ADVERTISEMENT

ಸುತ್ತಾಣ: ವಾರಾಂತ್ಯ ಭೇಟಿಗೆ ಉತ್ತಮ ತಾಣ ಲೇಪಾಕ್ಷಿ

ಪವಿತ್ರಾ ಭಟ್
Published 11 ಅಕ್ಟೋಬರ್ 2024, 8:47 IST
Last Updated 11 ಅಕ್ಟೋಬರ್ 2024, 8:47 IST
<div class="paragraphs"><p>ಲೇಪಾಕ್ಷಿ </p></div>

ಲೇಪಾಕ್ಷಿ

   

– ಗೆಟ್ಟಿ ಚಿತ್ರ

ದೇಗುಲದ ಜತೆಗೆ ಒಂದೊಳ್ಳೆ ಜಾಗಕ್ಕೆ ಭೇಟಿ ನೀಡಬೇಕು ಎನ್ನಿಸಿದರೆ ಬೆಂಗಳೂರಿನಿಂದ 122 ಕಿ.ಮೀ ದೂರದಲ್ಲಿರುವ ಲೇಪಾಕ್ಷಿ ದೇವಸ್ಥಾನವನ್ನು ನಿಮ್ಮ ವಾರಾಂತ್ಯದ ಪ್ರವಾಸ ಪಟ್ಟಿಗೆ ಸೇರಿಸಿಕೊಳ್ಳಬಹುದು.
ಕರ್ನಾಟಕ -ಆಂಧ್ರಪ್ರದೇಶ ಗಡಿಯಲ್ಲಿ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿ ಈ ದೇವಾಲಯವಿದೆ. ಈ ದೇಗುಲ ಶಿವನ ವೀರಭದ್ರ ರೂಪಕ್ಕೆ ಹೆಸರಾದ 108 ಶಿವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ವೀರಭದ್ರಸ್ವಾಮಿ ನೆಲೆನಿಂತಿದ್ದಾನೆ. 16ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ರಾಮಾಯಣದ ನಂಟೂ ಇದೆ.

ADVERTISEMENT


ಪುರಾಣಗಳ ಕಥೆ ಹೇಳುವ ಸುಂದರ ಕೆತ್ತನೆಗಳು, ವಾಸ್ತು ವೈಭವ, ವಿಭಿನ್ನ ಪ್ರಕಾರದ ವಾಸ್ತು ಶೈಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.


ಏಳು ಹೆಡೆಯ ನಾಗಲಿಂಗ:


ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ಏಳು ಹೆಡೆಯ ನಾಗಲಿಂಗ ಇಲ್ಲಿಯ ಪ್ರಮುಖ ಆಕರ್ಷಣೆ. ಏಳು ಹೆಡೆಯ ಸರ್ಪ ಶಿವಲಿಂಗವನ್ನು ಸುತ್ತಿಕೊಂಡಿರುವಂತೆ ಕಾಣುತ್ತದೆ. ಇದರ ಹಿಂದೆಯೇ ಬೃಹತ್‌ ಗಣಪತಿಯ ವಿಗ್ರಹವಿದೆ.


ಹೊರಾಂಗಣದಲ್ಲಿ ನೆತ್ತಿ ಸುಡುವ ಬಿಸಿಲಿದ್ದರೂ ದೇಗುಲದ ಒಳಹೊಕ್ಕರೆ ತಂಪು ತಂಪು ಅನುಭವ. ಒಮ್ಮೆ ದೇವಾಲಯದ ಒಳ ನಡೆದರೆ ಕಣ್ಣಿಟ್ಟಲ್ಲೆಲ್ಲಾ ರಾಮಾಯಣದ ಕಥೆಗಳನ್ನು ಸಾರುವ ಕೆತ್ತನೆಗಳು, ಕತ್ತೆತ್ತಿ ನೋಡಿದರೂ ಛಾವಣಿ ಮೇಲೆ ರಾಮಾಯಣ, ಮಹಾಭಾರತ, ಪುರಾಣಗಳ ದೃಶ್ಯಗಳ ಕೆತ್ತನೆ. ಜತೆಗೆ ಶಿವನ ಅವತಾರಗಳನ್ನು ಕಲ್ಲಿನ ಮೇಲೆ ಕೆತ್ತಿರುವುದು ವಿಜಯನಗರ ಸಾಮ್ರಾಜ್ಯದ ಕಲೆಗಾರಿಕೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.


ನೇತಾಡುವ ಕಂಬ:


ನೇತಾಡುವ ಕಂಬ ಲೇಪಾಕ್ಷಿಯಲ್ಲಿನ ಇನ್ನೊಂದು ಅಚ್ಚರಿಯ ಸಂಗತಿ. ದೇವಾಲಯದ ಒಳಾಂಗಣದಲ್ಲಿ 70 ಕಂಬಗಳಿವೆ. ಅದರಲ್ಲಿ ಒಂದು ಕಂಬ ನೆಲದ ಆಧಾರವಿಲ್ಲದೆ ನಿಂತಿದೆ. ಕಂಬದ ತಳಭಾಗದಿಂದ ಕಾಗದ ಅಥವಾ ಬಟ್ಟೆಯನ್ನು ಹಾಕಿ ಇನ್ನೊಂದು ಬದಿಗೆ ತರಬಹುದು.


ಸೀತೆಯ ಹೆಜ್ಜೆಗುರುತು, ಬೃಹತ್ ನಂದಿ ವಿಗ್ರಹ, ಶಿವ- ಪಾರ್ವತಿ ಕಲ್ಯಾಣಕ್ಕೆ ಮಂಟಪ ನಿರ್ಮಿಸಬೇಕೆಂದು ಸಾಧ್ಯವಾಗದೆ, ಹಾಗೆಯೇ ಉಳಿದ ಕಲ್ಲಿನ ಮಂಟಪ ಲೇಪಾಕ್ಷಿಯಲ್ಲಿ ನೋಡಬಹುದಾದ ಜಾಗ.


ಜಟಾಯು:


ಇಲ್ಲಿ ನೋಡಬಹುದಾದ ಇನ್ನೊಂದು ಸ್ಥಳ ಕಲ್ಲಿನ ಜಟಾಯು. ಪುರಾಣಗಳ ಪ್ರಕಾರ, ರಾವಣ ಸೀತೆಯನ್ನು ಅಪಹರಿಸಿಕೊಂಡು ತೆರಳುತ್ತಿದ್ದಾಗ ಜಟಾಯು ಪಕ್ಷಿ ರಾವಣನನ್ನು ತಡೆಯಲು ಯತ್ನಿಸಿತ್ತು. ಆಗ ಆತ ಜಟಾಯುವಿನ ರೆಕ್ಕೆಯನ್ನು ಕತ್ತರಿಸಿದ್ದ. ಇದರಿಂದ ಕೆಳಗೆ ಬಿದ್ದ ಪಕ್ಷಿ ಅದೇ ಮಾರ್ಗವಾಗಿ ಬಂದ ಶ್ರೀ ರಾಮನಿಗೆ ಸೀತಾಪಹರಣದ ಸುದ್ದಿ ತಿಳಿಸಿತ್ತು. ರೆಕ್ಕೆ ತುಂಡಾಗಿ ಬಿದ್ದಿದ್ದ ಜಟಾಯುವಿಗೆ ‘ಲೇ ಪಕ್ಷಿ’ (ಎದ್ದೇಳು ಪಕ್ಷಿ) ಎಂದಿದ್ದಕ್ಕೆ ಆ ಪ್ರದೇಶಕ್ಕೆ ಲೇಪಾಕ್ಷಿ ಎನ್ನುವ ಹೆಸರು ಬಂದಿದೆ ಎನ್ನುವ ನಂಬಿಕೆಯಿದೆ.


ತೆರಳುವುದು ಹೇಗೆ?


ಲೇಪಾಕ್ಷಿಗೆ ನೀವು ಬೆಂಗಳೂರಿನಿಂದ ಕಾರು, ಬೈಕ್‌ ಅಥವಾ ಇತರೆ ವಾಹನಗಳ ಮೂಲಕ ಸುಲಭವಾಗಿ ತೆರಳಬಹುದು.


ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ದೇಗುಲ ಜನರ ಭೇಟಿಗೆ ಮುಕ್ತವಾಗಿರುತ್ತದೆ.

ದೇವಾಲಯದ ಬಳಿ ಹಸಿವು ನೀಗಿಸಿಕೊಳ್ಳಬಹುದಾದ ಹೋಟೆಲ್‌ಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.