ADVERTISEMENT

ಹಳ್ಳಿ ಜೀವನ, ಸಂಸ್ಕೃತಿಯ ‘ಸಿರಿ’: ಸಿದ್ಧ ಮ್ಯೂಸಿಯಂ

ಎಂ.ಮಹೇಶ
Published 26 ಜೂನ್ 2019, 19:30 IST
Last Updated 26 ಜೂನ್ 2019, 19:30 IST
ಸಿದ್ದಗಿರಿ ಮ್ಯೂಸಿಯಂನಲ್ಲಿರುವ ರಥೋತ್ಸವ ಬಿಂಬಿಸುವ ನೋಟ
ಸಿದ್ದಗಿರಿ ಮ್ಯೂಸಿಯಂನಲ್ಲಿರುವ ರಥೋತ್ಸವ ಬಿಂಬಿಸುವ ನೋಟ   

ಮಹಾರಾಷ್ಟ್ರದ ನೆಲದಲ್ಲಿ ಕನ್ನಡದ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಅದ್ಭುತ ಮ್ಯೂಸಿಯಂ ಮೈದಳೆದಿದೆ. ಅದು ಎಲ್ಲ ಭಾಷಿಕರ ಮೆಚ್ಚುಗೆಗೂ ಪಾತ್ರವಾಗಿದೆ. ಈ ಮ್ಯೂಸಿಯಂ ಬಗ್ಗೆ ಹಲವು ಬಾರಿ ಕೇಳಿದ್ದೆ. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ಮೇಲೆ, ಜನರು ಆಡುವ ಮೆಚ್ಚುಗೆ ಮಾತುಗಳ ಹಿಂದಿನ ಕಾರಣ ಅರ್ಥವಾಯಿತು.

ಮ್ಯೂಸಿಯಂ ಹೆಸರು ಸಿದ್ಧಗಿರಿ ಮ್ಯೂಸಿಯಂ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿದೆ. ನಾನು ಈ ಮ್ಯೂಸಿಯಂ ನೋಡಲು ಹೋಗಿದ್ದಾಗ ಅಲ್ಲಿ ಕರ್ನಾಟಕ, ಮಹಾರಾಷ್ಟ್ರ ಜತೆಗೆ, ಗೋವಾ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದಲೂ ಪ್ರವಾಸಿಗರು ಬಂದಿದ್ದರು. ಕೆಲವು ಮಂದಿ ವಿದೇಶಿಯರೂ ಕಂಡರು. ಅಲ್ಲಿ ಕನ್ನಡವೂ ಉಂಟು, ಹಿಂದಿಯೂ ಇದೆ; ಮರಾಠಿ ಮಾತನಾಡುವವರೂ ಇದ್ದಾರೆ. ಹೊರರಾಜ್ಯದಲ್ಲಿದ್ದರೂ ನಮ್ಮ ನೆಲದಲ್ಲಿಯೇ ನಿಂತಿದ್ದೇವೆ ಎನ್ನುವಂಥ ವಾತಾವರಣ ಕಾಣಸಿಗುವ, ಭಾಷಾ ವೈವಿಧ್ಯದಿಂದ ಕೂಡಿರುವ ಪ್ರವಾಸಿ ತಾಣ.

ಪಾತ್ರೆ ಅಂಗಡಿ ಚಿತ್ರಣ

ಅಲ್ಲಿ ಏನುಂಟು, ಏನಿಲ್ಲ?

ADVERTISEMENT

ಭಾರತದ ಶ್ರೀಮಂತ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕನ್ನಡಿಗರಾದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದ ಕನ್ಹೇರಿ ಮಠ ರೂಪಿಸಿರುವ ತಾಣವಿದು. ಗುಡ್ಡದ ಪ್ರಶಾಂತ ಪರಿಸರದಲ್ಲಿ 13 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ನಿರ್ಮಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ಮೂರು ವಿಭಾಗಗಳಿವೆ. ಒಂದು ಕಡೆ ಪುರಾಣಗಳ ಪರಿಚಯ. ಇನ್ನೊಂದು ಕಡೆ ಗ್ರಾಮಜೀವನ ದರ್ಶನ. ಜತೆಗೆ ಉತ್ಸವ ದರ್ಶನ ಹಾಗೂ ಪ್ರೇರಣಾ ಪಾರ್ಕ್. ಈ ಮೂರು ವಿಭಾಗಗಳಲ್ಲಿ ಒಂದೊಂದು ಭಾಗವೂ ಒಂದೊಂದು ಹೊಸ ಜಗತ್ತನ್ನು ಪರಿಯಚಿಸುತ್ತದೆ.

ನಿಗದಿತ ಶುಲ್ಕ ಪಾವತಿಸಿ ಬೃಹತ್‌ ಗುಹೆ ಪ್ರವೇಶಿಸಿದರೆ, ಗತ ಕಾಲದ ದಿನಗಳತ್ತ ಪ್ರವಾಸ ಶುರುವಾಗುತ್ತದೆ. ಋಷಿ–ಮುನಿಗಳ ಜ್ಞಾನ, ಸಂಶೋಧನೆ ಕುರಿತ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಗುಹೆಯೊಳಗೆ ಸಾಗುತ್ತಿದ್ದರೆ 30ಕ್ಕೂ ಹೆಚ್ಚಿನ ಋಷಿಗಳ ಪ್ರಯೋಗಗಳು ಕಣ್ಣಿಗೆ ಮುದ ನೀಡುತ್ತವೆ; ಆಕರ್ಷಿಸುತ್ತವೆ. ಜ್ಯೋತಿಷಶಾಸ್ತ್ರ, ಸಂಗೀತ, ವಿಜ್ಞಾನ, ವೈದ್ಯಶಾಸ್ತ್ರ, ತಂತ್ರಜ್ಞಾನ, ಕಲೆ, ವ್ಯಾಕರಣ, ಕೃಷಿ, ರಾಜನೀತಿ, ಧಾರ್ಮಿಕ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಪ್ರತಿಕೃತಿಗಳಿವೆ. ಅವೆಲ್ಲ ಆಗಿನ ಕಾಲದ ಜೀವನ ಪದ್ಧತಿಗಳನ್ನು ತಿಳಿಸಿಕೊಡುತ್ತವೆ. ಕಲಾಕೃತಿಗಳ ಸಂಕ್ಷಿಪ್ತ ಮಾಹಿತಿಯನ್ನು ಅಲ್ಲಿ ಹಾಕಲಾಗಿದೆ.

ಪ್ರಾಚೀನ ಕಾಲದಲ್ಲಿ ಋಷಿ–ಮುನಿಗಳು ಚಿಕಿತ್ಸೆ ನೀಡುತ್ತಿದ್ದ ಚಿತ್ರಣ

ಇನ್ನೊಂದು ಕಡೆಯಲ್ಲಿ ಭೂತಕನ್ನಡಿ ವಿಭಾಗ ಗಮನಸೆಳೆಯುತ್ತದೆ. ಕನ್ನಡಿಯಲ್ಲಿ ನಮ್ಮನ್ನು ನಾವು ವಿವಿಧ ಭಂಗಿಗಳಲ್ಲಿ ನೋಡಿಕೊಳ್ಳಬಹುದು. ನಮ್ಮನ್ನು ನೋಡಿ ನಗಲೂಬಹುದು; ಒಮ್ಮೊಮ್ಮೆ ಭಯವೂ ಆದೀತು! ಅಲ್ಲದೇ, ನಾವು ಎಲ್ಲಿಗೆ ಹೋಗುತ್ತಿದ್ದೇವೆ; ಮುಂದೆ ಹೇಗೆ ಹೋಗಬೇಕು ಎನ್ನುವುದೇ ಗೊಂದಲವಾಗುವಂತೆ ‘ಮೋಡಿ’ ಮಾಡುವ ನೆರಳು–ಬೆಳಕಿನಾಟ ಹಾಗೂ ಕಣ್ಕಟ್ಟಾಸ ರೋಮಾಂಚನ ನೀಡುತ್ತದೆ. ಅದನ್ನು ಅನುಭವಿಸಿಯೇ ನೋಡಬೇಕು.

ಗ್ರಾಮದರ್ಶನ ವಿಭಾಗದಲ್ಲಿ ವಿವಿಧ ಕಸುಬುಗಳ ಚಿತ್ರಣವಿದೆ. ಹಳ್ಳಿಯ ಸಹಜ ಜೀವನವನ್ನು ಅದು ಬಿಂಬಿಸುತ್ತವೆ. ಕಂಚುಗಾರ, ಕುಂಬಾರ, ಕಮ್ಮಾರ, ಹಡಪದ, ಲಂಬಾಣಿ, ಬಡಗಿ, ಚಮ್ಮಾರ, ದೊಂಬರಾಟ, ಕಲ್ಲುಒಡ್ಡ, ಜ್ಯೋತಿಷ್ಯದವರು, ಬಳೆಗಾರ, ಒಕ್ಕಲಿಗ, ಮಡಿವಾಳ, ಮಕ್ಕಳ ಆಟಗಳು, ಅಖಾಡದಲ್ಲಿ ಜಟ್ಟಿಗಳ ಕಾದಾಟ... ಮನಸೆಳೆಯುತ್ತವೆ. ದೇಸಿ ಆಟಗಳು, ಪಂಚಾಯ್ತಿ ಕಟ್ಟೆ, ಊರ ಬಾವಿ, ಬೇಸಾಯ, ವ್ಯಾಪಾರದ ಕುರಿತ ಕಲಾಕೃತಿಗಳು ಸೊಗಸಾಗಿವೆ. ಇಲ್ಲಿ ಗೌಡರು ಸೇರಿದಂತೆ ಎಲ್ಲರ ಮನೆಗಳಲ್ಲೂ ಭಯವಿಲ್ಲದೇ ನುಗ್ಗಬಹುದು! ಮನೆಯೊಳಗಿನವರು ಅವರವರ ಕೆಲಸಗಳಲ್ಲಿ ನಿರತರಾಗಿರುತ್ತಾರೆ, ಅಷ್ಟೇ!

ಒಂದು ಮೈದಾನದಲ್ಲಿ ರಥೋತ್ಸವ ನಡೆಯುತ್ತಿರುತ್ತದೆ. ಪೂಜಾರಿಯೊಬ್ಬರು ರಥದ ಮೇಲೆ ನಿಂತು ಘೋಷಣೆ ಕೂಗುತ್ತಿರುತ್ತಾರೆ; ಭಕ್ತರು ಹಗ್ಗ ಹಿಡಿದು ರಥ ಎಳೆಯುತ್ತಿದ್ದಾರೆ. ಸುತ್ತಲೂ ಅಂಗಡಿಗಳಲ್ಲಿ ಜನ ವ್ಯಾಪಾರ ಮಾಡುತ್ತಿದ್ದಾರೆ. ಕಲಾ ತಂಡಗಳು, ರಥೋತ್ಸವ ನೋಡುತ್ತಿರುವ ಜನರು, ಯುವಕ–ಯುವತಿಯರ ಸಂಭ್ರಮಿಸುತ್ತಿದ್ದಾರೆ...’

‘ಮ್ಯೂಸಿಯಂನಲ್ಲಿ ಇದೇನು ರಥೋತ್ಸವ’ ಎನ್ನುತ್ತಿದ್ದೀರಾ? ನಿಜ. ಇದು ನೈಜ ರಥೋತ್ಸವವಲ್ಲ. ನೈಜತೆಯನ್ನೇ ನಾಚಿಸು ವಂತಹ ರಥೋತ್ಸವದ ಪ್ರತಿಕೃತಿ (ಚಿತ್ರಗಳನ್ನು ನೋಡಿ).

ಇದರ ಜತೆಗೆ ಉಳುಮೆ ಸೇರಿದಂತೆ ಕೃಷಿ ಕೆಲಸದಲ್ಲಿ ತೊಡಗಿರುವ ರೈತರ ಹಲವು ಕಲಾಕೃತಿಗಳು ಆಕರ್ಷಿಸುತ್ತವೆ. ಪ್ರೇರಣಾ ಉದ್ಯಾನದಲ್ಲಿ ಸ್ವಾತಂತ್ರ್ಯ ಸೇನಾನಿಗಳ ಕುರಿತು ಚಿತ್ರಿಸಲಾಗಿದೆ. ಸಾವಯವ ಕೃಷಿ ಪ್ರಾತ್ಯಕ್ಷಿಕೆ ತಾಕುಗಳಿವೆ. ಗೋಶಾಲೆಯೂ ಇದೆ. ಇದಲ್ಲದೇ, ಮಕ್ಕಳಿಗಾಗಿ ಉದ್ಯಾನವಿದೆ. ಹಾರರ್ ಸಿನಿಮಾ ವೀಕ್ಷಿಸಲು ಚಿತ್ರಮಂದಿರವಿದೆ. ಹೀಗೆ, ಸುತ್ತಾಡಿದ ಮೇಲೆ ದಣಿವಾರಿಸಿಕೊಳ್ಳಲು ತಂಪುಪಾನೀಯ. ಉಪಾಹಾರಕ್ಕೆ ಅಲ್ಲಿ ಹೋಟೆಲ್‌ ವ್ಯವಸ್ಥೆ ಇದೆ.

ಪ್ರವೇಶ ದ್ವಾರದಲ್ಲಿ ದೊಡ್ಡ ಬಂಡೆಯಲ್ಲಿ ಕಪ್ಪೆ, ಹೆಡೆ ಎತ್ತಿರುವ ಹಾವು, ಮೊಸಳೆ, ರಂಗನಾಥಸ್ವಾಮಿ ಮೂರ್ತಿಗಳನ್ನು ಕೆತ್ತಲಾಗಿದೆ. ಅದರ ಮುಂದೆ ಫೋಟೊ ತೆಗೆಸಿಕೊಳ್ಳಲು ಬಹಳ ಮಂದಿ ಇಷ್ಟಪಡುತ್ತಾರೆ. ಬೇಸಿಗೆ, ದಸರೆ ರಜೆಯಲ್ಲಿ ಪ್ರವಾಸ ಕೈಗೊಳ್ಳ ಬಯಸುವವರು ಸಿದ್ಧಗಿರಿ ಮ್ಯೂಸಿಯಂ ಆಯ್ಕೆ ಮಾಡಿಕೊಳ್ಳಬಹುದು. ಕೊಲ್ಲಾಪುರದಲ್ಲಿರುವ ಶಕ್ತಿದೇವತೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಬಹುದು.

ಹೋಗುವುದು ಹೇಗೆ?

ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಲ್ಹಾಪುರಕ್ಕಿಂತಲೂ ಮುಂಚೆಯೇ ಈ ಮ್ಯೂಸಿಯಂಗೆ ಹೋಗುವ ದಾರಿ (ಎಡಗಡೆ) ಸಿಗುತ್ತದೆ. ಕನ್ಹೇರಿ ಮಠ ಎಂದೇ ಹೆಚ್ಚು ಪ್ರಸಿದ್ಧಿ.

ಊಟ, ಉಪಾಹಾರಕ್ಕೆ ವ್ಯವಸ್ಥೆ ಅಲ್ಲಿಯೇ ಇದೆ. ವಾಸ್ತವ್ಯಕ್ಕೆ ಕೊಲ್ಹಾಪುರ ಅಥವಾ ಬೆಳಗಾವಿಯಲ್ಲಿ ಹೋಟೆಲ್‌ಗಳಿವೆ.

ರಾಜ್ಯದ ಎಲ್ಲ ಭಾಗಗಳಿಂದಲೂ ಇಲ್ಲಿಗೆ ಬಸ್‌ಗಳಿವೆ. ಬೆಳಗಾವಿಯಿಂದ 104 ಕಿ.ಮೀ ದೂರವಿದೆ.

ಕೃಷ್ಣ

(ಚಿತ್ರಗಳು:ಲೇಖಕರವು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.