ರಷ್ಯಾ ಎಂದರೆ 50 ವರ್ಷಗಳ ಹಿಂದೆ ಹೊಳಪಿನ ದಪ್ಪ ಕಾಗದದಲ್ಲಿ ಸುಂದರವಾಗಿ ಮುದ್ರಣವಾಗಿ ಪ್ರಕಟವಾಗುತ್ತಿದ್ದ ಸೋವಿಯತ್ ಲ್ಯಾಂಡ್ ಮ್ಯಾಗಝೀನ್, ಕ್ಯಾಲೆಂಡರ್‌ಗಳು ನೆನಪಾಗುತ್ತವೆ. ಇವು ಬಾಲ್ಯದ ಆಕರ್ಷಣೆಗಳು. ಅವು ನಮ್ಮ ಶಾಲಾ ಪುಸ್ತಕಗಳಿಗೆ ರಟ್ಟು ಹಾಕಲು ಹೇಳಿ ಮಾಡಿಸಿದಂತೆ ಇತ್ತು. ಅದೇ ನಮ್ಮ ಆಕರ್ಷಣೆಗೆ ಕಾರಣ. ಜತೆಗೆ, ಅದರಲ್ಲಿ ಅಚ್ಚಾಗುತ್ತಿದ್ದ ಹಾಲಿನಂತಹ ಮೈಬಣ್ಣದ ಮುದ್ದು ಮುದ್ದಾದ ಮಕ್ಕಳ ಚಿತ್ರ, ತಾಮ್ರವರ್ಣದ ತಲೆಗೂದಲಿನ ಯುವಕ ಯುವತಿಯರ ಫೋಟೊಗಳು ಮೋಡಿ ಮಾಡಿದ್ದವು. ಅವುಗಳನ್ನು ನೋಡುತ್ತಾ ನಮಗೂ ಇಂಥಾ ಮೈಕಟ್ಟು, ಮೈಮಾಟ ಇದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಮನಸ್ಸಿನಲ್ಲೇ ಮಂಡಿಗೆ ಸವಿಯುತ್ತಿದ್ದೆವು!
ಇಂಥಾ ಬಾಲ್ಯದ ಸವಿ ನೆನಪುಗಳ ಗಣಿಯಾದ ರಷ್ಯಾ ಪ್ರವಾಸಕ್ಕೆ ಹೋಗಲು ಅನಾಯಾಸ ಅವಕಾಶವೊಂದು ನಮಗೆ ಒದಗಿ ಬಂತು. ಸಾವಯವ ಕೃಷಿಕ, ನಾಡೋಜ ದಿವಂಗತ ಎಲ್. ನಾರಾಯಣ ರೆಡ್ಡಿ ಅವರ ಬಗ್ಗೆ ನಾವು ನಿರ್ಮಿಸಿರುವ
‘ಸರಳ -ವಿರಳ’ಸಾಕ್ಷ್ಯಚಿತ್ರ ರಷ್ಯಾದ ಹೀರೊ ಅಂಡ್ ಟೈಮ್ಸ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಆ ಚಿತ್ರೋತ್ಸವ ಸಮಿತಿಯವರು ನಮ್ಮನ್ನು ಅತಿಥಿಗಳಾಗಿ ಆಹ್ವಾನಿಸಿದ್ದರು. ಹೀಗಾಗಿ ಈ ಚಿತ್ರೋತ್ಸವದ ಜೊತೆಗೆ ರಷ್ಯಾ ಪ್ರವಾಸವನ್ನೂ ಸಂಯೋಜಿಸಿಕೊಂಡೆವು.
ರಷ್ಯಾ ಎಂದರೆ ಮೊದಲು ನೆನಪಾಗುವುದೇ ರಾಜಧಾನಿ ಮಾಸ್ಕೊ. ಆದರೆ ಈಗ ಮಾಸ್ಕೊಗಿಂತ ರಷ್ಯಾದ ಎರಡನೇ ಪ್ರಮುಖ ನಗರ ಸೇಂಟ್ ಪೀಟರ್ಸ್‌ಬರ್ಗ್ ಹೆಚ್ಚು ಜನಾಕರ್ಷಣೆ ಗಳಿಸಿದೆ. ಈ ನಗರ ಜಾಗತೀಕರಣದ ಎಲ್ಲ ವಿದ್ಯಮಾನಗಳಿಗೆ ತೆರೆದುಕೊಂಡು, ಯುವಸಮುದಾಯವನ್ನು ಆಕರ್ಷಿಸುತ್ತಿದೆ. ನಗರದಲ್ಲಿರುವ ಯುರೋಪಿಯನ್ ವಾಸ್ತುಶೈಲಿಯ ಅಪೂರ್ವ ಕಟ್ಟಡಗಳು, ಅದಕ್ಕೆ ಹೊಂದಿಕೊಂಡ ವಿಶಾಲ ರಸ್ತೆಗಳು, ಹಳೆಯ ಸುಂದರ ಚರ್ಚ್‌ಗಳು, ಹೆರ್ಮಿತಾಜ್(hermitage) ಮ್ಯೂಸಿಯಂ, ಉಲ್ಲಾಸದಾಯಕ ಹವಾಮಾನ, ಉತ್ತಮ ಸಾರಿಗೆ ಸಂಪರ್ಕ, ರಂಗು ರಂಗಿನ ರಾತ್ರಿ ನಗರ ಜೀವನ ಹೀಗೆ ಎಲ್ಲವೂ ಪ್ರವಾಸಿಗರನ್ನು ಇಲ್ಲಿಗೆ ಸೆಳೆಯುತ್ತಿವೆ. ಅಂದ ಹಾಗೆ, ಈ ಸೇಂಟ್‌ಪೀಟರ್ಸ್‌ಬರ್ಗ್ ನಗರ 17ನೇ ಶತಮಾನದಲ್ಲಿ ಸ್ವೀಡನ್ ಆಳ್ವಿಕೆಯಲ್ಲಿತ್ತು. ಪೀಟರ್ ಎಂಬ ರಷ್ಯಾ ನಾಯಕ ಸ್ವೀಡನ್ ಜೊತೆ ಹೋರಾಡಿ ಈ ಪ್ರದೇಶವನ್ನು ವಶಕ್ಕೆ ಪಡೆದ. 1703ರಲ್ಲಿ ಸೆಂಟ್ ಪೀಟರ್ಸ್‌ಬರ್ಗ್ ಪಟ್ಟಣ ಸ್ಥಾಪಿಸಿದ.
ರಷ್ಯಾ ಪ್ರವಾಸಕ್ಕೆ ಜೂನ್‌ನಿಂದ ಆಗಸ್ಟ್ ತಿಂಗಳು ಪ್ರಶಸ್ತ ಸಮಯ. ಆಗ ಅಲ್ಲಿ ಬೇಸಿಗೆ ಕಾಲ. ಗರಿಷ್ಠ 20 ಡಿಗ್ರಿ, ಕನಿಷ್ಠ 10 ಡಿಗ್ರಿ ಉಷ್ಣಾಂಶವಿರುತ್ತದೆ. ನಾವು ಅಲ್ಲಿಗೆ ಹೋಗಿದ್ದು ಜೂನ್ ಮೊದಲ ವಾರ. ಜಾಗತಿಕ ತಾಪಮಾನದ ಕಾರಣವೋ ಏನೋ, ಆಗ ಗರಿಷ್ಠ ಉಷ್ಣಾಂಶ 25 ಡಿಗ್ರಿವರೆಗೆ ಏರಿತ್ತು.
ರಷ್ಯಾದ ಬೇಸಿಗೆಯ ವಿಶೇಷವೆಂದರೆ ಸುದೀರ್ಘ ಹಗಲು. ಸೂರ್ಯ ರಾತ್ರಿ 9ರ ಸುಮಾರಿಗೆ ಮುಳುಗುತ್ತಾನೆ. ರಾತ್ರಿ 11 ಗಂಟೆಯವರೆಗೂ ಕತ್ತಲಾಗದೆ ತಿಳಿ ಬೆಳಕಿರುತ್ತದೆ (twilight). ಮುಂಜಾನೆಯೂ ಅಷ್ಟೇ; ಅಪ್ಪಿ ತಪ್ಪಿ ಬೆಳಗಿನ ಜಾವ 4 ಗಂಟೆಗೆ ಕಣ್ಣು ಬಿಟ್ಟರೆ, ನಾವು ಗಾಬರಿ ಬೀಳುವಂತೆ ಬೆಳಗೋ ಬೆಳಗು.
ಜೂನ್ 22 ರಷ್ಯಾದಲ್ಲಿ ದೀರ್ಘ ಹಗಲಿರುವ ದಿನ. ಅಂದು ಹೆಚ್ಚು ಕಡಿಮೆ ರಾತ್ರಿಯಿಡಿ ತಿಳಿ ಬೆಳಗು ಇರುತ್ತದೆಯಂತೆ. ಇಂತಹ ಸುದೀರ್ಘ ಹಗಲನ್ನೇ ನೋಡಿರದ ನಮ್ಮಂಥ ದೇಶಗಳ ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ. ಹಾಗೆಯೇ ಅಲ್ಲಿನ ಚಳಿಗಾಲವೂ ವಿಶಿಷ್ಟ. ಕಿರು ಹಗಲು; ಸುದೀರ್ಘ ರಾತ್ರಿ. ಸಂಜೆ 5 ಗಂಟೆಗೆಲ್ಲಾ ಕತ್ತಲೆಯಾಗುತ್ತದೆ. ಬೆಳಿಗ್ಗೆ 9 ಗಂಟೆಯಾದರೂ ಬೆಳಕಾಗುವುದಿಲ್ಲ. ಹಗಲು ರಾತ್ರಿಗಳೆರಡನ್ನೂ ಸರಿ ಸುಮಾರು ಸಮವಾಗಿ ಕಾಣುವ ನಮ್ಮಂಥ ದೇಶವಾಸಿಗಳಿಗೆ ಸೇಂಟ್ ಪೀಟರ್ಸ್‌ಬರ್ಗ್‌ನ ಈ ವಿದ್ಯಮಾನ ಬಹಳ ಅಚ್ಚರಿಯ ವಿಷಯ.
ನೆನಪಲ್ಲುಳಿಯುವ ದೋಣಿಯಾನ
ಈ ನಗರದ ಇನ್ನೊಂದು ಆಕರ್ಷಣೆ ಎಂದರೆ ನಗರದಾದ್ಯಂತ ಹರಡಿಕೊಂಡಿರುವ ನದಿ ಕಾಲುವೆಗಳ ಜಾಲ. ಇದರಲ್ಲಿ ದೋಣಿ ಪಯಣ ಪ್ರವಾಸಿಗರ ನೆನಪಿನಲ್ಲಿ ಬಹುಕಾಲ ಉಳಿಯುತ್ತದೆ. ಸಂಜೆಯ ತಿಳಿಬಿಸಿಲು, ರಾತ್ರಿಯ ತಿಳಿಬೆಳಗಿನಲ್ಲಿ ನದಿ ಕಾಲುವೆಗಳ ಇಕ್ಕೆಲದಲ್ಲಿನ ಪುರಾತನ ಶೈಲಿಯ ಕಟ್ಟಡಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಸೊಗಸು.
ಸೇಂಟ್ ಪೀಟರ್‌ಬರ್ಗ್ ಹಲವು ದ್ವೀಪಗಳ ಸಮೂಹ. ನೆವಾ ಇಲ್ಲಿನ ಪ್ರಮುಖ ನದಿ. ಈ ನದಿ ಹೆಸರನ್ನು ಅಂಟಿಸಿಕೊಂಡಿರುವ ‘ನೆವಾಸ್ಕಿ’ ಹೆಸರಿನ ಮೂರು ಕಿಲೋಮೀಟರ್ ಉದ್ದದ ನೇರ ರಸ್ತೆಯೇ ಇಲ್ಲಿನ ಸಕಲೆಂಟು ಚಟುವಟಿಕೆಗಳ ಕೇಂದ್ರ. ಈ ರಸ್ತೆಯ ಹಗಲಿನ ಸೌಂದರ್ಯ, ರಾತ್ರಿಯಾಗುತ್ತಿರುವಂತೆ ಇಮ್ಮಡಿಯಾಗುತ್ತದೆ. ಕಣ್ಮನ ಸೆಳೆಯುವ ವಿಶೇಷ ವಿದ್ಯುತ್ ದೀಪಾಲಂಕಾರ; ಕೂಡು ರಸ್ತೆಗಳಲ್ಲಿ ನಿಂತು ಪಾಶ್ಚಾತ್ಯ ಸಂಗೀತ ಹಾಡುವ ಕಿರು ವಾದ್ಯಗೋಷ್ಠಿಗಳು; ಆಕರ್ಷಕ ಉಡುಗೆ ತೊಡುಗೆ ಧರಿಸಿ ರಾತ್ರಿಯಿಡಿ ಸಂಭ್ರಮ ಸಡಗರದಿಂದ ನಡೆದಾಡುವ ಪ್ರವಾಸಿಗರು ಹಾಗೂ ಸ್ಥಳೀಯರು. ಕಣ್ಣಿಗೆ ಮುದ ನೀಡುವ ದೃಶ್ಯಾವಳಿ; ಕಿವಿಗೆ ಇಂಪು ತುಂಬುವ ಪಾಶ್ಯಾತ್ಯ ಸಂಗೀತ; ಇದಕ್ಕೆಲ್ಲ ಕಳಶವಿಟ್ಟಂತೆ ಪ್ರವಾಸಿಗರ ಜಿಹ್ವಾ ಚಾಪಲ್ಯ ತಣಿಸುವ ವೈವಿಧ್ಯಮಯ ತಿಂಡಿ ತಿನಿಸುಗಳು; ಪಾನಪ್ರಿಯರಿಗೆ ಅಮಲೇರಿಸುವ ತರಹೇವಾರಿ ಮಧುಪಾನೀಯ ಪೂರೈಸುವ ಹೋಟೆಲ್‌ಗಳು. ಇಷ್ಟೆಲ್ಲ ಆಕರ್ಷಣೆಗಳ ಸಂಗಮ ತಾಣ ಸೇಂಟ್ ಪೀಟರ್ಸ್‌ಬರ್ಗ್ ನೋಟದ ವಿಷಯದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ನಗರವೇ ಸರಿ.
ಹೆರ್ಮಿತಾಜ್ ಮ್ಯೂಸಿಯಂ
ಸೆಂಟ್ ಪೀಟರ್ಸ್‌ಬರ್ಗ್ ನಗರದ ಪ್ರಮುಖ ಆಕರ್ಷಣೆ ಹೆರ್ಮಿತಾಜ್ ಮ್ಯೂಸಿಯಂ. ಇದು ಜಗತ್ತಿನ ಎರಡನೇ ಅತಿ ದೊಡ್ಡ ಮ್ಯೂಸಿಯಂ. ರಷ್ಯಾದ ಮಹಾರಾಣಿ ಕ್ಯಾಥೆರಿನಾ ಅವರ ಖಾಸಗಿ ಸಂಗ್ರಹಗಳ ಮೂಲಕ 1764ರಲ್ಲಿ ಆರಂಭವಾದ ಮ್ಯೂಸಿಯಂ ವಿಸ್ತಾರವಾಗಿ ಬೆಳೆದು ಈಗ ಜಗದ್ವಿಖ್ಯಾತಿಗಳಿಸಿದೆ. ಇದು ಚಳಿಗಾಲದ ಅರಮನೆ ಸೇರಿದಂತೆ ಆರು ಕಟ್ಟಡಗಳಲ್ಲಿ ವಿಸ್ತರಿಸಿಕೊಂಡಿದೆ. ಈ ಮ್ಯೂಸಿಯಂ ಅನ್ನು ಸುಮ್ಮನೆ ಕಣ್ಣಾಡಿಸಿಕೊಂಡು ನೋಡಿ ಬರಲು ಒಂದು ದಿನ ಬೇಕು. ಇನ್ನು ವಿವರವಾಗಿ ನೋಡಲು ಕನಿಷ್ಠ ಮೂರು ದಿನವಾದರೂ ಬೇಕು. ಇಷ್ಟು ದೊಡ್ಡ ಮ್ಯೂಸಿಯಂ ಅನ್ನು ನಡೆದಾಡಿ ನೋಡಿ ದಣಿಯುವ ಪ್ರವಾಸಿಗರಿಗೆ ನಡು ನಡುವೆ ಕುಳಿತು ದಣಿವಾರಿಸಿಕೊಳ್ಳಲು ಅಲ್ಲಲ್ಲಿ ಆಸನಗಳ ವ್ಯವಸ್ಥೆ ಇದೆ. ಇದಂತೂ ಮೆಚ್ಚುಗೆಯ ಸಂಗತಿ.
ಶಿಲಾಯುಗದಿಂದ ಲೋಹಯುಗದವರೆಗೆ ಸೇರಿದ ವೈವಿಧ್ಯಮಯವಾದ 30 ಲಕ್ಷಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹ ಇಲ್ಲಿದೆ. ವಿಶ್ವ ಖ್ಯಾತಿಯ ಕಲಾವಿದ ಲಿಯೊನಾರ್ಡ್ ಡಾವಿಂಚಿ, ಮೈಕೆಲ್ ಏಂಜೆಲೊ ಸೇರಿದಂತೆ ಖ್ಯಾತ ಕಲಾವಿದರ ಅಪೂರ್ವ ಕಲಾಕೃತಿಗಳ ಭಂಡಾರವೇ ಇದೆ. ಈಜಿಪ್ಟ್ ದೇಶದ ಮಮ್ಮಿ ಸಂಸ್ಕೃತಿ ದಾಖಲಿಸಿರುವ ಅಪೂರ್ವ ವಸ್ತು ಪ್ರದರ್ಶನದಲ್ಲಿ ಕ್ರಿಸ್ತಪೂರ್ವ 7ನೇ ಶತಮಾನಕ್ಕೆ ಸೇರಿದ ಪೂಜಾರಿಯೊಬ್ಬರ ಶವದ ಅವಶೇಷ ಈಗಲೂ ಹಾಳಾಗದೆ ಹಾಗೆಯೆ ಉಳಿದಿದ್ದು ನೋಡುಗರ ಹುಬ್ಬೇರಿಸುತ್ತದೆ. ಮರಾಠ ಇಂಡಿಯಾ ಎನ್ನುವ ಶೀರ್ಷಿಕೆಯಡಿ ಹಳೆಯ ಕಾಲದ ಭಾರತೀಯ ಯೋಧರು ಧರಿಸುತ್ತಿದ್ದ ಶಿರಸ್ತ್ರಾಣ ಮತ್ತು ಮೈಕವಚವೂ ಇಲ್ಲಿ ಪ್ರದರ್ಶನಕ್ಕಿದೆ. ಇಂಥ ಕುತೂಹಲದ ಕಲಾಕೃತಿಗಳ ಸಂಗ್ರಹದ ಈ ಮ್ಯೂಸಿಯಂ ನೋಡಲು ಪ್ರತಿ ವರ್ಷ ಸುಮಾರು 25 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರಂತೆ. ಹೆರ್ಮಿತಾಜ್ ಮ್ಯೂಸಿಯಂಗೆ ಭೇಟಿ ನೀಡಿ ಕಣ್ಣಾರೆ ನೋಡಲಾಗದವರು ‘ವಾಸ್ತವ ವೀಕ್ಷಣೆ’ ತಂತ್ರಜ್ಞಾನದ ಮೂಲಕ ಈ ಮ್ಯೂಸಿಯಂ ಅನ್ನು www.hermitagemuseum.org ಜಾಲತಾಣದಲ್ಲಿ ನೋಡಬಹುದು.
ಬಹಳ ಬದಲಾಗಿಲ್ಲ
ನನ್ನ ಬಾಲ್ಯದ ನೆನಪಿನಲ್ಲಿರುವ ಸುಂದರ ರಷ್ಯಾದ ಚಿತ್ರಣದಲ್ಲಿ ಬಹಳ ಬದಲಾವಣೆಯೇನೂ ಆಗಿಲ್ಲ. ಹಾಲುಗಲ್ಲದ ಮುದ್ದು ಮಕ್ಕಳು, ಮನಮೋಹಕ ಯುವಕ ಯುವತಿಯರಿಂದ ರಷ್ಯಾ ಇನ್ನಷ್ಟು ಕಂಗೊಳಿಸುತ್ತಿದೆ. ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಈಗ ನವ ನವೀನತೆಯ ಸ್ಪರ್ಶದಿಂದ ನಳ ನಳಿಸುತ್ತಿವೆ. ಅಚ್ಚ ಬಿಳುಪು, ಕೆಂಗುಲಾಬಿಯಂಥ ಕನ್ಯೆಯರು ಬ್ಯಾಲೆ ನೃತ್ಯ ಮಾಡುತ್ತಾ ಮಿಂಚು ಹರಿಸುತ್ತಾರೆ. ಕಮ್ಯುನಿಸ್ಟ್ ವಿಚಾರಧಾರೆಯಿಂದ ವಿಮುಖವಾಗುತ್ತಿರುವ ಯುವ ಸಮುದಾಯ ಜಾಗತೀಕರಣದ ಸೆರಗು ಹಿಡಿದು ಹೋಗುತ್ತಿರುವುದು ಮಾತ್ರ ಕೊಂಚ ನಿರಾಸೆ ಮೂಡಿಸುತ್ತಿದೆ. ಆದರೇನು ಮಾಡುವುದು? ಬದಲಾವಣೆ ಜಗದ ನಿಯಮ
ವಲ್ಲವೇ? ಆದರೆ ಒಂದಂತೂ ದಿಟ. ಕಡು ಬಡತನದಲ್ಲಿ, ಝರ್ ದೊರೆಗಳ ದೌರ್ಜನ್ಯದಲ್ಲಿ ನಲುಗಿ ನರಳುತ್ತಿದ್ದ ರಷ್ಯಾದ ಸಾಮಾನ್ಯ ಜನತೆ ಕೆಂಪು ಬಾವುಟದ ನೆರಳಿನಲ್ಲಿ ಸಹನೀಯ ಜೀವನ ನಡೆಸಿ ಮುನ್ನಡೆಯುತ್ತಿರುವುದಂತು ಕಣ್ಣಿಗೆ ಕಾಣುತ್ತಿರುವ ಸತ್ಯ.
ಚರ್ಚ್‌ಗಳ ನಗರ, ಸಾಹಿತಿಗಳ ಬೀಡು
ಸೇಂಟ್ ಪೀಟರ್ಸ್‌ಬರ್ಗ್ ಚರ್ಚ್‌ಗಳ ನಗರವೂ ಹೌದು. ಇಲ್ಲಿ ಹಲವು ನಮೂನೆಯ ನೂರಾರು ಚರ್ಚ್‌ಗಳಿವೆ. ‘ಚರ್ಚ್ ಆಫ್ ದ ಸೇವಿಯರ್ ಆನ್ ಸ್ಪಿಲ್ಲ್ಡ್ ಬ್ಲಡ್’ ಹೆಸರಿನ ಬೃಹತ್ ಚರ್ಚ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಇದು ಒಂದು ರೀತಿಯಲ್ಲಿ ಮ್ಯೂಸಿಯಂ ಹಾಗೂ ಸ್ಮಾರಕ ಕೇಂದ್ರ. ಇತರೆ ಚರ್ಚ್‌ಗಳಂತೆ ಇಲ್ಲಿ ಪ್ರಾರ್ಥನೆ ನಡೆಯುವುದಿಲ್ಲ. ಇದೊಂದು ಪ್ರವಾಸಿ ಆಕರ್ಷಣೆಯ ಸ್ಮಾರಕವಾಗಿ ಉಳಿದಿದೆ.
ಈ ಸೇಂಟ್ ಪೀಟರ್ಸ್‌ಬರ್ಗ್ ಮೊದಲಿನಿಂದಲೂ ಸಾಹಿತಿಗಳ, ಕಲಾವಿದರ ನೆಚ್ಚಿನ ತಾಣವಾಗಿತ್ತು. ವಿಶ್ವ ಖ್ಯಾತಿಯ ವಿಚಾರವಂತ ಲೇಖಕ ದಾಸ್ತಾವೊಸ್ಕಿ ಹುಟ್ಟಿ ಬೆಳೆದಿದ್ದು ಬದುಕಿದ್ದು ಇಲ್ಲಿಯೇ. ಖ್ಯಾತ ಲೇಖಕಿ ಅನ್ನಾ ಅಹಮಥೋವಾ ಕೂಡಾ ತನ್ನ ಬದುಕಿನ ಬಹು ಭಾಗವನ್ನು ಇಲ್ಲಿಯೇ ಕಳೆದು ಅತ್ಯುನ್ನತ ಕೃತಿಗಳನ್ನು ರಚಿಸಿದರು. ಖ್ಯಾತ ರಷ್ಯನ್ ಕವಿ ಪುಸ್ಕಿನ್ ಕೂಡಾ ತನ್ನ ಅಂತಿಮ ದಿನಗಳನ್ನು ಇಲ್ಲಿಯೇ ಕಳೆದು ಇಲ್ಲಿಯೇ ನಿಧನರಾದರು.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.