ADVERTISEMENT

ಕಾನನದ ನಡುವೆ ಸೀತೆಯ ಝರಿ

ಸುಷ್ಮಾ ಸದಾಶಿವ್
Published 29 ಮೇ 2019, 19:30 IST
Last Updated 29 ಮೇ 2019, 19:30 IST
ಸೀತಾ ಫಾಲ್ಸ್. ಚಿತ್ರಗಳು: ಶರತ್ ಹೆಗ್ಡೆ
ಸೀತಾ ಫಾಲ್ಸ್. ಚಿತ್ರಗಳು: ಶರತ್ ಹೆಗ್ಡೆ   

ಸುತ್ತಲೂ ದಟ್ಟವಾದ ಹಚ್ಚ ಹಸಿರಿನಿಂದ ಕೂಡಿದ ಸೌಂದರ್ಯ ಲಹರಿ. ಕಾಡಿನ ನಡುವೆ ಜುಳು ಜುಳು ಹರಿವ ನೀರಿನ ನಾದ. ಬೃಹದಾಕಾರದ ಮರಗಳ ಮೇಲೆ ಚಿಲಿಪಿಲಿ ಹಕ್ಕಿಗಳ ಕಲರವ. ಅಲ್ಲಲ್ಲಿ ಕಂಡು ಕಾಣದಂತೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳು, ಕಾಡು ಪ್ರಾಣಿಗಳ ಕೂಗು. ಮುಂದಿನ ಹಾದಿಯೇ ಕಾಣದಂತೆ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷರಾಶಿ. ಹೆಬ್ಬಂಡೆಗಳ ನಡುವೆ ಪುಟ್ಟದೊಂದು ಕಾಲುದಾರಿ. ನಡೆದಷ್ಟು ನಡೆದಷ್ಟು ಮನಸಿಗೆ ಮತ್ತಷ್ಟು ಉಲ್ಲಾಸ ಉತ್ಸಾಹ ನೀಡುವ ತಣ್ಣನೆಯ ವಾತಾವರಣ. ಇಂಥ ಸೌಂದರ್ಯದ ನಡುವೆ ಧುತ್ತೆಂದು ಗಗನದಿಂದ ತಿಳಿ ಹಾಲಿನಂತೆ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದೇ ಕೂಡ್ಲು ತೀರ್ಥ ಜಲಪಾತ. ಇದು ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿದೆ. ಇದಕ್ಕೆ ಸೀತಾ ಫಾಲ್ಸ್ ಎಂದು ಕರೆಯುತ್ತಾರೆ.

ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯ ದಟ್ಟ ಕಾಡಿನ ನಡುವೆ ಈ ಜಲಪಾತವಿದೆ. ಪಶ್ಚಿಮ ಘಟ್ಟಗಳ ನಡುವಿನಲ್ಲಿರುವ ಹಲವು ಸುಂದರ ಜಲಪಾತಗಳಲ್ಲಿ ಇದೂ ಒಂದು. ಸೀತಾನದಿಯ ಮೂಲದಿಂದ ಹರಿದು ಬರುವ ನೀರು ಈ ಕಾನನದಲ್ಲಿ ಸುಮಾರು 250 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ.

ಜಲಪಾತದ ಸೌಂದರ್ಯದಷ್ಟೇ, ಅದನ್ನು ಕಾಣಲು ಹೋಗುವ ಚಾರಣದ ದಾರಿ ಸುಂದರವಾಗಿದೆ. ಮುಗಿಲೆತ್ತರದ ಮರಗಳ ಸಮೂಹದ ನಡುವೆ ಹೆಜ್ಜೆ ಹಾಕುವಾಗ ಸಿಗುವ ಅನುಭವವೇ ಅದ್ಭುತ.

ADVERTISEMENT

ಈ ಜಲಪಾತ ನೋಡಲು ಹೆಬ್ರಿ – ಸೋಮೇಶ್ವರ ಮುಖ್ಯರಸ್ತೆಯಿಂದ ಸುಮಾರು 4 ರಿಂದ 5 ಕಿಮೀ ಕಾಡು ದಾರಿಯಲ್ಲಿ, ಕಾಲುದಾರಿಯಲ್ಲೇ ಕ್ರಮಿಸಬೇಕು. ಕಾಡಿನೊಳಗೆ ಹೆಜ್ಜೆ ಹಾಕುತ್ತಿದ್ದಾಗ, ದೂರದಲ್ಲಿ ನೀರಿನ ಜುಳು ಜುಳು ನಾದ ಕೇಳುತ್ತದೆ. ಜತೆಗೆ, ಇಡೀ ವಾತಾವರಣ ತಣ್ಣನೆಯ ಅನುಭವ ನೀಡುತ್ತದೆ. ಈ ಲಕ್ಷಣಗಳು ಜಲಪಾತ ಸಮೀಪದಲ್ಲಿದೆ ಎಂದು ಹೇಳುತ್ತವೆ. ಆದರೆ, ಇಷ್ಟಕ್ಕೇ ಜಲಪಾತ ಸಿಕ್ಕಿತೆಂದು ಸಂಭ್ರಮಿಸಬೇಡಿ. ಏಕೆಂದರೆ, ಆ ಜಲಧಾರೆ ನೋಡಲು ಅಲ್ಲಿಂದ ಮತ್ತೆ ಒಂದು ಕಿಮೀ ನಡೆಯಬೇಕು. ಧುಮ್ಮಿಕ್ಕುವ ನೀರಿನ ಶಬ್ಧ ಆಲಿ ಸುತ್ತಾ, ಕಲ್ಲು ಬಂಡೆಗಳಿಂದ ಕೂಡಿದ ಆಳವಾದ ರಸ್ತೆಯಲ್ಲಿ ಸಾಗುತ್ತಿದ್ದರೆ ಕಾನನದ ವಾತಾವರಣ ನಮ್ಮ ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ. ನಡೆದು ನಡೆದು ದಣಿದರೂ, ಜಲಪಾತ ನೋಡುವ ತವಕದಲ್ಲಿ ಆ ದಣಿವು ಕಾಣುವುದಿಲ್ಲ. ಆಯಾಸವಾದರೂ ವಿಶ್ರಾಂತಿ ಬೇಕೆನಿಸುವುದಿಲ್ಲ.

ನೀರು ಧುಮ್ಮಿಕ್ಕುವ ಶಬ್ಧ ಅನುಸರಿಸುತ್ತಾ ಹೆಜ್ಜೆ ಹಾಕಿದರೆ, ತುದಿಯಲ್ಲಿ ವಿಶಾಲವಾದ ನೈಸರ್ಗಿಕ ಕೊಳ ವೊಂದು ಕಾಣುತ್ತದೆ. ಆ ಕೊಳಕ್ಕೆ ಮೇಲಿನಿಂದ ಹಾಲು ಸುರಿದಂತೆ ನೀರು ಧುಮ್ಮಿಕ್ಕುತ್ತಿರುತ್ತದೆ. ಅಲ್ಲಿಗೆ ನಾವು ಕೂಡ್ಲುತೀರ್ಥ ಜಲಪಾತದ ಎದುರು ನಿಂತಿರುತ್ತವೆ. ಆ ಜಲಧಾರೆಯನ್ನು ಕಂಡಾಕ್ಷಣ ಮೈ–ಮನದ ದಣಿವೆಲ್ಲಾ ಮಂಗಮಾಯ. ದಬ ದಬನೆ ಸುರಿಯುವ ಜಲ ರಾಶಿ ಪ್ರವಾಸಿಗರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ. ಜಲಪಾತ ಧುಮ್ಮಿಕ್ಕುವ ಜಾಗದಲ್ಲಿರುವ ನೈಸರ್ಗಿಕ ಕೊಳ ಅಷ್ಟು ಆಳವಾಗಿಲ್ಲ. ಹಾಗಾಗಿ ಚಾರಣಕ್ಕೆಂದು ಹೋದವರು ನಿರ್ಭಯವಾಗಿ ನೀರಿಗೆ ಇಳಿದು ಆಟವಾಡಬಹುದು.

ಮನಸ್ಸಿಗೆ ಮಂದಹಾಸವನ್ನು ನೀಡುವ ‌ಸೀತಾ ಫಾಲ್ಸ್‌ಗೆ ಚಾರಣ ಪ್ರಿಯರಷ್ಟೇ ಅಲ್ಲ, ಸಾಹಸ ಪಟ್ಟು ಕಾಡಿನೊಳಗೆ ಹೆಜ್ಜೆ ಹಾಕುತ್ತೇನೆ ಎನ್ನುವ ಆಸಕ್ತಿ ಇದ್ದವರೆಲ್ಲರೂ ಕುಟುಂಬ ಸಹಿತ ಹೋಗಬಹುದು. ಆದರೆ ಕಡಿದಾದ ದಾರಿಯಲ್ಲಿ ಚಾರಣ ಮಾಡಬೇಕಿರುವುದರಿಂದ, ಸ್ವಲ್ಪ ಎಚ್ಚರವಹಿಸಬೇಕು. ತುಸು ಆಯ ತಪ್ಪಿದರೂ ಅಪಾಯ.

ಕೂಡ್ಲು ತೀರ್ಥ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ್ದು. ನಗರ ಜೀವನದ ಜಂಜಾಟಗಳಿಂದ ಅಲ್ಪ ವಿರಾಮ ಬೇಕೆನ್ನುವವರಿಗೆ ಇದೊಂದು ಪ್ರೀತಿಯ ಚಾರಣ ತಾಣವಾಗಲಿದೆ.

ಮೇಲ್ಗಡೆ ‘ಮಂಗನ ಜಲಪಾತ’

ಆಗಸದಿಂದ ಹಾಲು ಸರಿದಂತೆ ಕಾಣುವ ಜಲಪಾತದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪುರಾಣಗಳ ಪ್ರಕಾರ ಸುಮಾರು ಸಾವಿರಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಋಷಿ ಮುನಿಗಳು ಮತ್ತು ಸನ್ಯಾಸಿಗಳು ಇಲ್ಲಿ ಧ್ಯಾನ ಮಾಡುತ್ತಿದ್ದರಂತೆ. ಇದರ ಮೂಲ ಸೀತಾ ನದಿಯಾಗಿದ್ದು, ಸೀತಾ ಫಾಲ್ಸ್ ಎಂದು ಕರೆಯುತ್ತಾರೆ. ಈ ಜಲಪಾತದ ಮೇಲ್ಭಾಗದಲ್ಲಿ ಮತ್ತೊಂದು ಜಲಪಾತವಿದೆ. ಅದು ಕಾಡಿನ ಒಳಭಾಗದಲ್ಲಿದೆ. ಇದನ್ನು ಮಂಗಗಳು ಮಾತ್ರ ತಲುಪಬಹುದಾಗಿರುವುದ್ದರಿಂದ ಮಂಗನ ಜಲಪಾತ ಎಂದೂ ಹೆಸರುವಾಸಿಯಾಗಿದೆ.

ಚಾರಣ ಹೇಗೆ?: ಕೂಡ್ಲು ಫಾಲ್ಸ್‌ ಇರುವುದು ಕಾಡಿನೊಳಗೆ. ಹಾಗಾಗಿ ಈ ಜಾಗ ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ. ಪ್ರವಾಸಿಗರು ಅರಣ್ಯ ಇಲಾಖೆಯ ಕಚೇರಿಯಲ್ಲಿ ಪ್ರವೇಶ ಶುಲ್ಕ ಪಾವತಿಸಿ, ಇಲ್ಲಿಗೆ ಬರಬಹುದು. ಮಕ್ಕಳಿಗೆ ₹50, ದೊಡ್ಡವರಿಗೆ ₹100, ವಿದೇಶಿಗರಿಗೆ ₹200 ಶುಲ್ಕ ನಿಗದಿಪಡಿಸಲಾಗಿದೆ. ಕ್ಯಾಮರವಿದಲ್ಲಿ ಅದಕ್ಕೆ ಪ್ರತ್ಯೇಕ ಶುಲ್ಕ ಪಾವತಿಸಬೇಕು. ಅರಣ್ಯ ಇಲಾಖೆ ಬೆಳಿಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಈ ಜಲಪಾತ ವೀಕ್ಷಣೆಗೆ ಸಮಯಾವಕಾಶವನ್ನು ನೀಡಲಾಗಿದೆ.

ಪರಿಸರ ಸ್ನೇಹಿ ಚಾರಣ

ಕೂಡ್ಲು ಫಾಲ್ಸ್‌ ಸುತ್ತ ಮದ್ಯ (ಆಲ್ಕೊಹಾಲ್‌), ಬೀಡಿ, ಸಿಗರೇಟು ನಿಷೇಧವಿದೆ. ಹೀಗಾಗಿ ಪ್ರವಾಸಿಗರು ಇವ್ಯಾವುದನ್ನೂ ಕೊಂಡೊಯ್ಯುವಂತಿಲ್ಲ. ಫಾಲ್ಸ್‌ಗೆ ಹೋಗುವ ಮುನ್ನ, ಶುಲ್ಕ ಪಾವತಿಸಿ, ಕಚೇರಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ತಮ್ಮಲ್ಲಿರುವ ವಸ್ತುಗಳ ಕುರಿತು ನಿಖರ ಮಾಹಿತಿಯನ್ನು ನೀಡಿ ಚಾರಣ ಮುಂದುವರಿಸಬೇಕು.

ಹಾಗೆಯೇ, ಈ ತಾಣಕ್ಕೆ ಹೋಗುವವರು ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಶೀಷೆಗಳನ್ನು ಕೊಂಡೊಯ್ಯಬೇಡಿ. ಚಾರಣದ ಜಾಗದಲ್ಲಿ ಗಾಜಿನ ಶೀಷೆಗಳನ್ನು ಎಸೆಯುವುದು, ಕಸ–ಕಡ್ಡಿ ಹಾಕುವುದು ಮಾಡಬೇಡಿ. ಚಾರಣದ ವೇಳೆ, ಕೂಗಾಟ–ಕಿರುಚಾಟಕ್ಕೆ ಆಸ್ಪದ ನೀಡಬೇಡಿ. ನಿಮ್ಮ ಚಾರಣ ಪರಿಸರ ಸ್ನೇಹಿಯಾಗಿರಲಿ.

ಹೋಗುವುದು ಹೇಗೆ:ಮಂಗಳೂರಿನಿಂದ 110ಕಿಮೀ, ಉಡುಪಿಯಿಂದ 45ಕಿಮೀ ಹಾಗೂ ಹೆಬ್ರಿಯಿಂದ 23ಕಿಮೀ ಹಾಗೂ ಆಗುಂಬೆಯಿಂದ 123ಕಿಮೀ, ಕುಂದಾಪುರದಿಂದ 69ಕಿಮೀ ದೂರದಲ್ಲಿದೆ. ಬಸ್ಸುಗಳು ರಾಜ್ಯ ಹೆದ್ದಾರಿ ತನಕ ಇದ್ದರೂ, ನಂತರ 10ಕಿಮೀ ಮುಂದಕ್ಕೆ ಸಾಗಲು ಸ್ವಂತ ವಾಹನಗಳಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಬಾಡಿಗೆ ಜೀಪ್‌ಗಳು ಅಥವಾ ವಾಹನಗಳನ್ನು ಆಶ್ರಯಿಸಬೇಕು.

ಸೂಕ್ತ ಸಮಯ: ಕೂಡ್ಲು ತೀರ್ಥ ಜಲಪಾತದ ಪ್ರವಾಸ ಕೈಗೊಳ್ಳಲು ಆಗಸ್ಟ್‌ನಿಂದ ಜನವರಿವರೆಗೆ ಸೂಕ್ತ ಸಮಯ. ಈ ತಿಂಗಳಲ್ಲಿ ನೀರಿನ ಹರಿವು ಹೆಚ್ಚು ಇರುತ್ತದೆ. ಏಪ್ರಿಲ್‌–ಮೇ ತಿಂಗಳಲ್ಲೂ ಚಾರಣ ಮಾಡಬಹುದು. ಆದರೆ ನೀರು ಹರಿಯುವ ಪ್ರಮಾಣ ಕಡಿಮೆ ಇರುತ್ತದೆ.

ಊಟ–ವಸತಿ– ಎಚ್ಚರಿಕೆ

ಕಾಡಿನ ಮದ್ಯಭಾಗದಲ್ಲಿ ಈ ಜಲಪಾತ ಇರುವುದರಿಂದ ಇಲ್ಲಿ ಹೋಟೆಲ್‌, ಅಂಗಡಿಗಳಿಲ್ಲ. ಹಾಗಾಗಿ, ಚಾರಣಿಗರೇ ಆಹಾರ, ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.

ಮಳೆಗಾಲದಲ್ಲಿ ಚಾರಣ ಮಾಡುವಾಗ ಜಿಗಣೆ ಸಮಸ್ಯೆ ಇದೆ. ಜತೆಗೆ ನೀರಿನ ಹರಿವು ಹೆಚ್ಚಿರುತ್ತವೆ. ಇವೆಲ್ಲವುದಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.