ಭಾರತವನ್ನು ನಾಗರಿಕತೆಯ ತೊಟ್ಟಿಲು ಎನ್ನುತ್ತಾರೆ. ನಮ್ಮ ನಾಗರಿಕತೆ ಶುರುವಾಗಿದ್ದೇ ಸಿಂಧೂಕೊಳ್ಳದಿಂದ. ಆ ಕೊಳ್ಳದ ಬದಿಯಲ್ಲಿದ್ದ ಪುರಾತನ ಹರಪ್ಪ ಮತ್ತು ಮಹೆಂಜೊದಾರೊ ನಗರಗಳ ಪಳೆಯುಳಿಕೆಯೇ ಪುರಾತನ ನಾಗರಿಕತೆಗೆ ಸಾಕ್ಷಿ. ಈಗ ಮಹೆಂಜೊದಾರೊ ಪಾಕಿಸ್ತಾನದಲ್ಲಿ ಇದೆ. ಹರಪ್ಪ ಭಾರತಕ್ಕೆ ಸೇರಿಕೊಂಡಿದೆ. ಇದನ್ನು ಖಾದಿರ್ ದ್ವೀಪ ಎಂದೂ ಕರೆಯುತ್ತಾರೆ. ಇದು ಗುಜರಾತ್‌ನ ಕಛ್ ಜಿಲ್ಲೆಯ ಧೊಲವಿರ ಎಂಬ ಪ್ರದೇಶದಲ್ಲಿದೆ.
ನಮ್ಮ ಪುರಾತನ ನಾಗರಿಕತೆಯ ನೆಲೆ ವೀಕ್ಷಿಸಲು ನಾಲ್ವರು ಗೆಳೆಯರು ಬೆಂಗಳೂರಿನಿಂದ ಕಾರಿನಲ್ಲಿ ಭುಜ್‌ಗೆ ಹೊರಟೆವು. ಭುಜ್‌ನಿಂದ ಪಠಾಣ್ ಮೂಲಕ ಅದೇಶರ್ ತಲುಪಿದೆವು. ಮುಂದೆ ದೇಶಲ್ಪೇರ್, ಬಲ್ಸರ್, ಲೊಧರಾನಿ ಮೂಲಕ ಧೊಲವಿರ ತಲುಪಬೇಕಿತ್ತು. ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಹಾಕಿ ಹುಡುಕುತ್ತಿದ್ದಾಗ, ನಾವು ಹೋಗುತ್ತಿರುವುದು ದ್ವೀಪದಂತಹ ಪ್ರದೇಶ ಎಂದು ತೋರಿಸುತ್ತಿತ್ತು. ನಾವು ಸಾಗುತ್ತಿದ್ದ ರಸ್ತೆ ಬಿಟ್ಟು ಉಳಿದೆಲ್ಲೆಡೆ ನೀರು ಇರುವಂತೆ ನೀಲಿ ಬಣ್ಣ ತೋರಿಸುತ್ತಿತ್ತು. ಸ್ವಲ್ಪ ಅಚ್ಚರಿಯೊಂದಿಗೆ ಒಂದೆರಡು ಕಿ.ಮೀ ಸಾಗಿದೆವು. ಉದ್ದವಾದ ಟಾರ್ ರಸ್ತೆ ಕಂಡಿತು. ಅಕ್ಕಪಕ್ಕದಲ್ಲಿ ಬಿಳಿ ಕಂಬಳಿ ಹೊದ್ದು ಮಲಗಿದ ಭೂಮಿ. ಎಷ್ಟು ದೂರ ಕಣ್ಣು ಹಾಯಿಸಿದರೂ ಶ್ವೇತ ವರ್ಣದ ನೆಲ ಕಾಣುತ್ತಿತ್ತು. ‘ಅರೆ, ಇಲ್ಲೇಕೆ ಹಿಮರಾಶಿ?’ ಎಂದು ಪ್ರಶ್ನಿಸುತ್ತಾ, ಕಾರಿನಿಂದ ಇಳಿದು ಹತ್ತಿರ ಓಡಿದಾಗ ತಿಳಿದಿದ್ದು, ಅದು ಹಿಮವಲ್ಲ, ಮಾಲಿನ್ಯ ರಹಿತ ಶುದ್ಧ ಬಿಳಿಯ ಉಪ್ಪು ಎಂದು.
ನಾವು ಹೋಗಬೇಕಿದ್ದ ಧೊಲವಿರದ ‘ರಣ್ ಆಫ್ ಕಚ್’ ಸಮೀಪ ಇಂಥ ಉಪ್ಪಿನ ಮರುಭೂಮಿ ಇದೆ ಎಂದು ತಿಳಿದಿದ್ದೆವು. ಆದರೆ ಅದಕ್ಕೆ ಮುನ್ನವೇ ಸಿಕ್ಕಿದ್ದು ನಮಗೆ ಅಚ್ಚರಿ ಮೂಡಿಸಿತು. ಸ್ಥಳದ ಬಗ್ಗೆ ಮಾಹಿತಿ ಹುಡುಕಿದಾಗ ಗೊತ್ತಾಗಿದ್ದು, ನಾವಿದ್ದ ಜಾಗ ರಣ್ ಆಫ್ ಕಚ್‌ನ ಮುಂದುವರಿದ ಭಾಗ ಎಂದು. ಅಲ್ಲಿ, ಸುಮಾರು 30 ಸಾವಿರ ಚದರ ಕಿ.ಮೀ ವಿಸ್ತೀರ್ಣದಲ್ಲಿ ಈ ಉಪ್ಪಿನ ಮರುಭೂಮಿ ಇದೆ. ‘ಇಲ್ಲಿಂದ 25 ಕಿ.ಮೀ ಮುಂದೆ ಹೋದರೆ ಪಾಕಿಸ್ತಾನ ಗಡಿ ಸಿಗುತ್ತದೆ’ ಎಂದು ಸ್ಥಳೀಯರು ಹೇಳಿದಾಗಲಂತೂ, ನಮ್ಮೊಳಗಿನ ಅಚ್ಚರಿ ಇನ್ನಷ್ಟು ಹೆಚ್ಚಾಯಿತು. ಈ ತಾಣಗಳನ್ನು ನೋಡಿಕೊಂಡು ರಾತ್ರಿ 7ರ ಹೊತ್ತಿಗೆ ಧೊಲವಿರ ತಲುಪಿದೆವು. ನಮ್ಮ ಬಳಿಯಿದ್ದ ಟೆಂಟ್ ಬಿಚ್ಚಿ, ಅಲ್ಲೇ ಇದ್ದ ಹೆಲಿಪ್ಯಾಡ್ ಮೇಲೆ ಟೆಂಟ್ ಹಾಕಿ, ಅಡಿಗೆ ಮಾಡಿ, ಉಂಡು ಮಲಗಿದೆವು. ಬೆಳಿಗ್ಗೆ ಎದ್ದು ನೋಡಿದಾಗಲೇ ಗೊತ್ತಾಗಿದ್ದು, ನಾವು ಮಲಗಿರುವುದು ಕುರುಚಲು ಕಾಡಿನ ಬಟಾ ಬಯಲಿನಲ್ಲಿ ಎಂದು.
ಖಾದಿರ್ ದ್ವೀಪದಲ್ಲಿ...
ಮುಂದೆ, ಐದು ಸಾವಿರ ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳನ್ನು ಅರಿಯಲು ಗೈಡ್ ಮೊರೆ ಹೋದೆವು. ಆತ ನಮ್ಮನ್ನು ಖಾದಿರ್ ದ್ವೀಪಕ್ಕೆ ಕರೆದೊಯ್ದ. ಆ ಸ್ಥಳವನ್ನು ಪ್ರವೇಶಿಸುತ್ತಿದ್ದಂತೆ ಮೊದಲಿಗೆ ದೊಡ್ಡದಾದ ಬಾವಿ ಸಿಕ್ಕಿತು. ಅಲ್ಲಿಂದ ಮೇಲಕ್ಕೆ ಹತ್ತಿ ಹೋಗುತ್ತಿದ್ದಂತೆ ಪುರಾತನ ನಗರಗಳ ಪಳೆಯುಳಿಕೆಗಳು ತೆರೆದುಕೊಳ್ಳುತ್ತಾ ಹೋದವು.
ಇದು ಸುಮಾರು 54 ಎಕರೆಗಳಷ್ಟು ಹರಡಿಕೊಂಡ ನಗರದ ಪಳೆಯುಳಿಕೆ ಇರುವ ಜಾಗ. ಆಗ ಮೂರು ಹಂತಗಳಲ್ಲಿ ನಗರ ರೂಪುಗೊಂಡಿದೆ. ಒಂದು ಮೇಲ್ವರ್ಗದ್ದು, ಮಧ್ಯಮ ಮತ್ತು ಕೆಳಸ್ತರದ ಜನರು ಇರುವಂತಹ ವಿಭಾಗಗಳಾಗಿ ನಗರವನ್ನು ರಚಿಸಲಾಗಿದೆ. ಮೊದಲ ಹಾಗೂ ಎರಡನೆಯ ವಿಭಾಗವನ್ನು ವಿಶೇಷ ರೀತಿಯಲ್ಲಿ ನಿರ್ಮಾಣವಾಗಿದೆ. ದೊಡ್ಡ ಬಾಗಿಲುಗಳು, ದೊಡ್ಡ ರಸ್ತೆಗಳು, ಭಾವಿಗಳು, ವಿಶಾಲವಾದ ಜಾಗಗಳು, ಉತ್ತಮವಾದ ಕಲ್ಲುಗಳನ್ನು ಬಳಸಿ, ಗಾರೆ ಮಾಡಿ ಮನೆಗಳನ್ನು ಕಟ್ಟಲಾಗಿದೆ. ಸುಸಜ್ಜಿತ ಜಗಲಿಗಳು, ಅಳತೆಕೊರೆದು ಕಟ್ಟಿರುವ ಮನೆಗಳ ಸಾಲು. ಮನೆಯ ನೀರು ಹೋಗಲು ಅನುಕೂಲವಾಗುವ ಒಳಚರಂಡಿ ವ್ಯವಸ್ಥೆ, ಮಳೆಯ ನೀರು ಹರಿದು ಹೊಂಡ ಸೇರಲು ರಚಿಸಿರುವ ಮೋರಿ, ಎಲ್ಲವೂ ಅದ್ಭುತ ಎನ್ನಿಸುತ್ತದೆ.
ಇಲ್ಲಿ ಲೋಹ ಮತ್ತು ಕಲ್ಲಿನ ಮುದ್ರಿಕೆಗಳು ಸಿಕ್ಕಿದ್ದು ಅದನ್ನು ಮಹೆಂಜೊದಾರೊ ಮತ್ತು ಇತರ ನಾಗರಿಕತೆಯ ಜನರೊಂದಿಗೆ ಆಡಳಿತಾತ್ಮಕ ಸಂಪರ್ಕಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲಿ ದೊರೆತಿರುವ ಕೆಲವು ಅಕ್ಷರಗಳನ್ನು ಗಮನಿಸಿದರೆ, ಅವರು ಸಾಂಕೇತಿಕ ಭಾಷೆ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ.
ಪ್ರಾಣಿಯ ಮೂಳೆ, ಬೆಳ್ಳಿ, ಟೆರಕೋಟದಂತಹ ಆಧುನಿಕ ಮಾದರಿಯ ಮಣ್ಣಿನಿಂದ ತಯಾರಿಸಿದ ಬಳೆಗಳು, ಕಿವಿ ಓಲೆಗಳು, ಒಡವೆಗಳು, ಹೂಜಿಗಳು ಅಲ್ಲಿವೆ. ಇಲ್ಲಿ ಆಗಾಗ್ಗೆ ಉತ್ಖನನಗಳು ನಡೆದಿವೆ. ಉತ್ಖನನವನ್ನು ಎಷ್ಟು ನಾಜೂಕಾಗಿ ಮಾಡಿದ್ದಾರೆಂದರೆ, ಜೋಡಿಸಿರುವ ಇಟ್ಟಿಗೆ, ಕಲ್ಲುಗಳು ಕದಲದ ರೀತಿಯಲ್ಲಿ ಮಾಡಿದ್ದಾರೆ. ಕೆಲವನ್ನು ಮರು ಜೋಡಿಸಿದ್ದಾರೆ. ಒಮ್ಮೆ ಹಂಪಿಯಲ್ಲಿರುವ ವಿಜಯನಗರ ಸಂಸ್ಥಾನದ ಪಳೆಯುಳಿಕೆಯನ್ನು ನೆನಪಿಸಿ ಕೊಂಡರೆ, ಈ ತಾಣ ಹೇಗಿರಬಹುದೆಂದು ಅಂದಾಜಾಗುತ್ತದೆ.
ಇಷ್ಟೆಲ್ಲ ಚಂದವಾಗಿ ಬಾಳಿ ಬದುಕಿದ ಸಮುದಾಯ ಇಲ್ಲಿಂದ ಎಲ್ಲಿಗೆ ಹೋದರು? ಇಡೀ ನಾಗರಿಕತೆ ಹೇಗೆ ಅಂತ್ಯವಾಯಿತು ಎಂಬ ವಿಚಾರ ಅಲ್ಲಿಂದ ಬರುವಾಗ ನಮ್ಮೆಲ್ಲರ ತಲೆಯಲ್ಲಿ ಹೊಕ್ಕಿಬಿಟ್ಟಿತು.
ಹೋಗುವುದು ಹೇಗೆ?
ಗುಜರಾತ್‌ನ ರಣತಂಬೋರ್‌ನಿಂದ 165 ಕಿಮಿ ದೂರದಲ್ಲಿ ಧೊಲವಿರವಿದೆ. ಭುಜ್‌ನಿಂದ 211 ಕಿಮೀ ದೂರದಲ್ಲಿದೆ ಖಾದಿರ್ ದ್ವೀಪ.
ಬೆಂಗಳೂರಿನಿಂದ ಭುಜ್‌ಗೆ ನೇರ ವಿಮಾನ ಸೌಲಭ್ಯವಿದೆ. ಆದರೆ ತುಂಬಾ ಕಡಿಮೆ. ಅಹ್ಮದಾಬಾದ್‌ವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರೈಲು ಅಥವಾ ಬಸ್‌ನಲ್ಲಿ ಭುಜ್‌ಗೆ ಬರಬಹುದು. ದೇಶದ ಎಲ್ಲ ಕಡೆಗಳಿಂದ ಭುಜ್‌ಗೆ ರೈಲಿನ ವ್ಯವಸ್ಥೆ ಇದೆ. ಇಲ್ಲಿಂದ ಹರಪ್ಪ ಮತ್ತು ಫಾಸಿಲ್ ಪಾರ್ಕ್‌ಗೆ ಹೋಗಲು ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕು.
ವಸತಿ – ಊಟ: ಡೊಲೇವಾರದ ಆಸುಪಾಸಿನಲ್ಲಿ ಟೆಂಟ್ ಸಿಟಿಯಂತಹ ರೆಸಾರ್ಟ್‌ಗಳಿವೆ. ಇವೇ ವಾಸ್ತವ್ಯಕ್ಕೆ ಅನುಕೂಲವಾದ ತಾಣಗಳು. ಇವುಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಇಲ್ಲಿನ ಸುತ್ತಲಿನ ತಾಣ ವೀಕ್ಷಣೆಗೆ ಗೈಡ್‌ಗಳೂ ಅಲ್ಲೇ ಸಿಗುತ್ತಾರೆ.
ಸೂಕ್ತ ಸಮಯ: ಈ ಎಲ್ಲ ತಾಣಗಳನ್ನು ಭೇಟಿ ಮಾಡಲು ಸೆಪ್ಟೆಂಬರ್‌ನಿಂದ ಫೆಬ್ರುವರಿವರೆಗೆ ಸೂಕ್ತ ಸಮಯ. ಉಳಿದ ತಿಂಗಳುಗಳಲ್ಲಿ ವಿಪರೀತ ಬಿಸಿಲು.
ಫಾಸಿಲ್ ಪಾರ್ಕ್
ಧೊಲವಿರ ಹರಪ್ಪ ಜಾಗದಿಂದ 8 ರಿಂದ10 ಕಿಲೊಮೀಟರ್ ದೂರದಲ್ಲಿರುವ ಮತ್ತೊಂದು ಅದ್ಭುತ ತಾಣ. ‘ಫಾಸಿಲ್ ಪಾರ್ಕ್’ ಇದು. ಇದನ್ನು ಮರಶಿಲೆಯ ಉದ್ಯಾನ ಎನ್ನುತ್ತಾರೆ. ಪ್ರಾಣಿಶಾಸ್ತ್ರ ಮತ್ತು ಭೌಗೋಳಿಕಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಕೌತುಕದ ಜಾಗ. ಇಲ್ಲಿ ನೋಡಿದ್ದೆಲ್ಲವೂ ಮುಗಿದ ಮೇಲೆ, ನಮ್ಮ ಪಯಣ ಫಾಸಿಲ್ ಪಾರ್ಕ್‌ನತ್ತ ಸಾಗಿತು. ಆ ಫಾಸಿಲ್ ಪಾರ್ಕ್, ನಮ್ಮನ್ನು ‘ಜುರಾಸಿಕ್ ಯುಗ’ ಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಮರವು ಶಿಲೆಯಾಗಿ ಪರಿವರ್ತನೆಯಾಗಿರುವ ಶಿಲಾ ಪದರದ ಹೆಬ್ಬಂಡೆಗಳು ಇಲ್ಲಿ ಕಾಣಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.