ADVERTISEMENT

ವಸಂತ ಕಾಲ: ಜಪಾನ್‌ನಲ್ಲಿ ವಿಸ್ಟೇರಿಯಾ ಹೂ ಹಬ್ಬ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ವಿಸ್ಟೇರಿಯಾ ಹೂವುಗಳನ್ನು ಹೊದ್ದುನಿಂತ ಮರ
ವಿಸ್ಟೇರಿಯಾ ಹೂವುಗಳನ್ನು ಹೊದ್ದುನಿಂತ ಮರ   
ಜಪಾನ್‌ನಲ್ಲಿ ವಸಂತ ಕಾಲದಲ್ಲಿ ಅರಳಿ ಪರಿಮಳ ಸೂಸುವ ವಿಸ್ಟೇರಿಯಾ ಹೂಗಳದೇ ಜಾತ್ರೆ. ಎಲ್ಲಿ ನೋಡಿದರೂ ನೇರಳೆ ಬಣ್ಣವನ್ನು ಹೊದ್ದುಕೊಂಡ ಬಳ್ಳಿ, ಚಪ್ಪರ, ಮರಗಳದೇ ಪಾರಮ್ಯ. ಟೋಕಿಯೊದಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿರುವ ಚಿಕ್ಕಮಗಳೂರಿನ ಶ್ವೇತ ಆರಾಧ್ಯ ಈ ಕುರಿತು ಆಪ್ತವಾಗಿ ಬರೆದಿದ್ದಾರೆ.

‘ಜಪಾನ್‌ನಲ್ಲಿ ಅತ್ಯಂತ ಸುಂದರವಾದ ಕಾಲ ಯಾವುದು?’–ತವರು ರಾಜ್ಯ ಕರ್ನಾಟಕದಲ್ಲಿರುವ ಗೆಳತಿ ಕೇಳಿದಳು. ‘ವಸಂತ ಕಾಲ’ ಎಂದು ಕ್ಷಣಾರ್ಧದಲ್ಲಿ ಹೇಳಿದೆ. ವಸಂತ ಕಾಲ ನನಗಷ್ಟೇ ಅಲ್ಲ, ಇಡೀ ಜಪಾನಿಗೇ ಇಷ್ಟ. ಈ ಸಮಯದಲ್ಲಿ ಎಲ್ಲಿ ನೋಡಿದರೂ ವಿಸ್ಟೇರಿಯಾ ಹೂವುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ನಾನು ಟೋಕಿಯೊದಲ್ಲಿರುವ ಬೌದ್ಧ ದೇವಾಲಯದಲ್ಲಿ ‘ವಿಸ್ಟೇರಿಯಾ ಹೂ ಹಬ್ಬ’ಕ್ಕೆ ಹೋಗಿದ್ದೆ. ಅಲ್ಲಿಗೆ ಜನಸಾಗರವೇ ಹರಿದುಬರುತ್ತದೆ.

ನೇರಳೆ ಬಣ್ಣದ ಅಂಕುಡೊಂಕಾದ ಬಳ್ಳಿಗಳ ಚಪ್ಪರ, ಅದರ ಕೆಳಗೆ ದ್ರಾಕ್ಷಿ ಗೊಂಚಲಿನಂತೆ ತೂಗಾಡುವ ವಿಸ್ಟೇರಿಯಾ ಹೂವುಗಳನ್ನು ಹತ್ತಿರದಿಂದ ನೋಡುವುದೇ ಸೊಗಸು. ಜಪಾನಿ ಭಾಷೆಯಲ್ಲಿ ‘ಫುಜಿ’ ಎಂದು ಕರೆಯಲ್ಪಡುವ ವಿಸ್ಟೇರಿಯಾ ಹೂವಿನ ಪರಿಮಳ ತಂಪಾದ ಗಾಳಿಯೊಂದಿಗೆ ಎಲ್ಲಾ ಕಡೆ ಪಸರಿಸುತ್ತಿತ್ತು. ಜನರೆಲ್ಲರೂ ಉತ್ಸಾಹದಿಂದ ನೋಡುತ್ತಾ ಅದರ ಸೌಂದರ್ಯಕ್ಕೆ ಮೈಮರೆತ್ತಿದ್ದರು. ಕೆಲವರು ಫೋಟೊ ತೆಗೆದುಕೊಳ್ಳುವುದಕ್ಕೆ ಸರಿಯಾದ ಜಾಗವನ್ನು ಹುಡುಕುತ್ತಿದ್ದರು. ಜಾಗ ಸಿಕ್ಕ ಕೂಡಲೇ ಹೂವಿನ ಸೌಂದರ್ಯವನ್ನು ಸವಿಯುತ್ತಾ ಅಲ್ಲೇ ನಿಂತುಬಿಡುತ್ತಿದ್ದರು. ಇದನ್ನು ನೋಡಿದ ಉಳಿದವರು ‘ಅವರು ಯಾವಾಗ ಹೊರಡುತ್ತಾರೆ, ನಾವೂ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳಬೇಕು. ಅದಕ್ಕೆ ಅವಕಾಶ ಸಿಗುತ್ತದೆಯೋ ಇಲ್ಲವೋ’ ಎಂದು ಚಡಪಡಿಸುತ್ತಿದ್ದರು. ಅವರಲ್ಲಿ ನಾನೂ ಒಬ್ಬಳಾಗಿದ್ದೆ. ಜೇನುನೊಣ ಅತೀ ವೇಗವಾಗಿ ‘ಗುಂಯ್’ ಎಂದು ಸದ್ದು ಮಾಡುತ್ತಾ ಬಂದಿತು. ಅದಕ್ಕೆ ಹೆದರಿ ಓಡುವ ಮಂದಿ ಒಂದು ಕಡೆಯಾದರೆ, ವಿಸ್ಟೇರಿಯಾ ಹೂವಿನ ಮಕರಂದವನ್ನು ಹೀರುತ್ತಿರುವ ಜೇನುನೊಣವನ್ನು ಹಿಂದೆ ಸರಿಸಿ ಹೂವಿನ ಪರಿಮಳವನ್ನು ಸವಿಯುತ್ತಾ ನಿಂತ ಜನರನ್ನು ನೋಡಿ ಆಶ್ಚರ್ಯವಾಯಿತು. 

ಇದು ದ್ರಾಕ್ಷಿಯಲ್ಲ! ವಿಸ್ಟೇರಿಯಾ ಹೂವುಗಳ ಗೊಂಚಲು.

ಪಕ್ಕದಲ್ಲೇ ಇದ್ದ ಕೊಳದಲ್ಲಿ ವಿಸ್ಟೇರಿಯಾ ಹೂಗಳ ಪ್ರತಿಬಿಂಬ ನೀರಿನೊಳಗೆ ಮೂಡುತ್ತಿತ್ತು. ಒಂದೆರಡು ಆಮೆಗಳು ಬಿಸಿಲಿಗೆ ಮೈವೊಡ್ಡಿ ಕಲ್ಲಿನ ಮೇಲೆ ಪ್ರಶಾಂತವಾಗಿ ಕುಳಿತ್ತಿದ್ದವು. ಅಂದು  ಪ್ರವಾಸಿಗರ ದಂಡೇ ನೆರೆದಿತ್ತು. ಹವಾಮಾನ ಕೂಡ ಬೆಚ್ಚಗಿತ್ತು. ಹಾಗಾಗಿ ಜನ ಜಾತ್ರೆ ಸೇರಿತ್ತು. ಎರಡು ಮುದ್ದಾದ ನಾಯಿಮರಿಗಳನ್ನು ಚೆಂದದ ಉಡುಪಿನಿಂದ ಅಲಂಕರಿಸಿ ಟ್ರಾಲಿಯಲ್ಲಿ ತರುತ್ತಿದ್ದರು. ನಾನು ಅವರಿಗೆ ಮನವಿ ಮಾಡಿ ಅವುಗಳನ್ನು ವಿಸ್ಟೇರಿಯಾ ಹೂವುಗಳ ಕೆಳಗೆ ಕೂರಿಸಿ ಫೋಟೊ ಕ್ಲಿಕ್ಕಿಸುತ್ತಿಸುತ್ತಿದ್ದೆ. ಇದನ್ನು ಕಂಡು ಮತ್ತಷ್ಟು ಜನರು ಬಂದು ಸೇರಿದರು. ಅಲ್ಲಿ ದೊಡ್ಡ ಗುಂಪೇ ಕೂಡಿತ್ತು. ಹುಡುಗಿಯರು ಮುದ್ದಾದ ನಾಯಿಮರಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರೆ, ಅಜ್ಜಿಯರು ಅವುಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇಲ್ಲಿಯ ಜನರಿಗೆ ನಾಯಿಗಳೆಂದರೆ ಪ್ರಾಣ. 

ADVERTISEMENT

ದೂರದಲ್ಲಿ ದೊಡ್ಡಗುಂಪು ಕಂಡಿತು. ಹತ್ತಿರ ಹೋಗಿ ನೋಡಿದರೆ ಅಲ್ಲಿ ಅಜ್ಜಿಯರೇ ಇದ್ದರು. ‘ಈ ವರ್ಷ ವಿಸ್ಟೇರಿಯಾ ಹೂವುಗಳು ಬೇಗ ಅರಳಿವೆ. ಕಳೆದ ವರ್ಷಕ್ಕಿಂತ ಸೊಗಸಾಗಿವೆ. ಏನು ಅದೃಷ್ಟ ನಮ್ಮದು, ನಾವೂ ಕೂಡ ಸರಿಯಾದ ಸಮಯಕ್ಕೆ ಬಂದಿದ್ದೀವಿ’ ಎಂದು ಮಾತಾಡಿಕೊಳ್ಳುತ್ತಿದ್ದದು ನನ್ನ ಕಿವಿಗೆ ಬಿತ್ತು. ನನಗೂ ಸಹ ಹೌದಲ್ಲವೇ, ಕಳೆದ ವರ್ಷ ಇಷ್ಟು ಹೂವುಗಳಿರಲಿಲ್ಲವಲ್ಲ, ಹಾಗಾದರೆ ನಾನೂ ತಡವಾಗಿ ಬಂದಿದ್ದೆನೇನೋ ಅನಿಸಿತು.

ಜಪಾನಿನ ಜನರು ಏಕೆ ವಿಸ್ಟೇರಿಯಾ ಹೂವವನ್ನು ಇಷ್ಟಪಡುತ್ತಾರೆ ಎನ್ನುವ ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಇದಕ್ಕೆ ಉತ್ತರ ಹುಡುಕುತ್ತಾ ಹೋದೆ...

ಜಪಾನಿನಲ್ಲಿ ವಿಸ್ಟೇರಿಯಾವನ್ನು ಹಲವು ಶತಮಾನಗಳಿಂದ ಬೆಳೆಸಲಾಗುತ್ತಿದೆ. ಸಾವಿರದ ಇನ್ನೂರು ವರ್ಷಗಳಷ್ಟು ಹಳೆಯದಾದ ಕೆಲವು ವಿಸ್ಟೇರಿಯಾ ಮರಗಳಿವೆ! ಆ ಜಾಗಗಳನ್ನು ನೋಡಲು ಪ್ರತಿ ವರ್ಷ ಜನ ಕಿಕ್ಕಿರಿದು ಸೇರುತ್ತಾರೆ. ವಿಸ್ಟೇರಿಯಾ ಹೂವುಗಳ ಸೌಂದರ್ಯ, ಸಾಂಕೇತಿಕತೆ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ಇಲ್ಲಿನ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಹೂವುಗಳನ್ನು ನೋಡುವುದನ್ನೇ ಜಾತ್ರೆಯಂತೆ ಸಂಭ್ರಮಿಸುತ್ತಾರೆ.  ಜಪಾನಿನಲ್ಲಿ ನೇರಳೆ ಬಣ್ಣವು ಯಾವಾಗಲೂ ವಿಶೇಷ ಅರ್ಥವನ್ನು ಸೂಚಿಸುತ್ತದೆ. ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ರಾಜಮನೆತನದವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಬಹುದಾಗಿತ್ತು.

ಕಲೆಗೆ ಸ್ಫೂರ್ತಿ

ಜಪಾನಿನ ಇತಿಹಾಸದುದ್ದಕ್ಕೂ ವಿಸ್ಟೇರಿಯಾ ಹೂವು ಅಸಂಖ್ಯಾತ ಕಲಾವಿದರು, ಕವಿಗಳು ಮತ್ತು ಕುಶಲಕರ್ಮಿಗಳಿಗೆ ಸ್ಫೂರ್ತಿಯಾಗಿದೆ. ಇದರ ಸುಂದರವಾದ ರೂಪ ಮತ್ತು ರೋಮಾಂಚಕ ಬಣ್ಣಗಳನ್ನು ವರ್ಣಚಿತ್ರಗಳು, ಪಿಂಗಾಣಿ ವಸ್ತುಗಳು ಹಾಗೂ ಜಪಾನಿಯರ ಸಾಂಪ್ರದಾಯಿಕ ಉಡುಗೆಯಾದ ‘ಕಿಮೋನೋ’ಗಳಲ್ಲಿ ಚಿತ್ರಿಸಲಾಗಿದೆ.

ಸಾಮಾನ್ಯವಾಗಿ ಈ ಹೂವುಗಳು ಏಪ್ರಿಲ್‌ನಿಂದ ಮೇವರೆಗೆ ಅರಳುತ್ತವೆ. ಈ ಸಮಯದಲ್ಲಿ ಜಪಾನಿಗೆ ಪ್ರವಾಸಕ್ಕೆಂದು ಬಂದರೆ ವಿಸ್ಟೇರಿಯಾವನ್ನು ತಪ್ಪದೇ ವೀಕ್ಷಿಸಿ. ಸರಿಯಾದ ಪೂರ್ವಸಿದ್ಧತೆಯಿದ್ದರೆ  ಚೆರ‍್ರಿ ಹೂಗಳು, ವಿಸ್ಟೇರಿಯಾ ಮತ್ತು ಇನ್ನೂ ಅನೇಕ ಹೂವುಗಳನ್ನು ನೋಡಬಹುದು.

ಈ ವಿಸ್ಟೇರಿಯಾ ಹೂವುಗಳು ಸಂಪ್ರದಾಯ ಮತ್ತು ಆಧುನಿಕತೆಯ ಎಳೆಗಳನ್ನು ಒಟ್ಟಿಗೆ ನೇಯ್ಗೆ ಮಾಡುತ್ತವೆ. ಪ್ರೀತಿ ಮತ್ತು ದೀರ್ಘಾಯುಷ್ಯವನ್ನು ಸಂಕೇತಿಸುತ್ತವೆ. ಹಾಗಾಗಿ ಜಪಾನಿನ ಕಲೆ ಮತ್ತು ಹಬ್ಬಗಳಲ್ಲಿ ಈ ಹೂವುಗಳನ್ನು ಹೆಚ್ಚು ಗೌರವಿಸಲಾಗುತ್ತದೆ.

ನಾನು ಮತ್ತೊಂದು ವಸಂತಕ್ಕಾಗಿ ಕಾತರಳಾಗಿದ್ದೇನೆ...

ವಿಸ್ಟೇರಿಯಾ ಹೂವುಗಳ ಹಬ್ಬ ನಡೆಯುವ ಬೌದ್ಧ ದೇವಾಲಯ
ಚ್ಯುಂಯಿಂಗಮ್‌ನಂಥ ದಾಂಗೋ

ವಿಸ್ಟೇರಿಯಾ ಹೂವುಗಳನ್ನು ನೋಡಲು ಸುತ್ತಾಡುತ್ತಾ ಬಹಳ ಹಸಿವಾಗಿತ್ತು. ತಿನ್ನಲು ಹುಡುಕಾಡುತ್ತಿದ್ದೆ. ಆಗ ಜೋಳದ ತೆನೆಯನ್ನು ಕೆಂಡದಲ್ಲಿ ಸುಡುವ ಹಾಗೆ ಅಕ್ಕಿಯಲ್ಲಿ ಮಾಡಿದ ಮೂರು ಉಂಡೆಗಳನ್ನು ಕಡ್ಡಿಯಲ್ಲಿ ಚುಚ್ಚಿ ಕೆಂಡದಲ್ಲಿ ಸುಡುತ್ತಿದ್ದರು. ಅದು ಇಲ್ಲಿಯ ಜನರ ಅಚ್ಚುಮೆಚ್ಚಿನ ತಿಂಡಿ. ಜಪಾನಿನಲ್ಲಿ ಯಾವುದೇ ಜಾತ್ರೆಗೆ ಹೋದರೂ ತಪ್ಪದೇ ಇದನ್ನು ಕೊಂಡುಕೊಳ್ಳುತ್ತೇನೆ. ಇದನ್ನು ‘ದಾಂಗೋ’ ಎಂದು ಕರೆಯುತ್ತಾರೆ. ಬಿಸಿಬಿಸಿಯಾದ ‘ದಾಂಗೋ’ ಸವಿಯಲು ಆರಂಭಿಸಿದೆ, ಚ್ಯುಯಿಂಗಮ್ ತಿನ್ನುವಾಗ ಬಾಯಿಗೆ ಹೇಗೆ ಅಂಟುತ್ತೋ ಹಾಗೆ ಅನ್ನಿಸಿತು, ಆದರೆ ಅಕ್ಕಿಯಲ್ಲಿ ಮಾಡಿದ ತಿಂಡಿಯಾದ್ದರಿಂದ ತುಂಬಾ ರುಚಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.