ADVERTISEMENT

ಮಾಥರಾನ್ ಗ್ಲೇಸಿಯರ್ ಪ್ಯಾರಡೈಸ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:30 IST
Last Updated 14 ಆಗಸ್ಟ್ 2019, 19:30 IST
ಮಾಥರಾನ್ ಗ್ಲೇಸಿಯರ್
ಮಾಥರಾನ್ ಗ್ಲೇಸಿಯರ್   

‘ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ’ ಎಂಬುದು ಪ್ರಸಿದ್ಧ ಕವಿ ಕೀಟ್ಸ್ ಅವರ ನುಡಿ. ಸೌಂದರ್ಯಾನುಭವದಿಂದ ಸತ್ಯವನ್ನು ಸಾಧಿಸಬಹುದೆಂಬುದು ಇದರ ಅರ್ಥ. ಈ ಸಾಲುಗಳ ಪ್ರಭಾವವೇ, ಇತ್ತೀಚೆಗೆ ನಾನು ನನ್ನ ಪತ್ನಿಯೊಂದಿಗೆ ಕೈಗೊಂಡ ಸ್ವಿಡ್ಜರ್ಲೆಂಡ್ ಪ್ರವಾಸಕ್ಕೆ ಮುನ್ನುಡಿಯಾಯ್ತು.

ಸ್ವಿಸ್ ದೇಶವನ್ನು ಸ್ವರ್ಗಕ್ಕೆ ಹೋಲಿಸಿ ಬಣ್ಣಿಸುತ್ತಾರೆ. ನಿಜದಲ್ಲಿ ಸ್ವರ್ಗವೆನ್ನುವುದು ಕಲ್ಪನೆಯಷ್ಟೆ. ಅಂಥ ಕಲ್ಪನೆಗೂ ಮೀರಿಸುವ ಸೌಂದರ್ಯದ ನಾಡು ಇದು. ಈ ಸ್ವಿಡ್ಜರ್ಲೆಂಡ್ ಎನ್ನುವುದು ಅನುಭವದ ಸತ್ಯವೂ ಹೌದು. ಅದರ ಸೌಂದರ್ಯವನ್ನು ಎನಿತು ಬಣ್ಣಿಸಿದರೂ ಕಡಿಮೆಯೇ.

ಜೂನ್ ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ವರೆಗಿನ ಬೇಸಿಗೆ ಸಮಯ ಸ್ವಿಸ್ ಪ್ರವಾಸಕ್ಕೆ ಪ್ರಶಸ್ತ ಕಾಲ. ಹಿಮಪಾತ ಕಡಿಮೆಯಾಗಿ, ಜನರು ಸೂರ್ಯನ ಆಗಮನಕ್ಕಾಗಿ ಕಾತರದಿಂದ ನಿರೀಕ್ಷಿಸುವ ಕಾಲವದು.

ADVERTISEMENT

ಇದೇ ಅವಧಿಯಲ್ಲಿ ನಾವೂ ಹತ್ತು ದಿನಗಳ ಸ್ವಿಡ್ಜರ್ಲೆಂಡ್ ಪ್ರವಾಸಕ್ಕೆ ಹೊರಟೆವು. ಸ್ವಿಸ್ ತಲುಪಿ, ಜೂರಿಕ್, ಇಂಟರ್ಲೇಕನ್, ಲೂಸರ್ನ್, ಬರ್ನ್, ಜಿನೀವಾ ನಗರ, ಸುತ್ತಮುತ್ತಲಿನ ಪ್ರಸಿದ್ದ ಪರ್ವತ ಶ್ರೇಣಿಗಳಾದ ಉಂಗ್ಫ್ರೋ, ಮೌಂಟ್ ಟಿಟ್ಲಿಸ್ ಹಾಗೂ ಸುಂದರ ತಾಣಗಳನ್ನು ವೀಕ್ಷಿಸಿದ ನಂತರ, ಪ್ರವಾಸದ ಕೊನೆಯ ಘಟ್ಟದಲ್ಲಿ, ಸ್ವಿಸ್ ದೇಶದ ಅತ್ಯಂತ ಪ್ರಮುಖ ಹಾಗೂ ‘ಹುಲ್ಲುಗಾವಲಿನ ಶಿಖರ’ ಎಂದೇ ಪ್ರಖ್ಯಾತಿಯಾದ, ಝರ್ಮಾಟ್ ಪ್ರದೇಶದ ‘ಮಾಥರಾನ್ ಗ್ಲೇಸಿಯರ್ ಪ್ಯಾರಡೈಸ್’ಗೆ (Matterhorn glacier paradise) ಭೇಟಿ ನೀಡಿದೆವು. ಆ ಅನುಭವವಂತೂ ವರ್ಣಿಸಲಸದಳ!

ಮೊದಲಿಗೆ ಝರ್ಮಾಟ್‌ನಲ್ಲಿರುವ 'ಮಾಥರಾನ್ ವಸ್ತು ಸಂಗ್ರಹಾಲಯ'ಕ್ಕೆ ಭೇಟಿ ನೀಡಿದೆವು. ಅದು ಸಮಕಾಲೀನ ವಿಷಯಗಳನ್ನೊಳಗೊಂಡ, ಅತ್ಯುತ್ತಮ ವಿನ್ಯಾಸದ ಮ್ಯೂಸಿಯಂ. ಇಲ್ಲಿ ಪುಟ್ಟ ಹಳ್ಳಿಯ ವಿಸ್ಮಯಕಾರಿ ಬೆಳವಣಿಗೆಗಳನ್ನು ಸಾರುವ ಚಿತ್ರಗಳಿದ್ದವು. ಶಸ್ತ್ರಸಜ್ಜಿತ ಮನುಷ್ಯನ ಅವಶೇಷವಿತ್ತು. ಎರಡನ್ನೂ ನೋಡಿದೆವು. ಹಿಮಜಲವನ್ನು ಶುದ್ದ ಜಲವನ್ನಾಗಿ ಪರಿವರ್ತಿಸುವ ಘಟಕಗಳ ಬಗ್ಗೆ ಮಾಹಿತಿ ತಿಳಿದುಕೊಂಡೆವು. ನಂತರ ವಿದ್ಯುತ್ ಚಾಲಿತ ಪುಟ್ಟ ವಾಹನದಲ್ಲಿ ಕುಳಿತು, ಸುಂದರ ಗ್ರಾಮದ ಪರಿಸರದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ, ಹತ್ತು ನಿಮಿಷದಲ್ಲಿ ‘ಬೇಸ್ ಪಾಯಿಂಟ್’ ತಲುಪಿದೆವು.

ಮಾಥರಾನ್ ಗ್ಲೇಸಿಯರ್: 4478 ಮೀ. ಎತ್ತರದ ‘ಮಾಥರಾನ್ ಗ್ಲೇಸಿಯರ್’ ಪರ್ವತವು, ಸ್ವಿಸ್ ದೇಶದ ಅತ್ಯಂತ ಪ್ರಸಿದ್ಧಿಯ ಹೆಗ್ಗುರುತು. ನೈಸರ್ಗಿಕವಾದ ಪಿರಮಿಡ್ ಆಕೃತಿಯ ಪ್ರಬಲ ಪರ್ವತ. ಅದರ ಮೇಲ್ಭಾಗವನ್ನು ತಲುಪಲು ಮೂರು ಹಂತದ ‘ಕೇಬಲ್ ಕಾರ್’ ವ್ಯವಸ್ಥೆಯಿದೆ. 6 ಜನರು ಕುಳಿತುಕೊಳ್ಳಬಹುದಾದ, 500ಕ್ಕೂ ಹೆಚ್ಚು ಕೇಬಲ್ ಕಾರುಗಳಿವೆ. ಗಂಟೆಗೆ ಸುಮಾರು 2000 ಪ್ರವಾಸಿಗರನ್ನು ಒಯ್ಯುತ್ತವೆ. ಎರಡು ಹಂತಗಳಲ್ಲಿ ಈ ಕಾರುಗಳು ಸಂಚರಿಸುತ್ತವೆ.

ಮೊದಲಿಗೆ ‘ಫ್ಯೂರಿ’ ಪಾಯಿಂಟ್ ತಲುಪಿ, ಎರಡನೇ ಹಂತದಲ್ಲಿ, ಬದಲಿಸಿದ ಕೇಬಲ್ ಕಾರ್ ಮೂಲಕ ‘ಟ್ರಾಕೆನೆರ್ ‍ಸ್ಟೆಗ್’ ಸ್ಥಳಕ್ಕೆ ಬಂದಿಳಿದೆವು. ಸುಮಾರು 21 ಕಿ.ಮೀ.ನಷ್ಟು ವಿಸ್ತಾರವಾಗಿ ಹರಡಿರುವ ಈ ಪ್ರದೇಶವು, ಎಲ್ಲ ವಯೋಮಾನದವರೂ ಹಿಮದಲ್ಲಿ ಮೋಜು ಮಾಡುವಂತಹ, ವಿವಿಧ ಕ್ರೀಡಾ ಚಟುವಟಿಕೆಗಳ ತಾಣವಾಗಿದೆ. ಬೇಸಿಗೆಯಲ್ಲಿ, ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಕ್ರೀಡಾಸಕ್ತರು ಇಲ್ಲಿಗೆ ಬಂದು ‘ಸ್ಕೀಯಿಂಗ್’ ತರಬೇತಿ ಪಡೆಯುತ್ತಾರೆ. ಇದು ಪರ್ವತಾರೋಹಿಗಳ ಕನಸಿನ ತಾಣವೂ ಹೌದು.

ಮೂರನೇ ಹಾಗೂ ಅಂತಿಮ ಹಂತದಲ್ಲಿ, ಸುಮಾರು 70-80 ಜನರನ್ನು ಕೊಂಡೊಯ್ಯವ ಸಾಮರ್ಥ್ಯವಿರುವ, ಏರುತ್ತಲೇ ಸುತ್ತಲೂ ತಿರುಗುವ, ದೊಡ್ಡ ಕೇಬಲ್ ಕಾರ್ ಮೂಲಕ ಕ್ಲೆನ್ ಮಾಥರಾನ್ ತಲುಪಿದೆವು. ಒಟ್ಟು 45 ನಿಮಿಷಗಳ ಪಯಣದಲ್ಲಿ, ಕಡಿದಾದ ಇಳಿಜಾರು ಪ್ರದೇಶಗಳು, ಪರ್ವತದ ಮೇಲಿಂದ ಬೀಳುವ ಜಲಧಾರೆ, ಗೊಂಬೆಗಳಂತೆ ಕಾಣುವ ಪುಟ್ಟ ಮನೆಗಳು, ಗುಡ್ಡಗಳ ಮೇಲೆ ಕೆನೆಹಾಲಿನ ಅಭಿಷೇಕವಾಗಿರುವಂತೆ ತೋರುವ ದೃಶ್ಯ ವೈಭವಗಳು ನಮ್ಮದಾಗುತ್ತವೆ.

ಮಾಥರಾನ್ ಶಿಖರದ ಸನಿಹ ತಲುಪುತ್ತಲೇ ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಬೃಹತ್ ಬಂಡೆಯ ಚೂಪಾದ ಹಲ್ಲೊಂದು ಆಗಸಕ್ಕೆ ಸೋಕಿದಂತೆ, ನೀಲಾಕಾಶದ ನಡುವೆ, ಸೂರ್ಯನ ಬೆಳಕಿನ ಪ್ರತಿಫಲನದಿಂದ ಕಂಗೊಳಿಸುವ ಪರ್ವತದ ರುದ್ರ ರಮಣೀಯ ಹಾಗೂ ವಿಹಂಗಮ ನೋಟವು ನಮ್ಮನ್ನು ಸ್ಥಂಭೀಭೂತರನ್ನಾಗಿಸಿತು. ಸುಮಾರು ಹೊತ್ತು ವಿಹರಿಸಿದ ನಂತರ, ಮುಂದೆ ‘ಗ್ಲೇಸಿಯರ್ ಪ್ಯಾರಡೈಸ್’ ನತ್ತ ಸಾಗಿದೆವು. ಹಿಮಪ್ರದೇಶದ ಮೇಲ್ಭಾಗದಿಂದ 15 ಮೀಟರ್ ಆಳಕ್ಕೆ, ಲಿಫ್ಟ್ ಮೂಲಕ ತೆರಳಿದೆವು. ಸುಮಾರು ಒಂದು ಕಿ.ಮೀ. ಉದ್ದದ, ನಡುಗುವ ಚಳಿಯ ವಾತವರಣದ, ತಂಪಾದ ಬೆಳಕು ಹಾಗೂ ಇಂಪಾದ ಸಂಗೀತದ ನಡುವೆ ಆ ಹಿಮ ಸುರಂಗದಲ್ಲಿ ನಾವು ಕಂಡಿದ್ದು, ಹೊಳೆಯುವ ಹಿಮದ ಶಿಲ್ಪಗಳು, ಸ್ಫಟಿಕವನ್ನೂ ನಾಚಿಸುವಂತಹ ಹಿಮ ಪ್ರಾಣಿ ಪಕ್ಷಿಗಳು, ಹಿಮದ ಆಸನಗಳು, ‘ಕಾಲ್ಪನಿಕ ಲೋಕದ ಕಥೆ’ಯೊಂದು ದೃಶ್ಯವಾಗಿ ಕಣ್ಣ ಮುಂದೆ ಅನಾವರಣಗೊಂಡಂತಾಯಿತು.

ನಂತರ ಸಮೀಪದಲ್ಲಿದ್ದ ಪುಟ್ಟ ಸಿನಿಮಾ ಮಂದಿರದಲ್ಲಿ (10 ಮಂದಿ ಕುಳಿತು ವೀಕ್ಷಿಸಬಹುದಾದ ಥಿಯೇಟರ್) ಸ್ವಿಸ್ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ತುಣುಕುಗಳನ್ನು ಪ್ರದರ್ಶಿಸಲಾಗುತ್ತಿತ್ತು.

ಹಿಂತಿರುಗಿ ಬರುವಾಗ, ಪ್ರವಾಸವು ಕೊನೆಗೊಂಡಿತೆನ್ನುವ ಸಂಗತಿಯಿಂದ, ಮನಸ್ಸು ಕೊಂಚ ಭಾರವಾಯಿತಾದರೂ, ‘ದೇವರ ವಾಸಸ್ಥಾನವೆಂದರೆ ಇದೇ’ ಎಂಬ ಭಾವನೆಯೊಂದಿಗೆ, ನಮಸ್ಕಾರ ಮಾಡಿ, ನಮ್ಮ ಅತ್ಯಂತ ಯಶಸ್ವಿ ಪ್ರವಾಸವನ್ನು ಸಂಪನ್ನಗೊಳಿಸಿದೆವು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.