ADVERTISEMENT

ಝಗಮಗದ ಬೆಳಕಲ್ಲಿ ಮಕಾವೊ

ಪ್ರಭಾವತಿ ಹಿರೇಮಠ
Published 5 ಜೂನ್ 2019, 19:30 IST
Last Updated 5 ಜೂನ್ 2019, 19:30 IST
ಮಕಾವೊ
ಮಕಾವೊ   

ಎತ್ತ ನೋಡಿದರೂ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಗಗನಚುಂಬಿ ಕಟ್ಟಡಗಳು. ಎಲ್ಲ ಕಟ್ಟಡಗಳಿಗೂ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಇಡೀ ನಗರ ಯಾವುದೋ ವರ್ಣರಂಜಿತ ಸಮಾರಂಭಕ್ಕೆ ಸಜ್ಜಾಗಿರುವಂತೆ ಕಾಣುತ್ತಿತ್ತು. ಅದಕ್ಕೆ ತಕ್ಕಂತೆಯೇ ಬೀದಿ ದೀಪಗಳನ್ನೂ ವಿನ್ಯಾಸಗೊಳಿಸಿದ್ದರು. ರಸ್ತೆ ಬದಿಯಲ್ಲಿ ಎಲ್‌ಇಡಿ ಪರದೆಯ ಜಾಹೀರಾತು ಫಲಕಗಳು ಮಿನುಗುತ್ತಿದ್ದವು. ಇಡೀ ಜಗತ್ತಿನ ವಿದ್ಯುತ್ ಉತ್ಪಾದನೆಯ ಶೇ 50 ಇಲ್ಲಿಯೇ ಉಪಯೋಗವಾಗುತ್ತಿದೆಯೇನೋ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿತ್ತು.. !

ಅದು, ಚೀನಾದ ವಿಶೇಷ ಆಡಳಿತ ಪ್ರದೇಶಗಳಲ್ಲೊಂದಾದ ಮಕಾವೊ(ಮಕಾವು) ನಗರ. ಇತ್ತೀಚೆಗೆ ಕುಟುಂಬ ಸಹಿತ ಚೀನಾಕ್ಕೆ ಪ್ರವಾಸ ಹೋಗಿದ್ದಾಗ, ಈ ನಗರಕ್ಕೆ ಭೇಟಿ ನೀಡಿದೆವು. ನಮ್ಮ ಪ್ರವಾಸದಲ್ಲಿ ಹೆಚ್ಚು ಆಕರ್ಷಿಸಿದ ಹಾಗೂ ಖುಷಿ ಕೊಟ್ಟ ತಾಣ ಇದು.

ಮಕಾವೊ ನಗರದಲ್ಲಿ ಗೋಪುರದ ಶೈಲಿಯ (ಸ್ತಂಭ ಅಥವಾ ಟವರ್) ಬಹುಮಹಡಿ ಕಟ್ಟಡಗಳೇ ಪ್ರಮುಖ ಆಕರ್ಷಣೆ. ಒಂದು ಟವರ್ ಸರಾಸರಿ 338 ಮೀಟರ್ ಎತ್ತರವಿದೆ. ಅದರೊಳಗೆ ಹೋಟೆಲ್‌ಗಳು. ಚಿತ್ರ ಮಂದಿರಗಳು, ವ್ಯಾಪಾರದ ಮಳಿಗೆಗಳಿವೆ. ಮಾತ್ರವಲ್ಲ, ವಿವಿಧ ರೀತಿಯ ಸಾಹಸ ಚಟುವಟಿಕೆಗಳಾದ ಬಂಗಿ ಜಿಗಿತ, ಸ್ಕೈಜಂಪ್, ಸ್ಕೈವಾಕ್ ಚಟುವಟಿಕೆಗಳೂ ನಡೆಯುತ್ತವೆ. ನಾವು ಆ ಗೋಪುರದ 61ನೇ ಮಹಡಿಯಲ್ಲಿದ್ದೆವು. ನಮ್ಮ ಮೂರು ವರ್ಷದ ಮಗಳನ್ನೊಳಗೊಂಡು ಅದೇ ಮಹಡಿಯಲ್ಲಿ ಸ್ಕೈವಾಕ್‌ ಮಾಡಿದೆವು. ಆ ಅನುಭವ ನಿಜಕ್ಕೂ ರೋಚಕವಾಗಿತ್ತು.

ADVERTISEMENT

ಐಷಾರಾಮಿ ಹೋಟೆಲ್‌ನೊಳಗೆ

ನಾವು ಉಳಿದುಕೊಂಡಿದ್ದ ಹೋಟೆಲ್ ವೆನೆಶಿಯನ್ ಮಕಾವೊ. 2007ರವರೆಗೆ ವಿಶ್ವದ ಅತಿ ದೊಡ್ಡ ಕಟ್ಟಡ ಇದಾಗಿತ್ತು. ಈಗ ನಾಲ್ಕನೆಯದು. 9,80,000 ಚ.ಅಡಿ ವಿಸ್ತೀರ್ಣವುಳ್ಳ ಈ ಕಟ್ಟಡ ಒಂದು ಅಂತರರಾಷ್ಟೀಯ ವಿಮಾನ ನಿಲ್ದಾಣದಷ್ಟು ವಿಶಾಲವಾಗಿದೆ.

ಹೋಟೆಲ್‌ ಲಾಬಿಯಿಂದ ನಮಗೆ ಕಾಯ್ದಿರಿಸಿದ ಕೊಠಡಿಗೆ ಹೋಗಲು ಹಾಗೂ ಕೊಠಡಿಯಿಂದ ಹೊರಗೆ ಬರಲು ಸೂಚನಾ ಫಲಕಗಳಿದ್ದವು. ಅವುಗಳಿದ್ದರೂ, ಹೋಟೆಲ್‌ನಲ್ಲಿ ಓಡಾಡಲು ಸಿಬ್ಬಂದಿ ಅಥವಾ ಹೆಲ್ಪ್‌ಡೆಸ್ಕ್‌ಗಳ ಸಹಾಯ ಬೇಕೇ ಬೇಕು. ಇಡೀ ಹೋಟೆಲ್‌ನಲ್ಲಿ 3000ಕ್ಕೂ ಅಧಿಕ ಕೊಠಡಿಗಳಿವೆ. ಕೆಳಮಹಡಿಯಲ್ಲಿ 800 ಕ್ಯಾಸಿನೊ (ಜೂಜು ಆಟ) ಆಟದ ಟೇಬಲ್‍ಗಳಿವೆ. ಸಮಯದ ನಿರ್ಬಂಧವಿಲ್ಲದೇ ಹಗಲು ರಾತ್ರಿ ನಡೆಯುವ ಈ ಚಟುವಟಿಕೆಯಲ್ಲಿ ಒಮ್ಮೆ ತೊಡಗಿಕೊಂಡರೆ ಎದ್ದೇಳುವ ಪರಿವೇ ಇರುವುದಿಲ್ಲ (ಜೇಬು ಖಾಲಿಯಾಗುವವರೆಗೆ). ಜೂಜು ಮತ್ತು ಮನರಂಜನೆ ಈ ದೇಶಕ್ಕೆ ಪ್ರಮುಖ ಆದಾಯ ತಂದುಕೊಂಡುವ ವಿಭಾಗಗಳಂತೆ. ಹೀಗಾಗಿ ಕ್ಯಾಸಿನೊ ಇಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಜೂಜಿನ ಆಟ.

ಇನ್ನು ಐಶಾರಾಮಿಯಾಗಿದ್ದ ಈ ವೆನೆಶಿಯನ್ ಹೋಟೆಲ್‌ ಒಳಗಿನ ಗೋಡೆಗಳ ಮೇಲಿನ ಪೇಂಟಿಂಗ್‌ಗಳೇ ಅದ್ಭುತ ಎನ್ನಿಸುತ್ತಿದ್ದವು. ಹೋಟೆಲ್ ಪ್ರವೇಶದ್ವಾರದಿಂದ ಹಿಡಿದು ಲಾಬಿಗಳ ಸೀಲಿಂಗ್‍ ಮೇಲಿರುವ ಚಿತ್ರಗಳು, ಕೊಠಡಿಯಲ್ಲಿನ ಒಳಾಂಗಣ ವಿನ್ಯಾಸ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ಅದು ನಮಗೆಲ್ಲ ಕನಸಿನ ಲೋಕದ ಜಾಗವೇ ಆಗಿತ್ತು.

ಹೋಟೆಲ್‌ನಲ್ಲಿ ಬೃಹತ್ ಕಾಲುವೆ
ಈ ಹೋಟೆಲ್‌ನ ಒಳಭಾಗದಲ್ಲೇ 500 ಅಡಿ ಉದ್ದದ ಕಾಲುವೆ ನಿರ್ಮಾಣ ಮಾಡಿದ್ದರು. ಅದು ಇಟಲಿಯ ವೆನಿಸ್ ನಗರದ ಕಾಲುವೆಯನ್ನು ಮೀರಿಸುವಂತಿತ್ತು. ಈ ಕಾಲುವೆಯನ್ನೊಳಗೊಂಡ ಅಂತಸ್ತಿಗೆ ಸಂಪೂರ್ಣ ಕೃತಕ ಆಕಾಶದ ಪೇಂಟಿಂಗ್ ಮಾಡಲಾಗಿತ್ತು. ಇದು ಇಲ್ಲಿನ ಬ್ಲಾಕ್‍ಬಸ್ಟರ್ ಆಕರ್ಷಣೆ.

ಈ ಕಾಲುವೆಯಲ್ಲಿ ದೋಣಿ ವಿಹಾರವಿತ್ತು. ದೋಣಿಯಲ್ಲಿ ಕುಳಿತು ಗಿಟಾರ್‌ನೊಂದಿಗೆ ಸುಶ್ರಾವ್ಯವಾಗಿ ಸಂಗೀತ ಹಾಡುವ ಪಾಶ್ಚಾತ್ಯ ಅಂಬಿಗನೊಂದಿಗೆ ಸವಾರಿ ಮಾಡಿದೆವು. ನಾವು ಭಾರತೀಯರೆಂದು ತಿಳಿದ ಮೇಲೆ, ಆತ ನಮಗಾಗಿ ಕೆಲ ಹಿಂದಿ ಚಿತ್ರಗೀತೆಗಳನ್ನೂ ಹಾಡಿದ. ನನ್ನ ಮಗಳ ಹುಟ್ಟುಹಬ್ಬಕ್ಕೆ ‘ಹ್ಯಾಪಿ ಬರ್ತಡೆ’ ಹಾಡನ್ನು ಗಿಟಾರಿನಿಂದ ನುಡಿಸಿದ ಅಂಬಿಗನಿಗೆ ಧನ್ಯವಾದಗಳನ್ನು ಹೇಳಿದೆವು. ಹೋಟೆಲ್‌ನೊಳಗೆ ದೋಣಿ ವಿಹಾರ ಮಾಡುವ ಜತೆಗೆ, ಅಲ್ಲೇ ಇದ್ದ ಸ್ಟುಡಿಯೋ ಸಿಟಿ ವೀಕ್ಷಿಸಿದೆವು. ಸಂಗೀತ ಕಾರಂಜಿ, ಸೇಂಟ್ ಪಾಲ್ ಚರ್ಚ್‍ಗಳಿಗೆ ಭೆಟಿ ನೀಡಿ ಹಾಂಕಾಂಗ್‌ನತ್ತ ಪ್ರವಾಸ ಬೆಳೆಸಿದೆವು!

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.