ADVERTISEMENT

ಪ್ರವಾಸ: ಮಡಿದವರ ಮಾಯಾಲೋಕ ಗೀಜಾ ಪಿರಮಿಡ್‌!

ಡಾ .ಕೆ.ಎಸ್.ಚೈತ್ರಾ
Published 9 ನವೆಂಬರ್ 2024, 21:53 IST
Last Updated 9 ನವೆಂಬರ್ 2024, 21:53 IST
ಗೀಜಾ ಪಿರಮಿಡ್‌ ಅಗಾಧತೆಯನ್ನು ಅರಿಯಲು ಒಮ್ಮೆ ಅದರೆದುರು ನಿಲ್ಲಬೇಕು..
ಗೀಜಾ ಪಿರಮಿಡ್‌ ಅಗಾಧತೆಯನ್ನು ಅರಿಯಲು ಒಮ್ಮೆ ಅದರೆದುರು ನಿಲ್ಲಬೇಕು..   

ಬೆವರು ಸುರಿಯುತ್ತಿತ್ತು, ಏದುಸಿರು ಬರುತ್ತಿತ್ತು. ಕೈ -ಕಾಲು ಆಡಿಸಲು ಆಗದಷ್ಟು ಕಿರಿದಾದ ಸ್ಥಳ. ಗಾಳಿ-ಬೆಳಕು ಎರಡೂ ಕಡಿಮೆಯೇ. ಮಂದ ಬೆಳಕಿನಲ್ಲಿ ಕಷ್ಟಪಟ್ಟು ನಡೆಯುವಾಗ ನಿಗೂಢ ಲೋಕಕ್ಕೆ ಹೋದ ಅನುಭವ. ವಿಶ್ವದ ಏಳು ಅದ್ಭುತಗಳಲ್ಲಿ ಅತ್ಯಂತ ಪ್ರಾಚೀನವಾದ ಈಜಿಪ್ಟ್‌ನ ಗೀಜಾ ಪಿರಮಿಡ್ ಒಳಗೆ!

ಜಗತ್ತಿನಲ್ಲೇ ಅತ್ಯಂತ ಜನದಟ್ಟಣೆಯ ನಗರಗಳಲ್ಲೊಂದು ಕೈರೋ. ನಗರದ ಟ್ರಾಫಿಕ್ ನಡುವೆಯೇ ನೇರವಾದ ರಸ್ತೆಯಲ್ಲಿ ಓಡುತ್ತಿದ್ದ ಕಾರು ಹತ್ತು ನಿಮಿಷಗಳ ನಂತರ ತಿರುವಿನಲ್ಲಿ ಹೊರಳಿತ್ತು. ಆಗ ಕಣ್ಣಿಗೆ ಬಿತ್ತು; ಬೃಹದಾಕಾರ ಬಂಡೆಗಳ ಬೆಟ್ಟ. ಪರಿಪೂರ್ಣವಾದ ತ್ರಿಕೋನಾಕೃತಿಯ ಚೂಪಾದ ತುದಿಯಿಂದ ಆಕಾಶವನ್ನೇ ಮುಟ್ಟುವಂತಿದ್ದ ಅದು ಬೆಟ್ಟವಲ್ಲ; ಗೀಜಾ ಪಿರಮಿಡ್! ಹತ್ತಿರ ಹೋಗುತ್ತಿದ್ದಂತೆ ಪಿರಮಿಡ್‌ನ ಅಗಾಧತೆ ಅರಿವಾಯಿತು. 4500 ವರ್ಷಗಳ ಹಿಂದೆ ಅತ್ಯಾಧುನಿಕ ಸಾಧನಗಳಿಲ್ಲದೇ ವ್ಯವಸ್ಥಿತವಾಗಿ ಜೋಡಿಸಿಟ್ಟ 20 ಲಕ್ಷಕ್ಕೂ ಹೆಚ್ಚು ಸುಣ್ಣದ ಕಲ್ಲುಗಳ ವೈಜ್ಞಾನಿಕ ರಚನೆಯಿದು. ಸಣ್ಣಪುಟ್ಟ ಕಲ್ಲುಗಳಲ್ಲ, ಒಂದೊಂದೂ ಕನಿಷ್ಠ ಎರಡು ಟನ್‌ನಷ್ಟು ಭಾರವಿದೆ. ಈ ಕಲ್ಲುಗಳನ್ನು ನೂರಾರು ಮೈಲಿ ದೂರದಿಂದ ಮರಳು ಮತ್ತು ನೈಲ್ ನದಿಯ ಮೂಲಕ ಸಾಗಿಸಿ ಈ ಪಿರಮಿಡ್‌ಗಳನ್ನು ಕರಾರುವಾಕ್ಕಾಗಿ ಹೇಗೆ ನಿರ್ಮಿಸಿದರು ಎನ್ನುವುದೇ ರಹಸ್ಯ! 20 ವರ್ಷ ಸಾವಿರಾರು ಕಾರ್ಮಿಕರು ಇದರ ನಿರ್ಮಾಣಕ್ಕಾಗಿ ದುಡಿದಿದ್ದಾರೆ.

ಜೀವನ್ಮರಣಗಳ ಲೋಕದಲ್ಲಿ ಪಯಣ

ADVERTISEMENT

ಅಂದಹಾಗೆ, ಪ್ರಾಚೀನ ಈಜಿಪ್ಟ್‌ನಲ್ಲಿ ಯಾರೇ ಯಾವಾಗಲೇ ದೊರೆಯಾದರೂ (ಫೆರೋ) ಮಾಡುತ್ತಿದ್ದ ಮೊದಲ ಕೆಲಸವೆಂದರೆ ತನ್ನ ಗೋರಿಯ ಸಿದ್ಧತೆ! ಪುನರ್ಜನ್ಮದಲ್ಲಿ ದೃಢವಾದ ನಂಬಿಕೆ ಇದಕ್ಕೆ ಕಾರಣ. ಸಾವಿನ ನಂತರ ಬದುಕಿದೆ. ಇಲ್ಲಿಂದ ಅಲ್ಲಿಗೆ ಪಯಣ ಮುಂದುವರಿಯುತ್ತದೆ. ಅದಕ್ಕಾಗಿ ಮೃತದೇಹವನ್ನು ಮಮ್ಮಿ ಮಾಡಿ ಕಾಪಿಟ್ಟು, ಅದನ್ನು ಪಿರಮಿಡ್ ಒಳಗೆ ಸಂರಕ್ಷಿಸಿದ್ದಲ್ಲದೇ ಪ್ರೀತಿಯ ವಸ್ತುಗಳ ಜತೆ ಮುಂದಿನ ಬದುಕಿಗೂ ಅಗತ್ಯವಿರುವ ವಸ್ತುಗಳನ್ನೂ ಜೋಡಿಸಿಡುವುದು ಕ್ರಮ.

‘ರಾ’ ಎಂದರೆ ಸೂರ್ಯನಿಗೆ ಇಲ್ಲಿ ವಿಶೇಷ ಸ್ಥಾನ. ನೆಲಮಾಳಿಗೆಯ ಗೋರಿಗಳ ಗೋಡೆಗಳ ಮೇಲೆ ಇರುವ ಆಕರ್ಷಕ ಚಿತ್ರಗಳಲ್ಲಿ, ದೇಗುಲಗಳ ಕೆತ್ತನೆಯಲ್ಲಿ, ದೋಣಿಯಲ್ಲಿ ಇರುವ ‘ರಾ’ ನನ್ನು ಕಾಣಬಹುದು. ಉದ್ದವಾದ ದೋಣಿಯಲ್ಲಿ ಜೀವನ ಮತ್ತು ಮೃತ್ಯು ಲೋಕಗಳ ನಡುವೆ ಪೂರ್ವದಿಂದ ಪಶ್ಚಿಮಕ್ಕೆ ದಿನವೂ ಆತನ ಪಯಣ. ಪ್ರತಿದಿನ ಜನನ ಮತ್ತು ಮರಣ! ಹಾಗಾಗಿಯೇ ಈಜಿಪ್ಟ್‌ನಲ್ಲಿ ಇರುವ ನೂರಕ್ಕೂ ಹೆಚ್ಚು ಪಿರಮಿಡ್‌ಗಳು ನೈಲ್ ನದಿಯ ಪಶ್ಚಿಮ ತೀರದಲ್ಲಿವೆ. ‘ರಾ’ ಮುಳುಗುವ ಈ ದಿಕ್ಕು ಮರಣದ ಸಂಕೇತ. ದೇವತೆಗಳನ್ನು ಆರಾಧಿಸುವ ದೇವಾಲಯಗಳು, ಪೂರ್ವತೀರದಲ್ಲಿವೆ. ಪಿರಮಿಡ್‌ನ ಚೂಪಾದ ತುದಿ ಸೂರ್ಯನ ಕಿರಣಗಳನ್ನು ಸಂಕೇತಿಸುತ್ತದೆ. ಇದರ ಮೂಲಕ ರಾಜನ ಆತ್ಮ, ಆಕಾಶ ಮಾರ್ಗವಾಗಿ ಸ್ವರ್ಗ ಸೇರುತ್ತದೆ. ಫೆರೋಗಳು ದೈವಾಂಶ ಸಂಭೂತರಾಗುತ್ತಾರೆ ಎನ್ನುವ ನಂಬಿಕೆ ಅಲ್ಲಿಯವರದ್ದು. ಹೀಗೆ ಧಾರ್ಮಿಕವಾಗಿ ಮೃತರು ದೇವರೊಂದಿಗೆ ಸಂಪರ್ಕ ಸಾಧಿಸಲು ಇವು ಸಹಾಯವಾಗಿತ್ತು. (ಈ ಪಿರಮಿಡ್‌ನ ಮುಂಭಾಗದಲ್ಲೂ ಎರಡು ಸೂರ್ಯದೋಣಿಗಳಿದ್ದವು. ಅವುಗಳಲ್ಲಿ ಒಂದನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ.) ಈ ಪಿರಮಿಡ್‌ಗಳ ಗಾತ್ರ ದೊಡ್ಡದಾದಷ್ಟು, ಇಡುವ ವಸ್ತು ಹೆಚ್ಚಾದಷ್ಟು ಫೆರೋನ ಶಕ್ತಿ ಮತ್ತು ಸಂಪತ್ತನ್ನು ಸೂಚಿಸುತ್ತಿದ್ದವು. ಅಳಿದವರ ನೆನಪನ್ನು ಚಿರಸ್ಥಾಯಿಯಾಗಿಸುವ ಸಾಧನವಾಗಿಯೂ ಬಳಕೆಯಾಗುತ್ತಿದ್ದವು. ಹೀಗೆ ಪಿರಮಿಡ್‌ಗಳು ಕೇವಲ ಸಮಾಧಿ ಸ್ಥಳವಾಗಿರದೆ, ಧಾರ್ಮಿಕ-ಸಾಮಾಜಿಕ ಮತ್ತು ರಾಜಕೀಯ ಆಯಾಮಗಳನ್ನು ಹೊಂದಿದ್ದವು.

ಇಖೆತ್ (ಭವ್ಯ ದೀಪ)!

ಗೀಜಾದ ಪಿರಮಿಡ್‌ ಅನ್ನು ಫೆರೋ ಖುಫುಗಾಗಿ ನಿರ್ಮಿಸಲಾಗಿರುವುದರಿಂದ ಖುಫು ಪಿರಮಿಡ್ ಎಂದು ಕರೆಯಲಾಗುತ್ತದೆ. ಇದನ್ನು ಹಳೆಯ ಈಜಿಪ್ಟ್ ಸಾಮ್ರಾಜ್ಯದ ನಾಲ್ಕನೇ ರಾಜವಂಶದ ಅವಧಿಯಲ್ಲಿ ಕ್ರಿಸ್ತಪೂರ್ವ 2580-2560 ರಲ್ಲಿ ನಿರ್ಮಿಸಲಾಯಿತು. ಪೂರ್ಣವಾದಾಗ ಸುಮಾರು 481 ಅಡಿ ಎತ್ತರವಿದ್ದು ಕಾಲಕ್ರಮೇಣ ನೈಸರ್ಗಿಕ ಸವೆತ ಮತ್ತು ದಾಳಿಯಿಂದ ಈಗ 455 ಅಡಿಗೆ ಕುಗ್ಗಿರುವ ಇದು ಗೀಜಾ ಪ್ರಸ್ಥಭೂಮಿಯಲ್ಲಿರುವ ಮೂರು ಪಿರಮಿಡ್‌ಗಳಲ್ಲಿ ಎಲ್ಲಕ್ಕಿಂತ ದೊಡ್ಡದು. ಸುಣ್ಣದ ಕಲ್ಲುಗಳಿಂದ ನಿರ್ಮಿತವಾದ ಈ ಪಿರಮಿಡ್‌ನ ಹೊರಭಾಗವನ್ನು ಚೆನ್ನಾಗಿ ಪಾಲಿಶ್ ಮಾಡಲಾದ ಕೇಸಿಂಗ್ ಕಲ್ಲುಗಳಿಂದ ಮುಚ್ಚಲಾಗಿತ್ತು. ಈ ಹೊರ ಕವಚ ಸೂರ್ಯನ ಬೆಳಕನ್ನು ಪ್ರತಿಬಿಂಬಿಸಿ ಇಡೀ ಪಿರಮಿಡ್ ವಜ್ರದಂತೆ ಹೊಳೆಯುತ್ತಿತ್ತು. 14 ನೇ ಶತಮಾನದಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ಇತರ ಕಟ್ಟಡ ನಿರ್ಮಿಸಲು ಈ ಕಲ್ಲುಗಳನ್ನು ಕಿತ್ತು ಬಳಸಿದ್ದರಿಂದ ಈ ಹೊರ ಕವಚ ನಷ್ಟವಾಗಿದ್ದು, ಅಲ್ಲಲ್ಲಿ ಸ್ವಲ್ಪ ಉಳಿದಿದೆ. ಮೂಲ ಪಿರಮಿಡ್ ಬೃಹತ್ ಕನ್ನಡಿಯಂತೆ ಪ್ರತಿಫಲಿಸಿ ಹೊಳೆಯುವ ನಕ್ಷತ್ರದಂತೆ ಚಂದ್ರನಿಂದ ನೋಡಿದರೂ ಗೋಚರಿಸುವಷ್ಟು ಶಕ್ತಿಯುತವಾಗಿತ್ತು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಅದಕ್ಕೆ ಸರಿಯಾಗಿ
ಪ್ರಾಚೀನ ಈಜಿಪ್ಟಿನವರು ಇದಕ್ಕಿಟ್ಟ ಹೆಸರು ‘ಇಖೆತ್’ (ಭವ್ಯ ದೀಪ)!

ಒಳಹೊಕ್ಕಂತೆ

ಸುಮಾರು 40 ಅಂತಸ್ತುಗಳಷ್ಟು ಎತ್ತರದ ಈ ಪಿರಮಿಡ್ ನೋಡಿ, ಅದರ ಮಹತ್ವ ಕೇಳಿ ಬೆರಗಾಗಿದ್ದೆವು. ಅಷ್ಟು ದೂರದಿಂದ ಬಂದು ಒಳಗೆ ಹೋಗದಿರಲು ಸಾಧ್ಯವೇ? ಪ್ರವೇಶಕ್ಕಾಗಿ ಪ್ರತ್ಯೇಕ ಟಿಕೆಟ್ ಪಡೆದಿದ್ದಾಯ್ತು. ಪಿರಮಿಡ್‌ನ ಮಧ್ಯಭಾಗದಲ್ಲಿ ಪ್ರವೇಶದ್ವಾರ. ಶುರುವಿನಲ್ಲಿ ಬೆಳಕು, ಗಾಳಿ ಸಾಕಷ್ಟಿತ್ತು. ಆರಾಮಾಗಿ ನಡೆದೆವು. ಆದರೆ ಮುಂದೆ ನಡೆದಂತೆ ದಾರಿ ಕಿರಿದು, ಬೆಳಕು-ಗಾಳಿಯೂ ಕಡಿಮೆ. ಕಡಿದಾದ, ಕಿರಿದಾದ ದಾರಿ. ಹತ್ತು-ಇಳಿ ಹೀಗೆ ಸಾಕಷ್ಟು ಕಸರತ್ತು ಮಾಡಬೇಕಾಯಿತು. ಮೆಟ್ಟಿಲುಗಳನ್ನು ಬೆನ್ನು ಬಾಗಿಸಿಯೇ ಹತ್ತಬೇಕು, ಇಳಿಯಬೇಕು. ತಲೆ ಮೇಲೆತ್ತಿದರೆ ಗಟ್ಟಿ ಕಲ್ಲಿನ ಗೋಡೆ. ಅಂತೂ 25 ನಿಮಿಷಗಳ ನಂತರ ಕಿಂಗ್ಸ್ ಚೇಂಬರ್ ಎಂದು ಕರೆಯುವ ಹೃದಯ ಭಾಗ ತಲುಪಿದ್ದೆವು. ಅದೇ ಫೆರೋ ಖುಫುವಿನ ಸಮಾಧಿ ಸ್ಥಳ. ಸಾಕಷ್ಟು ಎತ್ತರದ ಮಾಮೂಲು ಕೊಠಡಿಯ ಮೂಲೆಯಲ್ಲಿ ದೊಡ್ಡದಾದ ಕಲ್ಲಿನ ಶವ ಪೆಟ್ಟಿಗೆ. ಆಯತಾಕಾರದ ಮುರಿದ ಈ ಪೆಟ್ಟಿಗೆ ಸ್ನಾನ ಮಾಡುವ ಟಬ್ಬಿನಂತಿತ್ತು. ಅದನ್ನು ಬಿಟ್ಟರೆ ಅಲ್ಲಿ ಮತ್ತಿನ್ನೇನೂ ಇಲ್ಲ. ಪೂರ್ತಿ ಬಂಗಾರದ ಆಭರಣ ಅಮೂಲ್ಯ ವಸ್ತುಗಳಿಂದ ತುಂಬಿದ್ದ ಈ ಕೋಣೆಯಲ್ಲಿ ಈಗಿರುವುದು ಬರೀ ಕಲ್ಲಿನ ಪೆಟ್ಟಿಗೆ. ಗೋಡೆಗಳ ಮೇಲೂ ಹೆಚ್ಚಿಗೆ ಏನೂ ಬರಹ, ಅಲಂಕಾರ, ಬಣ್ಣದ ಚಿತ್ರವಿಲ್ಲ. ಹೊರಗಿನ ಭವ್ಯತೆಗೂ ಒಳಗಿನ ಸರಳತೆಗೂ ಸಂಬಂಧವೇ ಇಲ್ಲ! ಈ ಬೃಹತ್ ಪಿರಮಿಡ್‌ನಲ್ಲಿ ಇದಷ್ಟೇ ಅಲ್ಲ, ರಾಣಿ ಕೋಣೆ-ಭೂಗತ ಕೊಠಡಿ, ರಹಸ್ಯ ಮಾರ್ಗಗಳು, ಸುರಂಗಗಳಿದ್ದರೂ ಅವುಗಳಿಗೆ ಪ್ರವೇಶವಿಲ್ಲ. ದೈಹಿಕವಾಗಿ ಸಮರ್ಥರಿದ್ದರೆ ಖಂಡಿತವಾಗಿ ಒಳಹೊಕ್ಕು ನೋಡಬೇಕು, ಒಳಗೆ ಏನಿದೆ ಎನ್ನುವುದು ಮುಖ್ಯವಲ್ಲ. ಮೆಟ್ಟಿಲು ತಿರುವು ಏರು ಸುರಂಗದಲ್ಲಿ ಇಡುವ ಪ್ರತಿ ಹೆಜ್ಜೆಯೂ ಮಡಿದವರ ಮಾಯಾಲೋಕದಲ್ಲಿ ಮರೆಯಲಾಗದ ಅನುಭವ. ಈಗೇನೋ ಪ್ರವಾಸಿಗರಿಗೆ ಏರಲು-ಇಳಿಯಲು ಮೆಟ್ಟಿಲು, ಆಧಾರಕ್ಕೆ ಕಟಾಂಜನ, ಅಲ್ಲಲ್ಲಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಪಿರಮಿಡ್ಡಿನ ವಾಸ್ತುವಿಗೆ ತೊಂದರೆಯಾಗದಂತೆ ಒಳಗಿನ ತಾಪಮಾನ ಯಾವಾಗಲೂ 20 ಡಿಗ್ರಿ ಸೆಲ್ಸಿಯಸ್ ಇರುವಂತೆ ಮಾಡಿದ್ದಾರೆ.

ಅಂತೂ ಈಜಿಪ್ಟಿನ ನೂರಾರು ಕತೆಗಳು ರೋಚಕ. ಈ ಪಿರಮಿಡ್‌ಗಳ ನಿರ್ಮಾಣವೂ ಕೌತುಕವೇ ನಿಜ. ಆದರೆ ‘ಭವ್ಯ ದೀಪ’ದ ಒಳಗಿನ ಕತ್ತಲೆ ಮತ್ತು ಖಾಲಿತನ ನನಗಂತೂ ರೂಪಕವಾಗಿ ಗೋಚರಿಸಿತು.

ಪಿರಮಿಡ್‌ ಒಳಗೆ ಕಿರು ದಾರಿ
ಪಿರಮಿಡ್‌ ನಿರ್ಮಿಸಿರುವ ಒಂದೊಂದು ಕಲ್ಲುಗಳೂ ಆಳೆತ್ತರಕ್ಕಿವೆ

ಇಖೆತ್ (ಭವ್ಯ ದೀಪ)!

ಗೀಜಾದ ಪಿರಮಿಡ್‌ ಅನ್ನು ಫೆರೋ ಖುಫುಗಾಗಿ ನಿರ್ಮಿಸಲಾಗಿರುವುದರಿಂದ ಖುಫು ಪಿರಮಿಡ್ ಎಂದು ಕರೆಯಲಾಗುತ್ತದೆ. ಇದನ್ನು ಹಳೆಯ ಈಜಿಪ್ಟ್ ಸಾಮ್ರಾಜ್ಯದ ನಾಲ್ಕನೇ ರಾಜವಂಶದ ಅವಧಿಯಲ್ಲಿ ಕ್ರಿಸ್ತಪೂರ್ವ 2580-2560 ರಲ್ಲಿ ನಿರ್ಮಿಸಲಾಯಿತು. ಪೂರ್ಣವಾದಾಗ ಸುಮಾರು 481 ಅಡಿ ಎತ್ತರವಿದ್ದು ಕಾಲಕ್ರಮೇಣ ನೈಸರ್ಗಿಕ ಸವೆತ ಮತ್ತು ದಾಳಿಯಿಂದ ಈಗ 455 ಅಡಿಗೆ ಕುಗ್ಗಿರುವ ಇದು ಗೀಜಾ ಪ್ರಸ್ಥಭೂಮಿಯಲ್ಲಿರುವ ಮೂರು ಪಿರಮಿಡ್‌ಗಳಲ್ಲಿ ಎಲ್ಲಕ್ಕಿಂತ ದೊಡ್ಡದು. ಸುಣ್ಣದ ಕಲ್ಲುಗಳಿಂದ ನಿರ್ಮಿತವಾದ ಈ ಪಿರಮಿಡ್‌ನ ಹೊರಭಾಗವನ್ನು ಚೆನ್ನಾಗಿ ಪಾಲಿಶ್ ಮಾಡಲಾದ ಕೇಸಿಂಗ್ ಕಲ್ಲುಗಳಿಂದ ಮುಚ್ಚಲಾಗಿತ್ತು. ಈ ಹೊರ ಕವಚ ಸೂರ್ಯನ ಬೆಳಕನ್ನು ಪ್ರತಿಬಿಂಬಿಸಿ ಇಡೀ ಪಿರಮಿಡ್ ವಜ್ರದಂತೆ ಹೊಳೆಯುತ್ತಿತ್ತು. 14 ನೇ ಶತಮಾನದಲ್ಲಿ ಸಂಭವಿಸಿದ ಭೂಕಂಪದ ಸಮಯದಲ್ಲಿ ಇತರ ಕಟ್ಟಡ ನಿರ್ಮಿಸಲು ಈ ಕಲ್ಲುಗಳನ್ನು ಕಿತ್ತು ಬಳಸಿದ್ದರಿಂದ ಈ ಹೊರ ಕವಚ ನಷ್ಟವಾಗಿದ್ದು ಅಲ್ಲಲ್ಲಿ ಸ್ವಲ್ಪ ಉಳಿದಿದೆ. ಮೂಲ ಪಿರಮಿಡ್ ಬೃಹತ್ ಕನ್ನಡಿಯಂತೆ ಪ್ರತಿಫಲಿಸಿ ಹೊಳೆಯುವ ನಕ್ಷತ್ರದಂತೆ ಚಂದ್ರನಿಂದ ನೋಡಿದರೂ ಗೋಚರಿಸುವಷ್ಟು ಶಕ್ತಿಯುತವಾಗಿತ್ತು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಅದಕ್ಕೆ ಸರಿಯಾಗಿ ಪ್ರಾಚೀನ ಈಜಿಪ್ಟಿನವರು ಇದಕ್ಕಿಟ್ಟ ಹೆಸರು ‘ಇಖೆತ್’ (ಭವ್ಯ ದೀಪ)!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.