ADVERTISEMENT

ಕಡಲ ತಡಿಯಲ್ಲಿ ಶಿಲ್ಪೋತ್ಸವ

ಬಾಸ್ಟನ್‌ ರೆವೆರೆ ಬೀಚ್

ಜಿ.ನಾಗೇಂದ್ರ ಕಾವೂರು
Published 26 ಜೂನ್ 2019, 19:30 IST
Last Updated 26 ಜೂನ್ 2019, 19:30 IST
   

ಇದು ಅಮೆರಿಕದ ಮೆಸಾಚುಸೆಟ್ಸ್‌ಗೆ ಸೇರಿದ ಬಾಸ್ಟನ್‌ ನಗರದ ಸಮೀಪವಿರುವ ರೆವರೆ ಕಡಲ ತಡಿ ಅರ್ಥಾತ್‌ ಬೀಚ್‌ ದಂಡೆಯಲ್ಲಿ ಕಾಣುವ ದೃಶ್ಯ. ಇದು ಬಾಸ್ಟನ್‌ ನಗರದ ಡೌನ್‌ಟೌನ್‌ನಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿದೆ(5 ಮೈಲಿ). ಇದನ್ನು ಅಮೆರಿಕದ ಮೊದಲ ಸಾರ್ವಜನಿಕ ಬೀಚ್ ಎಂದು ಕರೆಯುತ್ತಾರೆ. ಇದು ಬೇಸಿಗೆಯಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣ. ಆ ವೇಳೆ ದೇಶ–ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

***

ಮೂರು ಕಿಲೋ ಮೀಟರ್ ಉದ್ದದ ನೀಲ ಕಡಲು. ದಡದಿಂದ ಅನತಿ ದೂರದಲ್ಲೇ ಐಶಾರಾಮಿ ಅಪಾರ್ಟ್‌ಮೆಂಟ್‌ಗಳು. ಅಲ್ಲಿ ಸ್ಟಾರ್‌ ಹೋಟೆಲ್‌ಗೂ ಮೀರಿಸುವ ಸೌಲಭ್ಯ. ಕಡಲ ತಡಿಯಲ್ಲೇ ಸನ್‌ ಬಾತ್‌ ಚೇರ್‌ಗಳು. ಕಣ್ಣಿಗೆ ಸನ್‌ಶೇಡ್ ಕನ್ನಡಕ ತೊಟ್ಟು, ಚೇರ್ ಮೇಲೆ ಸೂರ್ಯನಿಗೆ ಮೈಯೊಡ್ಡಿ ಮಲಗಿರುವ ಪ್ರವಾಸಿಗರು. ಇನ್ನೊಂದೆಡೆ ವಿಶ್ವವಿಖ್ಯಾತ ಮರಳು ಶಿಲ್ಪ ಕಲಾವಿದರಿಂದ, ನಮೂನೆ ನಮೂನೆಯ ಮರಳು ಶಿಲ್ಪಗಳ ನಿರ್ಮಾಣ, ಅನಾವರಣ..

ADVERTISEMENT

ಇದು ಅಮೆರಿಕದ ಮೆಸಾಚುಸೆಟ್ಸ್‌ಗೆ ಸೇರಿದ ಬಾಸ್ಟನ್‌ ನಗರದ ಸಮೀಪವಿರುವ ರೆವರೆ ಕಡಲ ತಡಿ ಅರ್ಥಾತ್‌ ಬೀಚ್‌ ದಂಡೆಯಲ್ಲಿ ಕಾಣುವ ದೃಶ್ಯ. ಇದು ಬಾಸ್ಟನ್‌ ನಗರದ ಡೌನ್‌ಟೌನ್‌ನಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿದೆ(5 ಮೈಲಿ). ಇದನ್ನು ಅಮೆರಿಕದ ಮೊದಲ ಸಾರ್ವಜನಿಕ ಬೀಚ್ ಎಂದು ಕರೆಯುತ್ತಾರೆ. ಇದು ಬೇಸಿಗೆಯಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣ. ಆ ವೇಳೆ ದೇಶ–ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ಮರಳು ಶಿಲ್ಪೋತ್ಸವ

ನಮ್ಮ ಒರಿಸ್ಸಾ ಕಡಲ ತೀರದಲ್ಲಿದ್ದಂತೆ, ಇಲ್ಲೂ ಪ್ರತಿ ವರ್ಷ ಅಂತರರಾಷ್ಟ್ರೀಯ ಮರಳು ಶಿಲ್ಪ ಉತ್ಸವಗಳು ನಡೆಯುತ್ತವೆ. ವಿಶೇಷವೆಂದರೆ, ಇಲ್ಲಿ ಮರಳು ಶಿಲ್ಪ ತಯಾರಿಕೆ ಸ್ಪರ್ಧೆಯನ್ನೂ ಏರ್ಪಡಿಸುತ್ತಾರೆ. ‘ರೆವರೆ ಬೀಚ್ ಇಂಟರ್‌ನ್ಯಾಷನಲ್ ಸ್ಯಾಂಡ್ ಸ್ಕಲ್ಪ್‌ಟಿಂಗ್‌ ಫೆಸ್ಟಿವಲ್’ ಶೀರ್ಷಿಕೆಯಡಿ ನಡೆಯುವ ಈ ಕಾರ್ಯಕ್ರಮ ವಿಶ್ವದಲ್ಲೇ ಇದು ಅತಿ ದೊಡ್ಡ ಮರಳು ಶಿಲ್ಪ ಉತ್ಸವ ಎಂಬ ಖ್ಯಾತಿ ಪಡೆದಿದೆ. ಇದರಲ್ಲಿ ದೇಶ-ವಿದೇಶಗಳ ಹೆಸರಾಂತ ಶಿಲ್ಪಿಗಳು ಭಾಗವಹಿಸುತ್ತಾರೆ. ಸ್ಪರ್ಧೆಯಲ್ಲಿ ಅತ್ಯುತ್ತಮ ಮರಳು ಶಿಲ್ಪಗಳನ್ನು ಮಾಡಿದ ಕಲಾವಿದರಿಗೆ ಬಹುಮಾನವನ್ನೂ ನೀಡುತ್ತಾರೆ. ಮತ್ತೊಂದು ವಿಶೇಷವೆಂದರೆ, ಉತ್ಸವವನ್ನು ನೋಡಲು ಬರುವ ವೀಕ್ಷಕರೂ ತಮ್ಮ ನೆಚ್ಚಿನ ಶಿಲ್ಪಗಳ ಪರವಾಗಿ ಮತ ಚಲಾಯಿಸಬಹುದು. ತೀರ್ಪು ನೀಡುವ ಸಮಯದಲ್ಲಿ ಈ ವೀಕ್ಷಕರ ಮತಗಳನ್ನೂ ಪರಿಗಣಿಸುತ್ತಾರೆ.

ಕಳೆದ ವರ್ಷ ಮಗ ರಾಜೇಂದ್ರ ಆಚಾರ್ಯನೊಂದಿಗೆ, ಬಾಸ್ಟನ್ ನಗರಕ್ಕೆ ಹೋಗಿದ್ದೆ. ಅಲ್ಲಿನ ವಾಲ್ತಾಮ್‌ನಲ್ಲಿರುವ ಪ್ರತಿಷ್ಠಿತ ಹಯಾತ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದೆವು. ನಾವಿದ್ದ ಸ್ಥಳದಿಂದ ಸುಮಾರು 25 ಕಿ.ಮೀ ದೂರದಲ್ಲಿ ರೆವೆರೆ ಬೀಚ್‌ ಇರುವುದು, ಅಲ್ಲಿ ವರ್ಷಕ್ಕೊಮ್ಮೆ ‘ಇಂಟರ್ ನ್ಯಾಷನಲ್ ಸ್ಯಾಂಡ್ ಸ್ಕಲ್ಪ್‌ಟಿಂಗ್‌ ಫೆಸ್ಟಿವಲ್’ ನಡೆಯುತ್ತಿರುವುದಾಗಿ ತಿಳಿದು ಬಂದಿತು. ‘ಹೇಗೂ ಇಷ್ಟು ಸಮೀಪ ಬಂದಿದ್ದೇವೆ. ಶಿಲ್ಪೋತ್ಸವ ನೋಡಿ ಬರೋಣ’ ಎಂದು ತೀರ್ಮಾನಿಸಿದೆವು. ಬೆಳಿಗ್ಗೆ 10 ಗಂಟೆಗೆ ಹೊಟೇಲ್‌ನಿಂದ ಕಾರಿನಲ್ಲಿ ಹೊರಟೆವು. ಸುಂದರವಾದ ರಸ್ತೆಯಲ್ಲಿ ಸಾಗುತ್ತಾ, ಇಕ್ಕೆಲಗಳಲ್ಲಿದ್ದ ವಿಶಿಷ್ಟ ವಿನ್ಯಾಸವಿರುವ ಕಟ್ಟಡಗಳು, ಶಿಸ್ತು ಬದ್ಧ ವಾಹನ ಸಂಚಾರವನ್ನು ನೋಡಿ ಬೆರಗಾದೆವು. ಇವನ್ನೆಲ್ಲ ನೋಡುತ್ತಿರುವಾಗಲೇ ರೆವೆರೆ ಬೀಚ್ ಬಂದೇ ಬಿಟ್ಟಿತು.

ಉತ್ಸವದ ಸಂಬಂಧ ಬೀಚ್ ಪ್ರದೇಶಕ್ಕೆ ಹೋಗುವ ವಾಹನಗಳನ್ನು ನಿಷೇಧಿಸಲಾಗಿತ್ತು. ಹೀಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ 15 ಡಾಲರ್‌ ಶುಲ್ಕ ಕೊಟ್ಟು ಕಾರು ಪಾರ್ಕ್‌ ಮಾಡಿದೆವು. ಅಲ್ಲಿಂದ ಅರ್ಧ ಮೈಲು ದೂರವರೆಗೆ ನಡೆಯುತ್ತಾ ಬೀಚ್‌ ತಲುಪಿದೆವು. ಆ ಹೊತ್ತಿಗಾಗಲೇ ಉತ್ಸವ ನೋಡಲು ಸಾವಿರಾರು ಕಲಾಸಕ್ತರು ಕಡಲ ತಡಿಯಲ್ಲಿ ಜಮಾಯಿಸಿದ್ದರು. ಹಲವು ದೇಶಗಳಿಂದ ಬಂದಂತಹ ವೀಕ್ಷಕರು, ಅವರ ಉಡುಗೆ ತೊಡುಗೆ ನೋಡುತ್ತಿದ್ದಾಗ, ಒಂಥರಾ ವೈವಿಧ್ಯಮಯ ಜೀವನ ಶೈಲಿಯ ಮೆರವಣಿಗೆ ಕಂಡಂತಾಯಿತು.

ಶಿಲ್ಪ ಕಲಾವಿದರ ದಂಡು

ಆಸ್ಟ್ರೇಲಿಯಾ, ಕೆನಡಾ, ಇಟಲಿ, ಮೆಕ್ಸಿಕೊ, ನೆದರ್‌ಲೆಂಡ್‌, ರಷ್ಯಾ ಹಾಗೂ ಸಿಂಗಪುರ ದೇಶಗಳ 20 ಮಂದಿ ಮರಳು ಶಿಲ್ಪ ಕಲಾವಿದರು ಉತ್ಸವದಲ್ಲಿ ಭಾಗವಹಿಸಿದ್ದರು. 10 ಏಕ ವ್ಯಕ್ತಿ ಹಾಗೂ 5 ಜೋಡಿ ತಂಡಗಳು ಸ್ಪರ್ಧೆಯಲ್ಲಿದ್ದವು. ಪ್ರತಿ ವರ್ಷವೂ ಆಯೋಜಕರು ಒಂದು ವಿಷಯವನ್ನು ನಿಗದಿಪಡಿಸಿ, ಆ ವಿಷಯಾಧಾರಿತವಾಗಿ ಮರಳು ಶಿಲ್ಪಗಳನ್ನು ರಚಿಸಲು ಸೂಚಿಸುತ್ತಾರೆ. ನಾವು ಭೇಟಿ ನೀಡಿದ ಉತ್ಸವದಲ್ಲಿ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರದಂತಹ ವಿಷಯಗಳ ಬಗ್ಗೆ ಕಲಾವಿದರು ಶಿಲ್ಪಗಳನ್ನು ರಚಿಸಿದ್ದರು. ಶಿಲ್ಪಗಳ ಬಳಿ ಯಾರೂ ಹೋಗದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಬಹುತೇಕ ವಿಕ್ಷಕರು ಮರಳು ಶಿಲ್ಪಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಕೆಲವರು ಫೋಟೊ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದರು. ಇನ್ನೂ ಕೆಲವರು ಶಿಲ್ಪಗಳನ್ನು ರಚಿಸಿದ ಕಲಾವಿದರೊಂದಿಗೆ ಸಂವಾದ ನಡೆಸುತ್ತಿದ್ದರು.

ಪ್ರತಿ ಸ್ಪರ್ಧಿಗೂ 10 ಟನ್ ಮರಳು ಹಾಗೂ 18 X 18 ಅಡಿಗಳ ಪ್ರದರ್ಶನಕ್ಕೆ ಜಾಗವನ್ನು ನೀಡಲಾಗಿತ್ತು. ಶಿಲ್ಪಗಳ ರಚನೆಗೆ 3 ದಿನಗಳಲ್ಲಿ 24 ಗಂಟೆ ಅವಧಿಯ ಕಾಲಾವಕಾಶ ನೀಡಲಾಗಿತ್ತು. ಅಂದರೆ ಪ್ರತಿ ದಿನ 8 ಗಂಟೆ ಶಿಲ್ಪ ರಚನೆ ಮಾಡಬೇಕು. ಇದು ನಿಬಂಧನೆ. ಸ್ವಂತಿಕೆ, ಸೃಜನ ಶೀಲತೆ, ಶಿಲ್ಪದ ಗುಣಮಟ್ಟ, ಶಿಲ್ಪಗಳು ವೀಕ್ಷಕರ ಮೇಲೆ ಬೀರುವ ಪ್ರಭಾವ, ವೀಕ್ಷಕರ ಆಯ್ಕೆ ಆಧರಿಸಿ ತೀರ್ಪುಗಾರರು ನೀಡುವ ತೀರ್ಪಿನ ಮೇಲೆ ಬಹುಮಾನವನ್ನು ನೀಡುತ್ತಾರೆ. ಬಹುಮಾನದ ಮೊತ್ತವೂ ಹೆಚ್ಚಾಗಿಯೇ ಇರುತ್ತದೆ.

ಒಟ್ಟಾರೆ ನಾವು ಉತ್ಸವದ ಎಲ್ಲ ಪ್ರಕ್ರಿಯೆಗಳಿಗೂ ಸಾಕ್ಷಿಯಾ ದೆವು. ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಿತು. ಸಮಯದ ಅಭಾವದಿಂದಾಗಿ ರಾತ್ರಿ 9 ಗಂಟೆಗೆ ಏರ್ಪಡಿಸಿದ್ದ ಸಿಡಿಮದ್ದು ಪ್ರದರ್ಶನ ರದ್ದಾಯಿತು.

ಬಗೆ ಬಗೆಯ ತಿನಿಸು

ಬೀಚ್ ಆಸುಪಾಸಿನಲ್ಲಿ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿರುತ್ತಾರೆ. ಇದರಲ್ಲಿ ಸೀಫುಡ್ ಹೆಚ್ಚು. ಬೀಫ್‌ನಿಂದ ತಯಾರಿಸಲಾದ ಬಗೆ ಬಗೆಯ ಖಾದ್ಯಗಳು, ಹುರಿದ ಮೀನು, ಚಿಪ್ಸ್ ಸೇರಿದಂತೆ ಹಲವು ವಿಧದ ಖಾದ್ಯಗಳಿರುತ್ತವೆ. ಪ್ರವಾಸಿಗರು ಖಾದ್ಯ ಸೇವಿಸುತ್ತಾ, ಬಿಯರ್ ಹೀರುತ್ತಾ ಬೀಚ್ ಉದ್ದಕ್ಕೂ ಅಡ್ಡಾಡುತ್ತಿರುತ್ತಾರೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೀಚ್‌ನಲ್ಲಿ ಸಂಚರಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚು.

ಬೆಳಗ್ಗಿನಿಂದ ಸಂಜೆಯವರೆಗೂ ಬೀಚ್‌ನಲ್ಲಿ ನಾವು ಕಳೆದ ಸಂತಸದ ಕ್ಷಣಗಳು, ಶಿಲ್ಪಗಳ ಸೌಂದರ್ಯ, ಉತ್ಸವದಲ್ಲಿ ತಿಂದ ಹಲವು ಖಾದ್ಯಗಳ ರುಚಿ, ವೀಕ್ಷಕರ ಶಿಸ್ತುಬದ್ಧ ನಡವಳಿಕೆ ಸದಾಕಾಲ ನಮ್ಮ ಮನಸ್ಸಿನಲ್ಲಿ ಉಳಿದವು. ದಾರಿಯುದ್ದಕ್ಕೂ ‌ಅವುಗಳನ್ನು ಮೆಲುಕ ಹಾಕುತ್ತಲೇ ಮನೆ ತಲುಪಿದೆವು.

ಹಲವು ವೈಶಿಷ್ಟ್ಯಗಳ ತಾಣ

ರೆವೆರೆ ಬೀಚ್ ಸಮೀಪದಲ್ಲಿ ಸರ್ವೀಸ್‌ ಅಪಾರ್ಟ್‌ಮೆಂಟ್‌ಗಳಿವೆ. ನಮೂನೆ ನಮೂನೆಯ ರೆಸ್ಟೋರೆಂಟ್‌ಗಳಿವೆ. ನೃತ್ಯ ಮಂದಿರ, ಬಾಲ್‍ರೂಂ, ರೋಲರ್ ಸ್ಕೇಟಿಂಗ್‍ ರಿಂಕ್‌ಗಳಿವೆ. 1996 ರಲ್ಲಿ ರೆವೆರೆ ಬೀಚ್‌ನ ಶತಮಾನೋತ್ಸವ ಆಚರಿಸಲಾಗಿದೆ. 2003ರಲ್ಲಿ ಈ ಬೀಚ್‌ ಅನ್ನು ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತಾಗಿ ಘೋಷಿಸಲಾಗಿದೆ. 2004ರಲ್ಲಿ ‘ನ್ಯೂ ಇಂಗ್ಲೆಂಡ್ ಸ್ಯಾಂಡ್ ಸ್ಕಲ್ಪ್ಟಿಂಗ್ ಫೆಸ್ಟಿವಲ್’ ಆಯೋಜಿಸಲಾಗಿತ್ತು. ನಂತರ ಪ್ರತಿ ವರ್ಷವೂ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಯ ನೆಪದಲ್ಲಿ ಬೀಚ್‌ಗೆ ಸುಮಾರು 10 ಲಕ್ಷ ವೀಕ್ಷಕರು ಬಂದು ಹೋಗುತ್ತಾರೆ. ಮರಳು ಶಿಲ್ಪಗಳ ಜತೆಗೆ, ಬಾಣ ಬಿರುಸು, ಮನರಂಜನಾ ಕಾರ್ಯಕ್ರಮಗಳು ಆಹಾರ ಟ್ರಕ್, ಸ್ಟ್ಯಾಂಡ್‌ಗಳು, ಮಕ್ಕಳಿಗಾಗಿಯೇ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.

ಬೀಚ್‌ ಹೌಸ್‌ ವಿಶೇಷ

ರೆಸಾರ್ಟ್‌ ತರಹದ ಸೌಲಭ್ಯಗಳಿರುವ ಬೀಚ್‌ ಹೌಸ್‌ಗಳು ಇಲ್ಲಿನ ಮತ್ತೊಂದು ವಿಶೇಷ. ಸಮುದ್ರದಿಂದ ಸ್ವಲ್ಪವೇ ದೂರದಲ್ಲಿ ಐಷಾರಾಮಿ ಅಪಾರ್ಟ್‍ಮೆಂಟ್‌ಗಳಿವೆ. ಬೇಸಿಗೆ ರಜೆ ಕಳೆಯಲು ಈ ಬೀಚ್‌ಗೆ ಬರುವ ವಿದೇಶಿ ಪ್ರವಾಸಿಗರು, ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲಿನ ಬಾಲ್ಕನಿಗಳಲ್ಲಿ ಕುಳಿತು, ಬೆರಗುಗೊಳಿಸುವ ಬೀಚ್ ಸೌಂದರ್ಯವನ್ನು ಆಸ್ವಾದಿಸುತ್ತಾ, ತಂಗಾಳಿಯನ್ನು ಸವಿಯುತ್ತಾ ರಜಾ ದಿನಗಳನ್ನು ಕಳೆಯುತ್ತಾರೆ. ಪ್ರವಾಸಿಗರ ಅಗತ್ಯತೆಗಳಿಗೆ ಅನುಗುಣವಾಗಿಯೇ ಈ ಅಪಾರ್ಟ್‌ಮೆಂಟ್‌ಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಹಾಗಾಗಿ ಇಲ್ಲಿ ಸಕಲ ಸೌಕರ್ಯಗಳೂ ಇರುತ್ತವೆ.

ಇನ್ನು ಸರ್ಫಿಂಗ್, ಸನ್ ಬಾತ್‌ಗಾಗಿ ಬಂದವರು ಕಡಲ ತೀರದ ಉದ್ದಕ್ಕೂ ಸನ್‌ಬಾತ್‌ ಚೇರ್‌ಗಳ ಮೇಳೆ ಬಿಸಿಲಿಗೆ ಮೈಯೊಡ್ಡಿ ಮಲಗಿರುತ್ತಾರೆ. ಅವರೊಂದಿಗೆ ಬಂದ ಮಕ್ಕಳು ಅಟವಾಡುತ್ತಿರುತ್ತಾರೆ. ಉತ್ಸವ ನಡೆಯುವ ಪ್ರದೇಶದಲ್ಲಿ ಬೀಚ್ ಸುತ್ತಾಡಿ ದಣಿದವರಿಗೆ ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆಗಳೂ ಇರುತ್ತವೆ.

ಜುಲೈ 26ರಂದು ಶಿಲ್ಪೋತ್ಸವ

ಈ ವರ್ಷ ‘2019ರ 16 ನೇ ಇಂಟರ್ ನ್ಯಾಷನಲ್ ಸ್ಯಾಂಡ್ ಸ್ಕಲ್ಪ್‌ಟಿಂಗ್‌ ಫೆಸ್ಟಿವಲ್' ಇದೇ ಜುಲೈ 26 ರಿಂದ 28ರವರೆಗೆ ನಡೆಯಲಿದೆ. ಹಿಂದಿನ ವರ್ಷಗಳಂತೆಯೇ ಈ ವರ್ಷವು ಹಲವು ದೇಶಗಳ ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಸಕ್ತರು ಭಾಗವಹಿಸಬಹುದು.

ಹೋಗುವುದು ಹೇಗೆ?

ವಿಶ್ವದ ಎಲ್ಲ ಭಾಗಗಳಿಂದಲೂ ಬಾಸ್ಟನ್‌ ನಗರಕ್ಕೆ ಅಂತರರಾಷ್ಟ್ರೀಯ ವಿಮಾನ ಸೌಲಭ್ಯವಿದೆ. ಇಲ್ಲಿನ ಲೋಗನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐದು ಮೈಲಿ ದೂರದಲ್ಲಿ ಬೀಚ್‌ ಇದೆ. ಟ್ಯಾಕ್ಸಿ, ಬಸ್‌, ರೈಲು ಎಲ್ಲ ಸೌಲಭ್ಯಗಳಿವೆ. ಬೀಚ್‌ಗೆ ರೈಲು ನಿಲ್ದಾಣ ತುಂಬಾ ಹತ್ತಿರವಿದೆ.

ಊಟ, ವಸತಿ ಎಲ್ಲವೂ ಬೀಚ್‌ ಸಮೀಪದಲ್ಲೇ ಇದೆ. ಬೀಚ್‌ಹೌಸ್, ಕಡಲತಡಿಯ ಅಪಾರ್ಟ್‌ಮೆಂಟ್‌ಗಳ ಕುರಿತು ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.