಸೆಂಟರ್‌ಗೆ ಕೇರಳ ಸಾರಿಗೆ ಬಸ್‌ ಮೂಲಕ ತಲುಪಿದೆವು.

ಊಟ ವಸತಿ

ಜಟಾಯು ಅರ್ಥ್‌ ಕೇಂದ್ರದಲ್ಲೇ ಉತ್ತಮ ಹೋಟೆಲ್‌ಗಳಿವೆ. ವಸತಿಗೂ ಅವಕಾಶವಿದೆ. ದಕ್ಷಿಣ ಹಾಗೂ ಉತ್ತರ ಭಾರತೀಯ ಶೈಲಿಯ ಆಹಾರವೂ ಸಿಗುತ್ತದೆ.

ಅರ್ಥ್‌ ಸೆಂಟರ್‌ ವಿಶೇಷಗಳು

ಒಟ್ಟು 16 ಕೇಬಲ್ ಕಾರ್‌ಗಳಿವೆ. ಪ್ರತಿ ಕಾರ್‌ನಲ್ಲಿ 8 ಮಂದಿ ಕೂರುವಷ್ಟು ಜಾಗವಿದೆ. ಕಾರ್‌ನಲ್ಲಿ ಪ್ರಯಾಣಿಸುವ ಪ್ರತಿ ವ್ಯಕ್ತಿಗೆ ₹400(ಸೇವಾ ತೆರಿಗೆ ಹೊರತುಪಡಿಸಿ) ಪ್ರವೇಶ ಶುಲ್ಕ. ಮಕ್ಕಳಿಗೆ ಪ್ರವೇಶ ಉಚಿತ.

ಅಡ್ವೆಂಚರ್ ಹಿಲ್ ರಾಕ್‌ಗೆ ಹೆಲಿ ಟ್ಯಾಕ್ಸಿ ಮೂಲಕ ಹೋಗಲು ₹ 3,500 ಶುಲ್ಕವಿದೆ. ಪ್ರವಾಸಿಗರು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯ ಅವಧಿಯೊಳಗೆ ಇಲ್ಲಿಗೆ ಭೇಟಿ ನೀಡಬಹುದು.

ಇಲ್ಲಿಗೆ ಪ್ರವಾಸಕ್ಕೆ ಹೋಗುವರು, ಇಡೀ ದಿನದ ವೇಳಾಪಟ್ಟಿಯನ್ನು ತಯಾರಿಸಿಕೊಂಡೇ ಹೋಗಬೇಕು. ಇಲ್ಲದಿದ್ದರೆ, ಹಣ ಪಾವತಿಸಿ, ಅಲ್ಲಿನ ಸಾಹಸಮಯ ಚಟುವಟಿಕೆಗಳಲ್ಲಿ ಭಾಗವಹಿಸದಿದ್ದರೆ, ಆ ಹಣ ವ್ಯರ್ಥವಾಗುತ್ತದೆ.

ಭೇಟಿ ನೀಡಲು ಸೂಕ್ತ ಅವಧಿ

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಈ ತಾಣಕ್ಕೆ ಭೇಟಿ ನೀಡುವುದು ಉತ್ತಮ. ಇದು ಅಹ್ಲಾದಕರ ವಾತಾವರಣದ ಸಮಯ. ಬೇಸಿಗೆಯಲ್ಲಿ ಬಿಸಿ ಗಾಳಿ ಬೀಸುತ್ತದೆ. ಸೂರ್ಯನ ಪ್ರಖರಕ್ಕೆ ಕಲ್ಲುಗಳೆಲ್ಲ ಬಿಸಿಯಾಗುತ್ತವೆ. ಮಳೆಗಾಲದಲ್ಲಿ ದಟ್ಟ ಮೋಡಗಳಾವರಿಸುತ್ತವೆ. ಸುತ್ತಲಿನ ಪರಿಸರ ಕಾಣುವುದೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.