ಪಾತರಗಿತ್ತಿಗಳ ಲೋಕವೇ ವಿಸ್ಮಯವಾದದ್ದು. ಬಣ್ಣ, ಆಕಾರ, ಹಾರಾಟ ಎಲ್ಲವೂ ಅಂದ–ಚೆಂದ. ಚಿಟ್ಟೆಗಳು ಹೇಗೆ ವಿಭಿನ್ನ ಬಣ್ಣ, ಆಕಾರಗಳಲ್ಲಿ ಕಾಣಿಸಿಕೊಳ್ಳುತ್ತವೋ ಹಾಗೆಯೇ ಅವುಗಳ ಪ್ರಭೇದವೂ ಅಷ್ಟೇ ವೈವಿಧ್ಯಮಯ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಚಿಟ್ಟೆಗಳಿವೆ.
ಅಧ್ಯಯನದ ಪ್ರಕಾರ ಒಟ್ಟು 316 ಪ್ರಭೇದ ಚಿಟ್ಟೆಗಳಿವೆ. ಅದರಲ್ಲಿ ಕುಚ್ಚಪಾದದ ಚಿಟ್ಟೆಗಳ ‘ನಿಂಪ್ಯಾಲಿಡೇ’ ಕುಟುಂಬದ ಪ್ಯಾನ್ಸಿ ಚಿಟ್ಟೆ (pansy butterfly) ಗಳನ್ನು ‘ಹೂವು’ ಚಿಟ್ಟೆಗಳು ಎನ್ನುತ್ತಾರೆ. ‘ಪ್ಯಾನ್ಸಿ ಸುಂದರಿ’ಯರ ಮೇಲಿನ ರೆಕ್ಕೆಗಳ ಮುಂಭಾಗ ಹಾಗೂ ಕೆಳಗಿನ ರೆಕ್ಕೆಗಳ ಹಿಂಭಾಗದಲ್ಲಿ ಕಣ್ಣುಗಳಂತಹ ದೊಡ್ಡ ಉಂಗುರಗಳಿವೆ. ಇವು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಸಹಾಯಕವಾಗಿವೆ.
ರೆಕ್ಕೆಗಳಲ್ಲಿಯ ಬಣ್ಣಗಳಿಂದ ಅವುಗಳಿಗೆ ಆಂಗ್ಲಭಾಷೆಯಲ್ಲಿ ‘ಪ್ಯಾನ್ಸಿ’ಗಳೆಂದು, ಕನ್ನಡದಲ್ಲಿ ‘ಹೂವು’ ಚಿಟ್ಟೆಗಳೆಂದು ಕರೆಯುತ್ತಾರೆ. ‘ನಿಂಪ್ಯಾಲಿಡೇ’ ಕುಟುಂಬದಲ್ಲಿ ಪ್ರಪಂಚದಾದ್ಯಂತ 6 ಸಾವಿರ ಪ್ರಭೇದದ ಚಿಟ್ಟೆಗಳಿದ್ದು, ಭಾರತದಲ್ಲಿ 521 ಪ್ರಭೇದಗಳಿವೆ. ಕರ್ನಾಟಕದಲ್ಲಿ 92 ಪ್ರಭೇದಗಳಿವೆ. ಅದರಲ್ಲಿ ನಿಂಪ್ಯಾಲಿನೇಯ ಪ್ಯಾನ್ಸಿಗಳ ‘ಜುನೊನಿಯಾ’ ಪ್ರಜಾತಿಯ 6 ಹೂವು ಚಿಟ್ಟೆಗಳು ಕಾಣಸಿಗುತ್ತವೆ.
ಹಳದಿ ಹೂವು ಚಿಟ್ಟೆ
ಇದರ ವೈಜ್ಞಾನಿಕ ಹೆಸರು ‘ಜುನೊನಿಯಾ ಹೈರಟಾ’. 45 ಮಿ.ಮೀ ನಿಂದ 60 ಮಿಮೀ ರೆಕ್ಕೆಗಳ ಹರಿವು ಹೊಂದಿವೆ. ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಹೊಳೆವ ಹಳದಿ ಬಣ್ಣದಿಂದ ಕೂಡಿವೆ. ಕೆಳಗಿನ ರೆಕ್ಕೆಗಳಲ್ಲಿ ನೀಲಿ ಬಣ್ಣದ ಕಣ್ಣಿನಂತಿರುವ ಉಂಗುರಗಳಿವೆ. ಅಲ್ಲಲ್ಲಿ ಕಂದು ಬಣ್ಣವಿದ್ದು ಅಂಚು ಬಿಳುಪಾಗಿದೆ.
ನೀಲಿ ಹೂವು ಚಿಟ್ಟೆ
‘ಜುನೊನಿಯಾ ಓರಿಥ್ಯಾ’ ಇದರ ವೈಜ್ಞಾನಿಕ ಹೆಸರು. ಇವುಗಳ ರೆಕ್ಕೆಗಳ ಹರಿವು 45ಮಿ.ಮೀ ನಿಂದ 60 ಮಿ.ಮೀ. ಅಗಲವಾಗಿವೆ. ಮೇಲಿನ ರೆಕ್ಕೆಗಳು ಮಾಸಲು ಬಿಳಿ, ಕಪ್ಪು ಹಾಗೂ ನೀಲಿ ಬಣ್ಣದ ಮಿಶ್ರಣವಾಗಿವೆ. ಚಿಕ್ಕದಾಗಿರುವ ಕಣ್ಣಿನಂತಿರುವ ವೃತ್ತಗಳಿವೆ. ಕೆಳಗಿನ ರೆಕ್ಕೆಗಳು ನೀಲಿ ಬಣ್ಣ, ಅಂಚು ಮಾಸಲು ಬಿಳಿ, ಕೆಂಪು ಬಣ್ಣದ ಉಂಗುರಾಕೃತಿಯ ಕಣ್ಣುಗಳಿವೆ.
ನಿಂಬೆ ಹೂವು ಚಿಟ್ಟೆ
‘ಜುನೊನಿಯಾ ಲೆಮೊನಿಯಸ್’ ವೈಜ್ಞಾನಿಕ ಹೆಸರು. ಲೆಮೊನಿಯಾಸ್ ಗ್ರೀಕ್ ಪದ. ಅದರ ಅರ್ಥ ನಿಂಬೆ. ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಕಂದು ಬಣ್ಣದವು. ಅಲ್ಲಲ್ಲಿ ಬಿಳಿ ಪಟ್ಟೆಗಳಿವೆ. ಮಧ್ಯದಲ್ಲಿ ನೀಲಿ-ಕಪ್ಪು ಬಣ್ಣದ ವೃತ್ತವಿರುವ ಕಿತ್ತಳೆ ಬಣ್ಣದ ಕಣ್ಣುಗಳಂತಿರುವ ಉಂಗುರಗಳಿವೆ. ರೆಕ್ಕೆಗಳು ನೀಲಿ ಹಾಗೂ ಹಳದಿ ಹೂವು ಚಿಟ್ಟೆಯಷ್ಟೇ ಅಗಲವಾಗಿವೆ.
ನವಿಲು ಹೂವು ಚಿಟ್ಟೆ
ವೈಜ್ಞಾನಿಕವಾಗಿ ‘ಜುನೊನಿಯಾ ಅಲ್ಮಾನಾ’ ಎಂದು ಕರೆಯಲಾಗುತ್ತಿದೆ. 60 ರಿಂದ 65 ಮಿ. ಮೀ. ನಷ್ಟು ರೆಕ್ಕೆಗಳು ಅಗಲವಾಗಿವೆ. ಕಿತ್ತಳೆ ಬಣ್ಣದ ಚಿಟ್ಟೆ. ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಕಿತ್ತಳೆ ವರ್ಣದವು. ದೊಡ್ಡದಾಗಿರುವ ಕಣ್ಣುಗಳ ಉಂಗುರಗಳಿವೆ. ನೋಡಲು ಆಕರ್ಷಕವಾಗಿ ಕಾಣುವುದರಿಂದ ಇವುಗಳಿಗೆ ‘ನವಿಲು ಹೂವು’ ಎಂದು ಹೆಸರು ಅನ್ವರ್ಥಕವಾಗಿದೆ.
ಬೂದಿ ಹೂವು ಚಿಟ್ಟೆ
ಈ ವಿಧದ ಚಿಟ್ಟೆಯ ಶಾಸ್ತ್ರೀಯ ಹೆಸರು ‘ಜುನೊನಿಯಾ ಅಟ್ಲೈಟ್ಸ್’. 55 ಮಿ.ಮೀ ನಿಂದ 60 ಮಿ.ಮೀ. ರೆಕ್ಕೆಗಳು ಅಗಲವಾಗಿವೆ. ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಬೂದು ಬಣ್ಣದವು. ಕಪ್ಪು ಗೆರೆಗಳು ಹಾಗೂ ಚಿಕ್ಕ ಉಂಗುರಗಳಿವೆ.
ಕಂದು ಹೂವು ಚಿಟ್ಟೆ
‘ಜುನೊನಿಯಾ ಐಫಿಟಾ’ ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. 55 ರಿಂದ 80 ಮಿಲಿ ಮೀಟರ್ ರೆಕ್ಕೆಗಳ ಹರಿವು. ಇದು ಕಂದು ಬಣ್ಣದ ಚಿಟ್ಟೆಗಳು. ಮೇಲಿನ ಹಾಗೂ ಕೆಳಗಿನ ರೆಕ್ಕೆಗಳು ಚಾಕೋಲೆಟ್ ಕಂದು ಬಣ್ಣದವು. ಸಣ್ಣ ವೃತ್ತದ ರಿಂಗ್‌ಗಳಿವೆ.
ಎಲ್ಲ ಹೂವು ಚಿಟ್ಟೆಗಳು ಕುರುಚಲು ಕಾಡು, ನಿತ್ಯ ಹರಿದ್ವರ್ಣ ಕಾಡು, ಎಲೆ ಉದುರಿಸುವ ಕಾಡು, ನದಿ ಕೆರೆಗಳ ಸನಿಹದಲ್ಲಿ, ಉದ್ಯಾನ, ಸಮತಟ್ಟು ಪ್ರದೇಶ, ಹೊಲ-ಗದ್ದೆಗಳಲ್ಲಿ ಕಾಣಸಿಗುತ್ತವೆ. ಚಿಟ್ಟೆಗಳು ಕಂಬಳಿ ಹುಳು ರೂಪದಲ್ಲಿದ್ದಾಗ ಬಿಳಿ ಗೊರಟಿ, ನೀಲಿ ಗೊರಟಿ, ಹಳದಿ ಗೊರಟಿ, ರುದ್ರ ಗೊರಟಿ, ಗೋಕಣ್ವಕ, ನೆಲಹಿಪ್ಪಲಿ, ಭಂಗೀಸೊಪ್ಪಿನ ಸಸ್ಯಗಳೇ ಅವುಗಳ ಆಹಾರ.
ಗಂಡು ಚಿಟ್ಟೆಗಳು ತಮ್ಮದೇ ಆದ ಆವಾಸ ಸ್ಥಾನವನ್ನು ಆಯ್ಕೆ ಮಾಡಿಕೊಂಡಿರುತ್ತವೆ. ಇಲ್ಲಿಗೆ ಬರುವ ಇತರ ಪ್ರಭೇದದ ಚಿಟ್ಟೆಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲ ಸಮಯ ತೇವಾಂಶಯುಕ್ತ ಮಣ್ಣಿನ ಮೇಲೆ ಕೂಡುವ ಸ್ವಭಾವ ಹೊಂದಿವೆ.
(ಲೇಖಕರು ಚಿಟ್ಟೆ ಅಧ್ಯಯನಕಾರರು)
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.