ಹೀಥೋರ್ನ್ ಹಳ್ಳಿಯನ್ನು ಯಾವುದೇ ವಾಹನಗಳ ಮೂಲಕ ತಲುಪಲಾಗುವುದಿಲ್ಲ. ನೋಡಲು ನಕ್ಷತ್ರಾಕಾರದಲ್ಲಿರುವ ಈ ಊರು ನೀರಿನ ಕಾಲುವೆಗಳಿಂದ ಆವೃತವಾಗಿದೆ. ಇಟಲಿಯ ವೆನಿಸ್‌ನಲ್ಲಿರುವಂತೆ ಹೀಥೋರ್ನ್‌ನಲ್ಲೂ ಕಾಲುವೆಗಳು ಇರುವುದರಿಂದ ಈ ಹಳ್ಳಿಗೆ ‘ವೆನಿಸ್ ಆಫ್ ನೆದರ್ಲ್ಯಾಂಡ್ಸ್’ ಎಂಬ ಹೆಸರು ಬಂದಿದೆ. ಅಬ್ಬಾ! ಈ ಊರಿನ ಪ್ರವಾಸದ ಅನುಭವ ಅದೆಂತಹ ವೈಶಿಷ್ಟ್ಯಪೂರ್ಣ!
**
ಅದೊಂದು ಪುಟ್ಟ ಹಳ್ಳಿ. ಅಲ್ಲಿನ ಜನಸಂಖ್ಯೆ ಸುಮಾರು ಮೂರು ಸಾವಿರ. ಜನಪ್ರಿಯ ಡಚ್ ಪ್ರವಾಸಿ ತಾಣವಾಗಿರುವ ಆ ಪುಟ್ಟಹಳ್ಳಿಯಲ್ಲಿ ಯಾವುದೇ ವಾಹನಗಳ ಸದ್ದಿಲ್ಲ. ಕಿವಿಗೆ ಇಂಪೆನಿಸುವುದು ದೋಣಿಗಳನ್ನು ಹುಟ್ಟುಹಾಕುವಾಗ ಕೇಳಿ ಬರುವ ನೀರಿನ ಶಬ್ದ, ಕಾಲುವೆಗಳಲ್ಲಿ ವಿಹರಿಸುತ್ತಿರುವ ಬಾತುಕೋಳಿಗಳ ಕಲರವ ಮಾತ್ರ. ಈ ಹಳ್ಳಿಯ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಲು ಪ್ರಪಂಚದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತದೆ.
ಈಶಾನ್ಯ ಡಚ್ ಪ್ರಾಂತ್ಯ ‘ಓವೆರೈಸೆಲ್’ನ ‘ಸ್ಟೀನ್‌ವಿಕ್’ನಿಂದ 5 ಕಿ.ಮೀ. ದೂರದಲ್ಲಿರುವ ‘ಹೀಥೋರ್ನ್’ ತನ್ನದೇ ಆದ ವೈಶಿಷ್ಟ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೋಡಲು ನಕ್ಷತ್ರಾಕಾರದಲ್ಲಿರುವ ‘ಹೀಥೋರ್ನ್’ ಪ್ರದೇಶ, ನೀರಿನ ಕಾಲುವೆಗಳಿಂದ ಆವೃತವಾಗಿದೆ. ಇಟಲಿಯ ವೆನಿಸ್‌ನಲ್ಲಿರುವಂತೆ ಹೀಥೋರ್ನ್‌ನಲ್ಲೂ ಕೆನಾಲ್‌ಗಳು ಇರುವುದರಿಂದ ಈ ಹಳ್ಳಿಯನ್ನು ‘ವೆನಿಸ್ ಆಫ್ ನೆದರ್ಲೆಂಡ್ಸ್’ ಎಂದು ಕರೆಯುತ್ತಾರೆ.
ಪ್ರಾರಂಭದಲ್ಲಿ ಈ ಹಳ್ಳಿಯೊಂದು ದ್ವೀಪವಾಗಿದ್ದು, ಕಾಲುದಾರಿಯನ್ನು ಮಾತ್ರ ಹೊಂದಿತ್ತು. ಜನರು ಹುಲ್ಲಿನ ಮೇಲ್ಚಾವಣಿಯ ಮನೆಗಳನ್ನು ನಿರ್ಮಿಸಿ ವಾಸಿಸತೊಡಗಿದರು. ಸರೋವರದಲ್ಲಿ ಬೆಳೆಯುತ್ತಿದ್ದ ಜೊಂಡುಹುಲ್ಲು ಹಾಗೂ ಪಾಚಿಯ ಕೃಷಿಯನ್ನೇ ಇಲ್ಲಿಯ ಜನರು ಮುಖ್ಯ ಕಸುಬನ್ನಾಗಿಸಿಕೊಂಡಿದ್ದರು. ದೋಣಿಗಳ ಮೂಲಕವೇ ಹಳ್ಳಿಯನ್ನು ಸಂಪರ್ಕಿಸಬೇಕಾಗಿತ್ತು. 1958ರಲ್ಲಿನಡೆದ ‘ಫ್ಯಾನ್ ಫೇರ್’ ಆಂಗ್ಲ ಚಲನಚಿತ್ರದ ಚಿತ್ರೀಕರಣದ ನಂತರ ಈ ಹಳ್ಳಿಯ ಅದೃಷ್ಟ ಬದಲಾಯಿತು. ಸಿನಿಮಾ ಬಿಡುಗಡೆಯಾದ ನಂತರ ಚಿತ್ರವನ್ನು ನೋಡಿದ ಪ್ರೇಕ್ಷಕರು ಹೀಥೋರ್ನ್ ಹಳ್ಳಿಯ ಸೊಬಗಿಗೆ ಮಾರುಹೋಗಿ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಬರತೊಡಗಿದರು.
ಹಳ್ಳಿಯನ್ನು ಮತ್ತಷ್ಟು ಆಕರ್ಷಣೀಯವಾಗಿಸಿ, ಪ್ರವಾಸೋದ್ಯಮ ವನ್ನು ಉತ್ತಮಗೊಳಿಸಲು ಜೊಂಡು ಮತ್ತು ಪಾಚಿಯನ್ನು ತೆಗೆದು ಕಾಲುವೆಗಳನ್ನು ಸ್ವಚ್ಛವಾಗಿಸಿ, ಮರದ ಹಲಗೆಗಳಿಂದ ಸುಂದರವಾದ ಸೇತುವೆಗಳನ್ನು ನಿರ್ಮಿಸಿ ಹೂವಿನ ಕುಂಡಗಳನ್ನು ತೂಗುಬಿಡಲಾಯಿತು. ಇದರಿಂದಾಗಿ ಹೀಥೋರ್ನ್ ಸ್ವರೂಪವೇ ಬದಲಾಗಿ ಹಿಂದಿಗಿಂತಲೂ ಹೆಚ್ಚು ಆಕರ್ಷಣೀಯವಾಗಿ ಕಾಣತೊಡಗಿತು. 1973ರವರೆಗೂ ಪ್ರತ್ಯೇಕ ಪುರಸಭೆಯಾಗಿದ್ದ ಹೀಥೋರ್ನ್, 2001ರಲ್ಲಿ ‘ಸ್ಟೀನ್‌ವಿಕ್’ನೊಂದಿಗೆ ವಿಲೀನಗೊಂಡಿತು.
ಹೀಥೋರ್ನ್ ಹಳ್ಳಿಯನ್ನು ಕಾರು ಅಥವಾ ಇತರ ಯಾವುದೇ ವಾಹನಗಳ ಮೂಲಕ ತಲುಪಲಾಗುವುದಿಲ್ಲ.ವಾಹನಗಳನ್ನು ದೂರದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಬಹುದು. ಪಾರ್ಕಿಂಗ್‌ಗಾಗಿ ಶುಲ್ಕ ಪಾವತಿಸಬೇಕಾಗಿಲ್ಲ. ಪಾರ್ಕಿಂಗ್ ಪ್ರದೇಶದಿಂದ ಕಾಲುದಾರಿಯಲ್ಲಿ ನಡೆದುಕೊಂಡು ಬಂದು ದೋಣಿಯ ಮೂಲಕ ಹಳ್ಳಿಯನ್ನು ಪ್ರವೇಶಿಸಬೇಕು. ನಂತರ ಕಾಲ್ನಡಿಗೆಯ ಮೂಲಕ ಅಥವಾ ಸೈಕ್ಲಿಂಗ್ ಮಾರ್ಗದಲ್ಲಿ ಸುತ್ತುತ್ತಾ ಇಡೀ ಊರನ್ನು ವೀಕ್ಷಿಸಬಹುದು. ಇಲ್ಲಿ ಸುತ್ತಾಡುತ್ತಿರುವಾಗ ಯಾವುದೋ ಚಲನಚಿತ್ರಕ್ಕಾಗಿ ನಿರ್ಮಿಸಲಾಗಿರುವ ಸೆಟ್‌ನಲ್ಲಿ ಸುತ್ತಾಡುತ್ತಿರುವಂತೆ ಭಾಸವಾಗುತ್ತದೆ. ಕಾಲುವೆಗಳ ಪಕ್ಕದಲ್ಲಿರುವ ರೆಸ್ಟೊರೆಂಟ್ ಗಳಲ್ಲಿ ಕುಳಿತು ತಿಂಡಿ ತಿನ್ನುತ್ತಾ, ಕಾಫಿ ಹೀರುತ್ತಾ ಹಳ್ಳಿಯ ಸೊಬಗನ್ನು ಸವಿಯಬಹುದು. ವಿಶಾಲವಾದ ಹುಲ್ಲುಹಾಸಿನ ಮೇಲೆ ಯಾವುದೇ ನಿರ್ಬಂಧವಿಲ್ಲದೆ ಕುಳಿತು ವಿಶ್ರಮಿಸಬಹುದು. ಹಳ್ಳಿಯ ಬಹುತೇಕ ಮನೆಗಳಿಗೆ ಸಂಪರ್ಕವೇರ್ಪಡಿಸುವ ನೀರಿನ ಕಾಲುವೆಗಳಲ್ಲಿ ಪುಟ್ಟ ದೋಣಿಗಳ ಮೂಲಕ ಚಲಿಸುತ್ತಾ, ಊರಿನ ಸೌಂದರ್ಯವನ್ನು ಸವಿಯಬಹುದು.
ದೋಣಿಯ ಮೂಲಕ ಸಾಗುವಾಗ ಕಾಲುವೆಗಳಲ್ಲಿ ವಿಹರಿಸುತ್ತಿರುವ ಬಾತುಕೋಳಿ, ಹಂಸಗಳು ಮನಸ್ಸಿಗೆ ಮುದ ನೀಡುತ್ತವೆ. 18-19ನೇ ಶತಮಾನದಲ್ಲಿ ನಿರ್ಮಿಸಲಾದ ಹುಲ್ಲಿನ ಮೇಲ್ಚಾವಣಿಯ ಮನೆಗಳು, ಅವುಗಳ ಮುಂದೆ ಒಪ್ಪ ಓರಣವಾಗಿ ಜೋಡಿಸಿರುವ ಅರಳಿ ನಿಂತಿರುವ ಹೂಗಳಿರುವ ಹೂವಿನ ಕುಂಡಗಳು ಕಣ್ಮನ ಸೆಳೆಯುತ್ತವೆ. ಸದಾಕಾಲ ಹೂಕುಂಡಗಳಿಂದ ಅಲಂಕೃತಗೊಂಡಿರುವ ಮರದ ಹಲಗೆಗಳಿಂದ ನಿರ್ಮಿಸಲಾಗಿರುವ 176ಕ್ಕಿಂತಲೂ ಅಧಿಕ ಸೇತುವೆಗಳು ಕಣ್ಣುಗಳಿಗೆ ಹಬ್ಬವನ್ನುಂಟುಮಾಡುತ್ತವೆ. ಪ್ರತಿವರ್ಷ ಸುಮಾರು 10 ಲಕ್ಷ ಪ್ರವಾಸಿಗರು ಹೀಥೋರ್ನ್‌ಗೆ ಭೇಟಿ ನೀಡುತ್ತಾರಂತೆ.
ಹೀಥೋರ್ನ್ ಹಳ್ಳಿಯ ಕಾಲುವೆಗಳ ಪಕ್ಕದಲ್ಲಿ ಮೂರು ಮ್ಯೂಸಿಯಂಗಳು, ದೋಣಿಗಳನ್ನು ನಿರ್ಮಿಸುವ ಶಿಪ್‌ಯಾರ್ಡ್ ಹಾಗೂ ಇತಿಹಾಸ ಮತ್ತು ಕೃಷಿ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ವಸ್ತುಸಂಗ್ರಹಾಲಯಗಳೂ ಇವೆ. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಅಭಿರುಚಿಗೆ ತಕ್ಕಂತೆ ಸಂಗ್ರಹಾಲಯಗಳಿಗೆ ಭೇಟಿಯಿತ್ತು ಮಾಹಿತಿ ಪಡೆದುಕೊಳ್ಳುತ್ತಾರೆ.
ಭೇಟಿಗೆ ಉತ್ತಮ ಸಮಯ
ವರ್ಷದ ಯಾವುದೇ ಸಮಯದಲ್ಲಾದರೂ ಹೀಥೋರ್ನ್ ಸುಂದರವಾಗಿ ಕಾಣುತ್ತದೆ. ಅದರಲ್ಲೂ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಉತ್ತಮ ಸಮಯವೆಂದು ಹೇಳಬಹುದು. ಏಪ್ರಿಲ್ ಮೇ ತಿಂಗಳುಗಳಲ್ಲಿ ಹಚ್ಚ ಹಸುರಾಗಿ ಕಾಣುವ ಹೀಥೋರ್ನ್‌ನಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಹಿತವಾದ ವಾತಾವರಣವಿದ್ದು ಗಿಡ, ಮರಗಳು ಬಣ್ಣ ಬಣ್ಣದ ಹೂವುಗಳಿಂದ ತುಂಬಿರುವುದನ್ನು ನೋಡಿ ಆನಂದಿಸಬಹುದು. ಚಳಿಗಾಲದಲ್ಲಿ ಹಿಮಾಚ್ಛಾದಿತವಾಗಿದ್ದು ವಿಶಿಷ್ಟ ಅನುಭವ ನೀಡುತ್ತದೆ. ಒಟ್ಟಾರೆ ಹೇಳುವುದಾದರೆ, ಪ್ರತೀ ಋತುವಿನಲ್ಲೂ ತನ್ನದೇ ಆದ ಸೌಂದರ್ಯದಿಂದ ಪ್ರವಾಸಿಗರಿಗೆ ಮೋಡಿ ಮಾಡುತ್ತದೆ ಈ ಪ್ರದೇಶ. ಡಚ್ ಸಾರ್ವಜನಿಕ ರಜಾ ದಿನಗಳು, ಶಾಲಾ ರಜಾ ದಿನಗಳು ಹಾಗೂ ಭಾನುವಾರಗಳಂದು ಹೆಚ್ಚಿನ ಜನಸಂದಣಿ ಇರುವುದರಿಂದ ಆ ದಿನಗಳಲ್ಲಿ ಹೀಥೋರ್ನ್ ಪ್ರವಾಸದಿಂದ ದೂರ ಉಳಿಯುವುದು ಸೂಕ್ತ.
ತಲುಪುವುದು ಹೇಗೆ?
ನೆದರ್ಲೆಂಡ್ಸ್‌ನ ರಾಜಧಾನಿ ‘ಆಮ್‌ಸ್ಟರ್ ಡ್ಯಾಂ’ನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಹೀಥೋರ್ನ್ ಅನ್ನು ರೈಲು, ಬಸ್ ಹಾಗೂ ಟ್ಯಾಕ್ಸಿಗಳ ಮೂಲಕ ಸುಮಾರು 90 ನಿಮಿಷಗಳ ಅವಧಿಯಲ್ಲಿ ತಲುಪಬಹುದು. ಒಂದು ದಿನದ ‘ಪ್ಯಾಕೇಜ್ ಟೂರ್’ಗಳೂ ಲಭ್ಯ. ಹೀಥೋರ್ನ್ ಹಳ್ಳಿಯ ಸೌಂದರ್ಯವನ್ನು ಒಂದು ದಿನದಲ್ಲಿ ಕಣ್ತುಂಬಿಸಿಕೊಳ್ಳಬಹುದಾದರೂ, ರಾತ್ರಿ ತಂಗಲು ಇಚ್ಛಿಸುವವರಿಗಾಗಿ, ಹಲವು ದರ್ಜೆಯ ಹೋಟೆಲ್‌ಗಳು ಲಭ್ಯವಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.