ADVERTISEMENT

ಪ್ರವಾಸ: ಕಾಲುದಾರಿಯ ಬೈಕ್‌ ಸವಾರಿ 'ಅನುಭವಗಳ ಹೆದ್ದಾರಿ'

ಹಿಮಾಲಯ, ಭೂತಾನ್, ಇಂಡೋನೇಷ್ಯಾನಲ್ಲಿ ರಾಘವೇಂದ್ರ ದಂಪತಿ ಸುತ್ತಾಟ

ಮೋಹನ್ ಕುಮಾರ ಸಿ.
Published 19 ಅಕ್ಟೋಬರ್ 2024, 23:30 IST
Last Updated 19 ಅಕ್ಟೋಬರ್ 2024, 23:30 IST
ನೇಪಾಳದ ಮುಕ್ತಿನಾಥಕ್ಕೆ ಬೈಕ್‌ ಸವಾರಿ
ನೇಪಾಳದ ಮುಕ್ತಿನಾಥಕ್ಕೆ ಬೈಕ್‌ ಸವಾರಿ   
ಬೈಕ್‌ ಏರಿ ಹೆದ್ದಾರಿಯಲ್ಲೋ, ಕಾಲುದಾರಿಯಲ್ಲೋ ವೇಗವಾಗಿ ಸಾಗುವುದರಿಂದ ಒಳ್ಳೆಯ ರೈಡರ್‌ ಆಗುವುದಿಲ್ಲ. ಸುರಕ್ಷತಾ ಕ್ರಮಗಳ ಜೊತೆಗೆ ಭೇಟಿ ಕೊಡುವ ಸ್ಥಳ, ಅಲ್ಲಿನ ಜನ, ಹವಾಮಾನ ಇತ್ಯಾದಿಗಳ ಅರಿವೂ ಇರಬೇಕು. ಆಗಷ್ಟೇ ಬೈಕ್‌ ಸವಾರಿ ಖುಷಿಯ ಕಣಜವಾಗುತ್ತದೆ.

‘ಬೈಕ್‌ ರೈಡ್‌ ಎಂದರೆ ಕೇವಲ ವೇಗದ ಪ್ರಯಾಣವಲ್ಲ. ನಮ್ಮನ್ನು ನಾವು ಕಂಡುಕೊಳ್ಳುವ ಹುಡುಕಾಟ’

ಮೈಸೂರಿನ ಬೈಕ್‌ ರೈಡರ್‌ ದಂಪತಿ ರಾಘವೇಂದ್ರ ಟಿ.ಇ. ಮತ್ತು ವೇದಾ ದಶಕದ ಪ್ರಯಾಣದ ಅನುಭವವನ್ನು ತೆರೆಯುತ್ತಾ ಹೋದರು.

ರಾಜ್ಯದ ಪಶ್ಚಿಮ ಘಟ್ಟಗಳು, ಕಾಶ್ಮೀರ, ಲೇಹ್‌–ಲಡಾಖ್, ಸಿಕ್ಕಿಂ, ನೇಪಾಳ, ಭೂತಾನ್‌, ಇಂಡೋನೇಷ್ಯಾದ ಬಾಲಿ, ಶ್ರೀಲಂಕಾಗಳಲ್ಲಿ ಬೈಕ್ ಸವಾರಿ ಯಾನದಲ್ಲಿ ಕಲಿತ ಪಾಠಗಳು ಹತ್ತಾರು. ಸ್ಥಳೀಯ ಜನರ ಸಹಕಾರ, ರುಚಿಯೂಟದ ಸವಿಯನ್ನು ನೆನಪಿಸಿಕೊಂಡ ಅವರು, ತಮಿಳುನಾಡಿನ ಆಂಬೂರ್‌ ಬಳಿ ಭೀಕರ ಅಪಘಾತದಲ್ಲಿ ಯಾವುದೇ ಗಾಯವಾಗದಂತೆ ಉಳಿಸಿದ ಸುರಕ್ಷಿತ ಜಾಕೆಟ್‌, ಮಂಡಿಯ ಕವಚವನ್ನು ತೋರಿ ಭಾವುಕರಾದರು.

ADVERTISEMENT

ಬೆಂಗಳೂರಿನಲ್ಲಿ ಫಿಸಿಯೊ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಅವರಿಗೆ ಸಂಜು ಎಂಬುವರ ಪರಿಚಯವಿತ್ತು. ಅವರ ಲಡಾಖ್‌ ಸುತ್ತಾಟವೇ ಬೈಕ್‌ ಸವಾರಿಯತ್ತ ಆಕರ್ಷಿಸಿತು. ಕಾಶ್ಮೀರ–ಲಡಾಖ್‌ನ ಕಾಲುದಾರಿಯಲ್ಲಿ (ಆಫ್‌ ರೋಡ್‌) ಪ್ರಯಾಣದ ಕನಸು ಹೊತ್ತು ‘ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್ 350’ ಖರೀದಿಸಿದ್ದರು. ಇದೀಗ ನೆಚ್ಚಿನ ಕೆಟಿಎಂ 360ಯಲ್ಲಿ ದೇಶ–ವಿದೇಶಗಳನ್ನು ಸುತ್ತಾಡುತ್ತಿದ್ದಾರೆ.

ರಾಘವೇಂದ್ರ ಅವರು, ಬೈಕ್‌ ರೈಡ್‌ನ ಪಾಠ ಕಲಿತದ್ದು ‘ಬುಲ್ಸ್ ಆಫ್‌ ಮೈಸೂರು’ ಚಾರಣಿಗರ ಕ್ಲಬ್‌ನಿಂದ. ವೇದಾ ಅವರನ್ನು ಮದುವೆಯಾದ ನಂತರ ಸಂಕ್ರಾಂತಿ ಹಬ್ಬದ ವೇಳೆ ಮೈಸೂರಿನಿಂದ ರಾಜಸ್ಥಾನ ಜೈಸಲ್ಮೇರ್‌ಗೆ ಬೈಕಿನಲ್ಲಿ ಹೋಗಿದ್ದರು. ಅವರ ಮೊದಲ ರೈಡ್‌ ಹೊರತುಪಡಿಸಿ ಎಲ್ಲ ಸವಾರಿಯಲ್ಲೂ ವೇದಾ ಜೊತೆಯಾಗಿದ್ದಾರೆ. ಲೇಹ್‌– ಲಡಾಖ್‌–ನುಬ್ರಾ ಕಣಿವೆ–ಪಾಂಗಾಂಗ್ ಸರೋವರ–ಕಾರ್ಗಿಲ್‌–ಶ್ರೀನಗರಕ್ಕೆ ಬೈಕ್ ಸವಾರಿ ಮಾಡಿದ್ದ ಇವರು, ‘ಆಗ ಈ ದಾರಿಗಳೂ ಕಠಿಣವಾಗಿದ್ದವು. ಈಗಿನಂತೆ ರೋಹ್ಟಾಂಗ್ ಪಾಸ್‌ನಲ್ಲಿ ಅಟಲ್‌ ಸುರಂಗದಾರಿ ಇರಲಿಲ್ಲ’ ಎಂದರು.

‘ಸಮುದ್ರ ಮಟ್ಟದಿಂದ ಎಂಟು ಸಾವಿರ ಅಡಿಗಳಷ್ಟು ಮೇಲೇರುತ್ತಿದ್ದಂತೆಯೇ ವಾತಾವರಣದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದಕ್ಕೆ ಅಕ್ಯೂಟ್ ಮೌಂಟೇನ್ ಸಿಕ್‌ನೆಸ್ ಎನ್ನುತ್ತಾರೆ. ಮೂರು ಬಾರಿ ಲೇಹ್‌ಗೆ ಹೋಗಿದ್ದ ಮೈಸೂರಿನವರೊಬ್ಬರು ಈಚೆಗಿನ ಸವಾರಿಯಲ್ಲಿ ಉಸಿರಾಟದ ತೊಂದರೆಯಿಂದ ತೀರಿಕೊಂಡರು. ಪ್ರತಿ ಸಾವಿರ ಅಡಿಯಷ್ಟು ಎತ್ತರಕ್ಕೇರಿದಾಗೆಲ್ಲ ಅಲ್ಲಿನ ವಾತಾವರಣಕ್ಕೆ ದೇಹವನ್ನು ಹೊಂದಿಸಿಕೊಳ್ಳಬೇಕೆಂಬ ಎಚ್ಚರ ರೈಡರ್‌ಗೆ ಇರಬೇಕು. ಎಲ್ಲೇ ಹೋದರೂ ಅಲ್ಲಿನ ಸ್ಥಳೀಯರೊಂದಿಗೆ ಬೆರೆಯಬೇಕು. ಹತ್ತಿರದ ಪ್ರೇಕ್ಷಣೀಯ ಸ್ಥಳ, ಸಾಗಬೇಕಾದ ದಾರಿ ಎಲ್ಲವನ್ನೂ ಸ್ಥಳೀಯರೇ ತೋರುತ್ತಾರೆ. ಏನೂ ತಿಳಿದುಕೊಳ್ಳದೇ ಹಿಮಾಲಯದ ಯಾವುದೇ ಸ್ಥಳವನ್ನು ಮೂರೇ ದಿನದಲ್ಲಿ ನೋಡಿ ಬರುತ್ತೇನೆಂದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ರಾಘವೇಂದ್ರ ಎಚ್ಚರಿಸುತ್ತಾರೆ.

ಚಳಿಯಿಂದ ರಕ್ಷಿಸಿಕೊಳ್ಳಲು ಉಡುಪುಗಳು, ಸುರಕ್ಷಾ ಜಾಕೆಟ್‌, ಕೈಗವಸು, ಬೈಕ್‌ ರಿಪೇರಿ ಮಾಡುವ ತಿಳಿವಳಿಕೆ ಅಗತ್ಯ. ಈ ಕಾರಣಕ್ಕಾಗಿಯೇ ಗ್ಯಾರೇಜ್‌ಗೆ ಹೋಗಿ ಬ್ರೇಕ್‌, ಬ್ಯಾಟರಿ, ಕ್ಲಚ್‌ ವಯರ್ ಬದಲಾಯಿಸುವುದು, ಪಂಕ್ಚರ್ ಹಾಕುವುದನ್ನು ಕಲಿತಿದ್ದಾರೆ. ಇಲ್ಲದೇ ಹೋದರೆ ನಿರ್ಜನ ರಸ್ತೆಯಲ್ಲಿ ಸಹಾಯಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ವೇಳೆ ಭೂ ಕುಸಿತ, ಹಿಮಪಾತ ಏನು ಬೇಕಾದರೂ ಆಗಬಹುದು. ಚಳಿಗೆ ಮರಗಟ್ಟುವ ಕೈಗಳನ್ನು ಸೈಲೆನ್ಸರ್‌ ಕಾವಿನಲ್ಲಿ ಬೆಚ್ಚಗೆ ಮಾಡಿಕೊಳ್ಳಬೇಕೆಂಬ ಸಣ್ಣ ಸಣ್ಣ ಉಪಾಯಗಳೂ ಗೊತ್ತಿರಬೇಕು ಎನ್ನುತ್ತಾರೆ.

ರಾಘವೇಂದ್ರ – ವೇದಾ
ಸವಾಲು ಎಸೆದ ಮುಕ್ತಿನಾಥ

ನೇಪಾಳದ ಮುಕ್ತಿನಾಥಕ್ಕೆ ಹೋಗುವ ಮುಂಚೆ ಭಾರತದ ಲೇಹ್‌ ಸವಾರಿಯೇ ಕಡಿದಾದುದೆಂದುಕೊಂಡಿದ್ದ ರಾಘವೇಂದ್ರ ದಂಪತಿಗೆ ಮುಕ್ತಿನಾಥ ರೈಡಿಂಗ್‌ನ ಕಠಿಣ ಸವಾಲುಗಳ ನೆನಪು ಹಚ್ಚಹಸಿರಾಗಿದೆ. ಹೈದರಾಬಾದ್‌- ನಾಗಪುರ- ವಾರಾಣಸಿ– ಗೋರಖ್‌ಪುರ ಮಾರ್ಗವಾಗಿ ನೇಪಾಳ ಪ್ರವೇಶ ಮಾಡಿ, ಪೋಕ್ರಾದಲ್ಲಿ ಉಳಿದರು. ಮುಕ್ತಿನಾಥಕ್ಕೆ ಹೋಗಲು ಲಗೇಜ್‌ಗಳನ್ನು ಬೈಕ್‌ನಲ್ಲಿ ಏರಿಸಿಕೊಳ್ಳುವಾಗ, ಅಲ್ಲಿನ ಹೋಟೆಲ್‌ನವರೇ ‘ನೀವೇನು ಹಣ ಕೊಡಬೇಡಿ, ಲಗೇಜ್‌ ಇಲ್ಲಿಯೇ ಇಡಿ’ ಎಂದರಂತೆ. ದಾರಿಯಲ್ಲಿ ಹೋಗುವಾಗ ಹೋಟೆಲ್‌ನವರೇಕೆ ಹಾಗೆ ಹೇಳಿದರೆಂಬುದು ಇವರಿಗೆ ಅರಿವಾಯಿತು.

‘ಒಂದು ಬದಿ ಆಳವಾದ ಕಮರಿಯಲ್ಲಿ ಭೋರ್ಗರೆಯುತ್ತ ಹರಿಯುವ ನದಿ, ಮತ್ತೊಂದು ಬದಿಯಲ್ಲಿ ಹಿಮಮಳೆಗಳೂ ಜಗ್ಗದೇ ನಿಶ್ಚಲವಾಗಿ ನಿಂತ ಚೂಪುಗಲ್ಲುಗಳ ಪರ್ವತ. ಮಧ್ಯದಲ್ಲಿ ಕಿರುಹಾದಿಯಲ್ಲಿ ಸಾಹಸ. ನಿತ್ಯ 800 ಕಿಲೊಮೀಟರ್‌ ಬೈಕ್‌ ರೈಡ್‌ ಮಾಡುತ್ತಿದ್ದವರು, ಹಳ್ಳ, ಕಲ್ಲು, ಹೊಂಡಗಳಿರುವ ರಸ್ತೆಯಲ್ಲಿ ನಾಲ್ಕು ಗಂಟೆಯಲ್ಲಿ ಕ್ರಮಿಸಿದ್ದು ಕೇವಲ 14 ಕಿಲೊಮೀಟರ್‌’ ಎಂದು ಅಚ್ಚರಿಗೊಳಿಸಿದರು.

ಗುರಿಯನ್ನು ಮುಟ್ಟುವುದೇ ಉದ್ದೇಶವಾಗಿಲ್ಲದಿದ್ದರೆ ಸಾಕಷ್ಟು ಮಾನವೀಯತೆ, ಅಂತಃಕರಣದ ಪಾಠಗಳನ್ನು ಕಲಿಯುತ್ತೇವೆ ಎಂಬುದಕ್ಕೆ ಮುಕ್ತಿನಾಥ ಮಾರ್ಗದ ಹಳ್ಳಿಯ ‘ಭೂಮಿ’ ಎಂಬ ದನ ಕಾಯುವ ವ್ಯಕ್ತಿಯನ್ನು ರಾಘವೇಂದ್ರ ಉದಾಹರಿಸಿದರು. ‘ತನ್ನ ಪುಟ್ಟ ಗುಡಿಸಲಿನಲ್ಲಿ ಆಶ್ರಯ ನೀಡಿದ ‘ಭೂಮಿ’, ಸೊಪ್ಪು–ತರಕಾರಿ ಊಟ ಬಡಿಸಿದರು. ಮಾರನೇ ದಿನದ್ದು ಅಪಾಯದ ದಾರಿಯೆಂದು ಎಚ್ಚರಿಸಿದರು. ಅವರನ್ನು ಮರೆಯುವುದಾದರೂ ಹೇಗೆ’ ಎಂದು ಕೃತಜ್ಞರಾದರು.

ನೇ‍ಪಾಳದ ಮುಕ್ತಿನಾಥದ ಹಾದಿ

ಮುಕ್ತಿನಾಥದ ‘ಬಾಬ್‌ ಮಾರ್ಲೆ’ ಕೆಫೆಯಲ್ಲಿ ಸಿಗುವ ಎಲ್ಲ ತರಾವರಿ ತಿನಿಸಿನ ಸವಿ, ಉಚಿತ ವಸತಿ, ಕನ್ನಡದಲ್ಲಿ ಮಾತನಾಡುತ್ತಿದ್ದ ಇವರನ್ನು ನಾಗಾ ಸಾಧುವೊಬ್ಬ ‘ಬರಬೇಕು, ಬರಬೇಕು’ ಎಂದಿದ್ದನ್ನು ಬೆರಗಿನಿಂದ ಹೇಳಿದರು.

‘ಭೂತಾನ್‌ಗೆ ಕೇವಲ ಗುರುತಿನಚೀಟಿ, ಪರವಾನಗಿ ತೋರಿಸಿ ಹೋಗಬಹುದಿತ್ತು. ಈಗ ಅನುಮತಿ ಪಡೆದು ಅವರದೇ ಎಸ್ಕಾರ್ಟ್‌ನಲ್ಲಿ ತೆರಳಬೇಕು. ಆಗ ನಿತ್ಯ ₹ 100 ನೀಡಬೇಕಿತ್ತು. ಈಗ ಪ್ರಯಾಣ ಮಾಡಬೇಕೆಂದರೆ ₹ 45 ಸಾವಿರ ಭರಿಸಬೇಕಿದೆ. ಅಲ್ಲಿನ ಶ್ರದ್ಧಾಕೇಂದ್ರಗಳಲ್ಲಿ ಭಾರತೀಯ ರೈಡರ್‌ಗಳು, ಪ್ರವಾಸಿಗರು ಗೌರವದಿಂದ ನಡೆದುಕೊಳ್ಳದ್ದರಿಂದ ಈ ಪರಿಸ್ಥಿತಿ ಬಂದಿದೆ’ ಎಂದು ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

ಬಾಲಿಯಲ್ಲಿ 18 ದಿನ

‘ಇಂಡೊನೇಷ್ಯಾ ಬಾಲಿಗೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ತೆಗೆದುಕೊಂಡು ಹೋಗಿದ್ದೆವು. ಎಲ್ಲಿ ಹೋದರೂ ಮೆಕ್ಯಾನಿಕ್‌ ಅನ್ನು ಪರಿಚಯ ಮಾಡಿಕೊಳ್ಳುತ್ತೇವೆ. ಕೆಲವು ನಗರದ ಮಾರ್ಗಗಳನ್ನು ಸಂಜೆ 7 ಗಂಟೆಗೆ ಮುಚ್ಚಲಾಗುತ್ತದೆ. ಸಂಜೆ 6 ಆಗಿತ್ತು. ಬೈಕ್‌ ಕೀ ಕಳೆದುಹೋಗಿತ್ತು. ಗಾಬರಿಯಿಂದ ಮೆಕ್ಯಾನಿಕ್‌ಗೆ ಕರೆ ಮಾಡಿದೆ. ಎರಡೇ ನಿಮಿಷಕ್ಕೆ ನಕಲಿ ಕೀಗಳೊಂದಿಗೆ ಬಂದು ಬೈಕ್‌ ಚಾಲೂ ಮಾಡಿಕೊಟ್ಟರು’ ಎಂದರು.

‘ಅಪಘಾತದ ಆಘಾತದಿಂದ ಪೆಟ್ರೋಲ್ ಹಾಕಿಸುವುದನ್ನೇ ಮರೆತುಬಿಟ್ಟಿದ್ದೆವು. ರಾಮನಗರ ದಾಟಿದ ಮೇಲೆ ಪೆಟ್ರೋಲ್ ಖಾಲಿಯಾಗಿತ್ತು. ರಾತ್ರಿ 9.30ರ ಸುಮಾರು ಯಾರೊಬ್ಬರೂ ನೆರವಾಗಲಿಲ್ಲ. ಇಬ್ಬರು ಮುಸ್ಲಿಂ ಯುವಕರು ಟೋ ಮಾಡಲು ನೋಡಿದರು, ಆಗಲಿಲ್ಲ. ಪೆಟ್ರೋಲ್ ತರುವುದಾಗಿ ಹಣವನ್ನು ಪಡೆಯದೇ ಹೋದರು. ಬಳಿಕ ಮುಸ್ಲಿಂ ದಂಪತಿ ಬಂದು ಮೂರು ಕಿಲೊಮೀಟರ್‌ ದೂರದ ಪೆಟ್ರೋಲ್ ಬಂಕ್‌ವರೆಗೂ ಟೋ ಮಾಡಿದರು. ಅಲ್ಲಿ ಆ ಹುಡುಗರೂ ಸಿಕ್ಕರು. ನಾನು ಕೈಮುಗಿದೆ’ ಎಂದು ಭಾವುಕರಾದರು.

ಇದು ಹತ್ತು ವರ್ಷಗಳ ಹಿಂದೆ ಕಾರ್ಗಿಲ್‌ನಲ್ಲಿ ನಡೆದ ಘಟನೆ. ಅಲ್ಲಿನ ತಿರುವೊಂದರಲ್ಲಿ ವೇಗವಾಗಿ ಸಾಗಿದರು. ಅದು ಟ್ರಕ್‌ ಚಾಲಕನಿಗೆ ಕೋಪ ತರಿಸಿತು. ಅದು ತಪ್ಪೆಂದು ಇವರಿಗೂ ಅರಿವಾಯಿತು. ಆದರೆ, ಟ್ರಕ್ ಚಾಲಕ ಹಿಂದಿನಿಂದಲೇ ಹಾರ್ನ್ ಮಾಡುತ್ತಾ ಬರುತ್ತಿದ್ದ. ಇವರು ದೂರದಲ್ಲಿ ಬೈಕ್‌ ನಿಲ್ಲಿಸಿ ಕೈ ಮುಗಿದು ಕ್ಷಮಿಸಿ ಎಂದು ಕೇಳಿದರು. ಅವನೂ ಕರಗಿದ. ‘ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ, ಆಗುವುದು ನಮಗೆ. ಟ್ರಕ್ ಬಿದ್ದರೆ ರೋಡ್ ಬಂದ್‌ ಮಾಡಿ ಬಿಡುತ್ತಾರೆ. ಇದರಿಂದ ಬೇರೆ ಟ್ರಕ್‌ನವರಿಗೆ ತೊಂದರೆಯಾಗುತ್ತದೆ’ ಎಂದು ಮಿಕ್ಕ ಟ್ರಕ್ ಚಾಲಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದನ್ನು ರಾಘವೇಂದ್ರ ಮೆಚ್ಚುಗೆಯಿಂದ ಹೇಳಿದರು.

ಹೊಸ ಸ್ಥಳಗಳ ಭೇಟಿ, ಹೊಸ ಜನರ ಒಡನಾಟ, ವೈವಿಧ್ಯಮಯ ಸಂಸ್ಕೃತಿ, ಸವಾಲು ಎಸೆಯುವ ರಸ್ತೆ, ಹವಾಮಾನ ಎಲ್ಲವೂ ಹೊಸದೇ ಪಾಠಗಳನ್ನು ಹೇಳಿಕೊಡುತ್ತವೆ. ಅವುಗಳಿಗೆ ಸರಿಯಾಗಿ ಕಿವಿಗೊಟ್ಟರೆ ಬದುಕು ಸಮೃದ್ಧವಾಗುತ್ತದೆ.

ನೇಪಾಳದ ಮುಕ್ತಿನಾಥದ ಹಾದಿ
ರೈಡರ್‌ಗಳಿಗೆ ಕಿವಿಮಾತು
  • ಬೆಳಿಗ್ಗೆಯೇ ಬೈಕ್‌ ಸವಾರಿ ಆರಂಭಿಸಬೇಕು. ಸಂಜೆ 6.30ರ ನಂತರ ಪ್ರಯಾಣ ಬೇಡ. ಚೆನ್ನಾಗಿ ನೀರು ಕುಡಿಯಬೇಕು. ನಿದ್ದೆ ಬಂದರೆ ರಸ್ತೆ ಪಕ್ಕ ನಿಲ್ಲಿಸಿ, ಚಿಕ್ಕ ನಿದ್ದೆಯನ್ನು ಮುಗಿಸಿಯೇ ಪ್ರಯಾಣಿಸಬೇಕು. ನಿದ್ದೆಯಲ್ಲೇ ಓಡಿಸುತ್ತೇನೆಂದವರು ಗಂಟೆಗೆ 5 ಕಿ.ಮೀ ಓಡಿಸುವುದೂ ಕಷ್ಟ.

  • ಪ್ರಯಾಣವೆಂದರೆ ಕುಡಿದು, ಮೋಜಿನ ಪಾರ್ಟಿ ಮಾಡಿ ಬರುವುದಲ್ಲ. ಎಲ್ಲರೊಂದಿಗೆ ಬೆರೆಯಬೇಕು. ವಿಧೇಯರಾಗಿ ವರ್ತಿಸಬೇಕು. ವೇಗವಾಗಿ ಓಡಿಸುವುದೇ ಬೈಕ್‌ ರೈಡ್‌ ಅಲ್ಲ. ಸುರಕ್ಷತೆಯೇ ಆದ್ಯತೆ ಆಗಬೇಕು.

  • ಪ್ರಥಮ ಚಿಕಿತ್ಸೆ ಕಿಟ್‌, ಔಷಧ ಒಯ್ಯಬೇಕು. ಬೈಕ್‌ನಿಂದ ಇಳಿದ ತಕ್ಷಣ ಕೂರದೇ ಸಣ್ಣ ವ್ಯಾಯಾಮ ಮಾಡಬೇಕು.

  • ಮಿತಿಯಿಂದ ಹಣ ಖರ್ಚು ಮಾಡಬೇಕು. ನೇಪಾಳ, ಭೂತಾನ್‌ ಪ್ರವಾಸಗಳು ಲಕ್ಷ ದಾಟಿಲ್ಲ. ಅದಕ್ಕೆ ಜನರೊಂದಿಗೆ ಬೆರೆಯುವುದೇ ಕಾರಣ. ಪ್ರಯಾಣವು ಶಕ್ತಿ ನೀಡುತ್ತದೆ. ಅದು ನಿಮ್ಮ ವೃತ್ತಿಯಲ್ಲಿ ಪ್ರತಿಫಲಿಸುತ್ತದೆ.

ಭೂತಾನ್‌ ಪಾರೊ ತಕ್ತ್‌ಸಂಗ್‌ ಮೊನಾಸ್ಟ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.