ADVERTISEMENT

ಮೇಘಾನೆ; ವಿಸ್ಮಯ ಲೋಕದಲ್ಲಿ ವಿಹಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 20:30 IST
Last Updated 11 ನವೆಂಬರ್ 2023, 20:30 IST
ಗುಡ್ಡಗಳ ಮೇಲೆ ಮೇಘಾನೆ
ಗುಡ್ಡಗಳ ಮೇಲೆ ಮೇಘಾನೆ   

ಶಿವಮೊಗ್ಗ ಜಿಲ್ಲೆಯ ಕಾನುಭಾಗದಲ್ಲಿರುವ ಮೇಘಾನೆ ಮುಗ್ಧಹಳ್ಳಿ. ಇಲ್ಲಿ ನಿಸರ್ಗ ಸೌಂದರ್ಯ ಸವಿಯುವ ಜೊತೆಗೆ ಜನರ ಬದುಕಿನ ನೆನಪು ಕಟ್ಟಿಕೊಡುವ ಅನನ್ಯ ಅನುಭವ ಬುತ್ತಿಯನ್ನೂ ಕಟ್ಟಿಕೊಂಡು ಬರಬಹುದು.

ಮೇಘಗಳ(ಮೋಡ) ಊರು ಮೇಘಾನೆ. ಎತ್ತರವಾದ ಗಿರಿ ಶಿಖರಗಳ ನಡುವೆ ಮೋಡಗಳನ್ನೇ ಹೊದ್ದು ಮಲಗಿದಂತಿರುವ, ಸಾಮಾನ್ಯವಾಗಿ ಹೊರ ಜಗತ್ತಿಗೆ ಗೋಚರಿಸದೆ ಇರುವ ಪುಟ್ಟ ಊರು. ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಲೆನಾಡಿನ ಮಡಿಲಲ್ಲಿ ಮಲಗಿದ ಮುಗ್ಧಹಳ್ಳಿ. ಸುಮಾರು 5 ಕಿ.ಮೀ. ಕಡಿದಾದ ಬೆಟ್ಟವನ್ನು ಏರಿ, ಏದುಸಿರು ಬಿಡುತ್ತ ಗುಡ್ಡಗಳ ತುದಿಗಳು ಸೇರಿದ ಜಾಗದಲ್ಲಿ ಚದುರಿದ ಮನೆಗಳಿರುವ ಈ ಊರನ್ನು ನೋಡಿದರೆ ಬೇರೊಂದು ಲೋಕಕ್ಕೆ ಬಂದ ಅನುಭವ. 60 ವರ್ಷಗಳ ಹಿಂದೆ, ದಟ್ಟ ಕಾಡಿನ ನಡುವೆ ಕಡಿದಾದ ಬೆಟ್ಟವನ್ನು ಏರಿ ಜನ ಇಲ್ಲಿಗೆ ಬಂದಿದ್ದಾದರೂ ಹೇಗೆ, ಏಕೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡದೇ ಇರವು. ಬೆಟ್ಟದ ಮೇಲಿನ ಈ ಪುಟ್ಟ ಹಳ್ಳಿ, ಕಲ್ಪನೆಯ ಕೈಲಾಸದಂತಿದ್ದರೂ ಇದು ನಿರ್ಮಾಣವಾದ ಬಗ್ಗೆ ಕಣ್ಣೀರ ಕಥೆಗಳಿವೆ. ನಾಡಿನ ಬೆಳಕಿಗಾಗಿ ಹಲವರ ಬದುಕನ್ನು ಕತ್ತಲೆಗೆ ದೂಡುವಂಥಾದ ನೈಜ ಬದುಕಿನ ಚಿತ್ರಣಗಳು ನಮ್ಮ ಕಣ್ಣ ಮುಂದೆ ಬರುತ್ತವೆ.

ಸೃಷ್ಟಿಯಾದ ಬಗೆ

ADVERTISEMENT

1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣವಾಗಿ, 1991.71 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನೀರು ಆವರಿಸಿತು. ಪ್ರಾಣಿ ಪಕ್ಷಿಗಳಿಗೆ, ಜನರ ಬದುಕಿಗೆ ಆಶ್ರಯದಾಗಿದ್ದ ಭೂಮಿ ಮುಳುಗಡೆಯಾಯಿತು. ಇಲ್ಲಿ ಭೂಮಿಯ ಒಡೆತನ ಇಲ್ಲದ ಮತ್ತು ಶಿಕ್ಷಣವೂ ಇಲ್ಲದ ಕುಣಬಿ ಬುಡಕಟ್ಟು ಜನಾಂಗದ ಕೆಲವು ಕುಟುಂಬಗಳು, ಬದುಕನ್ನು ಕಟ್ಟಿಕೊಳ್ಳಲು ಸರಕು ಸಾಮಾನುಗಳನ್ನು ಕಟ್ಟಿಕೊಂಡು, ದಟ್ಟ ಅಡವಿಯ ಮೇಘಾನೆ ಬೆಟ್ಟದ ಬುಡಕ್ಕೆ ಬಂದು, ಗಟ್ಟಿ ಮನಸ್ಸು ಮಾಡಿ, ಕಡಿದಾದ ಬೆಟ್ಟವನ್ನು ದಾರಿಯಿಲ್ಲದಿದ್ದರೂ ಧೈರ್ಯದ ದಾರಿಯಲ್ಲಿ ಏರಿಬಿಟ್ಟರು. ‘ಇನ್ನಾವ ಅಣೆಕಟ್ಟುಗಳೂ ನಮ್ಮನ್ನು ಮುಳುಗಿಸಲಾರವು’ ಎಂಬ ಸಂತಸದಿಂದ ಬೀಗಿದರು. ಆದರೆ ಬದುಕಿಗೆ ಮತ್ತೆ ಬಾಗಲೇಬೇಕಾದ ಅನಿವಾರ್ಯ.

ಇಲ್ಲಿ ಹೊಸ ಬದುಕು ಪ್ರಾರಂಭವಾಯಿತು. ಕಾಡು ಹುಲ್ಲಿನ ಚಾವಣಿ ಮಾಡಿ, ಸೊಪ್ಪು ಸೆದೆ ಮರ ಮುಟ್ಟುಗಳ ನೆರಿಕೆ ನೆಟ್ಟು, ಮಣ್ಣಿನ ಗೋಡೆಯ ಮನೆಗಳ ನಿರ್ಮಿಸಿದರು. ಅಲ್ಲಿ ಮೋಡಗಳು ಕೈಗೆಟುಕಿದಂತೆ ಯಾವ ಆಧುನಿಕ ಸೌಲಭ್ಯಗಳೂ ಕೈಗೆಟುಕುತ್ತಿರಲಿಲ್ಲ. ಆದರೆ ಶುದ್ಧ ನೀರಿಗೆ ಕೊರತೆ ಇರಲಿಲ್ಲ. ಅರಣ್ಯದ ಉತ್ಪನ್ನಗಳಾದ ಉಪ್ಪಂಗ(ಹುಣಸೆ ಹಣ್ಣಿನ ರೀತಿ), ಸೀಗೆಕಾಯಿ, ಅಂಟವಾಳ ಕಾಯಿ, ಲಾವಂಚದ ಬೇರುಗಳಿಂದ ಎಣ್ಣೆ ತಯಾರಿಸುವುದು, ಬುಟ್ಟಿ ಹೆಣೆಯುವುದು, ಒಂದಿಷ್ಟು ಭತ್ತ ಬೆಳೆಯುವುದು, ಮುಂತಾದವು ಬದುಕಿಗೆ ಆಧಾರ. ನಾಯಿ, ಬೆಕ್ಕು, ಹಸುಗಳು ನಿತ್ಯದ ಒಡನಾಡಿಗಳು. ಹಾಡು, ಕುಣಿತ, ಮರವನ್ನು ದೈವವೆಂದು ಪೂಜಿಸುವುದು ಬದುಕಿನ ಭಾಗವಾಗಿದ್ದವು.

ಗಿಡಮೂಲಿಕೆಗಳ ಬಗ್ಗೆ ಗೊತ್ತಿದ್ದ ಗಣೇಶಜ್ಜ ಇವರ ಪಾಲಿನ ವೈದ್ಯರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಬೆತ್ತದ ಚಟ್ಟದಲ್ಲಿ ರೋಗಿಯನ್ನು ಹೊತ್ತುಕೊಂಡು 5 ಕಿ.ಮೀ. ಬೆಟ್ಟ ಇಳಿದು, ಮತ್ತೆ 30 ಕಿ.ಮೀ. ದೂರದ ಭಟ್ಕಳಕ್ಕೆ ಬರಬೇಕಾದ ಅನಿವಾರ್ಯ. ತಾಲ್ಲೂಕು ಕೇಂದ್ರವಾದ ಸಾಗರಕ್ಕೆ ಬರಬೇಕಾದರೆ ಬೆಟ್ಟ ಇಳಿದು ಸುಮಾರು 90 ಕಿ.ಮೀ.ಗಳ ಪ್ರಯಾಣ ಮಾಡಬೇಕಾಗಿತ್ತು. ಶಿಕ್ಷಣ, ವಿದ್ಯುತ್‌ ಇತರೆ ಸರ್ಕಾರಿ ಸೌಲಭ್ಯಗಳು ಅವರ ಪಾಲಿಗೆ ಗಗನ ಕುಸುಮ. ಮರಾಠಿ ಮನೆಮಾತು. ಯಾರಾದರೂ ಹೊರಗಿನವರು ಬಂದರೆ ಭಯಪಡುತ್ತಿದ್ದರು. ಇಲ್ಲಿಂದ ಬೇರೆ ಊರುಗಳಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದಕ್ಕೆ, ಹೆಣ್ಣು ಕೇಳಲು ಬರುವವರಿಲ್ಲ. ಮದುವೆ ಮಾಡಿಕೊಳ್ಳಲು ಹೆಣ್ಣು ಕೊಡುವವರಿಲ್ಲ. ಮನೆಯ ಚಾವಣಿಗೆ ತಲೆಯ ಮೇಲೆ ಹಂಚುಗಳನ್ನು ಹೊತ್ತು ಗುಡ್ಡವೇರಿದ ಸಾಹಸದ ಕಥೆಗಳಿವೆ.

ಸಾಗರ–ಭಟ್ಕಳ ರಸ್ತೆಯಲ್ಲಿ ಹಾಕಲಾಗಿರುವ ಬೋರ್ಡ್

ಕಾಡು ಪ್ರಾಣಿಗಳ ಭಯ

ಬೆಟ್ಟದ ಮೇಲೆ ಊರು ಕಟ್ಟಿಕೊಂಡ ಜನರಿಗೆ ಪ್ರಾಣಿಗಳ ಭಯವಿತ್ತು. ಒಮ್ಮೆ ಬೆಟ್ಟವೇರುವಾಗ ಕರಡಿಯೊಂದು ದಾಳಿ ಮಾಡಿ ಕಣ್ಣನ್ನು ಕಳೆದುಕೊಂಡ ಬಗ್ಗೆ  ಹಿರಿಯರೊಬ್ಬರು ವಿವರಿಸಿದ್ದನ್ನು ಕೇಳಿ ಮೈ ಝುಂ ಎಂದಿತು. ಚಾವಣಿಯಿಂದ ಹೆಬ್ಬಾವು ನಡುರಾತ್ರಿ ಮನೆಯೊಳಗೆ ಬಿದ್ದದ್ದು, ರಾತ್ರಿ ಪ್ರಾಣಿಗಳ ಕೂಗು... ಇಂತಹ ನೈಜ ಘಟನೆಗಳ ಬಗ್ಗೆ ಕೇಳುತ್ತಿದ್ದರೆ ಅವರ ಬದುಕಿನ ಬಗೆಯನ್ನು ಊಹಿಸಬಹುದಾಗಿದೆ.

ಸುಮಾರು 20 ವರ್ಷಗಳ ನಂತರ 1982ರಲ್ಲಿ ಮಣ್ಣಿನ ಗೋಡೆಗಳ ಕುಟೀರದಲ್ಲಿ ಶಾಲೆಯೊಂದು ಪ್ರಾರಂಭವಾಯಿತು. ಈ ಶಾಲೆಯಲ್ಲಿ ಹಿಂದೆ ಕೆಲಸ ನಿರ್ವಹಿಸಿದ ಇಬ್ಬರು ಶಿಕ್ಷಕರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಶಾಲೆ ಮತ್ತು ಊರಿನ ಅನುಭವಗಳನ್ನು, ತಮ್ಮ ಬದುಕು ಬವಣೆಗಳ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟರು. ಬೇರಾವ ಊರಿನಿಂದಲೂ ನಿತ್ಯ ಓಡಾಡಲು ಸಾಧ್ಯವಾಗದೇ ಅಲ್ಲೇ ಗುಡಿಸಲಲ್ಲಿ ವಾಸಮಾಡಬೇಕಾದ ಸ್ಥಿತಿ, ಮಕ್ಕಳ ತಲೆಗೂದಲು ಕಟಿಂಗ್‌ ಮಾಡಿದ್ದು, ಯಾವುದೇ ಇಂಗ್ಲಿಷ್‌ ಮೆಡಿಸಿನ್‌ ತೆಗೆದುಕೊಳ್ಳಲು ಒಪ್ಪದ ಜನರನ್ನು ಒಪ್ಪಿಸಿ ಮಕ್ಕಳಿಗೆ ಪಲ್ಸ್‌ ಪೋಲಿಯೊ ಹನಿ ಹಾಕಿಸಿದ್ದು, ಅಡುಗೆ ಮಾಡಿಕೊಂಡಿದ್ದು, ಮಕ್ಕಳಿಗೆ ಕನ್ನಡ ಕಲಿಸಿದ್ದು... ಹೀಗೆ ಹರಳುಗಟ್ಟಿದ ಅನುಭವಗಳನ್ನು ಹಂಚಿಕೊಂಡರು. ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಈ ವಿಸ್ಮಯ ಪ್ರಪಂಚವನ್ನು ತೆರೆದಿಟ್ಟರು. ಹಲವು ಕೊರತೆಗಳ ನಡುವೆಯೂ ಮಕ್ಕಳು ಮತ್ತು ಜನರೊಂದಿಗೆ ಬೆರೆತು ಕರ್ತವ್ಯ ನಿರ್ವಹಿದ ಶಿಕ್ಷಕರೆಲ್ಲರೂ ಅಭಿನಂದನಾರ್ಹರು. ಇತ್ತೀಚಿನ ವರ್ಷಗಳಲ್ಲಿ ಅಲ್ಲೊಂದು ಅಂಗನವಾಡಿ ಕೇಂದ್ರವೂ ಶುರುವಾಗಿದೆ.

ಮೇಘಾನೆ ಇಂದು

ಜಾಗರೂಕತೆಯಿಂದ ಜೀಪುಗಳು ಚಲಿಸಬಹುದಾದ ದಾರಿ. ಒಂದು ಕಡೆ ಪ್ರಪಾತ. ಇತ್ತೀಚಿಗೆ ಎಮ್ಮೆಯೊಂದು ಪ್ರಪಾತಕ್ಕೆ ಬಿದ್ದು, ಅಲ್ಲಿ ಮರಕ್ಕೆ ಸಿಕ್ಕಿಕೊಂಡು ಹೊರಬರಲಾರದೆ ಅಲ್ಲೇ ಸತ್ತಿದ್ದನ್ನು ಕೇಳಿ ಕರುಳು ಚುರಕ್‌ ಅಂದಿತು. ಒಂದರಿಂದ ಐದನೇ ತರಗತಿವರೆಗೆ ಶಿಕ್ಷಣ ಸಿಗುವಂತಾಗಿದೆ. ಆನಂತರ ಮಕ್ಕಳು ಅಲ್ಲಿಂದ ಪ್ರತಿದಿನ ಯಾವ ಶಾಲೆಗೂ ಓಡಾಡುವ ಸ್ಥಿತಿ ಇಲ್ಲ. ಅರಬ್ಬೀ ಸಮುದ್ರದ ಮೇಲಿಂದ ಬೀಸುವ ನೈರುತ್ಯ ಮಾರುತಗಳು ಕರಾವಳಿಯಿಂದ ಮೊದಲು ದುತ್ತೆಂದು ಅಪ್ಪಳಿಸುವುದೇ ಈ ಗುಡ್ಡಗಳಿಗೆ. ಸದಾ ಸುರಿವ ಮಳೆ. ಬಟ್ಟೆ ಒಣಗುವುದೂ ಕಷ್ಟ. ಮೇಘಾನೆ ಹಳ್ಳಿಗೆ ಈಗ 60ರ ಹರೆಯ. 1963-64ರಲ್ಲಿ ನೆಲೆ ಅರಸಿ ಬಂದದ್ದು ಏಳು ಕುಟುಂಬಗಳ ಮೂವತ್ತು ಜನ. ಈಗ ಅಲ್ಲಿರುವುದು ಸುಮಾರು 67 ಮನೆಗಳಿಂದ ಒಟ್ಟು 320 ಜನ. ಅಲ್ಲಲ್ಲಿ ಚದುರಿದ ಮನೆಗಳ ಸಂಪರ್ಕಕ್ಕೆ ಕಾಲು ದಾರಿಗಳೇ ಆಧಾರ.

ಇಲ್ಲೊಂದು ಗಣಪತಿ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಕೆಲ ಮಕ್ಕಳು ಬೇರೆ ಊರುಗಳಲ್ಲಿದ್ದು ಓದುತ್ತಿದ್ದಾರೆ. ಈಗ ಇಲ್ಲಿ ಅಡಿಕೆ ತೋಟಗಳನ್ನು ಮಾಡಿದ್ದಾರೆ. ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಊರಿಗೆ ಸೋಲಾರ್‌ ಬಂತು. ಈಗ ವಿದ್ಯುತ್‌ ಕೂಡ ಬಂದಿದೆ. ಅಲ್ಲಲ್ಲಿ ನೆಟ್ವರ್ಕ್‌ ಸಿಗುವುದರಿಂದ ಮೊಬೈಲ್‌ ಕೂಡ ಬಂದಿವೆ. ಆಧುನಿಕತೆಯ ಗಾಳಿ ಬೀಸಲು ಪ್ರಾರಂಭವಾಗಿದ್ದರೂ, ಸುಗಮ ಸಾರಿಗೆ ಸದ್ಯಕ್ಕಂತೂ ಮರಿಚೀಕೆ! ಕಾಡು ದಾರಿ ಈಗ ಅಲ್ಪ ಸ್ವಲ್ಪ ರಸ್ತೆಯ ರೂಪ ಪಡೆದುಕೊಂಡಿದೆ.

ಬಹುದಿನಗಳ ಆಸೆಯೊಂದು ನೆರವೇರಿ, ಮೇಘಾನೆ ಎಂಬ ಕೈಲಾಸದಿಂದ ಒಂದೊಂದೆ ಹೆಜ್ಜೆ ಇಟ್ಟು ಭೂಮಿಗಿಳಿದೆವು. ರಾತ್ರಿ ಊರು ಸೇರಿ, ಕಣ್ಮುಚ್ಚಿದರೂ ಮೇಘಾನೆಯ ದೃಶ್ಯಗಳೇ ಕಣ್ಮುಂದೆ ಸುಳಿಯುತ್ತಿದ್ದವು.

ಮೇಘಾನೆಯಲ್ಲಿ ಅಡಿಕೆ ಒಣಗಿಸಲು ಮಾಡಿಕೊಂಡಿರುವ ವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.