ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಗನಚುಂಬಿ ಕಟ್ಟಡಗಳಿವೆ. ಈ ನಗರದ ಪ್ರದಕ್ಷಿಣೆಗೆ ಹೊರಟರೆ ಸದಾ ತಲೆ ಎತ್ತಿ ನೋಡುತ್ತಿರಬೇಕು. ಏಕೆಂದರೆ, ಈ ನಗರದ ತುಂಬೆಲ್ಲಾ ಗಗನಚುಂಬಿ ಕಟ್ಟಡಗಳೇ ತುಂಬಿಕೊಂಡಿವೆ!
ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರ ಹೆಚ್ಚು ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ಪ್ರಪಂಚದ ಹತ್ತು ನಗರಗಳಲ್ಲಿ ಒಂದು. ಹಾಗಾಗಿ ಇದನ್ನು ‘ಸಿಟಿ ಆಫ್ ಮಿನಾರ್ಸ್’ ಅಂದರೆ ‘ಮಿನಾರುಗಳ ನಗರಿ’ ಎಂದೂ ಕರೆಯಲಾಗುತ್ತದೆ.
ಪ್ರಪಂಚದ ಅತ್ಯಂತ ಎತ್ತರದ ಅವಳಿ ಗೋಪುರವನ್ನು ಹೊಂದಿರುವ ಹೆಗ್ಗಳಿಕೆ ಈ ನಗರದ್ದು. ಮಲೇಷ್ಯಾದ ಪ್ರಮುಖ ಉದ್ಯಮ ಹಾಗೂ ಇಲ್ಲಿನ ಶ್ರೀಮಂತಿಕೆಗೆ ಕಾರಣವಾಗಿರುವ ಪೆಟ್ರೋಲಿಯಂ ವ್ಯವಹಾರದ ರಾಷ್ಟ್ರೀಕೃತ ಸಂಸ್ಥೆ ‘ಪೆಟ್ರೋನಾಸ್’ನ ಕೇಂದ್ರ ಕಚೇರಿಯನ್ನು ಹೊಂದಿರುವ ಪೆಟ್ರೋನಾಸ್ ಟವರ್ 451.9 ಮೀಟರ್ ಎತ್ತರದ ಎರಡು ಗೋಪುರಗಳನ್ನು ಹೊಂದಿದೆ. ಇದು ಪ್ರಪಂಚದ ಅತ್ಯಂತ ಎತ್ತರದ ಅವಳಿ ಕಟ್ಟಡ. 88 ಅಂತಸ್ತಿನ ಈ ಕಟ್ಟಡದ 42ನೇ ಅಂತಸ್ತಿನಲ್ಲಿ ಎರಡು ಗೋಪುರಗಳನ್ನು ಜೋಡಿಸುವ ಸೇತುವೆ ಇದೆ. 1993 ರಿಂದ 1996ರ ಒಳಗೆ ನಿರ್ಮಾಣಗೊಂಡ ಈ ಕಟ್ಟಡ ತಳಪಾಯವೇ 114 ಮೀಟರ್‌ಗಳಷ್ಟು ಆಳವಿದೆ! ಇದಕ್ಕೆ ಪ್ರಪಂಚದಲ್ಲಿಯೇ ಅತ್ಯಂತ ಆಳದ ತಳಪಾಯ ಹೊಂದಿರುವ ಕಟ್ಟಡ ಎಂಬ ಹೆಗ್ಗಳಿಕೆಯೂ ಇದೆ. ಸುಮಾರು 54 ಗಂಟೆ ನಿರಂತರವಾಗಿ ಕಾಂಕ್ರೀಟ್ ಸುರಿದು ಇದರ ತಳಪಾಯವನ್ನು ಭದ್ರಗೊಳಿಸಲಾಗಿದೆ. ಈ ಅವಳಿ ಗೋಪುರಗಳಲ್ಲಿ ಒಂದು ಗೋಪುರವನ್ನು ಜಪಾನ್ ದೇಶದ ನಿರ್ಮಾಣ ಸಂಸ್ಥೆ ನಿರ್ಮಿಸಿದ್ದರೆ, ಇನ್ನೊಂದು ಗೋಪುರದ ನಿರ್ಮಾಣ ಕೊರಿಯಾ ಸಂಸ್ಥೆಯದ್ದು. ಇವೆರಡರ ನಡುವೆ ಯಾರು ಮೊದಲು ನಿರ್ಮಾಣ ಕೆಲಸ ಮುಗಿಸುತ್ತಾರೆ ಎಂಬ ಸ್ಪರ್ಧೆ ಇತ್ತಂತೆ. ಕೊರಿಯಾ ಈ ಸ್ಪರ್ಧೆಯಲ್ಲಿ ಗೆದ್ದಿತಾದರೂ, ಸೋಲೊಪ್ಪದ ಜಪಾನ್ ತಾನು ನಿರ್ಮಾಣ ಮಾಡಿರುವ ಗೋಪುರವನ್ನು ಕೊರಿಯಾ ನಿರ್ಮಾಣದ ಗೋಪುರಕ್ಕಿಂತ ಕೊಂಚ ಎತ್ತರ ಮಾಡಿತು. ಹೀಗಾಗಿ ಜಪಾನ್ ನಿರ್ಮಿಸಿದ ಪಶ್ಚಿಮ ಗೋಪುರ, ಕೊರಿಯಾ ನಿರ್ಮಾಣದ ಪೂರ್ವ ಗೋಪುರಕ್ಕಿಂತ ಕೊಂಚ ಎತ್ತರವಿದೆ ಎನ್ನುವುದು ವೀಕ್ಷಣೆಗೆ ಪ್ರವಾಸಿಗರನ್ನು ಕರೆದೊಯ್ಯುವ ಗೈಡ್‌ಗಳು ತಪ್ಪದೇ ಹೇಳುತ್ತಾರೆ.
ಈ ಮಿನಾರ್ ನಗರಿಯ ಎತ್ತರದ ಗೋಪುರಗಳ ಪ್ರೇಮ ಶುರುವಾಗಿದ್ದು 1945ರಲ್ಲಿ. ಆಗ 73 ಮೀಟರ್ ಎತ್ತರದ 18 ಅಂತಸ್ತಿನ ಲಿಯಾನ್ ಲೈನ್ ಕಟ್ಟಡ ನಿರ್ಮಾಣವಾಯಿತು. 1963ರಲ್ಲಿ 20 ಅಂತಸ್ತಿನ 77 ಮೀಟರ್ ಎತ್ತರದ ಮಲೇಷ್ಯಾದ ಲೋಕಸಭಾ ಕಟ್ಟಡ ‘ಮಲೇಶಿಯನ್ ಹೌಸ್ ಆಫ್ ಪಾರ್ಲಿಮೆಂಟ್’ ತಲೆಯೆತ್ತಿತು. 1970ರಿಂದ 1980ರ ವರೆಗೆ ತೀವ್ರವಾಗಿ ನಡೆದ ಕೈಗಾರಿಕೀಕರಣ, ಕ್ವಾಲಾಲಂಪುರದ ‘ಬಿಲ್ಡಿಂಗ್ ಬೂಮ್’ಗೆ ನಾಂದಿ ಹಾಡಿತು. 1978ರಲ್ಲಿ ನಿರ್ಮಾಣಗೊಂಡ 150.5 ಮೀಟರ್ ಎತ್ತರದ ಮಿನಾರಾ ಭೂಮಿಪುತ್ರ ಬಹಳ ವರ್ಷಗಳ ಕಾಲ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಅದು ಮಲೇಷ್ಯಾದ ಪ್ರತಿಷ್ಠಿತ ಬ್ಯಾಂಕ್ ‘ಬ್ಯಾಂಕ್ ಮ್ಯುಮಾಲತ್’ನ ಕೇಂದ್ರ ಕಚೇರಿಯಾಗಿದೆ. 1987ರಲ್ಲಿ ನಿರ್ಮಾಣಗೊಂಡ ಕ್ವಾಲಾಲಂಪುರದ ಮೊದಲ 50 ಅಂತಸ್ತಿನ ಕಟ್ಟಡ ‘ಮೇ ಬ್ಯಾಂಕ್ ಟವರ್’ 200 ಮೀಟರ್ ಎತ್ತರವಿದ್ದು, ಮಿನಾರಾ ಭೂಮಿಪುತ್ರದ ದಾಖಲೆ ಮುರಿಯಿತು.
ಕ್ವಾಲಾಲಂಪುರದಲ್ಲಿ 2000 ಇಸವಿಯಿಂದೀಚೆಗೆ ಸ್ಪರ್ಧೆಯೋಪಾದಿಯಲ್ಲಿ ಮುಗಿಲೆತ್ತರದ ಗಗನಚುಂಬಿ ಕಟ್ಟಡಗಳು ತಲೆ ಎತ್ತ ತೊಡಗಿದವು. ಈಗ ಕ್ವಾಲಾಲಂಪುರದಲ್ಲಿರುವ ಅತಿ ಎತ್ತರದ ಕಟ್ಟಡವೆಂದರೆ ಮೆರ್ಡೆಕಾ 118. ಇದರ ಎತ್ತರ 679.9 ಮೀಟರ್, ಅಂದರೆ 2227 ಅಡಿಗಳಷ್ಟು! ಹೆಸರೇ ಹೇಳುವಂತೆ ಇದರಲ್ಲಿರುವ ಅಂತಸ್ತುಗಳ ಸಂಖ್ಯೆ 118. 453.6 ಮೀಟರ್ ಎತ್ತರವಿರುವ 106 ಅಂತಸ್ತಿನ ಎಕ್ಸ್‌ಚೇಂಜ್ 106 ಕ್ವಾಲಾಲಂಪುರದ ಎರಡನೇ ಅತಿ ಎತ್ತರದ ಕಟ್ಟಡ.
ಈಗ ಕ್ವಾಲಾಲಂಪುರದಲ್ಲಿ 2000ಕ್ಕೂ ಹೆಚ್ಚು ಗಗನಚುಂಬಿ ಕಟ್ಟಡಗಳಿವೆ. ಇವುಗಳಲ್ಲಿ 700ಕ್ಕೂ ಹೆಚ್ಚು ಗೋಪುರಗಳು 100 ಮೀಟರ್‌ಗಳಿಗಿಂತಲೂ ಎತ್ತರವಿದ್ದರೆ, 170ಕ್ಕೂ ಹೆಚ್ಚು ಕಟ್ಟಡಗಳು 150 ಮೀಟರ್ ಎತ್ತರ ಇವೆ. 42 ಕಟ್ಟಡಗಳ ಎತ್ತರ 200 ಮೀಟರ್‌ಗಳಿಗೂ ಅಧಿಕವಿದ್ದರೆ, 5 ಕಟ್ಟಡಗಳು 300 ಮೀಟರ್‌ಗೂ ಹೆಚ್ಚು ಎತ್ತರವನ್ನು ಹೊಂದಿವೆ. ಕ್ವಾಲಾಲಂಪುರ ನಗರ ಪ್ರದಕ್ಷಿಣೆಗೆ ಹೊರಟಾಗ ನಾವು ಸದಾ ತಲೆ ಎತ್ತಿ ನೋಡುತ್ತಿರಬೇಕು. ಏಕೆಂದರೆ, ಈ ನಗರದ ತುಂಬೆಲ್ಲಾ ಗಗನಚುಂಬಿ ಕಟ್ಟಡಗಳೇ ತುಂಬಿಕೊಂಡಿವೆ!
ಪ್ರವಾಸಿಗರು ಗೋಪುರದ ಮೇಲೇರಿ ವೀಕ್ಷಣೆ ಮಾಡಲು ಅವಕಾಶವಿರುವ ಗೋಪುರ ಹಾಗೂ ಕ್ವಾಲಾಲಂಪುರದ ಬಹಳ ಜನಪ್ರಿಯ ಪ್ರವಾಸಿ ಆಕರ್ಷಣೆಯೆಂದರೆ ಕೆ.ಎಲ್. ಟವರ್. 421 ಮೀಟರ್ ಎತ್ತರದ ಈ ಟೆಲಿ ಕಮ್ಯುನಿಕೇಶನ್ ಗೋಪುರ, ಪ್ರಪಂಚದ 7ನೇ ಅತಿ ಎತ್ತರದ ಗೋಪುರ. ಇದು ಮುಖ್ಯವಾಗಿ ದೂರವಾಣಿ ಗೋಪುರವಾದ್ದರಿಂದ ಇದರಲ್ಲಿರುವುದು ಕೇವಲ ಆರು ಅಂತಸ್ತು ಮಾತ್ರ. ಈ ಗೋಪುರದ 276 ಮೀಟರ್ ಎತ್ತರದಲ್ಲಿ ಒಂದು ವೀಕ್ಷಣಾ ಸ್ಥಳವಿದೆ. ಇಲ್ಲಿಂದ ನೋಡಿದರೆ ಕ್ವಾಲಾಲಂಪುರ ನಗರದ ಅತ್ಯಂತ ಸುಂದರ ದೃಶ್ಯಗಳು ಕಾಣಸಿಗುತ್ತವೆ. ಇಲ್ಲಿ ಪ್ರತಿ ವರ್ಷ ವೇಗವಾಗಿ ಕಟ್ಟಡವನ್ನೇರುವ ಸ್ಪರ್ಧೆ ನಡೆಯುತ್ತದೆ. ಇಸ್ಲಾಮಿಕ್ ದೇಶವಾದ ಮಲೇಷ್ಯಾದಲ್ಲಿ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಲ್ಲಿ ಚಂದ್ರ ದರ್ಶನಕ್ಕೆ ಈ ಗೋಪುರದಲ್ಲಿ ‘ಇಸ್ಲಾಮಿಕ್ ಫಲಕ್ ಅಬ್ಸರ್ವೇಟರಿ’ ಸಹ ಇದೆ.
ಪ್ರಪಂಚದ ಪ್ರತಿಯೊಂದು ಪ್ರಮುಖ ನಗರಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇರುತ್ತದೆ. ಏಷ್ಯಾದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಕ್ವಾಲಾಲಂಪುರದ ವೈಶಿಷ್ಟ್ಯತೆ ಎಂದರೆ ಒಂದಕ್ಕೊಂದು ಸ್ಪರ್ಧಿಸುವಂತೆ ಮುಗಿಲೆತ್ತರಕ್ಕೆ ಮುಖ ಮಾಡಿ ನಿಂತ ಗಗನಚುಂಬಿ ಕಟ್ಟಡ, ಗೋಪುರಗಳು. ಇವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ನೆಚ್ಚಿನ ತಾಣಗಳಾಗಿ ಹಾಗೂ ದೇಶಕ್ಕೆ ವರಮಾನ ತಂದುಕೊಡುವ ಆದಾಯ ಕೇಂದ್ರಗಳೂ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.