ADVERTISEMENT

ಕಾಡು ನೋಡ ಹೋದೆ...

ನೈರೋಬಿಯಾದ ನ್ಯಾಷನಲ್‌ ಪಾರ್ಕ್ ಸುತ್ತುತ್ತಾ

ಜಿ.ಕೃಷ್ಣ ಪ್ರಸಾದ್
Published 20 ಮಾರ್ಚ್ 2019, 19:30 IST
Last Updated 20 ಮಾರ್ಚ್ 2019, 19:30 IST
Nairobi nation park
Nairobi nation park   

‘ಮೂವತ್ತು ಸಾವಿರಕ್ಕೆ ನಯಾ ಪೈಸೆ ಕಮ್ಮಿ ಆಗಲ್ಲ’ ಟೂರ್ ಏಜೆನ್ಸಿ ಹುಡುಗಿ ಕಡ್ಡಿ ಮುರಿದಂತೆ ಹೇಳಿದಳು. ಮೀಟಿಂಗ್ ಒಂದಕ್ಕೆ ಕೀನ್ಯಾಗೆ ಬಂದಿದ್ದ ನಾನು, ‘ಪ್ರವಾಸಿಗರ ಸ್ವರ್ಗ’ ಎನಿಸಿದ ಮಸೈಮಾರ ನೋಡಲೆಂದು ಕೊನೆಯ ಮೂರು ದಿನಗಳನ್ನು ಮೀಸಲಿಟ್ಟಿದ್ದೆ. ಗುಂಪಿನಲ್ಲಿ ಹೋದರೆ ಐದಾರು ಸಾವಿರಕ್ಕೆ ಮುಗಿಯುತ್ತಿದ್ದ ಮಸೈಮಾರ ಟ್ರಿಪ್‌ಗೆ, ಒಬ್ಬನೇ ಇದ್ದ ದೆಸೆಯಿಂದ ಮೂವತ್ತು ಸಾವಿರ ಕಕ್ಕಬೇಕಿತ್ತು.

ನನ್ನ ಪೇಚಾಟ ನೋಡಿ ಮುಗುಳ್ನಕ್ಕ ಗೆಳೆಯ ಡೇವಿಡ್ ‘ಮಸೈಮಾರ ಹೋಗದಿದ್ದರೇನಂತೆ. ಅಲ್ಲಿಯ ಪ್ರಾಣಿಗಳನ್ನು, ಮೂಲನಿವಾಸಿ ಮಸೈ ಜನರನ್ನು ಇಲ್ಲೇ ನೈರೋಬಿ ಹೊರವಲಯದಲ್ಲಿ ತೋರಿಸುತ್ತೇನೆ ಬಾ’ ಎಂದು ಕರೆದೊಯ್ದು ‘ನೈರೋಬಿ ನ್ಯಾಷನಲ್ ಪಾರ್ಕ್’ ಮುಂದೆ ನಿಲ್ಲಿಸಿದ್ದ. ನಮ್ಮ ಗುಂಪಿನ ಮೂರು ಜನ ಒಂದಾಗಿ ತಲಾ ಒಂದೂವರೆ ಸಾವಿರ ಕೊಟ್ಟು ಜೀಪೊಂದನ್ನು ಬುಕ್ ಮಾಡಿದ್ದೆವು. 43 ಡಾಲರ್‌ ಪ್ರವೇಶ ಶುಲ್ಕ ಕೊಟ್ಟು ಪಾರ್ಕ್‌ ಪ್ರವೇಶಿಸಿದೆವು.

ನೈರೋಬಿ ನಗರದ ಹೃದಯ ಭಾಗದಿಂದ ಏಳು ಕಿ.ಮೀ ದೂರದಲ್ಲಿರುವ ನ್ಯಾಷನಲ್ ಪಾರ್ಕಿನ ಹಿಂದೆ ನಗರದ ಗಗನಚುಂಬಿ ಕಟ್ಟಡಗಳು ಕಾಣಸಿಗುತ್ತವೆ. ವಿಮಾನ ನಿಲ್ದಾಣವು ಸಮೀಪವಿರುವುದರಿಂದ ವಿಮಾನಗಳ ಹಾರಾಟ ಕೂಡ ಪಾರ್ಕಿನಿಂದ ನೋಡಬಹುದು.

ADVERTISEMENT

19ನೇ ಶತಮಾನದ ಕೊನೆಯಲ್ಲಿನೈರೋಬಿ 14 ಸಾವಿರ ಜನಸಂಖ್ಯೆಯಿದ್ದ ಸಣ್ಣ ನಗರ. ಅಲೆಮಾರಿ ಮಸೈ ಬುಡಕಟ್ಟು ಜನ ತಮ್ಮ ಜಾನುವಾರುಗಳನ್ನು ಈ ಕಾಡಲ್ಲಿ ಮೇಯಿಸಲು ಬರುತ್ತಿದ್ದರು. ಇಲ್ಲಿ ಕೃಷಿ ಮಾಡುತ್ತಿದ್ದ ಕಿಕೂಯು ಬುಡಕಟ್ಟು ಜನ, ತಮ್ಮ ಹೊಲಗಳಿಗೆ ನುಗ್ಗುತ್ತಿದ್ದ ಜಿರಾಫೆ, ಜೀಬ್ರಾಗಳನ್ನು ಓಡಿಸುವಲ್ಲಿ ಹೈರಾಣಾಗುತ್ತಿದ್ದರು. ಊರಿಗೆ ನುಗ್ಗುತ್ತಿದ್ದ ಸಿಂಹಗಳನ್ನು ಓಡಿಸಲು ರಾತ್ರಿ ಹೊತ್ತು ಗನ್ ಹಿಡಿದು ಕಾಯಬೇಕಿತ್ತು!

ವಸಾಹತುಶಾಹಿ ಬ್ರಿಟಿಷರು ತಮ್ಮ ಮೋಜಿನ ಬೇಟೆಗೆ ಈ ಜಾಗವನ್ನು ಮೀಸಲಿಟ್ಟಿದ್ದರು. ಮರ್ವಿನ್ ಕೋವಿ ಎಂಬ ನಿಸರ್ಗ ಪ್ರೇಮಿಯ ಪ್ರಯತ್ನದಿಂದ1946ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಲಾಯಿತು. ಮಸೈ ಬುಡಕಟ್ಟು ಜನರನ್ನು ಸ್ಥಳಾಂತರ ಮಾಡಿ, 115 ಚದರ ಕಿಮೀ ವ್ಯಾಪ್ತಿಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಎಂದು ಪ್ರಕಟಿಸಲಾಯಿತು.

ಏನೇನಿವೆ ಇಲ್ಲಿ?

ಎಂಬತ್ತಕ್ಕೂ ಹೆಚ್ಚಿನ ಕಾಡುಪ್ರಾಣಿಗಳನ್ನು ಅಸಂಖ್ಯಾತ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಜಿರಾಫೆ, ಕಾಡು ಕೋಣ, ಸಿಂಹ, ಜೀಬ್ರಾ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಹುಲ್ಲುಗಾವಲಿನಲ್ಲಿ ತಲೆ ಎತ್ತಿ ಮರೆಯಾಗುವ ಉಷ್ಟ್ರ ಪಕ್ಷಿ, ಕಪ್ಪು ಘೇಂಡಾಮೃಗ, ಜಿಂಕೆಗಳ ಹಿಂಡು ಸಾಮಾನ್ಯವಾಗಿ ಕಾಣಸಿಗುತ್ತವೆ.

ಆಕಸ್ಮಿಕವಾಗಿ ಬರುವ ಮಳೆ ನಿಮ್ಮನ್ನು ತೊಯ್ದು ತೊಪ್ಪೆ ಮಾಡುವುದು ಸಾಮಾನ್ಯ. ಛತ್ರಿ ಜೊತೆಗಿದ್ದರೆ ಒಳ್ಳೆಯದು.

ಪಾರ್ಕ್‌ ಒಳಗೆ ಪ್ರವೇಶ ಪಡೆದ ತುಸು ಹೊತ್ತಿಗೆ ಎಲ್ಲೆಲ್ಲೂ ಪ್ರಾಣಿಗಳ ಹಿಂಡು ಗಮನ ಸೆಳೆಯುತ್ತದೆ. ಕೈಯಳತೆಯಲ್ಲಿ ಸಿಗುವ ಪ್ರಾಣಿಗಳ ಪೋಟೊ ತೆಗೆಯಲು ವಿಶೇಷ ಸರ್ಕಸ್ ಮಾಡಬೇಕಿಲ್ಲ. ಫ್ರೇಂ ಹೊಂದಿಸಿ ಕ್ಲಿಕ್ ಮಾಡುತ್ತಾ ಹೋದರೆ ಸಾಕು; ಶ್ರಮವಿಲ್ಲದೆ ವನ್ಯಜೀವಿ ಛಾಯಾಗ್ರಾಹಕರಾಗಿ ರೂಪುಗೊಳ್ಳುತ್ತಿರಿ! ಒಂದು ಡಿಜಿಟಲ್ ಕ್ಯಾಮೆರಾ ಮತ್ತು ಉತ್ತಮ ಟೆಲಿಲೆನ್ಸ್ ಜೊತೆಗಿರಬೇಕಷ್ಟೆ!

ಪಾರ್ಕ್‌ನ ಮತ್ತೊಂದು ಆಕರ್ಷಣೆ ಎಂದರೆ ಆನೆಯ ದಂತ ಭಸ್ಮ ಮಾಡಿದ ಜಾಗ. 1989ರಲ್ಲಿ ಅಂದಿನ ಕೀನ್ಯಾ ಅಧ್ಯಕ್ಷರಾಗಿದ್ದ ಡೇನಿಯಲ್ ಅರಪ್ ಮೋಹಿ, ಕಳ್ಳ ಬೇಟೆಗಾರರಿಂದ ವಶಪಡಿಸಿಕೊಂಡ 11 ಟನ್ ಆನೆಯ ದಂತಕ್ಕೆ ಬೆಂಕಿ ಕೊಟ್ಟು, ವನ್ಯಜೀವಿ ಸಂರಕ್ಷಣೆಗೆ ಹೊಸ ಭಾಷ್ಯ ಬರೆಯುತ್ತಾರೆ. ಜಾಗತಿಕವಾಗಿ ಸುದ್ದಿಯಾದ ಈ ಘಟನೆಯ ಸ್ಥಳವನ್ನು ಸ್ಮಾರಕವಾಗಿಸಿದ್ದಾರೆ. ‘ಆನೆಯ ಬೇಟೆ ಮತ್ತು ದಂತದ ಮಾರಾಟವನ್ನು ಕೊನೆಗಾಣಿಸಲು ಜಗತ್ತಿನ ಜನ ಕೀನ್ಯಾದ ಜತೆಗೆ ಇರಿ’ ಎಂಬ ಅಧ್ಯಕ್ಷರ ಸಂದೇಶವನ್ನು ಸ್ಮಾರಕದ ಮೇಲೆ ಪ್ರದರ್ಶಿಸಲಾಗಿದೆ.

ನಾಲ್ಕು ಗಂಟೆಯ ಸುತ್ತಾಟದಲ್ಲಿ ಸಾಕಷ್ಟು ಪ್ರಾಣಿಗಳನ್ನು ನೋಡಿದೆವಾದರು, ಕಾಡಿನ ರಾಜ ಸಿಂಹದ ದರ್ಶನವಾಗಲಿಲ್ಲ. ಸುತ್ತಾಟದ ಅಂತಿಮ ಹಂತದಲ್ಲಿ, ಪ್ರವಾಸಿಗರ ವಾಹನ ಗುಂಪು ಕಟ್ಟಿ ಏನನ್ನೋ ನೋಡುತ್ತಿದ್ದರು. ನಮ್ಮ ವಾಹನ ನಿಲ್ಲಿಸಿ, ನಾವೂ ಕಿಟಕಿಯಿಂದ ಇಣುಕಿದೆವು. ಅನತಿ ದೂರದಲ್ಲಿ ಸಿಂಹವೊಂದರ ಗುಂಪು ವಿಶ್ರಾಂತಿ ಪಡೆಯುತ್ತಿತ್ತು.ಮರಿಗಳು ಹುಲ್ಲಿನ ನಡುವೆ ಚಿನ್ನಾಟ ಆಡುತ್ತಿದ್ದವು. ಜಿರಾಫೆಯೊಂದು ಪಾರ್ಕಿನ ರಸ್ತೆಯಲ್ಲಿ ಗಾಂಭೀರ್ಯದಿಂದ ನಡೆಯುತ್ತಾ, ರಸ್ತೆ ಅಂಚಿನ ಜಾಲಿ ಜಾತಿಯ ಮರದ ತುದಿಯ ಚಿಗುರೆಲೆ ಮೆಲ್ಲುತ್ತಿತ್ತು. ನಾವು ಒಂದಷ್ಟು ಹೊತ್ತು ಅದರ ಹಿಂದೆ ಹೋದಂತೆ, ಅದು ಮುಂದೆ ಮೆಲ್ಲಗೆ ಸಾಗುತ್ತಿತ್ತು. ಕಾರಿನಿಂದ ಇಳಿದ ನಾನು ಕೂಡ ಮೆಲ್ಲಗೆ ಅದರ ಹಿಂದೆ ಕಳ್ಳ ಹೆಜ್ಜೆ ಹಾಕಿದೆ. ಈ ಗಡಿಬಿಡಿಯಲ್ಲಿ ನನ್ನ ಟೆಲಿಲೆನ್ಸ್ ನೆಲಕ್ಕೆ ಬಿದ್ದು ಸದ್ದಾಯಿತು. ಒಮ್ಮೆ ಹಿಂತಿರುಗಿ ನನ್ನೆಡೆಗೆ ಉದ್ದ ಕತ್ತು ಬೀಸಿ ಮತ್ತೆ ಜಿರಾಫೆ ಮುಂದುವರಿಯಿತು. ಈ ನೆನಪಿಗೆಂಬಂತೆ ಒಂದಷ್ಟು ಹಾನಿಗೊಳಗಾದ ನನ್ನ ಟೆಲಿಲೆನ್ಸ್ ಈಗಲೂ ‘ಕುಯ್ಯೋ ಮರ್ರೋ’ ಎನ್ನುತ್ತದೆ.

ಪಾರ್ಕಿನ ಮಧ್ಯಭಾಗದಲ್ಲಿ ವಿಶ್ರಾಂತಿಗೆಂದು ತಂಗುದಾಣವಿದೆ. ಅಲ್ಲೊಂದು ಸಣ್ಣ ಹೋಟೆಲ್ ಹಾಗೂ ಮಾಹಿತಿ ಕೇಂದ್ರವಿದೆ.ಕೆಂಪು, ಹಸಿರು, ನೀಲಿ ಬಣ್ಣದ ಪಟ್ಟಾಪಟ್ಟಿ ಲುಂಗಿ ಥರದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಸೈ ಜನಾಂಗದ ಯುವಕರ ಜೊತೆ ಪೋಟೊ ತೆಗೆಸಿಕೊಳ್ಳಲು ಒಂದಷ್ಟು ಹಣ ಕೊಡುಗೆಯಾಗಿ ನೀಡಬೇಕು. ಕಾಡಿನ ರಕ್ಷಣೆಗೆ ಹಣ ಸಂಗ್ರಹಿಸುವ ಗುಂಪುಗಳು ಪರಿಸರ ಸ್ನೇಹಿ ಚಪ್ಪಲಿ, ಟಿ-ಶರ್ಟ್, ಓಲೆ, ಕೈಕಡಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ.

ನ್ಯಾಷನಲ್ ಪಾರ್ಕಿನ ಭೇಟಿಯ ನಂತರ ಹತ್ತಿರದಲ್ಲೇ ಇರುವ ಮಸೈ ಮಾರ್ಕೆಟ್‌ಗಳಿಗೆ ಹೋಗಿಬರಬಹುದು. ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಸೋರೆ, ಮರದ ಕೆತ್ತನೆ, ಚರ್ಮದ ವಾದ್ಯ ಮೊದಲಾದ ಉತ್ಪನ್ನಗಳ ಶಾಪಿಂಗ್ ಮಾಡಬಹುದು.

ಚಿತ್ರಗಳು: ಲೇಖಕರವು

**

ಕಿನ್ಯಾ ಪ್ರವಾಸ ಹೇಗೆ?

ಬೆಂಗಳೂರಿನಿಂದ ನೈರೋಬಿಗೆ ನೇರ ವಿಮಾನ ಸೇವೆ ಇದೆ. ಇತೆಹಾದ್ ವಿಮಾನ ಅಬುಧಾಬಿ ಮೂಲಕ ನೈರೋಬಿ ತಲುಪುತ್ತದೆ. ಜೂನ್‌ನಿಂದ ಅಕ್ಟೋಬರ್ ಭೇಟಿ ನೀಡಲು ಸೂಕ್ತ ಕಾಲ. ಈ ಸಮಯದಲ್ಲಿ ಪ್ರಾಣಿಗಳ ಚಟುವಟಿಕೆ ಹೆಚ್ಚು. ಹೋಗಿ ಬರಲು ಸರಾಸರಿ ₹35 ಸಾವಿರ ಶುಲ್ಕವಿದೆ.

ನೆನಪಿರಲಿ

ಪಾರ್ಕ್‌ ಪ್ರವೇಶಕ್ಕೆ ಶುಲ್ಕವಿದೆ. ವಯಸ್ಕರಿಗೆ, ವಿದೇಶಿಗರಿಗೆ 43 ಡಾಲರ್. ಮಕ್ಕಳಿಗೆ 22 ಡಾಲರ್ ಕೊಡಬೇಕು. ವಾಹನ ಶುಲ್ಕ ದರ 15 ಡಾಲರ್.

ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿಸಿದ್ದಾರೆ. ಹೊಗೆ ಉಗುಳುವ ಮುನ್ನ ಎಚ್ಚರದಿಂದಿರಿ. ದೊಡ್ಡ ಪ್ರಮಾಣದ ದಂಡ ಕಕ್ಕುವ ಸಂದರ್ಭ ಬರಬಹುದು!

ಇನ್ನೇನು ನೋಡಬಹುದು?

ನೈರೋಬಿ ನಗರಕ್ಕೆ ಭೇಟಿ ನೀಡಿದವರು ನ್ಯಾಷನಲ್ ಪಾರ್ಕ್ ಜತೆಗೆ, ಮಸೈಮಾರ, ವಿಕ್ಟೋರಿಯ ಸರೋವರ, ನಕುರು ಅಭಯಾರಣ್ಯ, ಭೂಮಧೈ ರೇಖೆ, ನೈಲ್ ನದಿಯಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.