ADVERTISEMENT

ಅಮರ ಪ್ರೇಮದ ದ್ಯೋತಕಗಳಾದ ವಿಶಿಷ್ಟ ಸ್ಮಾರಕಗಳು

ಡಾ.ಕೆ.ಎಸ್.ಪವಿತ್ರ
Published 11 ಫೆಬ್ರುವರಿ 2023, 19:30 IST
Last Updated 11 ಫೆಬ್ರುವರಿ 2023, 19:30 IST
ಜಪಾನ್‌ನ ಕ್ಯೋಟೋ ನಗರದಲ್ಲಿರುವ ಕೊಡೈಜಿ ದೇವಾಲಯದ ನೋಟ
ಜಪಾನ್‌ನ ಕ್ಯೋಟೋ ನಗರದಲ್ಲಿರುವ ಕೊಡೈಜಿ ದೇವಾಲಯದ ನೋಟ   

ತಾಜ್‌ ಮಹಲ್‌ ಒಂದೇ ಪ್ರೇಮ ಸ್ಮಾರಕವಲ್ಲ. ಅಮರ ಪ್ರೇಮದ ದ್ಯೋತಕಗಳಾದ ವಿಶಿಷ್ಟ ಸ್ಮಾರಕಗಳು ಜಗತ್ತಿನಲ್ಲಿ ಇನ್ನೂ ಹಲವಿವೆ...

***

ಪ್ರೀತಿಯಲ್ಲಿ ಮುಳುಗಿರುವಾಗ ಬೀಸುತ್ತಿರುವ ಗಾಳಿಯಲ್ಲೆಲ್ಲ ಪ್ರೀತಿ ತುಂಬಿರುವಂತೆ ಭಾಸವಾಗುತ್ತದೆಯಷ್ಟೆ. ಅದಕ್ಕಾಗಿಯೇ ‘Love is in the air’ ಅನ್ನುವುದಿರಬೇಕು! ಪ್ರೀತಿಗಾಗಿ ನಾವು ಏನು ಮಾಡಲು ಸಾಧ್ಯವಿದೆ?! ಏನನ್ನು ಬೇಕಾದರೂ ಎಂದು ಈಗಷ್ಟೇ ಪ್ರೀತಿಯಲ್ಲಿ ‘ಬಿದ್ದ’ವರೆನ್ನಬಹುದು. ರಕ್ತದಲ್ಲಿ ಪ್ರೇಮಪತ್ರ ಬರೆದವರೂ ಇರಬಹುದು. ಅಥವಾ ಪ್ರೀತಿಯ ಪ್ರಥಮ ಅಲೆಯಲ್ಲಿ ಮುಳುಗೆದ್ದವರು, ಮೊದಲ ಉದ್ವೇಗ ಕಳೆದವರು ವರ್ಷಕ್ಕೊಮ್ಮೆ ಹುಟ್ಟಿದ ಹಬ್ಬಕ್ಕೋ ಅಥವಾ ಅಪರೂಪಕ್ಕೊಮ್ಮೆ ‘ವ್ಯಾಲೆಂಟೈನ್ಸ್ ಡೇ’ಗೋ ಒಂದು ಹೂ /ಬಟ್ಟೆ/ ಗ್ರೀಟಿಂಗ್ ಕಾರ್ಡ್ ಇತ್ಯಾದಿ ಕೊಡುತ್ತೇವೆ - ಅಲ್ಲಿಗೆ ಪ್ರೀತಿಯ ಕಥೆ ಮುಗಿಸುತ್ತೇವೆ ಎನ್ನಬಹುದು. ಪ್ರೀತಿಗೆಂದು, ತಮಗಿರುವ ಪ್ರೀತಿಯ ಆಳ ಇತರರಿಗೂ ಗೊತ್ತಾಗಲಿ/ ಮಾದರಿಯಾಗಲಿ ಅಥವಾ ಅಮರವಾಗಿ ನಿಲ್ಲಲಿ ಎಂಬ ಕಾರಣದಿಂದ ‘ಪ್ರೇಮಸೌಧ’ವನ್ನೇ ನಿರ್ಮಿಸುವವರೂ ಇರಬಹುದು.

ADVERTISEMENT

ಹೀಗೆ ಆರಂಭಿಸಿದ ತಕ್ಷಣ ‘ತಾಜ್‍ಮಹಲ್’ ಬಗೆಗೇ ನಾನು ಮಾತನಾಡುತ್ತಿರಬೇಕೆಂದು ಭಾವಿಸಿ ಬಿಡಬೇಡಿ! ತಾಜ್ ಮಹಲ್‍ನಂತಹ ಪ್ರೀತಿಯ ಸ್ಮೃತಿಗಳು, ಸ್ಮೃತಿಯಿಂದ ಕಟ್ಟಿದ ಸ್ಮಾರಕಗಳು ಜಗತ್ತಿನ ಹಲವೆಡೆಗಳಲ್ಲಿವೆ. ಜಗತ್ತಿನ ಹಲವೆಡೆ ಓಡಾಡುತ್ತ, ಮ್ಯೂಸಿಯಂ-ಸ್ಮಾರಕಗಳನ್ನು ನೋಡುವ ಚಟವಿರುವ ನನಗೆ, ‘ಪ್ರೇಮ-ಸ್ಮಾರಕ’ಗಳನ್ನು ಗಮನಿಸುವ ಕುತೂಹಲದ ಕೆಲಸಕ್ಕೆ ಈ ಬಾರಿಯ ‘ಪ್ರೇಮಿಗಳ ದಿನ’ ಸೂಕ್ತ ಎನಿಸಿಬಿಟ್ಟಿತು.

ತಾಜ್‍ಮಹಲನ್ನು ಬಹು ಹಿಂದೆ ನೋಡಿದ್ದರೂ, ಷಹಜಹಾನನ ಅಮರ ಪ್ರೇಮದ ಕಥೆಯನ್ನು ಮತ್ತೆ ಮತ್ತೆ ಕೇಳಿದ್ದರೂ, ಪ್ರೀತಿ ಸ್ಮಾರಕದ ಬಗ್ಗೆ ನಾನು ಅಷ್ಟಾಗಿ ಯೋಚಿಸಿಯೇ ಇರಲಿಲ್ಲ. ಏಕೆಂದರೆ ಅದೇಕೋ ತಾಜ್‍ಮಹಲ್ ಕಥೆ ಕೇಳಿದಾಗಲೆಲ್ಲ ಪ್ರೀತಿಗಿಂತ ಸಾವು-ನೋವು-ಸಮಾಧಿಗಳೂ ಪ್ರೀತಿಯ ಭಾಗವಾಗಿಯೇ ಎದ್ದು ನಿಂತು ಬಿಡುತ್ತಿದ್ದವು. ಪ್ರೇಮದ ಜೊತೆ ಆಕರ್ಷಣೆ-ಕಲಾತ್ಮಕತೆಗಳನ್ನು ಸೆಳೆಯುವಂತಹ ಒಂದು ತಾಣ ನನಗೆ ಮೊದಲು ಸಿಕ್ಕಿದ್ದು ಜಪಾನಿನ ಕ್ಯೋಟೋ ಎಂಬ ಗೇಷ್ಯಾನಗರಿಯಲ್ಲಿ. ಇಲ್ಲಿರುವ ಒಂದು ಪ್ರಮುಖ ದೇವಾಲಯ ಕೊಡೈಜಿ ದೇವಾಲಯ. ಅಲ್ಲಿಯ ಸೌಂದರ್ಯ-ಪ್ರಕೃತಿ-ಹೂವುಗಳಿಗಿಂತ ಅದು ನನ್ನ ಗಮನ ಸೆಳೆದದ್ದು, ಒಬ್ಬ ಮಹಿಳೆ-ನೆನೆ ಎಂಬಾಕೆ ತನ್ನ ಪತಿ ಟೊಯೋಟೋಮಿ ಹಿಡೆಯೋಶಿಯ ನೆನಪಿಗಾಗಿ ಇದನ್ನು ನಿರ್ಮಿಸಿದಳು ಎಂಬುದು. ಟೀ ಮನೆಗಳು, ಬೊಂಬಿನಿಂದ ಮಾಡಿದ ಸಮಾಧಿ, ಜಪಾನೀ ಶೈಲಿಯ ಉದ್ಯಾನಗಳು ಇಲ್ಲಿವೆ.

ಇದೇ ನೆನಪಿನಿಂದ ಮಹಿಳೆಯರು ತಮ್ಮ ಪ್ರಿಯರಿಗಾಗಿ (ಬಹಳಷ್ಟು ಬಾರಿ ‘ಪತಿ’!) ನಿರ್ಮಿಸಿದ ಪ್ರೇಮ ಸ್ಮಾರಕಗಳಿಗಾಗಿ ನಾನು ಹೋದೆಡೆಗಳಲ್ಲಿ ಕಣ್ಣು ಹುಡುಕುತ್ತಲೇ ಇತ್ತು. ಹಾಗೆ ಹುಡುಕುವಾಗ ಕಣ್ಣಿಗೆ ಬಿದ್ದ ಒಂದು ವಿಶೇಷ ಸ್ಮಾರಕ ಸ್ಕಾಟ್ಲೆಂಡ್‍ನ ‘ಸ್ವೀಟ್ ಹಾರ್ಟ್ ಆ್ಯಬ್ಬಿ’. ಗ್ಯಾಲೋವೇಯ ಲೇಡಿ ಡರ್‌ವೋರ್‌ಗಿಲ್ಲಾ ಎಂಬ ಸ್ಕಾಟಿಷ್ ಮಹಿಳೆ ತನ್ನ ಪತಿ ಜಾನ್ ಬಲ್ಲಿಯೋಲ್ ಮೇಲಿನ ಪ್ರೀತಿಗಾಗಿ ನಿರ್ಮಿಸಿದ್ದು. ಸ್ವಾರಸ್ಯಕರ ಸಂಗತಿ ಏನು ಗೊತ್ತೆ? ಇದು ನಿಜವಾಗಿ ‘ಹೃದಯ’ದ ಆರಾಧನಾ ಸ್ಥಳ! ಅಂದರೆ ತನ್ನ ಪತಿ 1268 ರಲ್ಲಿ ಸತ್ತಾಗ ಆತನ ಹೃದಯವನ್ನು ‘ಎಂಬಾಮಿಂಗ್’ ಮಾಡಿಸಿ, ಅದನ್ನು ಬೆಳ್ಳಿ ಮತ್ತು ದಂತದ ಪೆಟ್ಟಿಗೆಯಲ್ಲಿ ಸಂರಕ್ಷಿಸಿ, ತಾನು ಸತ್ತ ಮೇಲೆ ತನ್ನ ಶವ ಪೆಟ್ಟಿಗೆಯಲ್ಲಿ ಜೊತೆಗಿರಿಸಿಕೊಂಡ ಪ್ರೇಮಿ ಲೇಡಿ ಡರ್‌ವೋರ್‌ಗಿಲ್ಲಾ! ಹೆಸರಿಗೆ ಸರಿಯಾಗಿ ಕೆಂಪು ಕಲ್ಲಿನ ಕಟ್ಟಡ ಇದು.

ಸ್ಕಾಟ್ಲೆಂಡ್‍ನ ಸ್ವೀಟ್ ಹಾರ್ಟ್ ಆ್ಯಬ್ಬಿ

‘ಪ್ರೀತಿ’ಯ ಪ್ರಬಲ ತಾಣವಾದ ಪ್ಯಾರಿಸ್‍ನಲ್ಲಿರುವ ವರ್ಸೇಯಿಲ್ಸ್ ಅರಮನೆಯಲ್ಲಿ ಪ್ರೀತಿಯ ಇನ್ನೊಂದು ಮುಖವಿದೆ. ಪೆಟಿಟ್ ಟ್ರೈಯೆನಾನ್ ಎಂಬ ಗ್ರೀಕ್ ಶೈಲಿಯ ಸ್ಮಾರಕವನ್ನು 15ನೇ ಲೂಯಿ ದೊರೆ ಕಟ್ಟಿಸಿದ್ದು ತನ್ನ ರಾಣಿಗಲ್ಲ! ತನ್ನ ಪ್ರಿಯತಮೆ, ರಾಜ ವೇಶ್ಯೆಯಾಗಿದ್ದ ಮದಾಂ ಡೆ ಪೊಂಪೊಡಾರ್‌ಳ ನೆನಪಿಗೆ. ಆದರೆ ಅದು ಪೂರ್ಣವಾಗುವ ಮೊದಲೇ ಅವಳು ಸತ್ತುಹೋದಳು. ಹೇಗೆ ಪ್ರೇಮವನ್ನೂ ವರ್ಗಾಯಿಸಬಹುದೆಂದರೆ, 16ನೇ ಲೂಯಿ ದೊರೆ ತನ್ನ ರಾಣಿ ಮೇರಿ ಆ್ಯಂಟೋನೆಯಿಟ್‍ಗೆ ಇದನ್ನು ಬಹುಮಾನವಾಗಿ ಕೊಟ್ಟುಬಿಟ್ಟ! ಅದು ರಾಣಿ ಮೇರಿಯ ಸಂತಸದ ತಾಣವಾಯಿತು.

ಇದನ್ನೆಲ್ಲಾ ನಾನು ನೋಡಿ ಅಚ್ಚರಿಪಡುತ್ತಿರುವಾಗ, ನನ್ನ ಫ್ರೆಂಚ್ ಗೆಳತಿ ಹೇಳಿದ ಮಾತು, ‘ಐಫೆಲ್ ಟವರ್‌ಅನ್ನೂ ಕೂಡ ಪ್ರೇಮ ಸ್ಮಾರಕಗಳ ಪಟ್ಟಿಗೇ ಸೇರಿಸಬಹುದು. ಪ್ರೀತಿಗೆಂದು ಅದನ್ನು ಕಟ್ಟಿರಲಿಕ್ಕಿಲ್ಲ. ಆದರೆ ಪ್ರಣಯ ಯಾಚನೆಗೆ, ಪ್ರೇಮದ ತಿರಸ್ಕಾರಕ್ಕೆ, ಭಗ್ನ ಪ್ರೇಮಕ್ಕೆ, ಐಫೆಲ್ ಟವರ್ ವರುಷಗಳಿಂದ ಸಾಕ್ಷಿಯಾಗಿದೆ. ಸಾವಿರ ಸಾವಿರ ಕ್ಸೆನಾನ್ ದೀಪಗಳಿಂದ ಮಿನುಗುವ-ಬೆಳಗುವ ಈ ಕಟ್ಟಡ, ‘ಐ ಲವ್ ಯೂ’ ಎನ್ನಲು ‘ಪರ್‍ಫೆಕ್ಟ್’ ಸ್ಥಳ’. ಅಂತಹ ಪ್ರೇಮ ನಿವೇದನಾ ತಾಣಗಳಿಗೆ ಯಾವ ಉದ್ಯಾನವಾದರೂ ಸೂಕ್ತವೇ, ಸುತ್ತಮುತ್ತ ದೀಪಗಳಿರಲಿ, ಇಲ್ಲದಿರಲಿ, ತಲೆ-ಹೃದಯಗಳಲ್ಲಿ ದೀಪ ಝಗಮಗಿಸುತ್ತಿರುತ್ತದಲ್ಲ ಎಂದುಕೊಂಡೆ ನಾನು!

ಅಮೆರಿಕೆಯ ವಾಷಿಂಗ್ಟನ್‍ನಲ್ಲಿ ಥಾರ್ನ್‍ವುಡ್ ಕ್ಯಾಸಲ್ ಎಂಬ ದೊಡ್ಡ ಕೋಟೆಯಂತಹ ಹೋಟೆಲ್ ಇದೆ. ತನ್ನ ಪತ್ನಿ ಆ್ಯನ್ನಾಳಿಗಾಗಿ 20ನೇ ಶತಮಾನದ ಮಿಲಿಯನೇರ್ ಚೆಸ್ಟರ್ ಥಾರ್ನ್ ಮಾಡಿದ್ದೇನು ಗೊತ್ತೆ?! 400 ವರ್ಷಗಳಷ್ಟು ಹಳೆಯದಾದ ಎಲಿಜಬೆತ್ ಕಾಲದ ಕಟ್ಟಡವನ್ನು, ಇಂಗ್ಲೆಂಡಿನಲ್ಲಿ ಅದು ಇದ್ದ ಹಾಗೆಯೇ ಎತ್ತಿ, ಮೂರು ಹಡಗುಗಳಲ್ಲಿ, ಬಹುದೂರ ಸಾಗಿಸಿ ಅಮೆರಿಕೆಯ ತನ್ನ ಮೂರು ಎಕರೆಗಳ ನೆಲದಲ್ಲಿ ಅದನ್ನು ಕಟ್ಟಿ ನಿಲ್ಲಿಸಿದ್ದು. ನಂತರ ಅ್ಯನ್ನಾ ಹೇಳಿದಂತೆ ಅದರ ಅಲಂಕಾರ ಮಾಡಿದ್ದು. ನಾವೇ ಇರುವ ಮನೆಯಲ್ಲಿ, ಮನೆ ಕಟ್ಟುವಾಗ ಹೆಂಡತಿ ಹೇಳಿದ್ದನ್ನು ಉಪೇಕ್ಷಿಸುವ, ಗಂಡ ಕಟ್ಟಿಸಿದ ಮನೆಯಲ್ಲಿ ಯಾವುದೊಂದೂ ಸರಿಯಿಲ್ಲ ಎಂದು ಸದಾ ದೂರುವ ಗಂಡ-ಹೆಂಡತಿಯರೇ ಹೆಚ್ಚಿರುವಾಗ, ಚೆಸ್ಟರ್- ಆ್ಯನ್ನಾರ ಪ್ರೀತಿಯ ಗುರುತಾಗಿ, ನಿಂತಿರುವ ಥಾರ್ನ್‍ವುಡ್ ಕ್ಯಾಸಲ್‍ನ್ನು ಒಂದು ಅದ್ಭುತ ಎಂದೇ ನಾವು ಒಪ್ಪಬಹುದಾದದ್ದೇ!

ಅಮೆರಿಕ-ಯೂರೋಪ್‍ಗಳನ್ನು ದಾಟಿ, ಮಲೇಷ್ಯಾಕ್ಕೆ ಬಂದರೆ, ಅಲ್ಲಿಯೂ ಪಾಶ್ಚಾತ್ಯರ ಪ್ರೀತಿ ಬೆರಗು ಮೂಡಿಸುತ್ತದೆ. ಸ್ಕಾಟಿಷ್ ಪ್ಲಾಂಟರ್ ವಿಲಿಯಮ್ ಕೆಲ್ಲಿ ಸ್ಮಿತ್, ಪತ್ನಿ ಆ್ಯಗ್ನೆಸ್‍ಳೊಡನೆ ಮಲೇಷ್ಯಾದ ಬಟುಗಾಜಾಕ್ಕೆ ಬಂದ. ಆ್ಯಗ್ನೆಸ್ ತನ್ನ ತಾಯ್ನೆಲ ಸ್ಕಾಟ್ಲೆಂಡ್‌ ಅನ್ನು ತುಂಬಾ ‘ಮಿಸ್’ ಮಾಡತೊಡಗಿದಳು. ಪತಿಯಾದ ವಿಲಿಯಂ ಏನು ಮಾಡಿದ? ಸ್ಕಾಟಿಷ್ ಶೈಲಿಯ ಒಂದು ದೊಡ್ಡ ಮನೆಯನ್ನೇ ಕಟ್ಟಿಸಿದ. ದೊಡ್ಡ ಮನೆ ಅಂದರೆ ಈಗ ಅದೊಂದು ಬೃಹತ್ ಸ್ಮಾರಕ. ಇಂದು ಅವಶೇಷಗಳಾಗಿಯಷ್ಟೇ ಉಳಿದಿದೆ. ಆದರೂ ವಿಲಿಯಂ, ಆ್ಯಗ್ನೆಸ್‍ಗಾಗಿ ಮಾಡಿದ ಪ್ರೀತಿಯ ಪ್ರಯತ್ನ ನಮ್ಮನ್ನು ತಟ್ಟುತ್ತದೆ.

ತಾಜ್‍ಮಹಲ್ಲಿನ ವೈಭವದಲ್ಲಿಯೇ ಮುಳುಗಿರುವ ನಮಗೆ ಭಾರತದಲ್ಲಿಯೂ ಇಂತಹ ಪ್ರೇಮ ಸ್ಮಾರಕಗಳು ಗಮನಕ್ಕೇ ಬರಲಾರವು. ರಾಣಿ ಪದ್ಮಿನಿ, ಮತ್ತು ರಾಜಾ ರತನ್ ರಾವಲ್‍ಸಿಂಗ್‍ರ ಅಮರ ಪ್ರೇಮ ಸಾರುವ, ಚಿತ್ತೋರ್‌ಗಡದ ಕೋಟೆ, ಮಧ್ಯ ಪ್ರದೇಶದ ಬಾಜ್ ಬಹಾದ್ದೂರ್ ಮತ್ತು ರಾಣಿ ರೂಪಮತಿಯರ ಮಾಂಡು ಕೋಟೆ ಹೀಗೆ ಅಲ್ಲಲ್ಲಿ ಪ್ರೇಮ ಕಟ್ಟಡಗಳು ಕಣ್ಣಿಗೆ ಬೀಳುತ್ತವೆ. ರಾಣಿ ರೂಪಮತಿಯ ಕೈ ಬಯಸಿದ ಬಾಜ್‍ಬಹಾದ್ದೂರನಿಗೆ ‘ನರ್ಮದಾ ನದಿ ಕಾಣುವಂತೆ ಅರಮನೆ ಕಟ್ಟಿದರೆ ಮಾತ್ರ ವಿವಾಹವಾಗುತ್ತೇನೆ’ ಅಂದಳಂತೆ ರೂಪಮತಿ. ಹಾಗೆ ನಿರ್ಮಾಣವಾಗಿದ್ದು, ಮಾಂಡುವಿನ ಕೋಟೆ.

ಪುಣೆಯ ಶನಿದಾರವಾಡಾದ ಮಸ್ತಾನಿ ಅರಮನೆ, ಮಸ್ತಾನಿಯ ಬಗ್ಗೆ ಪೇಶ್ವಾ ಬಾಜಿರಾವ್‍ಗಿದ್ದ ಪ್ರೀತಿಯ ಸಂಕೇತ. 11ನೇ ಶತಮಾನದ ಗುಜರಾತಿನ ‘ರಾಣೀ ಕೀ ವಾವ್’ ಜಗತ್ತಿನ ವಿಶಿಷ್ಟ ಪ್ರೇಮ ಸ್ಮಾರಕ. ಏಕೆ? ! ಇದೊಂದು ಮೆಟ್ಟಿಲುಗಳ ಬಾವಿ! ರಾಜ ಭೀಮದೇವನ ರಾಣಿ ಉದಯಮತಿ ತನ್ನ ಪತಿಯ ನೆನಪಿಗಾಗಿ ನಿರ್ಮಿಸಿದಂತಹದ್ದು. ನಮ್ಮ ಪಟ್ಟದಕಲ್ಲಿನಲ್ಲಿಯೂ ವಿರೂಪಾಕ್ಷ ದೇವಾಲಯವನ್ನು ರಾಣಿ ಲೋಕಮಹಾದೇವಿ ತನ್ನ ಪತಿ ವಿಕ್ರಮಾದಿತ್ಯ ಪಲ್ಲವರ ಮೇಲೆ ಸಾಧಿಸಿದ ವಿಜಯಕ್ಕೆ, ಪ್ರಶಂಸೆಯಾಗಿ, ಗೆದ್ದು ಬಂದ ಪತಿಗೆ ಕೊಡುಗೆ ನೀಡುವ ಪತಿಗೆ ಟಿಪಿಕಲ್ ಪತ್ನಿಯಂತೆ ಕಟ್ಟಿಸಿದಳಂತೆ!

ಜಗತ್ತು-ಸುತ್ತ-ಮುತ್ತ ಸುತ್ತಾಡುತ್ತ ಪ್ರೀತಿ-ಸ್ಮೃತಿ-ಸ್ಮಾರಕಗಳನ್ನು ಗಮನಿಸುತ್ತಾ ಬಂದ ನನಗೆ ವಿಸ್ಮಯ ಎದುರಾದದ್ದು ನಮ್ಮೂರಿನ ಪಕ್ಕದ ಲಕ್ಕಿನಕೊಪ್ಪದ ‘ಅಮೂಲ್ಯ ಶೋಧ’ ನೋಡಿದಾಗ. ಇತಿಹಾಸಜ್ಞ ಖಂಡೋಬರಾವ್ ತಮ್ಮ ಪತ್ನಿ ಯಶೋದಾ ಅವರ ನೆನಪಿಗೆ ರೂಪಿಸಿದ ಚೆಂದದ ಸಂಗ್ರಹಾಲಯ. ಪತ್ನಿಯ ನೆನಪನ್ನು ಇಷ್ಟು ಜತನದಿಂದ, ಶ್ರದ್ಧೆಯಿಂದ ಕಾದಿಡುವವರೂ ಉಂಟೆ ಎಂಬ ಭಾವ. ಪ್ರೀತಿ-ಸ್ಮೃತಿ-ಸ್ಮಾರಕ ಸಾರ್ವಕಾಲಿಕ-ಸಾರ್ವತ್ರಿಕ ಎನಿಸಿಬಿಡುತ್ತದೆ.

ಈ ಪ್ರೇಮ ಸ್ಮಾರಕಗಳು ಹೇಳುವುದಾದರೂ ಏನನ್ನು? ಪ್ರೇಮ ಅಮರವೆಂದೆ? ಅಥವಾ ಪ್ರೇಮಿಸಲೇನೂ ಮುಚ್ಚು ಮರೆ ಬೇಕಾಗಿಲ್ಲ ಎಂದಿರಬಹುದೇ? ಇಬ್ಬರ ಪ್ರೇಮ ಇತರರಲ್ಲಿಯೂ ಒಂದು ಮಧುರ ಭಾವ-ಹೃದಯ ತಟ್ಟಬಹುದಾದ ಸಾಮರ್ಥ್ಯವನ್ನು ಹೊಂದಿರಬೇಕು ಎಂದೆ? ಅಥವಾ ಒಂದು ಜೋಡಿಯ ನಡುವಿನ ಪ್ರೇಮ ಕೇವಲ ಅವರಿಬ್ಬರಿಗೆ ಸಂಬಂಧಿಸಿದ್ದು ಎಂದು ನಾವು-ಅವರು ಭಾವಿಸಿದರೂ ಅದು ನಿಜವಾಗಿ ಬೇರೆ ಎಷ್ಟೋ ಜನರ ಬದುಕಿಗೂ ಸಂಬಂಧಿಸಿರುತ್ತದೆ ಎಂದೇ? ಯಾವುದೂ ಇರಬಹುದು. ಹೀಗೆ ಪ್ರೇಮ ಸ್ಮಾರಕಗಳ ಮೂಲಕ ತಮ್ಮ ಪ್ರೀತಿ ಜಗಜ್ಜಾಹೀರು ಮಾಡುವ ಜನರು ಕೇವಲ ಶೋಮ್ಯಾನ್‌ಗಳೆಂದು ನನಗನ್ನಿಸುವುದಿಲ್ಲ. ಅದರ ಬದಲು ಅವರ ಪ್ರೀತಿ ಅದೆಷ್ಟು ನಿಚ್ಚಳ-ಧೀರ ಎಂದು ಸೋಜಿಗ ತರುತ್ತದೆ. ಪ್ರೀತಿಯ ಬಂಧನವನ್ನು ವಿವಾಹ ಬಂಧನವಾಗಿರಿಸಿಕೊಂಡ ಪತಿ-ಪತ್ನಿ ಕನಿಷ್ಠ ಪ್ರೇಮ ಸ್ಮಾರಕಗಳಿಗೆ ಭೇಟಿ ನೀಡುವ, ಬದುಕಿನಲ್ಲಿ ಪ್ರೀತಿಯನ್ನು ಮರಳಿ ಪಡೆಯುವ ಪ್ರಯತ್ನವನ್ನು ಮಾಡಬೇಕು ಎನಿಸುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.