ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಯಿಂದ ಭಾರತ ಮತ್ತು ಮಾಲ್ದೀವ್ಸ್ ಸಂಬಂಧ ತುಸು ಹಳಸಿದೆ. ಹೊಸ ವರ್ಷದಲ್ಲಿ ಪ್ರವಾಸ ಕೈಗೊಂಡವರ ಟಿಕೆಟ್ ರದ್ದುಪಡಿಸುವ ಮೂಲಕ ಟ್ರಾವೆಲ್ ಕಂಪನಿಗಳೂ ಸಮರ ಸಾರಿವೆ. ಆದರೆ ಭಾರತೀಯ ಪ್ರವಾಸಿಗರಿಗೆ ಸೂರ್ಯ ಚುಂಬಿಸುವ ಕಡಲ ತೀರ ಹೊಂದಿರುವ ದ್ವೀಪರಾಷ್ಟ್ರ ಮಾಲ್ದೀವ್ಸ್ ಪ್ರಥಮ ಆಯ್ಕೆಯೇ..? ಇಲ್ಲ ಎನ್ನುತ್ತವೆ ವರದಿಗಳು.
ಮಾಲ್ದೀವ್ಸ್ ಕುರಿತು ಚರ್ಚೆಗಳು ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಚಿತ್ರಗಳು ಹರಿದಾಡಿದ ನಂತರ. ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪದ ಅಭಿವೃದ್ಧಿ ಆಗುತ್ತಿದೆ ಎಂದು ನೆಟ್ಟಿಗರು ಚರ್ಚೆ ಆರಂಭಿಸುತ್ತಿದ್ದಂತೆ, ಮಾಲ್ದೀವ್ಸ್‌ನ ಕೆಲ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡಲಾರಂಭಿಸಿದರು. ಇದು ಎರಡೂ ರಾಷ್ಟ್ರಗಳ ನಡುವೆ ಬಿರುಕು ಮೂಡಿಸಿತು.
ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ ಸಚಿವರನ್ನು ವಜಾಗೊಳಿಸುವ ಮೂಲಕ ದ್ವೇಷ ಸರಿಪಡಿಸಲು ಮಾಲ್ದೀವ್ಸ್ ಪ್ರಯತ್ನಿಸಿತು. ಜತೆಗೆ ದೇಶದ ಅರ್ಥಿಕತೆಗೆ ಪ್ರವಾಸೋದ್ಯವನ್ನೇ ನೆಚ್ಚಿಕೊಂಡಿರುವ ಮಾಲ್ದೀವ್ಸ್, ಚೀನಾ ನೆರವನ್ನೂ ಕೋರಿದೆ.
2023ರಲ್ಲಿ ಮಾಲ್ದೀವ್ಸ್ ಪ್ರವಾಸ ಕೈಗೊಂಡವರಲ್ಲಿ ಭಾರತೀಯರೇ ಅತಿ ಹೆಚ್ಚು. ಭಾರತದಿಂದ 2,09,198 ಪ್ರವಾಸಿಗರು, ರಷ್ಯಾದಿಂದ 2,09,146, ಚೀನಾದಿಂದ 1,87,118 ಪ್ರವಾಸಿಗರು ಮಾಲ್ದೀವ್ಸ್ ಪ್ರವಾಸ ಕೈಗೊಂಡಿದ್ದಾರೆ. 2022ರಲ್ಲೂ ಮಾಲ್ದೀವ್ಸ್ ಪ್ರವಾಸ ಕೈಗೊಂಡವರಲ್ಲಿ ಭಾರತೀಯರೇ ಮೊದಲು. ರಷ್ಯಾ 2ನೇ ಸ್ಥಾನ ಮತ್ತು ಬ್ರಿಟನ್ 3ನೇ ಸ್ಥಾನದಲ್ಲಿತ್ತು.
ಹ್ಯಾನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿರುವ 62 ರಾಷ್ಟ್ರಗಳು ವಿಸಾ ರಹಿತ ಪ್ರವಾಸಕ್ಕೆ ಅನುವು ಮಾಡಿಕೊಟ್ಟಿವೆ. ಇದರಲ್ಲಿ ಮಾಲ್ದೀವ್ಸ್ ಕೂಡಾ ಒಂದು. ಹೀಗಾಗಿ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜತೆಗೆ ಕೋವಿಡ್ ನಂತರದ ದಿನಗಳಲ್ಲಿ ದ್ವೀಪರಾಷ್ಟ್ರಕ್ಕೆ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಟ್ರಾವೆಲ್ ಏಜೆಂಟರು ಹೇಳುತ್ತಾರೆ.
ವಿದೇಶ ಪ್ರವಾಸದಲ್ಲಿ ಭಾರತೀಯರು ಹೆಚ್ಚು ಇಷ್ಟಪಡುವುದು ಯುಎಇ (ಶೇ 25.44), ಸೌದಿ ಅರೇಬಿಯಾ (ಶೇ 11.03), ಅಮೆರಿಕ (ಶೇ 7.61), ಥಾಯ್ಲೆಂಡ್ (ಶೇ 5.16) ಹಾಗೂ ಸಿಂಗಪೂರ (ಶೇ 4.87) ಮಾಲ್ದೀವ್ಸ್‌ಗಿಂತ ಅಗ್ರಸ್ಥಾನದಲ್ಲಿವೆ.
ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ ಒಮನ್‌ಗೆ ಪ್ರಯಾಣಿಸುವ ಭಾರತೀಯರ ಸಂಖ್ಯೆ 7.72 ಲಕ್ಷದಷ್ಟಿದೆ ಮತ್ತು 10ನೇ ಸ್ಥಾನದಲ್ಲಿದೆ. ಇದು ಮಾಲ್ದೀವ್ಸ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗಿಂತ 3 ಪಟ್ಟು ಹೆಚ್ಚು. ಗೂಗಲ್ ಸರ್ಚ್‌ನ 2023ರ ಅಪ್‌ಡೇಟ್ ಅನ್ವಯ, ವಿಯಟ್ನಾಂ, ಬಾಲಿ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಇಟಲಿಯಲ್ಲಿರುವ ಪ್ರವಾಸಿ ತಾಣಗಳ ಕುರಿತು ಭಾರತೀಯರು ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಮಾಲ್ದೀವ್ಸ್‌ಗೆ ಪ್ರಯಾಣಿಸುವ ಭಾರತೀಯರು ತಮ್ಮ ಒಂದು ಪ್ರವಾಸದಲ್ಲಿ ವಿನಿಯೋಗಿಸುವ ಹಣದ ಪ್ರಮಾಣ, ಸರಾಸರಿ ₹60 ಸಾವಿರದಿಂದ ₹70 ಸಾವಿರ ಎಂದು ಅಂದಾಜಿಸಲಾಗಿದೆ. ಮೇಕ್ ಇನ್ ಇಂಡಿಯಾ, ವೆಡ್ ಇನ್ ಇಂಡಿಯಾ ನಂತರ ಇದೀಗ ಕೇಂದ್ರ ಸರ್ಕಾರವು ಲಕ್ಷದ್ವೀಪವನ್ನು ಉತ್ತೇಜಿಸುವ ಮೂಲಕ ‘ಹಾಲಿಡೇ ಇನ್ ಇಂಡಿಯಾ’ ಘೋಷಣೆ ಮುನ್ನೆಲೆಗೆ ತಂದಿದೆ ಎಂದೆನ್ನುತ್ತಿದ್ದಾರೆ ಟ್ರಾವೆಲ್ ಏಜೆಂಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.