ಆಗುಂಬೆ–ಹೆಬ್ರಿ ಮಾರ್ಗದ ಬಳುಕಿನ ದಾರಿಯಲ್ಲಿರುವ ಕೂಡ್ಲು ತೀರ್ಥ ಜಲಪಾತಕ್ಕೆ ಹೋಗುವ ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಜೋಗುಳ ಕಿವಿಯ ತೂಗಿಸುತ್ತದೆ. ಅದಕ್ಕೆ ಹಿನ್ನೆಲೆಯಾಗಿ ಜುಗಲ್‍ಬಂದಿ ನೀಡುವ ಹಕ್ಕಿಗಳ ಹಾಡು, ನಡೆಯುತ್ತ ಹೋದಂತೆಲ್ಲಾ ಪಕ್ಕದಲ್ಲೇ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿ, ಕೊಂಚ ದೂರ ನಡೆದರೆ ‘ಬನ್ನಿ ನನ್ನ ಬಳಿ’ ಅಂತ ಕೂಡ್ಲು ಕರೆದಂತಾಗಿ ಮೈಗೆಲ್ಲಾ ಉಲ್ಲಾಸ ಟಿಸಿಲೊಡೆಯುತ್ತದೆ.
ಒಂದಷ್ಟು ಕಾಡದಾರಿಯಲ್ಲಿ ನಡೆದರೆ ಒಮ್ಮೆ ಹಾಲಪುಡಿಯಂತೆ, ಮತ್ತೊಮ್ಮೆ ಹಾಲಿನಂತೆಯೇ ಉದುರುತ್ತಿದ್ದ ಕೂಡ್ಲುವಿನ ಜಲವೈಭವಕ್ಕೆ ಮನವರಳುತ್ತದೆ.
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸೀತಾ ನದಿ ಹರಿದು, ಎತ್ತರದಿಂದ ಧುಮ್ಮಿಕ್ಕಿ ಕೂಡ್ಲು ಜಲಪಾತವಾಗಿದೆ. ಹಾಗೇ ಧುಮ್ಮಿಕ್ಕುವ ಕೂಡ್ಲು, ಆಗುಂಬೆ ಕಾಡಿನತ್ತ ಇನ್ನಷ್ಟು ಜಲಧಾರೆಯಾಗಿ ಚಿಮ್ಮುತ್ತದೆ. ಸುಮಾರು 180 ಅಡಿ ಎತ್ತರದಿಂದ ಸುರಿದು ನೀಳವಾಗಿ ಇಳೆಗೆ ಉದುರಿ ಸ್ವರ್ಗವಾಗುವ ಕೂಡ್ಲುವಿನ ನೋಟ ಹಬ್ಬದೂಟ. ಇಲ್ಲಿನ ನೀರಿನ ತಂಪು ಮನಮೋಹಕ.
ಎಲ್ಲಿದೆ?:
ಇದು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿದೆ. ಬೆಂಗಳೂರಿನಿಂದ ಸುಮಾರು 373 ಕಿ.ಮೀ. ದೂರ. ಉಡುಪಿ ಪೇಟೆಯಿಂದ 64 ಕಿ.ಮೀ., ಆಗುಂಬೆಯಿಂದ 26 ಕಿ.ಮೀ. ದೂರವಿದೆ. ಹೆಬ್ರಿ–ಸೋಮೇಶ್ವರ ದಾರಿಯಲ್ಲಿ ಸುಮಾರು 20 ಕಿ.ಮೀ. ಸಾಗಿದಾಗ ರಸ್ತೆಯ ಬಲ ಬದಿಯಲ್ಲಿ ‘ಕೂಡ್ಲು ತೀರ್ಥಕ್ಕೆ ಹೋಗುವ ದಾರಿ’ ಎನ್ನುವ ಬೋರ್ಡ್ ಕಾಣಿಸುತ್ತದೆ. ಅಲ್ಲಿಂದ ಸುಮಾರು 7 ಕಿ.ಮೀ. ಸಾಗಿದರೆ ಕೂಡ್ಲು ತೀರ್ಥ ಸ್ವಾಗತ ದ್ವಾರ ಸಿಗುತ್ತದೆ. ಅಲ್ಲಿ ಟಿಕೆಟ್ ಮಾಡಿಸಿ ಕಾಡ ದಾರಿಯಲ್ಲಿ ಸುಮಾರು 1.2 ಕಿ.ಮೀ. ನಡೆದರೆ ಜಲಪಾತ ಸಿಗುತ್ತದೆ.
ಕಾಡದಾರಿಯಲ್ಲಿ ಒಂದಷ್ಟು ನಡೆಯಬೇಕಾಗುವುದರಿಂದ ಕಾಡಿನಲ್ಲಿ ನಡೆದು ಜಲಪಾತ ನೋಡುವ ಸುಖ ಬೇಕು ಎನ್ನುವವರಿಗೆ ಇದು ಸೂಕ್ತ ತಾಣ. ವಯಸ್ಸಾದವರಿಗೆ, ಕಾಡಿನಲ್ಲಿ ನಡೆಯೋದು ಕಷ್ಟ ಎನ್ನುವವರಿಗೆ ಈ ತಾಣ ಇಷ್ಟವಾಗಲ್ಲ.
ಬೆಳಗ್ಗೆ 9ರಿಂದ ಸಂಜೆ 5ರ ಒಳಗೆ ಪ್ರವೇಶ. ಸಂಜೆವರೆಗೂ ಕೂಡ್ಲು ತೀರ್ಥದಲ್ಲಿ ಸಮಯ ಕಳೆದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಒಂದು ದಿನ ಪ್ರವಾಸದ ಮೂಡನ್ನು ಎಂಜಾಯ್ ಮಾಡಲು ಈ ತಾಣ ಸೂಪರ್.
ದಾರಿಯಲ್ಲಿಯೇ ತಿಂಡಿ ಮಾಡಿ:
ಕುಡ್ಲು ತೀರ್ಥ ಕಾಡಿನ ನಿರ್ಜನ ಪ್ರದೇಶದಲ್ಲಿರುವುದರಿಂದ ಇಲ್ಲಿಗೆ ಬಂದರೆ ಇಲ್ಲಿ ತಿಂಡಿ–ತೀರ್ಥ ಸಿಗುವ ಹೊಟೇಲ್‍ಗಳ ವ್ಯವಸ್ಥೆ ಇಲ್ಲ. ಕೂಡ್ಲು ತೀರ್ಥದ ದಾರಿ ಹಿಡಿಯೋ ಮೊದಲು ಸಿಗುವ ಒಂದೆರಡು ಹೊಟೇಲ್‌ಗಳಲ್ಲಿ ತಿಂಡಿ ಮುಗಿಸಿ, ಆಮೇಲೆ ಕೂಡ್ಲು ತೀರ್ಥಕ್ಕೆ ತೆರಳಬಹುದು. ಕೂಡ್ಲು ತೀರ್ಥದಲ್ಲಿ ಊಟ, ತಿಂಡಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ನೀರಿನ ಬಾಟಲಿ, ಜ್ಯೂಸ್ ಬಾಟಲಿ ಒಯ್ಯಬಹುದಾದರೂ ಅಲ್ಲಲ್ಲಿ ನೀರು ಕುಡಿದು ಬೀಸಾಡಿದರೆ ಅರಣ್ಯ ಇಲಾಖೆ ದಂಡ ಹಾಕೋದು ಗ್ಯಾರಂಟಿ.
ಉಳಿದುಕೊಳ್ಳಲು ರೆಸಾರ್ಟ್:
ರಾತ್ರಿ ಉಳಿದುಕೊಳ್ಳಲು ಆಗುಂಬೆ-ಸೋಮೇಶ್ವರ ರಸ್ತೆಯಲ್ಲಿ ಕಾಡು ಮನೆ ಹೋಮ್ ಸ್ಟೇ (ಸಂಪರ್ಕ: 7892539602, 9880130826) ಲಭ್ಯವಿದೆ. ಹೆಬ್ರಿಯಲ್ಲಿ ಅರಣ್ಯ ಇಲಾಖೆಯ ಸೀತಾನದಿ ರೆಸಾರ್ಟ್ (ಸಂಪರ್ಕ: 9449599758) ಲಭ್ಯವಿದೆ. ಈ ರೆಸಾರ್ಟ್‍ನಲ್ಲಿ ಕಾಡಲ್ಲಿ ಹರಿಯುವ ಸೀತಾನದಿಯ ಚಂದವನ್ನೂ ಸವಿಯಬಹುದು.
ಬೇಸಿಗೆಯಲ್ಲಿ ಹೆಬ್ರಿ ಪ್ರದೇಶದಲ್ಲಿ ಸುಮಾರು 30 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿದ್ದರೂ, ಕೂಡ್ಲು ತೀರ್ಥ ಪ್ರದೇಶದಲ್ಲಿ ಸುಮಾರು 26 ಡಿಗ್ರಿ ಸೆಲ್ಸಿಯಸ್‍ನಷ್ಟಿರುತ್ತದೆ. ಮಧ್ಯಾಹ್ನದ ಬಳಿಕ ತಾಪಮಾನ ಇಳಿದು ಕೂಲ್ ಕೂಲ್ ಆಗಿರುತ್ತದೆ.
===
ಟಿಕೆಟ್ ಎಷ್ಟು: ವಯಸ್ಕರಿಗೆ ₹50 ಮಕ್ಕಳಿಗೆ ₹ 25 ಟಿಕೆಟ್ ದರ.
ಯಾವಾಗ ಪ್ರವೇಶ: ಮಳೆಗಾಲದಲ್ಲಿ ಈ ತಾಣಕ್ಕೆ ಪ್ರವೇಶವಿಲ್ಲ. ಅಕ್ಟೋಬರ್ -ಮೇ ತಿಂಗಳವರೆಗೂ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.
ಬೈಕ್-/ಕಾರು ಬೆಟರ್: ಇಕ್ಕಟ್ಟಾಗಿರುವ, ಕೊಂಚ ಕಳಪೆಯಾಗಿರುವ ಇಲ್ಲಿನ ರಸ್ತೆಯಲ್ಲಿ ಸಾದಾ ಬೈಕುಗಳ ಸಂಚಾರ ಕೊಂಚ ಕಷ್ಟವಾದರೂ ಸಾಗಲೇನೂ ಅಡ್ಡಿಯಿಲ್ಲ. ಉಳಿದಂತೆ ಕಾರು, ವ್ಯಾನ್‍ಗಳಲ್ಲಿ ಬಂದರೂ ದಾರಿ ಸುಗಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.