ಅಲೆಮಾರಿಯಂತೆ ಜಗತ್ತು ಸುತ್ತಿದ ಅಮೆರಿಕದ ಕನ್ನಡಿಗ ಹುಡುಗನ ಕಥೆ ‘ತಿರುಗಾಟ’. ಕಿರಣ್ ಎಸ್. ಭಟ್, ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ದಂಪತಿಯ ಪುತ್ರ. ಕಿರು ವಯಸ್ಸಿನಲ್ಲೇ ಜಗತ್ತಿನ 124 ದೇಶಗಳನ್ನು ಸುತ್ತಿದ ಅನುಭವಿ.
ಇವರದ್ದು ಸುಮ್ಮನೆ ತಿರುಗಾಟವಲ್ಲ. ಆಯಾ ಪ್ರದೇಶದಲ್ಲೇ ಕೆಲಕಾಲ ಬದುಕಿ, ದುಡಿದು, ಜನಜೀವನ, ಭಾಷೆ, ಸಂಸ್ಕೃತಿ ಕಲಿತು ಮುಂದಡಿಯಿಟ್ಟ ಪ್ರವಾಸವಿದು. ಹಾಗಾಗಿ ಲೇಖಕ ತನ್ನನ್ನು ವಿಶ್ವಮಾನವ ಎಂದು ಖುಷಿಯಿಂದ ಕರೆದುಕೊಳ್ಳುತ್ತಾರೆ.
ಇಂಟರ್‌ನೆಟ್‌ನಲ್ಲಿ ಪಾಠ ಮಾಡುತ್ತಾ ಗಳಿಕೆಯ ದಾರಿ ಕಂಡುಕೊಂಡ ಕಿರಣ್ ತಮ್ಮ ಪ್ರವಾಸದ ಬದುಕಿನಲ್ಲಿ ಚೀನಾದ ವಿವಿಯಲ್ಲಿ ಕೆಲಕಾಲ ಪಾಠ ಮಾಡುತ್ತಾರೆ. ಅದೂ ಏಕತಾನತೆ ಎನಿಸಿದಾಗ ಮತ್ತೆ ಪ್ರವಾಸ ಮುಂದುವರಿಸುತ್ತಾರೆ.
ದುಬಾರಿ ಜೀವನದ ಜಪಾನ್, ಇನ್ನೂ ಸುಧಾರಣೆ ಕಾಣದ ದಕ್ಷಿಣ ಆಫ್ರಿಕಾ, ರಾಜವೈಭವದ ಕತಾರ್, ಇಸ್ತಾಂಬುಲ್, ಲಿಸ್ಬೇನ್, ಬಾಂಗ್ಲಾದೇಶದ ಢಾಕಾದಲ್ಲಿ 2016ರಲ್ಲಿ ನಡೆದ ಉಗ್ರರ ದಾಳಿ ಹೀಗೆ ಎಲ್ಲ ದೇಶಗಳಲ್ಲೂ ಕಂಡ ಒಳ್ಳೆಯ ಮತ್ತು ಕಹಿ ಅನುಭವಗಳನ್ನು ‘ತಿರುಗಾಟ’ದಲ್ಲಿ ಕಟ್ಟಿಕೊಟ್ಟಿದ್ದಾರೆ.
ಪಾಠ, ಸುತ್ತಾಟ, ಅಧ್ಯಯನ ಮತ್ತು ಬರವಣಿಗೆಯಲ್ಲಿ ಕಾಲ ಕಳೆಯುವ ಕಿರಣ್ ಇದೇ ಕಾರಣಕ್ಕೆ ಅಪ್ಪನೊಂದಿಗೆ ಮುನಿಸಿಕೊಂಡಿದ್ದನ್ನೂ ಇಲ್ಲಿ ಬರೆದಿದ್ದಾರೆ.
ಕೌಚ್ ಸರ್ಫಿಂಗ್ ವೆಬ್‌ಸೈಟ್ ಮೂಲಕ ಜಗತ್ತಿನಾದ್ಯಂತ ಗೆಳೆಯರನ್ನು ಹುಡುಕಿ ನೆಲೆ ಕಂಡುಕೊಂಡ ಬಗೆಯನ್ನೂ ಅವರು ಬರೆದಿದ್ದಾರೆ. ಈ ಮೂಲಕ ಮಿತವೆಚ್ಚದಲ್ಲಿ ವಾಸ್ತವ್ಯ ಹೂಡುವ ಐಡಿಯಾವನ್ನೂ ಕೊಟ್ಟಿದ್ದಾರೆ. ಅಂದಹಾಗೆ ಕೌಚ್ ಸರ್ಫಿಂಗ್ ಮೂಲಕ ಹೋಗುವವರು ಅಲ್ಲಿನ ರೀತಿ ನೀತಿಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂಬ ಸೂಕ್ಷ್ಮ ಎಚ್ಚರವನ್ನೂ ಅಲ್ಲಲ್ಲಿ ಕೊಟ್ಟಿದ್ದಾರೆ. ಸಿದ್ಧತೆ ಸಹಿತ–ರಹಿತ ಪ್ರವಾಸದ ವ್ಯತ್ಯಾಸದ ಅನುಭವಗಳೂ ಕೃತಿಯಲ್ಲಿವೆ.
ಜೀವ ಉಳಿಸಿದ ಗೆಳೆಯರು, ಸಂಪರ್ಕ ಕಡಿದುಕೊಂಡ ಸಂಬಂಧಗಳು, ಎಲ್ಲರೊಳಗೊಂದಾಗಿ ಬಾಳುವ ರೀತಿಯ ಬಗ್ಗೆ ವಿವರಗಳಿವೆ. ‘ಜಗತ್ತು ಸುತ್ತುವವನಿಗೆ ಗಡಿ, ರೇಖೆಯ ಇತಿಮಿತಿಗಳ ಹಂಗಿಲ್ಲ. ಅವನಿಗೆ ಎಲ್ಲ ದೇಶದವರು ಮನುಷ್ಯರು ಅಷ್ಟೇ’ ಎಂಬ ಭಾವ ಕೃತಿಯಲ್ಲಿದೆ.
ಅಮೆರಿಕದಲ್ಲಿ ಹುಟ್ಟಿದರೂ ಮೈಸೂರಿಗೆ ಬಂದು ಕನ್ನಡ ಕಲಿತು, ಪ್ರವಾಸ ಕಥನ ಬರೆದಿದ್ದಾರೆ. ಇದು ಕನ್ನಡದ ಪಾಲಿಗೆ ಒಂದು ಕೊಡುಗೆ. 124 ದೇಶಗಳ ಪೈಕಿ ಆಯ್ದ ಕೆಲವನ್ನಷ್ಟೇ ಇಲ್ಲಿ ಕೊಟ್ಟಿದ್ದಾರೆ.
ಕೃತಿ: ತಿರುಗಾಟ, ಲೇ: ಕಿರಣ್ ಎಸ್. ಭಟ್, ಪ್ರಕಾಶಕರು: ಚಿರಂತನ ಮೀಡಿಯ ಸೊಲ್ಯೂಷನ್ಸ್ ಬೆಂಗಳೂರು, ಪುಟಗಳು: 100, ಬೆಲೆ: ₹ 500
ಪುಸ್ತಕಕ್ಕಾಗಿ ಶ್ಯಾಮ ಭಟ್ಟ – 9900142362, 080 – 23626566 ಇಲ್ಲಿ ವಿಚಾರಿಸಿ.
ಇ– altermoderned@gmail.com
‘ಟೂರ್ ಬುಕ್’
ಪ್ರವಾಸದ ಕುರಿತಾದ ಹಳೆಯ ಮತ್ತು ಹೊಸ ಪುಸ್ತಕಗಳನ್ನು ಪರಿಚಯಿಸುವ ಅಂಕಣ. ಓದುಗರೂ, ತಾವು ಓದಿದ ಅಪರೂಪದ ಕೃತಿಗಳನ್ನು ಇಲ್ಲಿ ಪರಿಚಯಿಸಬಹುದು. ಬರಹಗಳು, 150 ಪದಗಳ ಮಿತಿಯಲ್ಲಿರಲಿ. ಹಳೆ ಪುಸ್ತಕವಾದರೆ, ಮುಖಪುಟ ಸ್ಕ್ಯಾನ್ ಮಾಡಿ ಕಳಿಸಿ. ಹೊಸ ಪುಸ್ತಕಗಳಾದರೆ, ಎರಡು ಪ್ರತಿಗಳನ್ನು ಕಚೇರಿ ವಿಳಾಸಕ್ಕೆ ತಲುಪಿಸಬೇಕು. ಆನ್‌ಲೈನ್‌ನಲ್ಲಿ ಇದ್ದರೆ, ವೆಬ್‌ಲಿಂಕ್ ಕಳುಹಿಸಿಕೊಡಿ. ಹೊಸ ’ಪರಿಕಲ್ಪನೆ’ಯ ಪುಸ್ತಕಗಳಿಗೆ ಆದ್ಯತೆ. ಬರಹ ಕಳುಹಿಸಬೇಕಾದ ವಿಳಾಸ: ಪ್ರವಾಸ ವಿಭಾಗ, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ, ಬೆಂಗಳೂರು. 080–45557252, pravasa@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.