–ಬಿ.ಎಂ. ಹನೀಫ್
ಬ್ರಿಟಿಷರ ಬೇಸಿಗೆ ರಾಜಧಾನಿಯಾಗಿದ್ದ ಉದಕಮಂಡಲ (ಊಟಿ) ವರ್ಷದ 12 ತಿಂಗಳೂ ನೈಸರ್ಗಿಕ ‘ಸೆಂಟ್ರಲ್ ಏಸಿ’ ಹೊಂದಿರುವ ಊರು. ಇಲ್ಲಿ ಬಹುತೇಕ ಹೋಟೆಲ್ ಕೋಣೆಗಳಲ್ಲಿ ಫ್ಯಾನ್‌ಗಳಿಲ್ಲ. ಏಸಿ ರೂಮ್– ನಾನ್ ಏಸಿ ರೂಮ್ ವಿಂಗಡಣೆಯೂ ಇಲ್ಲ. ನಗರದ ಬೇಕರಿಗಳಲ್ಲಿ ಐಸ್‌ಕ್ರೀಮ್‌ಗಳು ಗಾಜಿನೊಳಗೆ ಡಿಸ್‌ಪ್ಲೇ ಆಗಿರುತ್ತವೆ, ಕರಗುವ ಭಯವಿಲ್ಲ! ನಾನು ಊಟಿಗೆ ಪ್ರವಾಸ ಹೋದದ್ದು ಪ್ರವಾಸಿ ಸೀಸನ್ನಿನ ಕೊನೆಯ ಭಾನುವಾರ ದಾಟಿದ ಬಳಿಕ. ಮಳೆಗಾಲ ಶುರುವಾದ ಬಳಿಕ ಊಟಿಗೆ ಜನಪ್ರವಾಹ ತೆಳ್ಳಗಾಗುತ್ತದೆ ಎಂದು ಅಲ್ಲಿನ ಹೋಟೆಲ್ ಮಾಲೀಕರು ಹೇಳುತ್ತಿದ್ದರು. ಆದರೆ ಈ ಸಲ ಮಳೆ ಬರುವುದು ಒಂದು ವಾರ ತಡವಾಯಿತು. ನಾನು ಮರಳುವ ದಿನ ಊಟಿಯಲ್ಲಿ ಧಾರಾಕಾರ ಮಳೆ ಸುರಿಯಲು ಶುರುವಾಯಿತು.
ಹಾಗೆ ನೋಡಿದರೆ ಈ ಸಲ ಊಟಿಗೆ ಏಪ್ರಿಲ್ ತಿಂಗಳಲ್ಲೇ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಜೂನ್ 20ರಂದು ಸರ್ಕಾರಿ ಬೊಟಾನಿಕಲ್ ಗಾರ್ಡನ್‌ಗೆ ಭೇಟಿ ಕೊಟ್ಟಿದ್ದಾಗಲೂ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಬೊಟಾನಿಕಲ್ ಗಾರ್ಡನ್ ಮೂಲಗಳ ಪ್ರಕಾರ, 2022ರ ಏಪ್ರಿಲ್‌ನಲ್ಲಿ ಗಾರ್ಡನ್ನಿಗೆ 2.21 ಲಕ್ಷಕ್ಕೂ ಹೆಚ್ಚು ಜನರು ಭೇಟಿ ಕೊಟ್ಟಿದ್ದರೆ, ಈ ವರ್ಷ (2023) ಏಪ್ರಿಲ್‌ನಲ್ಲಿ 3.45 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ಅಂದರೆ ಶೇಕಡಾ 56ರಷ್ಟು ಏರಿಕೆ! ಇವತ್ತಿಗೂ ಊಟಿ ‘ಭಾರತದ ಗಿರಿಧಾಮಗಳ ರಾಣಿ’ಯೇ ಸರಿ.
ಊಟಿಗೆ ಹೋಗುವ ಬಹುತೇಕ ಪ್ರವಾಸಿಗರು ಬೊಟಾನಿಕಲ್ ಗಾರ್ಡನ್, ರೋಸ್ ಗಾರ್ಡನ್, ಚಹಾ ತೋಟ, ಹೆರಿಟೇಜ್ ರೈಲು ಪ್ರಯಾಣ, ಶೂಟಿಂಗ್ ಸ್ಥಳಗಳ ಭೇಟಿ, ಗುಡ್ಡ ಬೆಟ್ಟಗಳ ಸುತ್ತಾಟಕ್ಕೆ ಆದ್ಯತೆ ಕೊಡುತ್ತಾರೆ. ಊಟಿ ಪಟ್ಟಣದ ಮಧ್ಯೆಯೇ ಜಿಲ್ಲಾಧಿಕಾರಿ ಕಚೇರಿಯ ಬಳಿ ಇರುವ ಈ ಸೇಂಟ್ ಸ್ಟೀಫನ್ಸ್ ಚರ್ಚ್‌ಗೆ ಭೇಟಿ ಕೊಡುವವರ ಸಂಖ್ಯೆ ಕಡಿಮೆಯೇ. ನೀಲಗಿರಿ ಜಿಲ್ಲೆಯ ಅತ್ಯಂತ ಪುರಾತನ ಕಟ್ಟಡಗಳಲ್ಲಿ ಈ ಚರ್ಚ್ ಕೂಡ ಸೇರಿದೆ. 1829ರ ಏಪ್ರಿಲ್‌ನಲ್ಲಿ ಮದ್ರಾಸಿನ ಬ್ರಿಟಿಷ್ ಗವರ್ನರ್ ಸ್ಟೀಫನ್ ಲುಂಬೋಲ್ಡ್ ಲುಷಿಂಗ್ಟನ್ ಈ ಚರ್ಚ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು. ನಾಲ್ಕನೇ ಕಿಂಗ್ ಜಾರ್ಜ್ ಹುಟ್ಟುಹಬ್ಬದ ದಿನ ಕೆಲಸ ಶುರುವಾಗಿದ್ದು, 1831ರ ಏಪ್ರಿಲ್‌ನ ಈಸ್ಟರ್ ಸಂಡೇಯಂದು ಭಕ್ತರಿಗೆ ಬಾಗಿಲು ತೆರೆಯಲಾಯಿತು. ಮದ್ರಾಸ್ ರೆಜಿಮೆಂಟಿನ ಕ್ಯಾಪ್ಟನ್ ಜಾನ್ ಜೇಮ್ಸ್ ಅಂಡರ್‌ವುಡ್ (ಜೆ.ಜೆ.ಅಂಡರ್‌ವುಡ್) ಈ ಚರ್ಚ್‌ನ ವಾಸ್ತುಶಿಲ್ಪಿ. ಪುಟ್ಟ ಗುಡ್ಡದ ಮೇಲಿರುವ, 193 ವರ್ಷಗಳಷ್ಟು ಪುರಾತನ ಚರ್ಚ್, ಊಟಿಯ ಪ್ರಮುಖ ಪಾರಂಪರಿಕ ಕಟ್ಟಡವೂ ಹೌದು. ಹಾಗೆ ನೋಡಿದರೆ ಇದು ನಮ್ಮ ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚಿನಂತೆ ಮುಗಿಲೆತ್ತರದ ಆಕಾರದ್ದಲ್ಲ; ಊಟಿ ನಗರದ ಗಾತ್ರಕ್ಕೆ ತಕ್ಕಂತೆ ಪುಟ್ಟ ಚರ್ಚ್. ಆದರೆ ಇದರ ಒಳಾಂಗಣ ವಿನ್ಯಾಸ ಮತ್ತು ಕಿಟಕಿಗಳ ಗಾಜಿನ ಮೇಲಿರುವ ವರ್ಣಚಿತ್ರಗಳ ಅವರ್ಣನೀಯ ಸೌಂದರ್ಯ ಪ್ರವಾಸಿಗರನ್ನು ತನ್ಮಯಗೊಳಿಸುತ್ತದೆ.
ಈ ಚರ್ಚ್‌ಗೂ ಮೈಸೂರು ರಾಜ್ಯಕ್ಕೂ ಒಂದು ಸಂಬಂಧವಿದೆ! ಈ ಚರ್ಚ್‌ಗೆ ಬಳಸಲಾದ ಮರದ ಬೃಹತ್ ತೊಲೆಗಳು ಮತ್ತು ಇತರ ಮರಮಟ್ಟುಗಳ ಕೆತ್ತನೆಗಳನ್ನು ಬ್ರಿಟಿಷರು ಶ್ರೀರಂಗಪಟ್ಟಣದ ಟಿಪ್ಪೂ ಸುಲ್ತಾನನ ಅರಮನೆಯಿಂದ ತಂದು ಕೂರಿಸಿದ್ದಾರೆ. ಸಿಗೂರ್ (ಈಗಿನ ಕಲ್ಲಟ್ಟಿ) ಘಾಟ್ ಮೂಲಕ ಮರಮಟ್ಟುಗಳನ್ನು ಸಾಗಿಸಲಾಗಿದ್ದು, ಆ ಕಾಲದಲ್ಲಿ ಚರ್ಚ್ ನಿರ್ಮಾಣಕ್ಕೆ ₹24000 ಖರ್ಚಾಗಿತ್ತಂತೆ. ಮರದ ಕಂಬಗಳು, ಕಿಟಕಿಗಳ ವಿನ್ಯಾಸ ಮತ್ತು ಚಾವಣಿಯ ಒಳಭಾಗದ ಮರದ ಕೆತ್ತನೆಗಳು ಒಟ್ಟಾರೆ ಗಾಥಿಕ್ ಶೈಲಿಯಲ್ಲಿವೆ. ಕಿಟಕಿಗಳ ಗಾಜಿನಲ್ಲಿ ಇರುವ ವರ್ಣಚಿತ್ರಗಳ ಸೌಂದರ್ಯವನ್ನು ಬಣ್ಣಿಸುವುದು ಕಷ್ಟ; ನೋಡಿಯೇ ಮನ ತಣಿಯಬೇಕು. ಮೇರಿಮಾತೆ ಬಾಲ ಯೇಸುವನ್ನು ಎತ್ತಿಕೊಂಡಿರುವುದು, ಶಿಲುಬೆಯಲ್ಲಿರುವ ಏಸು ಸಹಿತ ಜೀಸಸ್ ಜೀವನದ ಪ್ರಮುಖ ಘಟನೆಗಳನ್ನು ಈ ವರ್ಣಚಿತ್ರಗಳು ಬಿಂಬಿಸುತ್ತಿವೆ. ಚರ್ಚ್‌ನ ಒಳಭಾಗದ ಪಶ್ಚಿಮ ಗೋಡೆಯಲ್ಲಿ ಯೇಸು ಕ್ರಿಸ್ತರ ‘ಕೊನೆಯ ಊಟ’ದ (ದಿ ಲಾಸ್ಟ್ ಸಪ್ಪರ್) ವರ್ಣಚಿತ್ರವೊಂದಿದೆ ಹಾಗೂ ಶ್ರೀರಂಗಪಟ್ಟಣದ ಟಿಪ್ಪೂ ಅರಮನೆಯಿಂದ ತಂದ ಮರದ ಕೆತ್ತನೆಯ ಸುಂದರ ಆನೆಯ ಪ್ರತಿಕೃತಿಯೊಂದಿದೆ ಎನ್ನುವುದನ್ನು ಪುಸ್ತಕಗಳಲ್ಲಿ ಓದಿದ್ದೆ. ಇಂಟರ್‌ನೆಟ್‌ನಲ್ಲೂ ಹಲವು ಸಂದರ್ಶಕರು ಅದರ ಪ್ರಸ್ತಾಪ ಮಾಡಿದ್ದಾರೆ. ಆದರೆ ಅಲ್ಲಿ ಅವೆರಡೂ ಕಾಣಿಸಲಿಲ್ಲ. ಅಲ್ಲಿದ್ದ ಸಹೃದಯಿ ವಾಚ್‌ಮನ್ ಕರುಣಾಕರನ್ ಜೊತೆಗೆ ಆ ಬಗ್ಗೆ ವಿಚಾರಿಸಿದಾಗ ‘ಅಂತಹದ್ದು ಯಾವುದೂ ಇಲ್ಲಿಲ್ಲ’ ಎಂದರು. ಅವರು ಕಳೆದ 30 ವರ್ಷಗಳಿಂದ ಅಲ್ಲಿ ವಾಚ್‌ಮನ್ ಆಗಿ ದುಡಿಯುತ್ತಿದ್ದಾರಂತೆ. ಒಳಗಿರುವ ಅಷ್ಟೂ ಕಂಬಗಳು ಮರದ್ದೇ ಆಗಿವೆ, ಆದರೆ ಕೆಲವು ಕಂಬಗಳಿಗೆ ಹೊರಗೆ ಬಿಳಿಯ ಬಣ್ಣ ಬಳಿದು ಒಟ್ಟು ಸೌಂದರ್ಯಕ್ಕೆ ಹೊಸ ಹೊಳಪು ನೀಡಲಾಗಿದೆ. ಚರ್ಚ್‌ನ ಹಿಂಭಾಗದಲ್ಲಿರುವ ಪುಟ್ಟ ಸ್ಮಶಾನವೂ ಮನ ಸಳೆಯುವಂತಿದೆ.
ಈ ಚರ್ಚ್‌ನ ವಾಸ್ತುಶಿಲ್ಪಿ ಕ್ಯಾಪ್ಟನ್ ಜೆ.ಜೆ.ಅಂಡರ್‌ವುಡ್ ಆ ಕಾಲದಲ್ಲಿ ತನ್ನ ಎಂಜಿನಿಯರಿಂಗ್ ಕೌಶಲದ ಮೂಲಕ ಭಾರಿ ಹೆಸರು ಮಾಡಿದವರು. 1800ರ ಮಧ್ಯಾವಧಿಯಲ್ಲಿ ಈತ ವಿನ್ಯಾಸ ಮಾಡಿರುವ ಚೆನ್ನೈಯ ಅಡ್ಯಾರ್‌ನ ಎಲ್ಫಿನ್‌ಸ್ಟೋನ್ ಬ್ರಿಡ್ಜ್, ದಿ ಐಸ್ ಹೌಸ್, ಮರೀನಾದಲ್ಲಿರುವ ಡಿ.ಜಿ.ಪಿ ಬಿಲ್ಡಿಂಗ್ (ಹಳೆಯ ಹೆಸರು– ದಿ ಮ್ಯಾಸೊನಿಕ್ ಟೆಂಪಲ್) ಮತ್ತು ಮದ್ರಾಸಿನ ಜನರಲ್ ಹಾಸ್ಪಿಟಲ್‌ನ ಹಳೆಯ ಬ್ಲಾಕ್ ಈಗಲೂ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಐಸ್ ಹೌಸ್ ಅನ್ನು ವಿವೇಕಾನಂದ ಇಲ್ಲಂ ಎಂದು ಹೆಸರಿಸಲಾಗಿದೆ. 1897ರಲ್ಲಿ ಮದ್ರಾಸಿಗೆ ಬಂದಿದ್ದ ಸ್ವಾಮಿ ವಿವೇಕಾನಂದರು ಈ ಕಟ್ಟಡದಲ್ಲೇ ಉಳಿದುಕೊಂಡಿದ್ದರು. ಈಗ ರಾಮಕೃಷ್ಣ ಆಶ್ರಮವು ಭೋಗ್ಯಕ್ಕೆ ಪಡೆದು ಕಟ್ಟಡವನ್ನು ನಿರ್ವಹಿಸುತ್ತಿದೆ. ಈ ಕಟ್ಟಡದಲ್ಲಿ ಆ ಕಾಲದಲ್ಲಿ ಅಮೆರಿಕದ ಟ್ಯುಡೋರ್ ಐಸ್ ಕಂಪೆನಿಯು ಮಂಜುಗಡ್ಡೆಯ ಗೋದಾಮು ಇತ್ತು. ದಾಸ್ತಾನು ಮಾಡಲಾದ ಐಸ್ ಕರಗದಂತೆ ಮಾಡಲು, ಸಿರಿಯಾದ ಚಾವಣಿಗಳಲ್ಲಿ ಬಳಸುತ್ತಿದ್ದ (ಮರರಹಿತ ಕಟ್ಟಡದ) ತಂತ್ರಜ್ಞಾನವನ್ನು ಜೆ.ಜೆ.ಅಂಡರ್‌ವುಡ್ ಇಲ್ಲಿಯೂ ಬಳಸಿದ್ದು ಆಗ ಬಹುದೊಡ್ಡ ಸುದ್ದಿಯಾಗಿತ್ತು.
ಊಟಿಯಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ 21ರಷ್ಟಿದ್ದು, ಒಟ್ಟು 14 ಚರ್ಚ್‌ಗಳಿವೆ. ಸೇಂಟ್ ಸ್ಟೀಫನ್ಸ್ ಚರ್ಚ್ ಈ ಪಟ್ಟಿಯಲ್ಲಿ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಪರಿಸರದ ಹಿನ್ನೆಲೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.