ADVERTISEMENT

ಸುತ್ತಾಟಕ್ಕಿರಲಿ ಸಿದ್ಧತೆ

ರಾಧಿಕ ಎನ್‌.ಆರ್.
Published 13 ಮಾರ್ಚ್ 2019, 19:45 IST
Last Updated 13 ಮಾರ್ಚ್ 2019, 19:45 IST
trip
trip   

ಸ್ಥಳಗಳ ಆಯ್ಕೆ

ಮಿತವಾದ ವೆಚ್ಚದಲ್ಲಿ ಪ್ರವಾಸ ಕೈಗೊಳ್ಳಲು ಮೊದಲಿಗೆ ಸ್ಥಳಗಳ ಆಯ್ಕೆ ಕಡೆ ಗಮನವಹಿಸಬೇಕು. ಉದಾಹರಣೆಗೆ; ಬೇಸಿಗೆಯಲ್ಲಿ ತಂಪಾದ ತಾಣ ಆಯ್ಕೆ ಮಾಡಿಕೊಳ್ಳುತ್ತೇವೆ. ಬಹುತೇಕ ಪ್ರವಾಸಿಗರೂ ಇದೇ ದಾರಿ ಹಿಡಿಯುವುದರಿಂದ, ಆ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ವಿಪರೀತ. ಲಾಡ್ಜ್‌, ಹೋಟೆಲ್, ಪ್ರಯಾಣದ ದರಗಳು ಗಗನದತ್ತ ಮುಖ ಮಾಡಿರುತ್ತವೆ. ಹೀಗಾಗಿ ಚಳಿ ಮುಗಿಯುವ, ಬೇಸಿಗೆ ಆರಂಭದ ನಡುವೆ ಅಂಥ ತಾಣಗಳಿಗೆ ಭೇಟಿ ನೀಡಬಹುದು. ಉದಾಹರಣೆಗೆ ಕೊಡಗು, ಊಟಿ, ಮನಾಲಿ, ಋಷಿಕೇಶ, ಶಿಮ್ಲಾದಂತಹ ಪ್ರವಾಸಿ ತಾಣಗಳಿಗೆ ಸೀಸನ್ ಆರಂಭಕ್ಕೂ ಕೊಂಚ ಮುನ್ನವೂ ಭೇಟಿ ನೀಡಬಹುದು. ಆಗಲೂ ಅಲ್ಲಿನ ವಾತಾವರಣ ಹಿತಕರವಾಗಿಯೇ ಇರುವುದರಿಂದ ಸೀಸನ್‌ಗಾಗಿ ಕಾಯಬೇಕೆಂದಿಲ್ಲ.

ಲೆಕ್ಕಾಚಾರದ ಖರ್ಚಿಗೆ ಆದ್ಯತೆ

ADVERTISEMENT

ಪ್ರತಿನಿತ್ಯ ಖರ್ಚಿನ ಲೆಕ್ಕ ಬರೆಯುವುದರಿಂದ ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಯುತ್ತದೆ. ಅವುಗಳಲ್ಲಿ ನಮ್ಮ ಅವಶ್ಯಕತೆಗಳೇನಿದ್ದವು ಮತ್ತು ಕೇವಲ ಇಷ್ಟ ಎನ್ನುವುದಕ್ಕಾಗಿ ಯಾವುದಕ್ಕೆಲ್ಲಾ ಹಣ ವೆಚ್ಚ ಮಾಡಿದ್ದೇವೆ ಎಂದು ಗುರುತು ಹಾಕಿಕೊಳ್ಳಬೇಕು. ನಂತರ ಇಷ್ಟಗಳು ನಿಜಕ್ಕೂ ನಮ್ಮ ಅವಶ್ಯಕತೆಗಳೇ ಎಂದು ನಿರ್ಧರಿಸಿ, ನಿರ್ದಾಕ್ಷಿಣ್ಯವಾಗಿ ಬೇಡದ ಖರ್ಚುಗಳಿಗೆ ಕಡಿವಾಣ ಹಾಕಲು ಶುರು ಮಾಡಬೇಕು.

ಬಹುಮುಖ್ಯವಾಗಿ ಪ್ರವಾಸಿ ತಾಣಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಬೇಕು. ಏಕೆಂದರೆ, ಎಲ್ಲ ಪ್ರವಾಸಿ ತಾಣಗಳಲ್ಲಿ ಸಿಗುವ ವಸ್ತುಗಳು ನಮ್ಮೂರಿನ ಮಾರುಕಟ್ಟೆಯಲ್ಲೂ ಸಿಗುತ್ತವೆ.

ಪ್ರವಾಸದಲ್ಲಿ ಐಷಾರಾಮ ಬೇಡ

ಪ್ರವಾಸಿ ತಾಣಗಳನ್ನು ಸುತ್ತಾಡಲು ಕಡಿಮೆ ವೆಚ್ಚದ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳಿ. ಮೊದಲು ನಡಿಗೆಯೊಂದಿಗೆ ಸುತ್ತಾಟಕ್ಕೆ ಆದ್ಯತೆ ನೀಡಿ. ಇದು ದೇಹಕ್ಕೆ ವ್ಯಾಯಾಮ ನೀಡುತ್ತದೆ. ಜೇಬಿಗೂ ಒಳ್ಳೆಯದು. ಹವಾ ನಿಯಂತ್ರಿತ ಬಸ್ ಬದಲಿಗೆ ಮಾಮೂಲಿ ಬಸ್‌ಗಳಲ್ಲಿ ಸುತ್ತಾಡಿ. ಸೈಕಲ್ ವ್ಯವಸ್ಥೆ ಇದ್ದರೆ, ಅದನ್ನೇ ಆಯ್ಕೆ ಮಾಡಿಕೊಳ್ಳಿ. ನಡಿಗೆ, ಸೈಕಲ್ ಬಳಕೆಯಿಂದ, ಆಯಾ ಪ್ರದೇಶಗಳಲ್ಲಿರುವ ಸ್ಥಳೀಯರ ಜತೆ ಬೆರೆಯಬಹುದು. ಅಲ್ಲಿನ ವಿಶೇಷ ತಾಣಗಳ ಬಗ್ಗೆಯೂ ತಿಳಿಯಬಹುದು.

ಕೈಯಲ್ಲಿ ಆಂಡ್ರಾಯ್ಡ್‌ ಮೊಬೈಲ್‌ ಫೋನ್ ಇದ್ದು, ಇಂಟರ್‌ನೆಟ್‌ ಇದ್ದರೆ, ಬಹುತೇಕ ಗೈಡ್‌ ರೀತಿಯಲ್ಲೇ ನೆರವಾಗುತ್ತದೆ. ಸರಳ ವಾಸ್ತವ್ಯಕ್ಕೆ ಹಲವು ದಾರಿಗಳಿವೆ. ಪ್ರವಾಸಕ್ಕೆ ಮುನ್ನವೇ ಅಂಥ ವಾಸ್ತವ್ಯದ ವಿಳಾಸ ನೀಡುವ ಮೊಬೈಲ್ ಅಪ್ಲಿಕೇಷನ್‌ಗಳಿವೆ. ಗೂಗಲ್‌ನಲ್ಲಿ ಜಾಲಾಡಿದರೆ, ನಿಮ್ಮ ಜೇಬಿನಲ್ಲಿರುವ ಹಣಕ್ಕೆ ತಕ್ಕಂತೆ ಹೊಂದುವ ವಸತಿ ಗೃಹಗಳು ಲಭ್ಯವಿವೆ.

ದುಬಾರಿ ಹವ್ಯಾಸಕ್ಕೆ ಟಾಟಾ

ಪ್ರವಾಸ ಹೋಗುವುದೇ ಖುಷಿ, ಸಂಭ್ರಮ, ವಿಹಾರಕ್ಕಾಗಿ. ಆದರೆ, ಅದಕ್ಕಾಗಿ ಹಣ ವ್ಯಯಿಸಬೇಕೆಂದಿಲ್ಲ. ಸಾಮಾನ್ಯವಾಗಿ ಪ್ರವಾಸದ ವೇಳೆ ಗೊತ್ತಾಗದಂತೆ ಹಣ ಖರ್ಚಾಗುವುದು ಡೆಬಿಟ್/ಕಾರ್ಡ್ ಕ್ರೆಡಿಟ್ ಕಾರ್ಡ್ ಸ್ವೈಪ್‌ ಮಾಡುವುದರಿಂದ. ಅದಕ್ಕೆ ಕಡಿವಾಣ ಹಾಕಬಹುದು. ಜೇಬಿನಿಂದ ಹಣ ತೆಗೆದು ಎಣಿಸಿ ಕೊಡುವ ಅಭ್ಯಾಸ ಮಾಡಿಕೊಂಡರೆ ಖರ್ಚಿಗೆ ಲೆಕ್ಕ ಸಿಕ್ಕುತ್ತದೆ. ಇದೂ ಕೂಡ ಪ್ರವಾಸದಲ್ಲಿ ಖರ್ಚು ಉಳಿಸುವ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.