ADVERTISEMENT

2025ರಲ್ಲಿ ಭಾರತೀಯ ಪ್ರವಾಸಿಗರ ನೆಚ್ಚಿನ ತಾಣ: ಮೇಘಾಲಯದ ರಾಜಧಾನಿ ಶಿಲಾಂಗ್– ವರದಿ

ಪಿಟಿಐ
Published 23 ಅಕ್ಟೋಬರ್ 2024, 13:43 IST
Last Updated 23 ಅಕ್ಟೋಬರ್ 2024, 13:43 IST
<div class="paragraphs"><p><strong>ಮೇಘಾಲಯದ ಉಮನ್‌ಗಾಟ್‌ ನದಿಯಲ್ಲಿನ ದೋಣಿ ವಿಹಾರ</strong></p></div>

ಮೇಘಾಲಯದ ಉಮನ್‌ಗಾಟ್‌ ನದಿಯಲ್ಲಿನ ದೋಣಿ ವಿಹಾರ

   

ನವದೆಹಲಿ: ಮೇಘಾಲಯದ ರಾಜಧಾನಿ ಶಿಲಾಂಗ್‌ ಹಾಗೂ ಅಜರ್‌ಬೈಜಾನ್‌ನ ಐತಿಹಾಸಿಕ ನಗರಿ ಬಾಕು, 2025ರಲ್ಲಿ ಪ್ರವಾಸಕ್ಕೆ ಭಾರತೀಯರು ಶೋಧಿಸುತ್ತಿರುವ ಎರಡು ಪ್ರಮುಖ ಪ್ರವಾಸಿ ತಾಣಗಳು ಎಂದು ಜಾಗತಿಕ ಪ್ರವಾಸಿ ಆ್ಯಪ್‌ Skyscanner ಪ್ರಕಟಿಸಿರುವ ‘ಟ್ರಾವೆಲ್ ಟ್ರೆಂಡ್ ರಿಪೋರ್ಟ್‌’ನಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರ ಪ್ರಕಟಿಸಲಾದ ವಾರ್ಷಿಕ ವರದಿಯಲ್ಲಿ ಶಿಲಾಂಗ್ ನಗರ ಅಗ್ರ ಸ್ಥಾನ ಪಡೆದಿದೆ. ಶೇ 66ರಷ್ಟು ಭಾರತೀಯರು ಈ ನಗರಕ್ಕೆ 2025ರಲ್ಲಿ ಪ್ರಯಾಣಿಸುವ ಉದ್ದೇಶ ಹೊಂದಿದ್ದಾರೆ. ಶಿಲಾಂಗ್ ಹಾಗೂ ಬಾಕು ನಂತರದ ಸ್ಥಾನದಲ್ಲಿ ಮಲೇಷ್ಯಾವನ್ನು ಪ್ರಯಾಣಿಕರು ಶೋಧಿಸಿದ್ದಾರೆ.

ADVERTISEMENT

‘ಇವುಗಳೊಂದಿಗೆ ನಾರ್ವೆಯ ಟ್ರೊಮ್ಸೊ, ಉಜ್ಬೇಕಿಸ್ತಾನದ ತಾಷ್ಕೆಂಟ್‌, ಸೌದಿ ಅರೇಬಿಯಾದ ಅಲ್‌–ಉಲಾದಂತ ಹೊಸ ತಾಣಗಳ ಭೇಟಿಗೆ ಭಾರತೀಯ ಪ್ರವಾಸಿಗರು ಆಸಕ್ತಿ ತೋರಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಅಜರ್‌ಬೈಜಾನ್‌ನ ಬಾಕು ನಗರದಲ್ಲಿರುವ ಮೇಡೆನ್ ಟವರ್‌

ಕೈಗೆಟಕುವ ಬೆಲೆಗೆ ಹೋಗಿಬರಬಹುದಾದ ತಾಣಗಳ ಶೋಧ

ಅಗ್ಗದ ವಿಮಾನ ದರ, ಹೋಟೆಲ್ ಶುಲ್ಕವನ್ನು ಬಯಸುವ ಪ್ರಯಾಣಿಕರ ಆಯ್ಕೆಯ ಮತ್ತೊಂದು ವಿಭಾಗದ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಆಲ್ಮಟಿ, ಕಜಕಿಸ್ತಾನ (ಶೇ 44), ಇಂಡೊನೇಷ್ಯಾದ ಜಕಾರ್ತಾ (ಶೇ 27), ಸಿಂಗಪೂರ ಹಾಗೂ ಕ್ವಾಲಾಂಪುರ (ಶೇ 19) ಶೋಧಿಸಿದ ಇತರ ನಗರಗಳು. 

ಈ ವಿಭಾಗದಲ್ಲಿ ತಾಣಗಳ ಶೋಧಿಸಿರುವ ಭಾರತೀಯರು ಕೊಟ್ಟ ಬೆಲೆಗೆ ಉತ್ತಮ ಮೌಲ್ಯವನ್ನು ಬಯಸುವವರಾಗಿದ್ದಾರೆ. ಇವರಲ್ಲಿ ಶೇ 65ರಷ್ಟು ಮಂದಿ ರಿಯಾಯಿತಿ ದರದಲ್ಲಿ ಉತ್ತಮ ಹೋಟೆಲ್ ಬಯಸುವವರು, ಶೇ 62ರಷ್ಟು ಜನ ಅಗ್ಗದ ವಿಮಾನ ಟಿಕೆಟ್‌ ಹಾಗೂ ಶೇ 54ರಷ್ಟು ಆಹಾರ ಬಯಸಿ ಸ್ಥಳ ನಿರ್ಧರಿಸುವವರೇ ಹೆಚ್ಚು.

‘ಭಾರತೀಯ ಪ್ರವಾಸಿಗರು ಕೇವಲ ಹೊಸ ತಾಣಕ್ಕೆ ಭೇಟಿ ನೀಡುವುದನ್ನು ಮಾತ್ರವಲ್ಲ, ಆ ಪ್ರವಾಸ ಅರ್ಥಪೂರ್ಣವಾಗಿರಬೇಕು, ಸಮಗ್ರ ಪ್ರವಾಸದ ಅನುಭೂತಿ ನೀಡಬೇಕು ಎಂದು ಬಯಸುತ್ತಾರೆ. 2025ರಲ್ಲಿ ಪ್ರಯಾಣಿಸುವವರು ತಮ್ಮ ಯೋಜನೆಯ ಒಟ್ಟು ಹಣದಲ್ಲಿ ಶೇ 86ರಷ್ಟು ವಿಮಾನಕ್ಕೆ ಹಾಗೂ ಕೆಲವರು ಶೇ 80ರಷ್ಟು ಹೋಟೆಲಿಗೆ ಖರ್ಚು ಮಾಡುವ ಯೋಜನೆ ಹೊಂದಿದ್ದಾರೆ. ಇದು ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತುಸು ಹೆಚ್ಚು’ ಎಂದು ಸ್ಕೈಸ್ಕ್ಯಾನರ್‌ನ ಮೋಹಿತ್ ಜೋಶಿ ತಿಳಿಸಿದ್ದಾರೆ.

ಹೀಗೆ ಪ್ರವಾಸದ ಯೋಜನೆ ರೂಪಿಸುತ್ತಿರುವವರಲ್ಲಿ 25 ರಿಂದ 34ರ ವಯೋಮಾನದವರ ಸಂಖ್ಯೆ ಶೇ 44ರಷ್ಟಿದೆ. ಇವರಲ್ಲಿ ಬಹುತೇಕರು ವಿವಿಧ ಕ್ರೀಡೆಗಳನ್ನು ನೇರವಾಗಿ ಕ್ರೀಡಾಂಗಣದಲ್ಲಿ ನೋಡಬಯಸುವವರಾಗಿದ್ದಾರೆ. ಫಾರ್ಮುಲಾ ಒನ್ ನೋಡಲು ಹೋಗುವವರೇ ಹೆಚ್ಚು. ಇದನ್ನು ಹೊರತುಪಡಿಸಿದರೆ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಬಯಸುವವರ ಸಂಖ್ಯೆಯೂ ದೊಡ್ಡದಿದೆ. ಇದರಲ್ಲಿ ಆಕಾಶ ಗಂಗೆ ನೋಡಬಯಸುವವರು ಶೇ 56ರಷ್ಟು, ರಾತ್ರಿಯ ಛಾಯಾಗ್ರಹಣ, ಬ್ರಹ್ಮಾಂಡ ಸೌಂದರ್ಯ ಸೆರೆಹಿಡಿಯುವವರ ಸಂಖ್ಯೆಯೂ ಸಾಕಷ್ಟಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.