ಬೆಂಗಳೂರಿನ ಬಿಸಿಲಿನ ತಾಪದಿಂದ ಸ್ವಲ್ಪ ದಿನ ತಪ್ಪಿಸಿಕೊಂಡು ಎಲ್ಲಾದರೂ ಸುತ್ತಿ ಬರೋಣವೆಂದು ನಿಶ್ಚಯಿಸಿ ಕಳೆದ ವಾರ ಕೇರಳದ ವಯನಾಡ್‌ಗೆ ಹೋಗಿಬಂದೆವು.
ಮೈಸೂರು ಮಾರ್ಗವಾಗಿ ಹೊರಟು ಬಂಡೀಪುರ ದಾಟಿ ವಯನಾಡಿನ ಪ್ರಕೃತಿ ಸೌಂದರ್ಯವನ್ನು ಕಣ್ಣಿನಲ್ಲೇ ಆಸ್ವಾದಿಸುತ್ತಾ ನಂತರ ಮತ್ತೊಂದು ರಮಣೀಯವಾದ ಸ್ಥಳವಾದ ಮುನ್ನಾರ್ ತಲುಪಿದೆವು.
ಮಾರ್ಗಮಧ್ಯದಲ್ಲಿ ಆಗ ತಾನೇ ಕ್ರಾಪ್ ಕಟ್ ಮಾಡಿಸಿಕೊಂಡ ಬಾಲಕರು ಸಾಲಾಗಿ ನಿಂತಂತೆ ಕಂಡ ಚಹಾ ತೋಟಗಳನ್ನು ಕಂಡು ಆನಂದಿತರಾದೆವು. ಮಾರನೆಯ ದಿನ ಕೇರಳದ ಅತಿ ಎತ್ತರದ ಸ್ಥಳವಾದ ‘ರಾಜಮಲೈ’ಗೆ ಹೋಗೋಣ ಎಂದು ನಮ್ಮ ಮ್ಯಾನೇಜರ್ ಹೇಳಿದರು.
ಕೇರಳದ ಪ್ರಸಿದ್ಧ ಉಪಹಾರವಾದ ಪುಟ್ಟು ಮತ್ತು ಆಪ್ಪಂ ಗಳನ್ನು ಚಪ್ಪರಿಸುತ್ತಾ ರಾಜಮಲೈಗೆ ತೆರಳಿದೆವು.
ರಾಜಮಲೈ ಇಡುಕ್ಕಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ವರೆಗೆ ನಮ್ಮ ವಾಹನದಲ್ಲಿ ಹೋದೆವು. ಅಲ್ಲಿಂದ ಕೇರಳ ಸರ್ಕಾರದ ವ್ಯಾನ್‌ನಲ್ಲಿ ‘ಎರಾವಿಕುಲಮ್ ರಾಷ್ಟ್ರೋದ್ಯಾನ’ದವರೆಗೆ ಇಕ್ಕೆಲಗಳಲ್ಲೂ ವನಸಿರಿಯ ಸೊಬಗನ್ನು ಸವಿಯುತ್ತಾ ಸಾಗಿದೆವು.
ಅತೀವ ತಪಾಸಣೆಯ ನಂತರ ನಮಗೆ ಒಳ ಹೋಗಲು ಅವಕಾಶ ದೊರೆಯಿತು. ಅಲ್ಲಿಂದ ಸುಮಾರು ಒಂದೂವರೆ ಕಿಮೀ ಏರುದಾರಿಯಲ್ಲಿ ಏದುಬ್ಬುಸ ಬಿಡುತ್ತಾ ಮೇಲೆ ಹೋದಾಗ ಅಲ್ಲಿನ ಪ್ರಕೃತಿಯ ನಯನ ಮನೋಹರ ದೃಶ್ಯಗಳನ್ನು ನೋಡಿದ ಮೇಲೆ ನಮಗಾದ ಸುಸ್ತು ಹಾಗೆ ಮಾಯವಾಯ್ತು. ಎರಾವಿಕುಲಮ್ ನ್ಯಾಷನಲ್ ಪಾರ್ಕ್ ಸುಮಾರು 97 ಚದರ ಕಿಲೋಮೀಟರ್ ಸುತ್ತಳತೆ ಹೊಂದಿದೆ. ಅದರಲ್ಲಿ ಅಪರೂಪದ ಪ್ರಾಣಿ ಪಕ್ಷಿಗಳ ದೊಡ್ಡ ಸಂಕುಲವೇ ಇದೆ. ಮುಖ್ಯವಾಗಿ ವಿನಾಶದ ಅಂಚಿನಲ್ಲಿರುವ 'ನೀಲಗಿರಿ ತಾರ್' ಎನ್ನುವ ಸ್ವಲ್ಪ ಆಡು-ಮೇಕೆಯನ್ನೇ ಹೋಲುವ ವಿಶಿಷ್ಠವಾದ ಪ್ರಾಣಿ. ಇದನ್ನು ಉಳಿಸುವ ಉದ್ದೇಶದೊಂದಿಗೆ 1978 ರಲ್ಲಿ ಈ ಜಾಗವನ್ನು ನ್ಯಾಷನಲ್ ಪಾರ್ಕ್ ಎಂದು ಘೋಷಿಸಿಲಾಗಿದೆ.
ವರ್ಷದಲ್ಲಿ ಮೂರು ತಿಂಗಳು ಪ್ರವಾಸಿಗರಿಗೆ ಈ ಪಾರ್ಕ್ ಪ್ರವೇಶಕ್ಕೆ ನಿರ್ಬಂಧ ಹಾಕಿ, ಈ ವಿಶೇಷ ಪ್ರಾಣಿಯ ಸಂತಾನ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. ಇದಲ್ಲದೆ, ಹನ್ನೆರಡು ವರ್ಷಗಳಿಗೊಮ್ಮೆ ಹೂ ಬಿಡುವ ‘ನೀಲ ಕುರುಂಜಿ’ ಹೂವಿನ ಗಿಡಗಳನ್ನು ಇಲ್ಲಿ ಕಾಣಬಹುದು. ಕಳೆದ ವರ್ಷ ಕುರುಂಜಿ ಹೂವು ಬಿಟ್ಟಿತಂತೆ.
ಪಾರ್ಕ್ ವಾತಾವರಣ, ಅಲ್ಲಿಂದ ಹೊರಡಲು ಮನಸ್ಸಾಗದಂತೆ, ನಮ್ಮನ್ನು ಹಿಡಿದಿಟ್ಟುಕೊಂಡಿತು. ಉದ್ಯಾನ ಬಿಟ್ಟು ಹೊರಟವರು, ಹತ್ತೇ ನಿಮಿಷಗಳಲ್ಲಿ ಕೆಳಗಿಳಿದು ಬಂದು ಮತ್ತೊಂದು ಬಾರಿ ಇಲ್ಲಿಗೆ ಖಂಡಿತವಾಗಿ ಬರಬೇಕೆಂದು ಸಂಕಲ್ಪಿಸಿ ಅಲೆಪ್ಪಿ ಕಡೆಗೆ ಪ್ರಯಾಣ ಬೆಳೆಸಿದೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.