ಕೊಲೊಂಬೊ: ಶ್ರೀಲಂಕಾ ವಿಮಾನಯಾನ ಸಂಸ್ಥೆಯು ದ್ವೀಪರಾಷ್ಟ್ರದ ಪ್ರಮುಖ ಸ್ಥಳಗಳ ದರ್ಶನ ಮಾಡಿಸಿದ್ದು, ಇದಕ್ಕಾಗಿ ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ರಾಮಾಯಣವನ್ನು ಸೊಗಸಾಗಿ ಹೇಳುವ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ದಿ ರಾಮಾಯಣ ಟ್ರಯಲ್’ ಎಂಬ ಈ ಜಾಹೀರಾತಿನಲ್ಲಿ ಅಜ್ಜಿಯೊಬ್ಬರು ರಾಮಾಯಣದ ಪುಸ್ತಕ ಹಿಡಿದು ಮೊಮ್ಮಗನಿಗೆ ಪೌರಾಣಿಕ ಕಥೆಯನ್ನು ವಿವರಿಸುತ್ತಾರೆ. ಹೀಗೆ ಸಾಗುತ್ತಿದ್ದಂತೆ, ಶ್ರೀಲಂಕಾದ ಹಲವು ಸ್ಥಳಗಳ ದರ್ಶನವಾಗುತ್ತಾ ಸಾಗುತ್ತದೆ. ಪೌರಾಣಿಕ ಕಥೆಗಳಲ್ಲಿ ಉಲ್ಲೇಖಿಸಿರುವ ಸ್ಥಳಗಳ ಕುರಿತು ಓದುತ್ತಾ, ಅದಕ್ಕೆ ತಳುಕು ಹಾಕಿಕೊಂಡ ಇಂದಿನ ತಾಣಗಳಿಗೆ ಭೇಟಿ ನೀಡುವ ಕುತೂಹಲಕಾರಿ ಪ್ರಯಾಣವಿದು’ ಎಂಬ ಒಕ್ಕಣೆಯೊಂದಿಗೆ ಶ್ರೀಲಂಕನ್ ಏರ್‌ಲೈನ್ಸ್ ಈ ಜಾಹೀರಾತನ್ನು ಹಂಚಿಕೊಂಡಿದೆ.
ಮೊಮ್ಮಗನ ಕುತೂಹಲದ ಪ್ರಶ್ನೆಗಳಿಗೆ ಚಿತ್ರಗಳುಳ್ಳ ಪುಟಗಳ ತಿರುವಿ ಹಾಕುತ್ತಾ ವಿವರಿಸುವ ಅಜ್ಜಿ, ಸೀತೆಯನ್ನು ವಿಮಾನ ಮೂಲಕ ಅಪಹರಿಸಿದ ರಾವಣನಿಂದ ಆರಂಭಿಸಿ, ರಾವಣನನ್ನು ಕೊಂದು, ಸೀತೆಯನ್ನು ಅಯೋಧ್ಯೆಗೆ ರಾಮ ಕರೆದೊಯ್ಯುವ ಹಾಗೂ ವಿಭೀಷಣನ ಪಟ್ಟಾಭಿಷೇಕದವರೆಗೂ ಸಾಗುವ ರಾಮಾಯಣದ ಕಥೆಯನ್ನು ಸ್ಥಳ ಮಹಿಮೆ ಸಹಿತ ವಿವರಿಸುತ್ತಾ ಸಾಗುತ್ತಾರೆ.
ಐದು ನಿಮಿಷಗಳ ಈ ವಿಡಿಯೊದಲ್ಲಿ, ಸೀತೆಯನ್ನು ಲಂಕಾಧಿಪತಿ ರಾವಣ ತಮ್ಮ ಪುಷ್ಪಕವಿಮಾನದಲ್ಲಿ ಅಪಹರಿಸಿ ಲಂಕಾಗೆ ಕರೆತರುತ್ತಾನೆ. ಅಲ್ಲಿ ಈಗಿನ ಉಸಗೊಂಡ ರಾಷ್ಟ್ರೀಯ ಉದ್ಯಾನದ ‘ಎಲ್ಲಾ’ ಎಂಬ ಸ್ಥಳದ ಬಳಿ ಇರುವ ರಾವಣ ಗುಹೆಯಲ್ಲಿಡುತ್ತಾನೆ. ನಂತರ ಚಾರಿಯಟ್ ಪಥದಲ್ಲಿರುವ ಹಕ್ಗಲ ಜೈವಿಕ ಉದ್ಯಾನದಲ್ಲಿರಿಸುತ್ತಾನೆ (ಅಶೋಕ ವನ).
ಹೀಗೆ ಸ್ಥಳ ಪುರಾಣ ಸಹಿತ ರಾಮಾಯಣದ ಕಥೆ ಸಾಗುತ್ತದೆ. ಸೀತಾ ಅಮ್ಮನ್ ದೇವಾಲಯ, ಭಾರತ ಹಾಗೂ ಶ್ರೀಲಂಕಾ ನಡುವೆ ಆಂಜನೇಯ ಹಾಗೂ ಕಪಿ ಸೈನ್ಯ ರಾಮನಿಗಾಗಿ ನಿರ್ಮಿಸಿದರು ಎನ್ನಲಾಗುವ ‘ರಾಮ ಸೇತು’, ಮೂರ್ಛೆ ಹೋದ ಲಕ್ಷ್ಮಣ ಎಚ್ಚರಿಸಲು ಹಿಮಾಲಯದಿಂದ ಆಂಜನೇಯ ಹೊತ್ತು ತರುವ ಪರ್ವತ ಇಟ್ಟಿರುವ ಜಾಗ, ಭ್ರಹ್ಮಾಸ್ತ್ರ ಬಳಸಿ ರಾವಣನ ಕೊಂದ ಸ್ಥಳ ಹೀಗೆ ಪೌರಾಣಿಕ ಕಥೆಗೆ ಸಂಬಂಧಿಸಿದ ಇಂದಿನ ಸ್ಥಳಗಳ ಮಾಹಿತಿಯು ಅನಾವರಣಗೊಳ್ಳುತ್ತಾ ಸಾಗುತ್ತದೆ.
ವೈಮಾನಿಕ ದೃಶ್ಯಾವಳಿ ಮೂಲಕ ಸೆರೆ ಹಿಡಿದಿರುವ ಪ್ರತಿಯೊಂದು ಸ್ಥಳಗಳೂ ಶ್ರೀಲಂಕಾದ ಹಸಿರು ಹೊದ್ದ ಸುಂದರ ತಾಣಗಳ ದರ್ಶನ ಮಾಡಿಸುತ್ತದೆ. ಅಂತಿಮವಾಗಿ ನನ್ನನ್ನೂ ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾ ಕಿಟಕಿ ತೆರೆದಾಗ ಆಗಸದಲ್ಲಿ ಹಾರುವ ಶ್ರೀಲಂಕನ್ ಏರ್‌ಲೈನ್ಸ್‌ನ ವಿಮಾನ ಕಾಣಿಸುವುದರೊಂದಿಗೆ ಈ ಜಾಹೀರಾತು ಕೊನೆಗೊಳ್ಳುತ್ತದೆ.
ಈ ಜಾಹೀರಾತಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ‘ಸ್ನೇಹಿತರೆಲ್ಲರೂ ಸೇರಿ ಟೋಕಿಯೊಗೆ ಹೋಗುವ ಯೋಜನೆ ರೂಪಿಸಿದ್ದೆವು. ಆದರೆ, ಈ ಜಾಹೀರಾತು ನಮ್ಮನ್ನು ಶ್ರೀಲಂಕಾದತ್ತ ನೋಡುವಂತೆ ಮಾಡಿದೆ’ ಎಂದಿದ್ದಾರೆ.
‘ಈ ಪೌರಾಣಿಕ ಸ್ಥಳಗಳನ್ನು ಶ್ರೀಲಂಕಾ ಇಂದಿಗೂ ಕಾಪಾಡಿಕೊಂಡು ಬಂದಿದೆಯೇ ಎಂಬುದು ಗೊತ್ತಿಲ್ಲ. ಆದರೆ ಜಾಹೀರಾತು ಮಾತ್ರ ಅದ್ಭುತವಾಗಿದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.
‘ಅದ್ಭುತ ಜಾಹೀರಾತು. ರಾಮಾಯಣ ಕಥೆಯ ಪುಟಗಳೊಂದಿಗೆ ಸ್ಥಳಗಳಲ್ಲಿ ವಿಹರಿಸುವ ಮನಸ್ಸಾಗುತ್ತಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.