ಆಕೆ 24ರ ಚೆಲುವೆ ನಂದಿತಾ ಸಿಂಗ್. ಮಾನವ ಸಂಪನ್ಮೂಲ ಕಂಪನಿಯೊಂದರಲ್ಲಿ ಆಕರ್ಷಕ ಉದ್ಯೋಗ. ‘ಸೆಟ್ಲ್ ಆಗು’ ಎಂದು ಮನೆಯವರು, ಸಂಬಂಧಿಕರು ಆಗಾಗ ಹೇಳಿ ತಲೆ ಚಿಟ್ಟು ಹಿಡಿಸುತ್ತಿದ್ದರೂ ನಂದಿತಾಳದ್ದು ಬೇರೆಯೇ ಗುಂಗು. ಕೂಡಿಟ್ಟ ಹಣದಲ್ಲಿ ದೂರದ ಈಶಾನ್ಯ ರಾಜ್ಯಗಳಲ್ಲಿ ಸುತ್ತಾಡುವ ಹೆಬ್ಬಯಕೆ. ಅದೂ ಒಂದೆರಡು ವಾರಗಳಲ್ಲ, ತಿಂಗಳುಗಟ್ಟಲೆ ಪ್ರಕೃತಿಯಲ್ಲಿ ಸುತ್ತಾಡಿ ಜೀವನಾನುಭವ ಪಡೆಯುವ ಮಹದಾಸೆ. ರಜ ಕೊಡುವುದಿಲ್ಲ ಎಂದು ಹೆದರಿಸುವ ಬಾಸ್ ಎದುರು ರಾಜೀನಾಮೆ ಪತ್ರ ಇಟ್ಟು ಹೊರಟೇಬಿಟ್ಟಳು, ಅದೂ ಒಂಟಿಯಾಗಿ. ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ... ಟೂರಿಸಂ ಕಂಪೆನಿಗಳು ತೋರಿಸುವ ದೊಡ್ಡ ನಗರಗಳಲ್ಲ, ಸಣ್ಣಪುಟ್ಟ ಪಟ್ಟಣಗಳು, ಹಳ್ಳಿಗಳು.. ಪಯಣದಲ್ಲಿ ಎದುರಾಗುವ ಅಪರಿಚಿತ ಮುಖಗಳಲ್ಲಿ ಒಂಟಿತನದ ಭಾವ ಕಿಂಚಿತ್ತೂ ಅನುಭವಿಸಲಿಲ್ಲ ಎನ್ನುವಾಗ ಸುಖದ ನಗು ನಂದಿತಾಳ ಮೊಗದ ಮೇಲೆ.
‘ಒಂಟಿಯಾಗಿ ಹೊರಡುವಾಗ ಅಳುಕಿತ್ತು, ನಿಜ. ಆದರೆ ಪ್ರಯಾಣದಲ್ಲಿ ನನ್ನಂಥವರು ಕೆಲವೊಮ್ಮೆ ಜೊತೆಯಾದರು. ಅವರಲ್ಲಿ ಕಂಡ ಧೈರ್ಯ, ಆತ್ಮವಿಶ್ವಾಸ ನನ್ನ ಅಭದ್ರತೆ, ಆತಂಕವನ್ನು ಓಡಿಸಿದೆ. ಇದು ಆರಂಭ ಮಾತ್ರ. ಈಗ ಇ– ಲರ್ನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನೊಂದಿಷ್ಟು ಹಣ ಕೂಡಿಸಿಕೊಂಡು ಶ್ರೀಲಂಕಾ, ಥಾಯ್ಲಂಡ್ ಸುತ್ತುವಾಸೆ’ ಎಂದು ಕಣ್ಣು ಮಿಟುಕಿಸಿದ ನಂದಿತಾಳಲ್ಲಿ ಏಕತಾನತೆ ಕಳೆದುಕೊಂಡ ತಾಜಾತನವಿತ್ತು.
ಜನಪ್ರಿಯಗೊಂಡ ಸೋಲೊ ಟ್ರಾವೆಲಿಂಗ್
ಇದು ಒಬ್ಬಳು ನಂದಿತಾಳ ಅನುಭವ ಅಥವಾ ಎದೆಗಾರಿಕೆಯಲ್ಲ. ಇಂದು ಕಾಲ ಬದಲಾಗುತ್ತಿದೆ. ಸಾವಿರಾರು ಯುವತಿಯರು ಏಕವ್ಯಕ್ತಿ ಪ್ರಯಾಣವನ್ನು (ಸೋಲೊ ಟ್ರಾವೆಲಿಂಗ್) ಅಪ್ಪಿಕೊಳ್ಳುತ್ತಿದ್ದಾರೆ. ಜೊತೆಗಾರರಿಲ್ಲದೆ ಒಬ್ಬರೇ ಸುತ್ತುವುದು ಎಂದರೆ.. ಕಲ್ಪಿಸಿಕೊಳ್ಳಲೂ ಅಸಾಧ್ಯದ ಮಾತು ಎಂದು ಹಿಂದಿನ ತಲೆಮಾರಿನವರು ಹಲುಬುವುದಂಟು. ವಿದೇಶಿ ಯುವತಿಯರು ಒಂಟಿಯಾಗಿ ಪ್ರವಾಸಿ ತಾಣದಲ್ಲಿ ಸಿಕ್ಕಾಗ ಅಚ್ಚರಿಯಿಂದ ಕಣ್ಣರಳಿಸಿ ನೋಡಿದವರೀಗ ತಮ್ಮ ಮನೆಯಲ್ಲೇ ಅಂತಹ ಒಂಟಿ ಪಯಣಿಗಳನ್ನು ಕಂಡು ನಿಧಾನವಾಗಿ ‘ಹೌದು ಪ್ರಪಂಚ ಬದಲಾಗಿದೆ’ ಎಂದು ಒಪ್ಪಿಕೊಳ್ಳತೊಡಗಿದ್ದಾರೆ.
ಒಂಟಿ ಪ್ರಯಾಣದಲ್ಲಿರುವ ಎಲ್ಲಾ ರೀತಿಯ ಮಜಲು-ಗೋಜಲುಗಳನ್ನು ದಾಟಿಕೊಂಡು ಪ್ರಪಂಚ ಸುತ್ತುವ ಪರಿ ಜೀವನದ ಒಂದು ಭಾಗ ಎಂಬಂತೆ ಮಾಮೂಲಾಗಿಬಿಟ್ಟಿದೆ ಮಿಲೆನಿಯಲ್ ಯುವತಿಯರಿಗೆ. ಇವರು ಆಯ್ಕೆ ಮಾಡಿಕೊಳ್ಳುವುದು ಪ್ಯಾಕೇಜ್ ಪ್ರವಾಸವಲ್ಲ, ಆನ್‌ಲೈನಿನಲ್ಲಿ ಬುಕ್ ಮಾಡಿಕೊಂಡ ಸುರಕ್ಷಿತ ಎನಿಸಿಕೊಂಡ ಮಹಾ ನಗರದ ವಾಸ್ತವ್ಯ ಮಾತ್ರವಲ್ಲ, ಕಂಡು ಕೇಳರಿಯದ ದೇಶ ವಿದೇಶಗಳ ತಾಣಗಳು; ಕಾಲ್ನಡಿಗೆಯಲ್ಲಿ ಸುತ್ತುವ ಚಾರಣಗಳು.
ಇಂದಿನ ಯುವತಿಯರಿಗೆ ‘ನನ್ನ ಮುಷ್ಟಿಯಲ್ಲೇ ನನ್ನ ಸ್ವಾತಂತ್ರ್ಯ’ ಎಂಬ ಮಾತು ಹೊಸತೇನಲ್ಲ. ಓದಿನ ಆಯ್ಕೆ, ಉದ್ಯೋಗದ ಆಯ್ಕೆ ಆಕೆಯದ್ದೇ ಆಗಿರುವಾಗ ದುಡಿದ ಹಣವನ್ನು ಖರ್ಚು ಮಾಡುವ ಆಯ್ಕೆಯೂ ಆಕೆಯದೇ ಎಂಬ ಸರಳ ಮಾತಿನಲ್ಲಿ ಹುರುಳಿಲ್ಲದಿಲ್ಲ.
ಖ್ಯಾತ ವಸ್ತ್ರ ವಿನ್ಯಾಸಕಿ ಮಸಾಬಾ ಗುಪ್ತಾ, ಇತ್ತೀಚೆಗೆ ಒಂಟಿಯಾಗಿ ಪಯಣಿಸುವ ಯುವತಿಯರನ್ನು ಪ್ರೋತ್ಸಾಹಿಸುತ್ತ ‘ನಾನು ಒಂಟಿಯಾಗಿ ಪಯಣಿಸಿದಾಗ ನನ್ನದೇ ಆದ ಸಮಯ ನನಗೆ ಸಿಗುತ್ತದೆ. ಅದನ್ನು ಮೊದಲು ಅನುಭವಿಸಿ ಖುಷಿ ಪಡುವೆ. ಮುಂಬೈನ ಅವಸರದ ಬದುಕಿನಲ್ಲಿ, ಯಾವಾಗಲೂ ವೃತ್ತಿಪರರ ಮಧ್ಯೆ ಇರುವಾಗ ನನಗೆ ಈ ಪರಿಯ ಸ್ವಾತಂತ್ರ್ಯ ಸಿಗುವುದೇ ಇಲ್ಲ. ನಿಮ್ಮದೇ ಆದ ಸಮಯ, ಆಂತರ್ಯದ ಅರ್ಥವನ್ನು ಕಂಡುಕೊಳ್ಳಿ’ ಎಂದ ಮಾತಿನಲ್ಲಿ ಈ ಕಾಲದ ಟ್ರೆಂಡ್‌ನ ನಿಜಾರ್ಥ ಅಡಗಿದೆ.
ವಿದೇಶಗಳೇ ಸುರಕ್ಷಿತ
ಬೆಂಗಳೂರಿನ ಕೃತಿಕಾ ನಾಯ್ಡು ಹೇಳುವುದೂ ಇದನ್ನೇ. ‘ನನ್ನ ಮೊದಲನೇ ಒಂಟಿ ಪ್ರವಾಸ ಯುರೋಪ್‌ನಲ್ಲಿ 3 ವಾರಗಳದ್ದಾಗಿತ್ತು. ಮೊದಲಿಗೆ ಹೇಗೋ ಏನೋ ಎಂದೆನಿಸಿತ್ತು. ನಂತರ ಪ್ರತಿಕ್ಷಣವನ್ನೂ ನನಗೋಸ್ಕರ ಮಾತ್ರ ಜೀವಿಸುತ್ತಿದ್ದೇನೆ ಎನಿಸಹತ್ತಿತು. ಇದಾದ ನಂತರ, ಸ್ವಿಟ್ಜರ್‌ಲ್ಯಾಂಡ್, ಇಟಲಿ, ಬಾಲಿ... ಹೀಗೆ ಅನೇಕ ವಿದೇಶೀ ಪ್ರವಾಸಗಳನ್ನೇ ಕೈಗೊಂಡು ಬಂದೆ. ಸುರಕ್ಷತೆಯ ವಿಚಾರದಲ್ಲಿ ನಮ್ಮ ನಾಡಿಗಿಂತ ವಿದೇಶವೇ ಅತ್ಯಂತ ಸುರಕ್ಷಿತ' ಎಂಬುದು ಅವರ ಆಂಬೋಣ.
’ನಾನು ಉಳಿದುಕೊಳ್ಳುವ ಜಾಗಗಳೆಲ್ಲಾ ಸಾಮೂಹಿಕ ಕಮ್ಯುನಿಟಿ ಹಾಲ್ ಅಥವ ಹಾಸ್ಟೆಲ್‌ಗಳಾಗಿರುತ್ತವೆ. ಹೋಟೆಲ್‌ಗಳಲ್ಲಿ ಒಬ್ಬಳೇ ಉಳಿದುಕೊಳ್ಳುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಹಾಗೆಯೇ ನನ್ನ ಸುರಕ್ಷತೆಗೆಂದು ನನ್ನ ಬ್ಯಾಗ್‌ನಲ್ಲಿ ಯಾವಾಗಲೂ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತೇನೆ’ ಎಂದು ನಗುತ್ತಾರೆ.
ಮತ್ತೋರ್ವ ಪ್ರವಾಸಿ ಮೇಫಾ ಜಟಕಿ, ‘ನಾನು 21ನೆಯ ವಯಸ್ಸಿನಿಂದಲೂ ಒಂಟಿಯಾಗಿ ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ಇದಕ್ಕೆ ಇಂಥದೇ ಸಮಯ, ಜಾಗ ಎಂದಿಲ್ಲ. ಮನಸ್ಸು ಬಂದಾಗ ಬ್ಯಾಗ್‌ಪ್ಯಾಕ್ ಏರಿಸಿಕೊಂಡು, ಯಾರ ಅನುಮತಿಗೂ ಕಾಯದೆ ಹೊರಟು ಬಿಡುತ್ತೇನೆ’ ಎನ್ನುತ್ತಾರೆ.
ಆ್ಯಪ್‌ಗಳೇ ಸಹಪಯಣಿಗರು
‘ಗೂಗಲ್ ಮ್ಯಾಪ್ ಇರುವುದರಿಂದ ನಾನು ಎಲ್ಲಿ ಓಡಾಡಲೂ ತೊಂದರೆಯಾಗುವುದಿಲ್ಲ. ಯಾರ ಅಂಕೆ, ಕಡಿವಾಣ ಇರದೆ ನನ್ನ ಜೀವನವನ್ನು ನಾನೇ ಸಂಪೂರ್ಣವಾಗಿ ಜೀವಿಸಲು ಇಂಥ ಸಮಯಗಳಲ್ಲಿ ಸಾಧ್ಯವಾಗುತ್ತದೆ. ಒಬ್ಬಂಟಿಗಳಾಗಿ ಪ್ರಯಾಣಿಸುವಾಗ ನಮ್ಮ ಮನೆಮಂದಿಗೆ ಫೋನ್ ಅಥವ ವಾಟ್ಸಾಪ್ ಸಂದೇಶದ ಮೂಲಕ ನನ್ನ ಇರುವು ಹಾಗೂ ಯೋಗಕ್ಷೇಮವನ್ನು ಅಪ್‌ಡೇಟ್ ಮಾಡುವುದರಿಂದ ಮನೆಮಂದಿಗೂ ಸಮಾಧಾನ’ ಎನ್ನುತ್ತಾರೆ ಇನ್ನೊಬ್ಬ ಸೋಲೊ ಟ್ರಾವೆಲರ್ ರಶ್ಮಿ.
ಪ್ರವಾಸ ಮುಗಿಸಿ ಬರುವ ಇಂತಹ ಯುವತಿಯರಲ್ಲಿ ಒಂದು ಬದಲಾವಣೆಯಂತೂ ಢಾಳಾಗಿ ಕಾಣುತ್ತದೆ. ಅಧ್ಯಾತ್ಮದ ಬಗ್ಗೆ ಬದಲಾದ ನಿಲುವು, ಹೆಚ್ಚಿದ ಆತ್ಮವಿಶ್ವಾಸ, ಬದುಕನ್ನು ಪ್ರೀತಿಸುವ ರೀತಿಯನ್ನು ನಿಚ್ಚಳವಾಗಿ ಗುರುತಿಸಬಹುದು.
‘ಚೆನ್ನಾಗಿ ಓದು, ಒಳ್ಳೆಯ ಉದ್ಯೋಗ ಸಂಪಾದಿಸು. ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ. ಸಂಸಾರ ಮಾಡಿಕೊಂಡು ಸುಖವಾಗಿರು’ ಎಂಬ ಮಾತುಗಳಾಗಲಿ, ‘ಹಣ ಭವಿಷ್ಯಕ್ಕೆ ಬೇಕಾಗುತ್ತದೆ. ಮಕ್ಕಳ ಓದು, ಅವರ ಭವಿಷ್ಯಕ್ಕೆ ಬೇಡವೇ?’ ಎಂಬ ಉಪದೇಶಗಳಿಗಾಗಲಿ ಇಲ್ಲಿ ತಾವಿಲ್ಲ. ಭೂತ– ಭವಿಷ್ಯಕ್ಕಿಂತ ವರ್ತಮಾನದ ಖುಷಿ ಮುಖ್ಯವಾಗಿದೆ. ‘ಮಿ ಟೈಮ್’ ಮುಂಚೂಣಿಗೆ ಬಂದುಬಿಟ್ಟಿದೆ. ಬದುಕನ್ನು ನಿಯಂತ್ರಿಸುವ, ಭವಿಷ್ಯದ ಬಗ್ಗೆ ಹೆದರಿಸುವ ಪೋಷಕರಿಗಿಂತ ವಿಶಾಲವಾದ ಪ್ರಪಂಚದ ಬಗ್ಗೆ ಅರಿಯುವ, ಹೊಸ ಹೊಳಹನ್ನು ಕಂಡುಕೊಳ್ಳುವ ರೀತಿಯಾದ ಪ್ರವಾಸ ಹೆಚ್ಚು ಪ್ರಿಯವೆನ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.