ಗುಜರಾತ್ ಪ್ರವಾಸದ ಮೊದಲ ದಿನದಂದು ಗಾಂಧಿನಗರದಲ್ಲಿ ಸಬರಮತಿ ಆಶ್ರಮ ನೋಡಿದ ನಂತರ ನಮ್ಮ ಮುಂದಿನ ತಾಣ ‘ಅಡಲಜ್ ಬಾವಿ’ ಎಂದರು. ಆಗ ಎಲ್ಲರಿಗೂ ಅಚ್ಚರಿ. ‘ಇದೆಂಥ ಬಾವಿ. ಅಲ್ಲಿ ನೋಡುವುದಕ್ಕೆ ಏನಿರುತ್ತದೆ’ ಎಂಬ ಅಪಸ್ವರದ ಪ್ರಶ್ನೆಗಳು ಮೂಡಲಾರಂಭಿಸಿದವು. ಚರ್ಚೆ ಮುಗಿಯುವುದರೊಳಗೆ ಬಾವಿಯ ಜಾಗ ತಲುಪಿದ್ದಾಗಿತ್ತು. ಅಷ್ಟೇ ಅಲ್ಲ, ಬಾವಿಯ ಭವ್ಯತೆ ಕಂಡು ಬೆರಗಾಗಿ ನಮ್ಮ ಮಾತು ವಾಪಸ್ ತೊಗೊಂಡು ಉತ್ಸುಕತೆಯಿಂದ ಅದನ್ನು ನೋಡಲು ತೊಡಗಿದೆವು.
ಅಹಮದಾಬಾದ್‌ನ ಗಾಂಧಿನಗರದಿಂದ ಆರು ಕಿ.ಮೀ ದೂರದಲ್ಲಿದೆ ಈ ಬಾವಿ ಇರುವ ತಾಣ. ಹೊರನೋಟಕ್ಕೆ ಸಾಧಾರಣ ಎನ್ನಿಸುತ್ತದೆ. ಒಳ ಹೊಕ್ಕು ಬಾವಿಯೊಳಗೆ ಒಂದೊಂದೇ ಅಂತಸ್ತು ಇಳಿಯುತ್ತಿದ್ದರೆ, ಕಲ್ಲಿನ ಮೆಲೆ ಕೆತ್ತನೆಯ ಕುಸುರಿಯ ಕೆಲಸಗಳು ಒಂದು ವಿಸ್ಮಯ ಲೋಕವನ್ನೇ ತೆರೆದಿಡುತ್ತವೆ. ವೃತ್ತಾಕಾರದ ಈ ಸೋಪಾನ ಬಾವಿಯ ಮೆಟ್ಟಲುಗಳನ್ನಿಳಿದರೆ, ಮೂರು ಮಾಳಿಗೆ ಕೆಳಗೆ ವೃತ್ತಾಕಾರದ ತುಂಬು ನೀರಿರುವ ಬಾವಿ. ಕಬ್ಬಿಣದ ಜಾಲರಿ ಹಾಸಿ ಭದ್ರಗೊಳಿಸಿದ್ದಾರೆ. ನಾಲ್ಕು ಮಾಳಿಗೆ ಮೇಲಕ್ಕೆ ಅರಮನೆ ಪ್ರಾಕಾರ, ಕೋಣೆಗಳು. ಸೊಗಸಾದ ಚಿತ್ತಾರದ ಗವಾಕ್ಷಿಗಳಿವೆ. ಷಟ್ಕೋನದ ವೃತ್ತವಾಗಿರುವ ಈ ಏಳು ಮಹಡಿಗಳ ಬಾವಿಯ ಸುತ್ತ ಅದು ಹೇಗೆ ನಿರ್ಮಿಸಿದರೋ ಎಂಬ ಅಚ್ಚರಿ.
ಸುಮಾರು 1498ನೇ ಇಸವಿಯಲ್ಲಿ ಕಟ್ಟಿಸಿದ ಐದು ಅಂತಸ್ತಿನ ಮೆಟ್ಟಿಲಿನ ಬೃಹತ್ ಬಾವಿ ಅದು. ಆಗಿನ ವಾಗೇಲಾ ಸಂಸ್ಥಾನದ ರಾಜ ರಾಜಾ ರಣವೀರ್ ಸಿಂಗ್ ತನ್ನ ಪ್ರಜೆಗಳ ನೀರಿನ ಅಭಾವದ ಪರಿ ನೀಗಿಸಲು ಕೈಗೊಂಡ ಮಹತ್ಕಾರ್ಯ. ಆದರೆ, ಅದನ್ನು ಕಟ್ಟಿಸುತ್ತಿದ್ದ ಸಮಯದಲ್ಲೇ ಮುಸ್ಲಿಂ ರಾಜ ಮೊಹಮದ್ ಬೇಗ್‌ನ ದಾಳಿಯಿಂದಾಗಿ ಮರಣಹೊಂದಿದ. ಆ ಬೇಗ್ ಮೃತ ರಾಜನ ಪತ್ನಿ ರೂಡಾದೇವಿಯನ್ನು ಮದುವೆಯಾಗಲು ಒತ್ತಾಯಿಸಿದ. ಆಗ ಆಕೆ ‘ನನ್ನ ರಾಜ ಆರಂಭಿಸಿದ ಬಾವಿಯ ಕೆಲಸವನ್ನು ಮುಂದುವರಿಸಿದರೆ ಮಾತ್ರ ನಿನ್ನನ್ನು ಮದುವೆಯಾಗುತ್ತೇನೆ’ ಎಂದು ನಿಬಂಧನೆ ಹಾಕಿದಳು. ಆ ರಾಜ ಒಪ್ಪಿ, ಬಾವಿಯನ್ನು ಕಲಾತ್ಮಕವಾಗಿ ಕಟ್ಟಿ ಮುಗಿಸಿದ.
ರಾಣಿ ರೂಡಾದೇವಿ, ‘ತಾನು ಅಂದುಕೊಂಡ ಕೆಲಸವಾಯಿತು’ ಎಂದು ಹೇಳಿ ಅದೇ ಬಾವಿಗೆ ಹಾರಿ ಪ್ರಾಣಬಿಡುತ್ತಾಳೆ. ಸಾಯುವ ಮುನ್ನ ಇದೇ ಬಾವಿಯಲ್ಲಿ ಅಲ್ಲಿನ ಸಾಧು ಸಂತರಿಗೆ ಸ್ನಾನ ಮಾಡಿ, ನೀರನ್ನು ಪವಿತ್ರಗೊಳಿಸಬೇಕೆಂದು ವಿನಂತಿಸಿರುತ್ತಾಳೆ. ರಾಣಿಯ ಸಾವಿಗೆ ಮುನ್ನ ಸ್ವಾಮಿನಾರಾಯಣ ಋಷಿಗಳು, ಸಾಧು ಸಂತರು ಇದೇ ಬಾವಿಯಲ್ಲಿ ಸ್ನಾನ ಮಾಡಿ ಪವಿತ್ರಗೊಳಿಸಿದ ನೀರಿನಲ್ಲಿ ಆಕೆ ಹಾರಿ ಪ್ರಾಣ ಕಳೆದುಕೊಂಡಳು ಎಂಬ ಕಥೆ ಇದೆ.
ಆ ರಾಜ ಬೇಗ್ ಇಂಥ ಬಾವಿ ಪ್ರಪಂಚದಲ್ಲಿ ಇನ್ನೊಂದು ಇರಬಾರದು ಎಂಬ ಕಾರಣಕ್ಕೆ ಆ ಕಲಾತ್ಮಕ ಬಾವಿ ಕಟ್ಟಿದ ಆರು ಜನ ನಿಪುಣ ಕೆಲಸಗಾರರನ್ನು ಸಾಯಿಸಿದನೆಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೆ ಪೂರಕವೆಂಬಂತೆ ಆರು ಸಮಾಧಿಗಳು ಪಕ್ಕದಲ್ಲೇ ಕಾಣಸಿಗುತ್ತವೆ.
ಒಟ್ಟಿನಲ್ಲಿ, ಇಷ್ಟು ಸುಂದರವಾದ ಕೆತ್ತನೆ ಮಾಡಿದ ಐದು ಅಂತಸ್ತಿನ ನೆಲಮಾಳಿಗೆಯ ಬಾವಿ ಪ್ರಾಯಶಃ ಪ್ರಪಂಚದಲ್ಲೇ ಇಲ್ಲ ಎನ್ನಿಸುತ್ತದೆ. ಅಹಮದಾಬಾದ್ ಕಡೆ ಹೋದರೆ ಖಂಡಿತವಾಗಿ ಹೋಗಿ ನೋಡಿ ಬನ್ನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.