ADVERTISEMENT

ಮೇಘಾಲಯ | ಇಲ್ಲಿ ಎಲ್ಲೆಲ್ಲೂ ಬೆಟ್ಟದ ಹುಲ್ಲು

ಎಚ್.ಎಸ್. ನಂದಕುಮಾರ್
Published 22 ಅಕ್ಟೋಬರ್ 2023, 2:30 IST
Last Updated 22 ಅಕ್ಟೋಬರ್ 2023, 2:30 IST
<div class="paragraphs"><p>ಚಿರಾಪುಂಜಿ ಸಮೀಪದ ಖಾಸಿ ಬೆಟ್ಟದಿಂದ ಧುಮುಕುವ ಜಲಪಾತ...</p></div>

ಚಿರಾಪುಂಜಿ ಸಮೀಪದ ಖಾಸಿ ಬೆಟ್ಟದಿಂದ ಧುಮುಕುವ ಜಲಪಾತ...

   

ಮೇಘಾಲಯದ ಪ್ರಕೃತಿ ಪ್ರವಾಸಿಗರನ್ನು ಸೆಳೆಯುವುದು ಸಾಮಾನ್ಯ. ಇಲ್ಲಿ ಬೆಳೆಯುವ ಪೊರಕೆ ಹುಲ್ಲೂ ದೇಶವ್ಯಾಪಿ ಹರಡಿದೆ. ಈ ಹುಲ್ಲು ಅಲ್ಲಿನ ಆರ್ಥಿಕತೆಯ ಭಾಗವಾಗಿದೆ. ಪ್ರವಾಸಿಗರಿಗೆ ಬೇರೆಯದೇ ರೀತಿ ಕಾಣುವ ಅದರ ವ್ಯಾಪಕತೆ ಅಚ್ಚರಿ ಹುಟ್ಟಿಸುತ್ತದೆ.

ಮೇಘಾಲಯ ರಾಜ್ಯ ಹೆಸರೇ ಸೂಚಿಸುವಂತೆ ಮೋಡಗಳಿಗೆ, ಅಧಿಕ ವರ್ಷಧಾರೆಗೆ, ಅಸದಳ ಸೌಂದರ್ಯದ, ಮೈ ನವಿರೇಳಿಸುವ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಆದರೆ ಇದಿಷ್ಟೇ ಅಲ್ಲದೆ ದೇಶದ ಹೆಚ್ಚಿನೆಲ್ಲ ಮನೆಗಳ ಸ್ವಚ್ಛತೆಗೂ ಮೇಘಾಲಯ ಕಾರಣವಾಗಿದೆ! ಮೇಘಾಲಯ ರಾಜ್ಯದೆಲ್ಲೆಡೆ ಎಲ್ಲೆಂದರಲ್ಲಿ ನಿರ್ದಿಷ್ಟ ಗಿಡಗಳನ್ನು ಕಾಣಬಹುದು. ಇದು ನಮ್ಮೆಲ್ಲರ ಮನೆಗಳಲ್ಲಿರುವ ಪೊರಕೆಗೆ ಬಳಸುವ ಪೊರಕೆ ಹುಲ್ಲಿನ ಗಿಡ. ನಮ್ಮ ಇತ್ತೀಚಿನ ಮೇಘಾಲಯ ಪ್ರವಾಸದ ಸಮಯದಲ್ಲಿ ಅನೇಕ ಕಡೆಗಳಲ್ಲಿ ಎಕರೆಗಟ್ಟಲೆ ಪ್ರದೇಶಗಳಲ್ಲಿ ಈ ಗಿಡಗಳನ್ನು ಕಂಡು ಕುತೂಹಲದಿಂದ ನಮ್ಮ ಕಾರಿನ ಚಾಲಕನನ್ನು ವಿಚಾರಿಸಿದೆ. ಈ ಗಿಡಗಳ ‘ವ್ಯವಸ್ಥಿತ ವಾಣಿಜ್ಯ ಕೃಷಿ’ ಮೇಘಾಲಯ ರಾಜ್ಯದಲ್ಲಿ ನಡೆಯುತ್ತಿದೆ ಎಂದು ತಿಳಿಯಿತು. ಹೀಗೆ ಪೊರಕೆ ಹುಲ್ಲಿನ ಕೃಷಿಯಲ್ಲಿ ತೊಡಗಲು ಒಂದು ರೈತ ಕುಟುಂಬಕ್ಕೆ ಒಂದು-ಎರಡು ಹೆಕ್ಟೇರ್ ಜಮೀನನ್ನು ಹಂಚುವ ಹಕ್ಕನ್ನು ಮೇಘಾಲಯ ರಾಜ್ಯ ಸರ್ಕಾರ ಗ್ರಾಮಗಳ ಮುಖ್ಯಸ್ಥರಿಗೆ ನೀಡಿದೆ. ಸಾಮಾನ್ಯವಾಗಿ ಮುಸುಕಿನ ಜೋಳ, ಭತ್ತ ಬೆಳೆಯುವ ಮೇಘಾಲಯದ ರೈತರು ಚಳಿಗಾಲದಲ್ಲಿ ಮಿಶ್ರ ಬೆಳೆಯಾಗಿ ಈ ಪೊರಕೆ ಹುಲ್ಲಿನ ಕೃಷಿ ಮಾಡುತ್ತಾರೆ. ಕೇವಲ ಮೂರೂವರೆ ದಶಲಕ್ಷ ಜನಸಂಖ್ಯೆ ಹೊಂದಿರುವ ಮೇಘಾಲಯ ರಾಜ್ಯದ ಸುಮಾರು ನಲವತ್ತು ಸಾವಿರ ಕುಟುಂಬಗಳು ಈ ಪೊರಕೆ ಕೃಷಿಯಲ್ಲಿ ತೊಡಗಿಕೊಂಡಿವೆ.

ADVERTISEMENT

ಸುಮಾರು 5,600 ಅಡಿ ಎತ್ತರದವರೆಗಿನ ಬೆಟ್ಟಗಳ ಇಳಿಜಾರಿನಲ್ಲಿ ಬೆಳೆಯುವ ಈ ಪೊರಕೆ ಹುಲ್ಲಿನ ಗಿಡಗಳ ಮೂಲ ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ ಹಾಗೂ ಥಾಯ್ಲೆಂಡ್‌ ಗುಡ್ಡಗಾಡು ಪ್ರದೇಶಗಳು. ಭಾರತದಲ್ಲಿ ಮೇಘಾಲಯ ರಾಜ್ಯವಲ್ಲದೆ ಅಸ್ಸಾಂ ರಾಜ್ಯದ ಕರ್ಬಿ, ಆಂಗ್ಲಾಂಗ್ ಪ್ರದೇಶಗಳಲ್ಲಿ ಇದರ ವ್ಯವಸ್ಥಿತ ಕೃಷಿ ನಡೆಯುತ್ತಿದೆ. ತಿವಾ, ಕರ್ಬಿ ಹಾಗೂ ಖಾಸಿ ಸಮುದಾಯಗಳು ಈ ಪೊರಕೆ ಹುಲ್ಲಿನ ಕೃಷಿಯಲ್ಲಿ  ತೊಡಗಿಕೊಂಡಿವೆ. ಮರಳು ಮಿಶ್ರಿತ ಮಣ್ಣು, ಆವೆಮಣ್ಣು, ಕಲ್ಲು ಮಿಶ್ರಿತ ಮಣ್ಣು... ಹೀಗೆ ಎಲ್ಲಾ ರೀತಿಯ ಮಣ್ಣಿನಲ್ಲೂ ಈ ಪೊರಕೆ ಹುಲ್ಲು ಬೆಳೆಯುತ್ತದೆ. ಫೆಬ್ರುವರಿ ತಿಂಗಳಿನಲ್ಲಿ ಪ್ರಾರಂಭವಾಗುವ ಇದರ ಕೃಷಿ ಮಾರ್ಚ್ ತಿಂಗಳ ಕೊನೆಯವರೆಗೆ ನಡೆಯುತ್ತದೆ. ಬೀಜ ಬಿತ್ತುವುದರಿಂದ ಹಾಗೂ ಗಿಡ ನೆಡುವುದರ ಮೂಲಕವೂ ಇದನ್ನು ಬೆಳೆಯಬಹುದು. ‘ಥೈಸನೋಲೀನಾ ಮ್ಯಾಕ್ಸಿಮಾ’ ಎಂಬ ವೈಜ್ಞಾನಿಕ ಹೆಸರಿನ ಈ ಪೊರಕೆ ಹುಲ್ಲನ್ನು ‘ಟೈಗರ್ ಗ್ರಾಸ್’ ಎನ್ನುತ್ತಾರೆ. ‘ನೇಪಾಳೀಸ್ ಬ್ರೂಮ್ ಗ್ರಾಸ್’, ‘ಬ್ರೂಮ್ ಗ್ರಾಸ್’, ‘ಬ್ರೂಮ್ ಸ್ಟಿಕ್’ ಮುಂತಾದ ಸಾಮಾನ್ಯ ಹೆಸರುಗಳಿಂದಲೂ ಗುರುತಿಸಲಾಗುತ್ತದೆ. ವಿಶೇಷವೆಂದರೆ, ಈ ಗಿಡದ ಹೂವುಗಳೇ ಪೊರಕೆಯಲ್ಲಿ ಬಳಸಲಾಗುವ ಹುಲ್ಲು. ಇದನ್ನು ನೇಪಾಳಿ ಭಾಷೆಯಲ್ಲಿ ‘ಕುಚೊ’ ಎಂದೂ, ಅಸ್ಸಾಮಿ ಭಾಷೆಯಲ್ಲಿ ‘ಜಾರು’ ಎಂದೂ, ಹಿಂದಿಯಲ್ಲಿ ‘ಫೂಲ್ ಜಾಡೂ’ ಎಂದೂ ಕರೆಯುತ್ತಾರೆ.

ಈ ಹುಲ್ಲಿನ ಕಸಪೊರಕೆಯಿಂದ ಗುಡಿಸಿದರೆ ‘ಋಣಾತ್ಮಕ ಚಿಂತನೆಗಳು ದೂರಾಗುತ್ತವೆ ಹಾಗೂ ನಕಾರಾತ್ಮಕ ಶಕ್ತಿಗಳು ನಶಿಸುತ್ತವೆ’ ಎಂಬ ನಂಬಿಕೆ ಅಸ್ಸಾಮಿಗರಲ್ಲಿದೆ.

‘ಥೈಸನೋಲೀನಾ ಮ್ಯಾಕ್ಸಿಮಾ’ ಎಂಬ ವೈಜ್ಞಾನಿಕ ಹೆಸರಿನ ಈ ಪೊರಕೆ ಹುಲ್ಲಿಗೆ ಮತ್ತೊಂದು ಹೆಸರು ‘ಟೈಗರ್ ಗ್ರಾಸ್’

ಹುಬ್ಬಳ್ಳಿ ನಂಟು!

ಸಾಮಾನ್ಯವಾಗಿ ತೆಂಗಿನ ಗರಿ, ತಾಳೆ ಎಲೆಗಳಿಂದ ತಯಾರಿಸಿದ ಪೊರಕೆ ಬಳಸುತ್ತಿದ್ದ ಹೆಚ್ಚಿನ ಜನರು ಕ್ರಮೇಣ ಎಲ್ಲಾ ದಿನಸಿ, ಸ್ಟೇಷನರಿ ಅಂಗಡಿಗಳಲ್ಲಿ ಸಿಗುವ ಈ ಪೊರಕೆ ಹುಲ್ಲಿನಿಂದ ತಯಾರಾದ ಪೊರಕೆಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಇದಕ್ಕೆ ಮುಖ್ಯ ಕಾರಣ ಇದರ ದೀರ್ಘ ಬಾಳಿಕೆ. ಈ ಪೊರಕೆ, ತೆಂಗಿನ ಗರಿ ಅಥವಾ ತಾಳೆ ಎಲೆಗಳಿಂದ ತಯಾರಿಸಿದ ಪೊರಕೆಗಳಿಗಿಂತಲೂ ಅಧಿಕ ಕಾಲ ಬಾಳಿಕೆ ಬರುತ್ತದೆ  ಹಾಗೂ ಇದರಿಂದ ಸಣ್ಣ ಸಣ್ಣ ದೂಳಿನ ಕಣಗಳನ್ನು ತೆಗೆಯಲು ಸಹ ಸಾಧ್ಯ. ನಮಗೆಲ್ಲ ಚಿರಪರಿಚಿತ ಮಂಕಿ 555 ಬ್ರ್ಯಾಂಡಿನ ಪೊರಕೆಗಳು ತಯಾರಾಗುವುದು  ನಮ್ಮ ರಾಜ್ಯದ ಹುಬ್ಬಳ್ಳಿಯಲ್ಲಿ. ಇದರಲ್ಲಿ ಬಳಸುವ ‘ಟೈಗರ್ ಗ್ರಾಸ್’ ಅನ್ನು ಅಸ್ಸಾಂ ರಾಜ್ಯದಿಂದ ಹುಬ್ಬಳ್ಳಿಗೆ ತಂದು 18 ಡಿಗ್ರಿ ತಾಪಮಾನದಲ್ಲಿ ಶೇಖರಿಸಿಟ್ಟು, ನಂತರ  ಪೊರಕೆ ತಯಾರಿಸಲು ಬಳಸಲಾಗುತ್ತದೆ. ಅಂತೆಯೇ ಗಾಲಾ ಕಿಂಗ್ ಕಾಂಗ್ ಹಾಗೂ ಜೇಬಿ ಮಹಾಲಕ್ಷ್ಮಿ ಬ್ರ್ಯಾಂಡಿನ ಪೊರಕೆಗಳಲ್ಲಿ ಬಳಸುವುದು ಮೇಘಾಲಯದ ಪೊರಕೆ ಹುಲ್ಲು.  

ದುರಿತ ಭವದ ಬವಣೆ ಮೆಟ್ಟಿ

ಬೇಸಿಗೆ ಬೆಳೆಗಳ ಮೇಲೆ ಅವಲಂಬಿತರಾಗಿರುವ, ಅತ್ಯಂತ ಕಡಿಮೆ ಆದಾಯವಿರುವ ಅಸ್ಸಾಂ ಹಾಗೂ ಮೇಘಾಲಯದ ರೈತ ಕುಟುಂಬಗಳು ಚಳಿಗಾಲದಲ್ಲಿ ವಾರಕ್ಕೆ ನೂರು ರೂಪಾಯಿ ಗಳಿಸುವುದೂ ಕಷ್ಟ. ಸಾಮಾನ್ಯವಾಗಿ ಉರುವಲು ಸಂಗ್ರಹ, ಬೇಟೆ ಮುಂತಾದ ಮೂಲಗಳಿಂದ ಅತ್ಯಲ್ಪ ಆದಾಯಗಳಿಸವ ರೈತರಿಗೆ ಆ ಸಮಯದಲ್ಲಿ ರಸ್ತೆ  ಕಾಮಗಾರಿ ನಡೆಯುತ್ತಿದ್ದರೆ ಮಾತ್ರ ಸ್ವಲ್ಪ ಮಟ್ಟಿನ ಆದಾಯವಿರುತ್ತದೆ. ಆದರೆ ತನ್ನಷ್ಟಕ್ಕೇ ತಾನೇ ಬೆಳೆಯುವ, ಹೆಚ್ಚಿನ ನಿಗಾ ಬಯಸದ ಹಾಗೂ ಕಳೆ ಕೀಳುವ ಖರ್ಚನ್ನು ಹೊರತುಪಡಿಸಿ ಇತರ ಯಾವ ಹೆಚ್ಚಿನ ಖರ್ಚಿಲ್ಲದ ಪೊರಕೆ ಹುಲ್ಲಿನ ಕೃಷಿ ಈ ಭಾಗದ ರೈತಾಪಿ ವರ್ಗಕ್ಕೆ ವಾರ್ಷಿಕ ಹತ್ತಾರು ಸಾವಿರ ಆದಾಯದ ಇತರ ಮೂಲವಾಗಿದೆ. ತನ್ಮೂಲಕ ಈ ಸಾಧಾರಣ ಪೊರಕೆ ಹುಲ್ಲು ಮನೆ ಮನೆಗಳ ಕಸವನ್ನು ಎತ್ತುವ ಜೊತೆಯಲ್ಲೇ ಈ ದುರಿತ ಕಾಲದಲ್ಲಿ ಪೂರ್ವೋತ್ತರ ರಾಜ್ಯಗಳ ಸಾವಿರಾರು ಬಡ ರೈತ ಕುಟುಂಬಗಳ  ಆರ್ಥಿಕ ಬವಣೆಯನ್ನು ಸ್ವಲ್ಪ ಮಟ್ಟಿಗಾದರೂ ನೀಗಲು ಸಹಕಾರಿಯಾಗಿದೆ. ಒಂದರ್ಥದಲ್ಲಿ ಅವರ ಬದುಕನ್ನು ‘ಪೊರೆ’ಯುತ್ತಿದೆ.

ಹೆಚ್ಚಿನ ಮಳೆ ಸುರಿಯುವ ಮೇಘಾಲಯದಲ್ಲಿ ಮಣ್ಣಿನ ಸವಕಳಿ ಒಂದು ದೊಡ್ಡ ಸಮಸ್ಯೆ. ಆದರೆ ಈ ಪೊರಕೆ ಹುಲ್ಲಿನ ಗಿಡಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ದೊಡ್ಡ ಮಟ್ಟದ ಪೊರಕೆ ಹುಲ್ಲಿನ ಕೃಷಿಯಿಂದ ಮಣ್ಣಿನ ಸವಕಳಿಯಿಂದಾಗಿ ಆಗುವ ಅರಣ್ಯ ನಾಶ ಕಡಿಮೆಯಾಗಿದೆ. ನಿಸರ್ಗದತ್ತ ಹುಲ್ಲಿನ ಈ ಪೊರಕೆ ಪರಿಸರಸ್ನೇಹಿಯೂ ಆಗಿದೆ. ನಮ್ಮ ದೇಶ ವಿಶ್ವದಲ್ಲೇ ಎರಡನೇ ದೊಡ್ಡ ಪೊರಕೆ ಉತ್ಪಾದಿಸುವ ದೇಶವಾಗಿದೆ. ವಾರ್ಷಿಕ ಸುಮಾರು ₹650 ಕೋಟಿ ವ್ಯವಹಾರ ನಡೆಸುವ ಪೊರಕೆ ಉದ್ಯಮ ಸ್ಥಳೀಯವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದೆ. ಹೀಗೆ ಈ ‘ಬೆಟ್ಟದ ಹುಲ್ಲು’ ಸಾವಿರಾರು ಬಡ ಕುಟುಂಬಗಳ ಬಾಳಿನ ಬೆಳಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.