ಅದೊಂದು ಬೃಹತ್ ವಿಸ್ತಾರವಾದ ಪರ್ವತ. ಅಲ್ಲಲ್ಲಿ ಕಾಂಕ್ರಿಟ್ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಕೆಲವು ಕಡೆ ಜನ ವಸತಿಯೂ ಇದೆ. ಹಚ್ಚ ಹಸುರಿನ ಗಿಡಗಳಿರುವ ಗುಡ್ಡದ ಮೇಲೆ ದೇವಾಲಯವೂ ಇದೆ. ಹೀಗಾಗಿಯೇ ಇದು ಪ್ರಸಿದ್ಧ ಯಾತ್ರಾ ಸ್ಥಳವಾಗಿ ರೂಪುಗೊಂಡಿದೆ.
ಇದು ಮಹರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಸಜ್ಜನಗಡ. ಸತಾರ ನಗರದಿಂದ 9 ಕಿಮೀ ದೂರದಲ್ಲಿದೆ. ಆ ಸಜ್ಜನಗಡದ ಗುಡ್ಡದ ಮೇಲೆ ರಾಷ್ಟ್ರಗುರು ಎಂದೇ ಖ್ಯಾತರಾದ ಸಮರ್ಥ ರಾಮನಾಥ ಸ್ವಾಮೀಜಿ 24 ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಅದಕ್ಕಾಗಿ ಈ ಸ್ಥಳ ಪವಿತ್ರ ಎನ್ನುತ್ತಾರೆ. ಇಲ್ಲಿರುವ ಕೋಟೆಯನ್ನು ಹಿಂದಿನ ಕಾಲದಲ್ಲಿ ಆಸ್ವಲಯಂಗಡ್ ಮತ್ತು ಆಸ್ವಲ್ಗಡ್ ಎಂದು ಕರೆಯುತ್ತಿದ್ದರು.
1608 ರಲ್ಲಿ ಜನಿಸಿದ ಸಮರ್ಥ ಸ್ವಾಮೀಜಿ, ಹರೆಯದಲ್ಲಿಯೇ ಇಡೀ ಭಾರತದ ತೀರ್ಥಯಾತ್ರೆ (1632 ರಿಂದ 1644) ಮಾಡಿ ಪ್ರಸಿದ್ಧರಾದರು. ಅವರು ಭಗವಾನ್ ಶ್ರೀಧರರಿಗೆ ಸದ್ಗುಣ ಸೇವೆಯನ್ನು ಮಾಡಿ ಅವರ ಪ್ರೀತಿಗೆ ಪಾತ್ರರಾದರು. ಕೀರ್ತನೆಯಲ್ಲಿ ರಾಮದಾಸ ಪರಂಪರೆಯನ್ನು ಯಥಾವತ್ತಾಗಿ ಮುಂದುವರೆಸಿದ ಹೆಗ್ಗಳಿಕೆ ಅವರದ್ದು. ಅಧ್ಯಾತ್ಮ ಗಂಥಗಳನ್ನು ಬರೆದು ದೇಶದ ತುಂಬೆಲ್ಲಾ ಜಾಗೃತಿ ಮೂಡಿಸಿದರು.
ಅಲ್ಲದೇ, 800 ಕ್ಕೂ ಹೆಚ್ಚು ಮಾರುತಿ ದೇವಸ್ಥಾನಗಳನ್ನು ಸ್ಥಾಪಿಸಿದ ಸಮರ್ಥ ಸ್ವಾಮೀಜಿ, ಸಜ್ಜನಗಡವನ್ನು ಆಧ್ಯಾತ್ಮಿಕ ಕೇಂದ್ರವಾಗಿ ಪರಿವರ್ತಿಸಿದರು. ಛತ್ರಪತಿ ಶಿವರಾಜ ಮಹರಾಜ ಸಹಾ ಸಮರ್ಥರ ಶಿಷ್ಯರಲ್ಲಿ ಒಬ್ಬರಾಗಿದ್ದು ವಿಶೇಷ. ಶಿವಾಜಿಗೆ ರಾಜಕಾರಣವನ್ನು ಹೇಗೆ ಮಾಡಬೇಕು ಎಂಬುದನ್ನು ಬೋಧಿಸಿದರು. ಹೀಗೆ ಭಿನ್ನವಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಸಮರ್ಥರು 1682 ರಲ್ಲಿ ಅಸ್ತಂಗತರಾದರು. ಸಜ್ಜನಗಡದಲ್ಲಿಯೇ ಸಮರ್ಥ ಸ್ವಾಮೀಜಿ ಸಮಾಧಿಯಿದೆ.
ಪ್ರಸ್ತುತ, ಕೋಟೆಯು 312 ಮೀ ಎತ್ತರದಲ್ಲಿ ಮತ್ತು 1525 ಚದರ ಮೀಟರ್‌ಗಳಷ್ಟು ಪ್ರದೇಶದಲ್ಲಿ ವ್ಯಾಪ್ತಿಸಿದೆ. ಇದರ ಸಮೀಪದಲ್ಲೇ ಎರಡು ಸರೋವರಗಳಿವೆ. ಹನುಮಂತ ಮತ್ತು ರಾಮ ಅಲ್ಲಿನ ಆರಾಧ್ಯ ದೇವರು. ಕೋಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಮನವಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆ ಸಮಯದಲ್ಲಿ ಇಡೀ ಪ್ರದೇಶವನ್ನು ಅಲಂಕರಿಸಲಾಗುತ್ತದೆ.
ಗುಡ್ಡದ ಮೇಲೆ ನಿಂತು ನೋಡಿದರೆ, ಸುತ್ತಲೂ ಪರ್ವತ ಶಿಖರಗಳು ಕಾಣಿಸುತ್ತವೆ. ತಣ್ಣೆಯ ಸಿಹಿ ಗಾಳಿ, ದೂರದಲ್ಲಿ ಕಾಣುವ ಪಟ್ಟಣಗಳು, ಕೋಟೆಯ ಅವಶೇಷಗಳು.. ಇವೆಲ್ಲ ಮೆಟ್ಟಿಲು ಹತ್ತಿದ ಆಯಾಸವನ್ನೆಲ್ಲ ಪರಿಹರಿಸುತ್ತವೆ. ಗುಡ್ಡದ ಒಂದು ಬದಿಯಲ್ಲಿ ಊರ್ಮಡಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು ಕಂಡರೆ, ಇನ್ನೊಂದು ಬದಿಯಲ್ಲಿ ಗುಡ್ಡದ ತುದಿಗೆ ಅಳವಡಿಸಿರುವ ಪವನ ವಿದ್ಯುತ್ ತಯಾರಿಕೆಗೆ ಅಳವಡಿಸಿರುವ ಫ್ಯಾನ್‌ಗಳು ಕಾಣುತ್ತವೆ.
ಗುಡ್ಡದ ಬಹು ಭಾಗದವರೆಗೂ ವಾಹನ ಹೋಗುತ್ತದೆ. ಮುಂದೆ ಒಂದೆರಡು ಕಿಮೀ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು. ಪ್ರತಿ ದಿನ ಸಾವಿರಾರು ಪ್ರವಾಸಿಗರು ಈ ಪವಿತ್ರ ಸ್ಥಳವನ್ನು ಸಂದರ್ಶಿಸುತ್ತಾರೆ. ಈ ಪುಣ್ಯ ಸ್ಥಳ ಪ್ರಶಾಂತವಾಗಿದೆ. ಮನಸ್ಸಿಗೆ ಉಲ್ಲಾಸ ನೀಡುವ ಪುಣ್ಯಕ್ಷೇತ್ರವೂ ಹೌದು.
ಹೋಗುವುದು ಹೇಗೆ?
ಬೆಂಗಳೂರಿನಿಂದ ಸತಾರಕ್ಕೆ 700 ಕಿ.ಮೀ. ಬೆಳಗಾವಿಯಿಂದ 250 ಕಿ.ಮೀ, ಹುಬ್ಬಳ್ಳಿಯಿಂದ 340 ಕಿ.ಮೀ ದೂರವಿದೆ. ಸತಾರಕ್ಕೆ ದೇಶದ ವಿವಿಧ ಭಾಗಗಳಿಂದ ರೈಲಿನ ವ್ಯವಸ್ಥೆ ಇದೆ. ಸತಾರದಿಂದ ಸಜ್ಜನಗಡಕ್ಕೆ ಪ್ರತಿ ಗಂಟೆಗೊಂದು ಬಸ್ ಇದೆ. ಜತಗೆ ಆಟೊರಿಕ್ಷಾಗಳು ಸಿಗುತ್ತವೆ. ಪುಣೆವರೆಗೂ ವಿಮಾನದವರೆಗೆ ಪಯಣಿಸಿ, ಅಲ್ಲಿಂದ ಬಸ್ ಅಥವಾ ರೈಲ್ ಮೂಲಕ ಸತಾರ ತಲುಪಲು ಸಾಧ್ಯವಿದೆ.
ಚಿತ್ರಗಳು : ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.