ADVERTISEMENT

ಕ್ರಿಮ್ಚಿ ದೇಗುಲಗಳು: ಉಧಾಂಪುರದ ಪ್ರವಾಸ

ಲಿಂಗರಾಜು ಡಿ.ಎಸ್
Published 13 ನವೆಂಬರ್ 2019, 19:30 IST
Last Updated 13 ನವೆಂಬರ್ 2019, 19:30 IST
ಕ್ರಿಮ್ಚಿ ದೇವಾಲಯ
ಕ್ರಿಮ್ಚಿ ದೇವಾಲಯ   

ಏಪ್ರಿಲ್ ತಿಂಗಳಲ್ಲಿ ಜಮ್ಮು–ಕಾಶ್ಮೀರದಲ್ಲಿ ವಿವಿಧ ತಾಣಗಳಿಗೆ ಪ್ರವಾಸ ಹೋಗಿದ್ದೆವು. ಶ್ರೀನಗರ, ಗುಲ್ಮಾರ್ಗ್, ಸೋನ್ಮಾರ್ಗ್ ನೋಡಿದ ನಂತರ ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡಿ ಅನಂತನಾಗ್ ದಾಟಿ ‌ಗಿರಿಧಾಮದಲ್ಲಿ ತಂಗಿದ್ದೆವು. ಮಾರನೆಯ ದಿನ ಜಮ್ಮು ಕಡೆಗೆ ಹೊರಟಾಗ ಅರ್ಧ ದಿನ ಹೆಚ್ಚುವರಿ ಸಮಯ ಇತ್ತು.

ಉಧಾಂಪುರದ ಬಳಿ ಕ್ರಿಮ್ಚಿ ದೇವಾಲಯಗಳಿರುವುದರ ಬಗ್ಗೆ ಕೇಳಿದ್ದ ನನಗೆ ಅವನ್ನು ನೋಡಿಬರೋಣ ಎನ್ನಿಸಿತು. ನಮ್ಮ ಚಾಲಕ ಮಹಾಶಯನಿಗೆ ಕ್ರಿಮ್ಚಿಗೆ ಹೋಗು ಎಂದಾಗ ಅವನಿಗೇನೋ ತಾತ್ಸಾರ. ಅಲ್ಲಿ ರಸ್ತೆ ಸರಿಯಿಲ್ಲ, ಅಪಾಯಕಾರಿ, ಬಹಳ ದೂರ ನಡೆಯಬೇಕು.. ಹೀಗೆ ನಾನಾ ಕಾರಣಗಳನ್ನು ಹೇಳತೊಡಗಿದ. ಕೊನೆಗೆ ನಮ್ಮ ಕಿರಿಕಿರಿ ತಡೆಯಲಾಗದೆ ವಾಹನ ಬಲಕ್ಕೆ ತಿರುಗಿ ಕ್ರಿಮ್ಚಿ ಹಾದಿ ಹಿಡಿಯಿತು. ಕಚ್ಚಾ ರಸ್ತೆಯಲ್ಲಿ 30 ನಿಮಿಷಗಳ ಪ್ರಯಾಣದ ನಂತರ ನೇರವಾಗಿ ದೇವಾಲಯದ ಸಂಕೀರ್ಣಕ್ಕೆ ಬಂದೆವು. ಚಾಲಕ ‘ಮೊದಲು ರಸ್ತೆ ಇರಲಿಲ್ಲ ಈಗ ಸರಿಯಾಗಿರುವುದು ನನಗೆ ಗೊತ್ತಿರಲಿಲ್ಲ’ ಎಂದ.

ಕ್ರಿಮ್ಚಿ ಒಂದು ಸಣ್ಣ ಹಳ್ಳಿ. ಹಿಂದೆ ಇದು ಕೀಚಕ ರಾಜನ ನೆಲೆಯಾಗಿತ್ತು ಎಂದಿತ್ತು ವಿಕಿಪಿಡಿಯಾ ಮಾಹಿತಿ. ದೇವಾಲಯವು ಬಹುಶಃ ಕ್ರಿ.ಶ.11-12 ನೇ ಶತಮಾನದ್ದು. ದೇವಾಲಯಗಳ ಸಂಕೀರ್ಣದಲ್ಲಿ ನಾಲ್ಕು ದೊಡ್ಡ ದೇವಾಲಯಗಳು ಮತ್ತು ಮೂರು ಸಣ್ಣ ದೇವಾಲಯಗಳಿವೆ. ಶಿವ ದೇವಾಲಯಗಳನ್ನು ಪಾಂಡವ ದೇವಾಲಯಗಳು ಎನ್ನುತ್ತಾರೆ. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಬಹಳ ಕಾಲ ಇಲ್ಲಿ ನೆಲೆಸಿದ್ದರಂತೆ.

ADVERTISEMENT

ಲಜ್ಜಾಗೌರಿಯ ಕೆತ್ತನೆ

ದೇವಾಲಯಗಳ ಕಟ್ಟಡ ಹೊರನೋಟಕ್ಕೆ ಸಾದಾ ಗ್ರೀಕ್ ಹೆಲೆನಿಸ್ಟಿಕ್ ಶೈಲಿಯಂತೆ ಕಂಡರೂ ಒಳಗೆ ಹಿಂದೂ ವಾಸ್ತುಶಿಲ್ಪದ ಶೈಲಿಯೇ ಕಾಣುತ್ತದೆ. ದೇವಾಲಯದ ಒಳಗೆ ಶಿವಲಿಂಗವಿದ್ದು ಪೂಜೆಗಳೇನೂ ನಡೆಯುತ್ತಿಲ್ಲ. ದೇಗುಲ ಹೊರಪೌಳಿಯಲ್ಲಿ ಸುತ್ತುವಾಗ ಕಮಲದ ಮೇಲೆ ಕುಳಿತ ದೇವಿಯ ವಿಗ್ರಹ ಗಮನ ಸೆಳೆಯಿತು. ಇದು ಬಹುಶಃ ಲಜ್ಜಾಗೌರಿಯ ಕೆತ್ತನೆ ಇರಬಹುದೇ ಎಂಬ ಅನುಮಾನಕ್ಕೆ ಸಮಾಧಾನಗಳು ದೊರೆಯಲಿಲ್ಲ. ಕಲ್ಲಿನ ಗೋಡೆಗಳ ಮೇಲೆ ಕಂಡ ಅನೇಕ ಜ್ಯಾಮಿತೀಯ ಚಿತ್ರಗಳು ಇದು ತಾಂತ್ರಿಕ ದೇವಾಲಯವಿರಬಹುದು ಎಂಬ ಅನುಮಾನಕ್ಕೆ ಪುಷ್ಠಿ ನೀಡಿತ್ತು.

ಸ್ಥಳೀಯರ ಮಾಹಿತಿಯ ಪ್ರಕಾರ ಇಲ್ಲಿ ವರ್ಷಕ್ಕೆ ಎರಡು ಬಾರಿ ಜಾತ್ರೆ ನಡೆಯುವಾಗ ಶಿವಭಕ್ತರು ಭಾರಿ ಸಂಖ್ಯೆಯಲ್ಲಿ ಸೇರುತ್ತಾರಂತೆ. ಇಲ್ಲಿನ ಪೀರ್‍ಪಂಜಲ್ ಬೆಟ್ಟ ಶ್ರೇಣಿಗಳಲ್ಲಿ ದೇವಾಲಯಗಳಿದ್ದು ಪ್ರಾಂತ್ಯದಲ್ಲಿ ಕಂಡುಬರುವ ಶಿಲ್ಪಗಳಲ್ಲಿ ಗ್ರೀಕ್ ಪ್ರಭಾವ ಎದ್ದು ಕಾಣುತ್ತದೆ. ಇಲ್ಲಿ ಸುಮಾರು 2-3 ಗಂಟೆಗಳ ಕಾಲ ಕಳೆದು ವೈಷ್ಣೋದೇವಿಯ ಕ್ಷೇತ್ರ ಸೇರುವಾಗ ಸಂಜೆಗತ್ತಲಾಗಿತ್ತು.

ಕ್ರಿಮ್ಚಿಗೆ ಬರುವವರು ಸ್ವಂತ ವಾಹನ ಮತ್ತು ಊಟ-ತಿಂಡಿಗಳ ಸಿದ್ಧತೆ ಮಾಡಿಕೊಂಡು ಬರುವುದು ಉತ್ತಮ. ಉಧಾಂಪುರದಿಂದ ಹಾಗೂ ವೈಷ್ಣೋದೇವಿಯ ಕ್ಷೇತ್ರ ಕತ್ರಾದಿಂದ ಬಾಡಿಗೆ ವಾಹನಗಳು ದೊರೆಯುತ್ತವೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.