‘ಬೋಗೀಬೀಲ್’ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ, ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನ ಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆ. ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು. ಇಷ್ಟೊಂದು ನಿಧಾನಗತಿಗೆ ಪ್ರಮುಖ ಕಾರಣ ಈ ಪ್ರದೇಶದಲ್ಲಿ ಸುರಿಯುತ್ತಿದ್ದ ಪ್ರಚಂಡ ಮಳೆ...
ಕ್ಷ್ಮಣರಾವ್, ಅರುಣಾಚಲ ಪ್ರದೇಶಕ್ಕೆ ಬರ್ತೀರೇನ್ರೀ?’ ದೆಹಲಿ ಯಿಂದ ಫೋನು, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರರಿಂದ.
‘ಏನ್ಸಾರ್ ವಿಶೇಷ?’ ಕೇಳಿದೆ.
‘ಈ ನವೆಂಬರ್ 2, 3ರಂದು ಅಲ್ಲಿನ ಪಾಸಿಘಾಟ್ ಅನ್ನೋ ಊರಲ್ಲಿ ಒಂದು ಬಹುಭಾಷಾ ಲೇಖಕರ ಸಮಾವೇಶ ಇದೆ. ಕವಿಗೋಷ್ಠಿಯಲ್ಲಿ ನಿಮ್ಮ ಪದ್ಯಗಳನ್ನು ಓದಬೇಕು. ಬರ್ತೀರಿ ತಾನೆ?’
‘ನನ್ನ ಹೆಂಡತಿನೂ ಕರ್ಕೊಂಡು ಬರಬಹುದಾ,ನನ್ನದೇ ಖರ್ಚಲ್ಲಿ?’ ಕೇಳಿದೆ.
‘ಆಯ್ತು ಬರ‍್ರೀ, ವ್ಯವಸ್ಥೆ ಮಾಡ್ತಾರೆ’ ಅಂದು ಫೋನಿಟ್ಟರು.
ಹೆಂಡತಿಗಿರಿಜಾಳಿಗೆ ವಿಷಯ ತಿಳಿಸಿದೆ. ಹೊಸ ಪ್ರದೇಶ,ಹೊಸ ಅನುಭವ ಅಂತ ಅವಳೂ ತನ್ನಮೊಣಕಾಲು ನೋವನ್ನು ಕಡೆಗಣಿಸಿ ಬರಲು ಒಪ್ಪಿದಳು. ಆಮೇಲೆ ಪಾಸಿಘಾಟ್ ಬಗ್ಗೆ ಮಾಹಿತಿ ಕಲೆಹಾಕಿದೆವು.
ರಾಜಧಾನಿಯಾದ ಇಟಾನಗರವನ್ನು ಬಿಟ್ಟರೆ ಅರುಣಾಚಲಪ್ರದೇಶದಅತಿದೊಡ್ಡ ಪಟ್ಟಣ ಈ ಪಾಸಿಘಾಟ್. ಇಟಾನಗರ ಅರುಣಾಚಲಪ್ರದೇಶದ ಪಶ್ಚಿಮದತುದಿಯಲ್ಲಿದ್ದರೆ; ಪಾಸಿಘಾಟ್ ಪೂರ್ವದ ತುದಿಯಲ್ಲಿದೆ. ನಮ್ಮ ಬೆಂಗಳೂರು ಮತ್ತು ಬೆಳಗಾವಿಇದ್ದ ಹಾಗೆ- ಗಾತ್ರದಲ್ಲಲ್ಲ, ದೂರದಲ್ಲಿ.
ಅರುಣಾಚಲಪ್ರದೇಶ ಭಾರತದ ಈಶಾನ್ಯ ತುದಿಯ ರಾಜ್ಯ. ಇದರ ದಕ್ಷಿಣದಲ್ಲಿ ಅಸ್ಸಾಂ, ನಾಗಾಲ್ಯಾಂಡ್, ಪಶ್ಚಿಮದಲ್ಲಿಭೂತಾನ್, ಪೂರ್ವದಲ್ಲಿ ಮಯನ್ಮಾರ್ ಮತ್ತು ಉತ್ತರದಲ್ಲಿ ಚೀನಾದ ಗಡಿಗಳಿವೆ. ಹೀಗಾಗಿ ಇಲ್ಲಿಗಡಿ ಕಾವಲು ಸೈನ್ಯಗಳ ಹಲವು ನೆಲೆಗಳಿವೆ. ಸಮೃದ್ಧ ಮಳೆಯ ಹಿಮಾಲಯದ ತಪ್ಪಲು ಪ್ರದೇಶಇದಾದ್ದರಿಂದ ಇದು ನಾಗರಿಕತೆಯಿಂದ ಇನ್ನೂ ಅಷ್ಟಾಗಿ ಹಾಳಾಗದೆ ತನ್ನ ಪ್ರಾಕೃತಿಕಸೌಂದರ್ಯಕ್ಕೆ ಹೆಸರಾಗಿದೆ. ಹಲವಾರು ಬುಡಕಟ್ಟುಗಳ, ಧರ್ಮ ಮತ್ತು ಉಪಭಾಷೆಗಳವೈವಿಧ್ಯಮಯವಾದ ಶ್ರಮಿಕ ಜನರ ನೆಲೆವೀಡಾಗಿದೆ ಈ ರಾಜ್ಯ.
ಪಾಸಿಘಾಟಿನಲ್ಲಿಸಾರ್ವಜನಿಕ ವಿಮಾನ ನಿಲ್ದಾಣ ಇಲ್ಲದ್ದರಿಂದ ನಾವು ದೆಹಲಿ ಮಾರ್ಗವಾಗಿಅಸ್ಸಾಮಿನ ದಿಬ್ರುಗರ್ ವಿಮಾನ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಕಾರಿನಲ್ಲಿ ಪಾಸಿಘಾಟ್ತಲುಪುವ ವ್ಯವಸ್ಥೆಯನ್ನು ಸಾಹಿತ್ಯ ಅಕಾಡೆಮಿ ಮಾಡಿತ್ತು. ಮುಂಜಾನೆ ಬೆಂಗಳೂರಿನಿಂದ ಹೊರಟನಾವು ದಿಬ್ರುಗರ್ ತಲುಪುವ ವೇಳೆಗೆ ಮಧ್ಯಾಹ್ನ2:30 ಗಂಟೆ ಆಗಿತ್ತು. ಆದರೆ, ಅಲ್ಲಿ ಸಂಜೆ4.30ಕ್ಕೆಲ್ಲಾ ಸೂರ್ಯಾಸ್ತವಾಗುವುದರಿಂದ ಅದು ಅಲ್ಲಿ ಸಂಜೆಯ ಸಮಯ. ಅಲ್ಲಿಂದಪಾಸಿಘಾಟಿಗೆ ಕಾರಿನಲ್ಲಿ ಸುಮಾರು ಮೂರು ಗಂಟೆಗಳ ಪ್ರಯಾಣ. ಮಾರ್ಗಮಧ್ಯದಲ್ಲೇ ನಮಗೆಬ್ರಹ್ಮಪುತ್ರ ನದಿಯ ದರ್ಶನವಾಯಿತು. ಸಮುದ್ರದಂತೆ ತೋರುವ ಅದರ ಜಲರಾಶಿಯ ಅಗಾಧತೆ ಮತ್ತುವೈಶಾಲ್ಯ ಬೆರಗಾಗಿಸಿತು. ಅಷ್ಟರಲ್ಲಿ ಅಸ್ಸಾಂ ಮತ್ತು ಅರುಣಾಚಲಪ್ರದೇಶದನಡುವೆ ಇರುವ ಪ್ರಖ್ಯಾತ ಬೋಗಿಬೀಲ್ ಸೇತುವೆ ನಮಗೆ ಎದುರಾಯಿತು. ಅದನ್ನು ನೋಡಲೆಂದು ನಾವುಪ್ರಯಾಣ ನಿಲ್ಲಿಸಿ ಕೆಳಗಿಳಿದು ಬಂದೆವು.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿಕಟ್ಟಲಾಗಿರುವ,ಮೋಟಾರು ವಾಹನಗಳು ಮತ್ತು ರೈಲು ಎರಡೂ ಸಂಚರಿಸಬಲ್ಲ, ಎರಡಂತಸ್ತಿನಸುಮಾರು ಐದು ಕಿಲೋಮೀಟರ್ ಉದ್ದದ ಸೇತುವೆಯಿದು. ಇದನ್ನು ನಿರ್ಮಿಸಲು ತೆಗೆದುಕೊಂಡಕಾಲಾವಧಿ ಸುದೀರ್ಘ ಹದಿನಾರು ವರ್ಷಗಳು (2002 -2018).ಇಷ್ಟೊಂದು ನಿಧಾನಗತಿಗೆಪ್ರಮುಖ ಕಾರಣ ಈ ಪ್ರದೇಶದ ಪ್ರಚಂಡ ಮಳೆ. ಇದು ಭೂಕಂಪನ ಮಾಮೂಲಾದ ಪ್ರದೇಶವಾದ್ದರಿಂದಅದನ್ನು ತಡೆದುಕೊಳ್ಳಲು ಸಮರ್ಥವಾದ ಉಕ್ಕು ಮತ್ತು ಕಾಂಕ್ರಿಟ್ ಬಳಸಿ ಈ ಸೇತುವೆ ನಿರ್ಮಿಸಲಾಗಿದೆ.
ನಾವು ಇಲ್ಲಿಗೆ ತಲುಪುವ ವೇಳೆಗಾಗಲೇ ಸಂಜೆಯ ಕಾವಳಕವಿಯತೊಡಗಿದ್ದರಿಂದ ಸೇತುವೆಯುದ್ದಕ್ಕೂ ವಿದ್ಯುದ್ದೀಪಗಳು ಪ್ರಜ್ವಲಿಸಿದವು. ಹಸಿರು, ನೀಲಿ, ಕೆಂಪು, ಹಳದಿ ಹೀಗೆ ಹತ್ತು ಸೆಕೆಂಡಿಗೊಮ್ಮೆ ಬದಲಾಗುವ ಬಣ್ಣಗಳಲ್ಲಿಕಂಗೊಳಿಸುತ್ತಿದ್ದ ಆ ಭವ್ಯ ಸೇತುವೆಯ ದೃಶ್ಯ ನಿಜಕ್ಕೂ ನಯನ ಮನೋಹರವಾಗಿತ್ತು. ಅಲ್ಲಿಂದ ಪ್ರಯಾಣ ಮುಂದುವರಿಸಿ ಪಾಸಿಘಾಟ್ ತಲುಪಿ,ಅಲ್ಲಿನ ಒಂದು ವಸತಿಗೃಹದಲ್ಲಿ ನಮಗಾಗಿ ಕಾದಿರಿಸಲಾಗಿದ್ದ ಕೊಠಡಿಯಲ್ಲಿ ವಿಶ್ರಮಿಸಿದೆವು. ಸಮಾವೇಶಏರ್ಪಾಟಾಗಿದ್ದದ್ದು ಪಾಸಿಘಾಟಿನ ಹಸಿರೋ ಹಸಿರಿನ ಅರಣ್ಯ ಮತ್ತು ತೋಟಗಾರಿಕೆ ಕಾಲೇಜಿನಭವ್ಯ ಸಭಾಂಗಣದಲ್ಲಿ. ನಾನು ಭಾಗವಹಿಸಬೇಕಾಗಿದ್ದ ಗೋಷ್ಠಿ ಇದ್ದದ್ದು ಮರುದಿನವಾದ್ದರಿಂದಕಾರ್ಯಕ್ರಮದ ಉದ್ಘಾಟನೆಯ ನಂತರ ನಾನು ಹೆಂಡತಿಯೊಂದಿಗೆ ಪಾಸಿಘಾಟ್ ನೋಡಿಬರಲು ಹೊರಟೆ. ಮೊದಲುಕಂಡದ್ದು ಸಿಯಾಂಗ್ ನದಿಯನ್ನು. ಆ ಜೀವನದಿಯೇ ಸುತ್ತಮುತ್ತಲ ಪ್ರದೇಶದ ಜೀವದಾಯಿನಿನದಿಯೂ ಹೌದು. ಅದರ ಸ್ಫಟಿಕ ಶುಭ್ರ ತಂಪು ಜಲದಲ್ಲಿ ಕೈಕಾಲು ಮುಖ ತೊಳೆದುಕೊಂಡು,ಅದರಹಿನ್ನೆಲೆಗಿದ್ದ ಗಿರಿಶ್ರೇಣಿಗಳ ಚೆಲುವಿನಿಂದ ಕಂಗಳನ್ನು ತೊಳೆದುಕೊಂಡು
ತಂಪಾದೆವು. ನಂತರ ಆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಂದರ ಸೇತುವೆಯನ್ನು ನೋಡಿಕೊಂಡು ಊರನತ್ತಹೊರಟೆವು.
ಅದೊಂದು ಚದುರಿದಂತೆ ಬೆಳೆದಿರುವ,ಹಳ್ಳಿಯ ಚಹರೆಯುಳ್ಳ,ವಿರಳಜನವಸತಿಯ ಪುಟ್ಟ ಪಟ್ಟಣ- ನಮ್ಮ ಸಾಗರ ಅಥವಾ ಸಕಲೇಶಪುರವನ್ನು ನೆನಪಿಸುವಂತಹ ತಾಣ. ನವೆಂಬರ್ ತಿಂಗಳ ಆರಂಭದ ದಿನವಾದರೂ ಬಿಸಿಲು ಪ್ರಖರವಾಗಿಯೇ ಇತ್ತು. ಅಲ್ಲಿನ ಬಹುತೇಕಮಹಿಳೆಯರು ಬಣ್ಣಬಣ್ಣದ ಕೊಡೆಗಳನ್ನು ತಮ್ಮ ತಲೆಯ ಮೇಲೆ ಬಿಚ್ಚಿಹಿಡಿದುನಡೆದಾಡುತ್ತಿದ್ದರು. ಅದನ್ನು ಕಂಡು ನನ್ನ ಹೆಂಡತಿಯೂ ಅಲ್ಲಿನ ಒಂದು ಅಂಗಡಿಯಲ್ಲಿ ಈಪ್ರವಾಸದ ನೆನಪಿಗೆಂದು ಒಂದು ಬಣ್ಣದ ಛತ್ರಿ ಕೊಂಡಳು.
ಅಂದುಸಂಜೆ ಸಮಾವೇಶದ ಆಯೋಜಕರು ಅತಿಥಿಗಳಾದ ನಮ್ಮನ್ನೆಲ್ಲ ಸಮೀಪದ ಗುಡ್ಡವೊಂದರ ದಟ್ಟ ಕಾಡಿನನಡುವೆ ಇದ್ದ ಒಂದು ರೆಸಾರ್ಟ್‌ಗೆ ಔತಣಕೂಟಕ್ಕೆಂದು ಕರೆದೊಯ್ದರು. ಕಗ್ಗತ್ತಲಲ್ಲಿಇಕ್ಕಟ್ಟಿನ ಆ ಏರುದಾರಿಯನ್ನು ಜೀಪುಗಳಲ್ಲಿ ತೆವಳುತ್ತ ಸಾಗಿದ ಆ ಪ್ರಯಾಣ ನಿಜಕ್ಕೂರುದ್ರರಮಣೀಯವಾಗಿತ್ತು.
ಮೊದಲಿಗೆ ಮರದ ಅಟ್ಟಣಿಗೆಯಲ್ಲಿ ಕೂತ ನಮಗೆಲ್ಲರಿಗೂಅಲ್ಲಿನ ವಿಶೇಷ ಪಾನೀಯವಾದ ರೈಸ್ ಬಿಯರ್ ಕುಡಿಯಲು ಕೊಟ್ಟರು. ನಮ್ಮ ಕಡೆ ಕೊಡಗು,ಮಲೆನಾಡಿನಲ್ಲಿ ಅದನ್ನು ಅಕ್ಕಿಬೋಜ ಅಂತ ಕರೀತಾರೆ. ಒಂಥರಾ ಹುಳಿ,ಒಗರು,ಚೆನ್ನಾಗಿರುತ್ತೆ. ಆಮೇಲೆ ಬಗೆ ಬಗೆ ತಿಂಡಿತಿನಿಸು. ಇದರ ನಡುವೆ ಅಲ್ಲಿನ ಯುವಗಾಯಕನೊಬ್ಬಗಿಟಾರ್ ನುಡಿಸುತ್ತ,ಸ್ವರಚಿತ ಇಂಗ್ಲಿಷ್ ಗೀತೆಗಳನ್ನು ಸೊಗಸಾಗಿ ಹಾಡಿದ. ನಮಗೂಹಾಡಲು ಕರೆ ಬಂತು. ನಾನು ಗಿಟಾರ್ ಹಿಮ್ಮೇಳದಲ್ಲಿ ನನ್ನ ಪಾಶ್ಚಾತ್ಯ ಧಾಟಿಯ ‘ನಿಂಬೆ ಗಿಡ’ ಹಾಡನ್ನು ಹಾಡಿದೆ. ಅದು ಅಲ್ಲಿನ ಎಲ್ಲರ ಮನ ಸೂರೆಗೊಂಡಿತು.
ಮರುದಿನಮಧ್ಯಾಹ್ನ ಊಟದ ವೇಳೆಗೆ ಸಾಹಿತ್ಯದ ಗೋಷ್ಠಿಗಳೆಲ್ಲ ಮುಗಿದಿದ್ದವು. ಆಯೋಜಕರು ನಮ್ಮೆಲ್ಲರನ್ನು ಅಲ್ಲಿಂದ ಸುಮಾರು30ಕಿಲೋಮೀಟರ್ ದೂರದಲ್ಲಿದ್ದ,ಆದಿ ಎಂಬ ಬುಡಕಟ್ಟಿನಜನರ, ಸುಲುಕ್ ಎಂಬ ಹಳ್ಳಿಗೆ ಕರೆದೊಯ್ದರು. ಅದು ಕಳೆದ ಶತಮಾನದ ಪ್ರಸಿದ್ಧ ಅಸ್ಸಾಮಿಕಾದಂಬರಿಕಾರ ‘ಸಾಹಿತ್ಯ ಸೂರ್ಯ’ ಎಂದು ಬಿರುದಾಂಕಿತರಾಗಿದ್ದ ಲುಮೆರ್ ದೈ ಅವರಹುಟ್ಟೂರು. ಅವರ ನೆನಪಿಗಾಗಿ, ಅವರು ಓದಿದ ಪ್ರಾಥಮಿಕ ಶಾಲೆಯ ಆವರಣದಲ್ಲಿ,ಅವರ ಒಂದುಮೂರ್ತಿಯನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ.ಸಂಜೆ ನಮ್ಮ ವಸತಿಗೃಹಕ್ಕೆಹಿಂತಿರುಗಿದ ಬಳಿಕ,ಆ ವೇಳೆಗೆ ನನಗೆ ಆತ್ಮೀಯ ಮಿತ್ರರಾಗಿದ್ದ ಗುಜರಾತಿ ಭಾಷೆಯ ಯುವಲೇಖಕ ಸೌಮ್ಯ ಜೋಶಿ ನನ್ನನ್ನು ತಮ್ಮ ಕೊಠಡಿಗೆ ಹರಟೆಗೆ ಆಹ್ವಾನಿಸಿದ್ದರು. ಹೋದೆ. ಜೋಶಿಯಾಕೋ ಗಲಿಬಿಲಿಗೊಂಡಿದ್ದರು. ‘ಲಕ್ಷ್ಮಣ್ ಜೀ, ಈ ವಿಚಿತ್ರ ನೋಡಿ! ನಾನು ಲಾಡ್ಜಿಗೆ ಹಿಂತಿರುಗಿದ ಮೇಲೆ ನೋಡಿಕೊಂಡೆ. ನನ್ನ ಎಡಗಾಲಿನ ಕಾಲುಚೀಲ ರಕ್ತದಿಂದ ತೊಯ್ದುತೊಪ್ಪೆಯಾಗಿದೆ! ಬಿಚ್ಚಿ ನೋಡುತ್ತೇನೆ ಎಲ್ಲೂ ಒಂದು ಚೂರೂ ಗಾಯವಿಲ್ಲ. ಇದೇನೋಅಯೋಮಯವಾಗಿದೆ!’ ಎಂದರು.
ನಾನೆಂದೆ, ‘ಓಹೋ ಇದು ಆ ಜಿಗಣೆಯದ್ದೇ ಕೆಲಸ!’ ಅವರಿಗೆ ಹಿಂದಿನ ರಾತ್ರಿಯ ನನ್ನ ಮತ್ತು ಗಿರಿಜಾಳ ಅನುಭವವನ್ನು ಸಾದ್ಯಂತ ವಿವರಿಸಿದೆ. ‘ಇಂದುಸುಲುಕ್ ಹಳ್ಳಿಯಲ್ಲಿ ನಾವು ನೆಲದ ಮೇಲೆ ಕೂತಿದ್ದೆವಲ್ಲ, ಆಗ ಜಿಗಣೆ ನಿಮ್ಮ ಕಾಲಿನರಕ್ತ ಹೀರಿದೆ. ಅದು ತನ್ನ ಹೀರುಕೊಳವೆಯನ್ನು ನಿಮ್ಮ ಕಾಲಿಗೆ ಚುಚ್ಚಿದ ನಂತರ ಒಂದುದ್ರವವನ್ನು ಒಳಕ್ಕೆ ಒಸರುತ್ತೆ. ಅದರಿಂದ ಕೆಲವು ನಿಮಿಷಗಳ ಕಾಲ ನಿಮ್ಮ ರಕ್ತ ತನ್ನಹೆಪ್ಪುಗಟ್ಟುವ ಶಕ್ತಿಯನ್ನು ಕಳೆದುಕೊಳ್ಳುತ್ತೆ. ಜೊತೆಗೆ ಯಾವ ನೋವಿನ ಅನುಭವವೂ ನಿಮಗೆಆಗದಂತೆ ಮಾಡುವ ಅರಿವಳಿಕೆಯೂ ಅದರಲ್ಲಿ ಇರುತ್ತೆ. ಜಿಗಣಿ ತನ್ನ ಚೀಲದ ತುಂಬಾ ನಿಮ್ಮರಕ್ತ ಹೀರಿ ಕಳಚಿಕೊಂಡಿದೆ. ನಿಮ್ಮ ರಕ್ತಸ್ರಾವ ಮಾತ್ರ ಮುಂದುವರಿದಿದೆ. ಇದು ವಿಷಯ’
ಜಿಗಣೆ ಬಗ್ಗೆ ಏನೂ ಅರಿಯದ ಗುಜರಾತಿ ಗೆಳೆಯ ಆಶ್ಚರ್ಯಚಕಿತರಾದರು.ಗೂಗಲ್ಲಿನಲ್ಲಿ ಅದರ ಬಗ್ಗೆ ಓದಿ ನೋಡಿದಾಗಲಷ್ಟೇ ಅವರಿಗೆ ನನ್ನ ಮಾತಲ್ಲಿ ನಂಬಿಕೆಮೂಡಿದ್ದು. ‘ಎಂಥಾ ರೂಪಕವಲ್ಲವೇ ಈ ಜಿಗಣೆ?! ಶತಶತಮಾನಗಳಿಂದ ಹೇಗೆ ಹೀರ್ತಾ ಇದೆ ನೋಡಿ ಇಡೀ ಮನುಕುಲದ ರಕ್ತವನ್ನು ವಿವಿಧ ರೂಪಗಳಲ್ಲಿ, ಗೊತ್ತೇ ಆಗದ ಹಾಗೆ’ ಎಂದೆ. ಅಹುದಹುದೆಂದು ಜೋಶಿ ತಲೆಯಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.