ADVERTISEMENT

ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:30 IST
Last Updated 21 ಅಕ್ಟೋಬರ್ 2019, 19:30 IST
ಧರ್ಮದ ಗುಡ್ಡಗಳು. ಚಿತ್ರಗಳು: ಲೇಖಕರವು
ಧರ್ಮದ ಗುಡ್ಡಗಳು. ಚಿತ್ರಗಳು: ಲೇಖಕರವು   

ಈ ಸಾಲುಗುಡ್ಡಗಳಲ್ಲಿದ್ದಾರೆ ಮೂರು ಧರ್ಮಗಳ ದೇವರು.ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕು ಪ್ರವೇಶಿಸುತ್ತಿದ್ದಂತೆ ಸಾಲು ಬೆಟ್ಟಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಮೂರು ಧರ್ಮಾಧಾರಿತವಾಗಿ ಈ ಗುಡ್ಡಗಳು ಹಂಚಿಹೋಗಿವೆ. ಹಾಗೆ ನೋಡಿದರೆ ಇಂಥ ಹಲವು ಗುಡ್ಡಗಳ ನಡುವೆಯೇ ಮಾನ್ವಿ ಪಟ್ಟಣವಿದೆ. ಮಧ್ಯದಲ್ಲಿರುವ ಗುಡ್ಡದ ತುದಿಯಲ್ಲಿ ಕೋಟೆ ಇರುವ ಕಾರಣ ಅದನ್ನು ತಾಲ್ಲೂಕಿನ ಕಿರೀಟ ಎಂದೂ ಕರೆಯುತ್ತಾರೆ.

‘ನೋಡುಗರಿಗೆ ಜಾತಿ ಧರ್ಮದ ಪ್ರಭಾವ ಇರಬಹುದು’ ಎಂದು ಎನ್ನಿಸಿದರೂ ಇಲ್ಲಿನ ಸಂಸ್ಕೃತಿ, ಹಬ್ಬ ಆಚರಣೆಗಳು‌ಭೇದಗಳನ್ನು ಬದಿಗೊತ್ತಿ ಬೆಳೆದಿವೆ. ಧರ್ಮದ ಹೆಸರನ್ನು ಈ ಬೆಟ್ಟಗಳಿಗೆ ಅನ್ವಯಿಸುವುದು ತಪ್ಪಾದೀತು. ಅಷ್ಟೊಂದು ಭಾವೈಕ್ಯ ಇಲ್ಲಿದೆ. ಸ್ಥಳೀಯರು ಈ ಗುಡ್ಡಗಳನ್ನು ಪಡೆ ಮಲ್ಲಪ್ಪ, ಕಿಲೆವ್, ಸಬ್ಜಲಿ ತಾತ ಎಂದು ಕರೆಯುತ್ತಿದ್ದರಾದರೂ ಆ ಹೆಸರುಗಳನ್ನು ಹಳೆ ತಲೆಮಾರಿನವರು ಮಾತ್ರ ಗುನುಗುತ್ತಾರೆ. ಈ ಸಾಲು ಗುಡ್ಡಗಳನ್ನು ಧರ್ಮದ ಹೆಸರಿನಲ್ಲಿಯೇಹೆಚ್ಚಾಗಿ ಗುರುತಿಸುತ್ತಾರೆ.

ಬೆಟ್ಟಗಳಲ್ಲಿ ಹಬ್ಬಗಳೇ ವಿಶೇಷ

ADVERTISEMENT

ನಾವೆಲ್ಲ ಒಂದೇ ಎಂದು ಸಾರಲು ಮೊಹರಂ ಹಬ್ಬವೇ ಸಾಕ್ಷಿ. ಎಲ್ಲ ಜಾತಿ, ಧರ್ಮದ ಜನರು ಕುಣಿದು ಕುಪ್ಪಳಿಸಿ ಆಚರಿಸುವ ಹಬ್ಬ. ‘ಪಿಂಜು ಪೀರ್ಲಬ್ಬ’ ಎಂಬ ಸ್ಥಳೀಯ ಮಾತಿದೆ. ಅಂದರೆ, ಎಲ್ಲ ಕಷ್ಟ, ಭಿನ್ನ ಬೇಧಗಳ ಮರೆತು ಸಂತಸದಿಂದ ಹಬ್ಬದಲ್ಲಿ ಮುಳುಗಿ ಮಿಂದೇಳು ಎಂದರ್ಥ. ಈ ಹಬ್ಬವನ್ನು ಮುಸ್ಲಿಮರಿಗಿಂತ ಇತರಸಮುದಾಯದ ಧರ್ಮದ ಜನರೇ ಅಚ್ಚುಕಟ್ಟಾಗಿ ಆಚರಿಸುತ್ತಾರೆ. ಸಬ್ಜಲಿ ತಾತನ ಬೆಟ್ಟದಲ್ಲಿ ಹಿಂದೂ– ಮುಸ್ಲಿಂ ಸಮುದಾಯದವರು ಸೇರಿ ಹಬ್ಬ ಆಚರಿಸುತ್ತಾರೆ. ಗುಡ್‌ ಫ್ರೈಡೇ ದಿನ ಕ್ರೈಸ್ತ ಸಮುದಾಯದವರು ಬೆಟ್ಟಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿಂದೂ ದೇವಸ್ಥಾನವಿರುವ ಬೆಟ್ಟದಲ್ಲಿ ಹಿಂದೂಗಳು ಸೇರಿದಂತೆ ಎಲ್ಲರೂ ಹಬ್ಬ, ಜಾತ್ರೆ ಮಾಡುವುದು ಇಲ್ಲಿನ ಸಂಪ್ರದಾಯ. ಯಾವ ಹಬ್ಬ ಆಚರಣೆಯಲ್ಲೂ ಗದ್ದವಿಲ್ಲದೆ ನಡೆಯುತ್ತವೆ.ಇದೇ ಇಲ್ಲಿನ ಭಾವೈಕ್ಯ.

ಮಾನ್ವಿ ಪಟ್ಟಣಕ್ಕೆ ಮೈಚಾಚಿಕೊಂಡಿರುವ ಮಲ್ಲಿಕಾರ್ಜುನ, ಅನ್ನಮಯ್ಯ ತಾತ, ಸಂಜೀವರಾಯ ದೇವಸ್ಥಾನಗಳಿರುವ ಗುಡ್ಡಗಳ ಸಾಲು ಒಂದೊಂದು ವಿಶೇಷ ಹಬ್ಬ ಆಚರಣೆಯಿಂದ ಹೆಸರಾಗಿವೆ.12ನೇ ಶತಮಾನದಲ್ಲಿ ಬೆಣಚುಕಲ್ಲಿನಿಂದ ನಿರ್ಮಿಸಲಾದ ಮಲ್ಲಿಕಾರ್ಜುನ ದೇವಾಲಯ ಸುರಕ್ಷಿತವಾಗಿ ಉಳಿದಿದೆ. ಇವುಗಳ ಮುಂಭಾಗದ ಸಾಲಾಗಿ ಕಾಣುವುದೇ ಈ ಭಾವೈಕ್ಯ ಬೆಟ್ಟಗಳು!. ಇವುಗಳಲ್ಲಿ ಪುರಾತನ ಕೋಟೆಗಳು ಮಾಸದೆ ಇನ್ನೂ ಹಾಗೆಯೇ ಇವೆ.

ಆಗಸ್ಟ್ 15ರಂದು ಯುವಕರೆಲ್ಲ ಸೇರಿ ಕೋಟೆಯ ಮೇಲೆ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡುತ್ತಾರೆ. ಕೋಟೆ ತುದಿಯ ಕಡುಗತ್ತಲಿನಲ್ಲಿ ಬಣ್ಣ ಬಣ್ಣದ ಲೈಟಿಂಗ್‌ ನಡುವೆ ಧ್ವಜ ಹಾರಾಡುವದೃಶ್ಯ ನೋಡಿದರೆ ಸ್ವತಂತ್ರಕ್ಕಾಗಿ ನಡೆದ ಹೋರಾಟದ ಚಿತ್ರಣ ನೆನಪಿಸುತ್ತದೆ. ಆದರೆ, ಇತ್ತೀಚಿನ ಧರ್ಮಾಧಾರಿತ ರಾಜಕೀಯ ಬೆಳವಣಿಗೆಗಳು ನಮ್ಮೂರ ಸಂಸ್ಕೃತಿ ಆಚರಣೆಗಳನ್ನು ಕೆಡವಿ ಬಿಡುವಂತಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಹಿರಿಯ ಜೀವಗಳು.

‘ಸೀತಾಫಲ’ದ ಬೆಟ್ಟಗಳು..

ಯಾವ ಗುಡ್ಡ ಹತ್ತಿದರೂ ಕವಳೆ, ಕಾರೆ, ಸೀತಾಫಲ ಹಣ್ಣು ಸಿಗುತ್ತವೆ. ಅದರಲ್ಲೂ ಸೀತಾಫಲ ಹಣ್ಣು ಇಡೀ ತಾಲ್ಲೂಕಿನಲ್ಲಿರುವ ಗುಡ್ಡ ಬೆಟ್ಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಕಾರಣಕ್ಕಾಗಿಯೇ ಸರ್ಕಾರ ಫಲ ಬಿಡುವ ಸಮಯದಲ್ಲಿ ಬೆಟ್ಟಗಳನ್ನು ಗುತ್ತಿಗೆ ಕೊಡುತ್ತದೆ. ಪ್ರಕೃತಿ ದತ್ತವಾಗಿ ಬೆಳೆಯುವ ಹಣ್ಣು ಸವಿಯಲು ಸ್ಥಳೀಯರಿಗೆ ಯೋಗವಿಲ್ಲ. ಬದಲಿಗೆ ಈ ಹಣ್ಣುಗಳನ್ನು ಹೊರ ರಾಜ್ಯಕ್ಕೂ ರಫ್ತು ಮಾಡಲಾಗುತ್ತದೆ. ನಾವೂ ಕೂಡ ಗ್ರಾಹಕರಂತೆ ಹಣ ಪಾವತಿಸಿಯೇ ತಿನ್ನಬೇಕು. ಈ ವಿಚಾರದಲ್ಲಿ ಸ್ಥಳೀಯರು ಕೂಡ ಹೊರಗಿನವರೇ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಶಾಂತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.