ADVERTISEMENT

ಮಾಯಾನಗರಿ ಸಿಂಗಪುರದ ಹಸಿರು ಕಾಳಜಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 23:57 IST
Last Updated 29 ಜೂನ್ 2024, 23:57 IST
<div class="paragraphs"><p>ಸೌತ್ ಗಾರ್ಡನ್ ಬೇನಲ್ಲಿರುವ ‘ಕ್ಲೌಡ್ ಫಾರೆಸ್ಟ್ ಡೂಮ್‌’ ಹಾಗೂ ‘ಫ್ಲವರ್ ಡೂಮ್‌’</p></div>

ಸೌತ್ ಗಾರ್ಡನ್ ಬೇನಲ್ಲಿರುವ ‘ಕ್ಲೌಡ್ ಫಾರೆಸ್ಟ್ ಡೂಮ್‌’ ಹಾಗೂ ‘ಫ್ಲವರ್ ಡೂಮ್‌’

   

ಆಧುನಿಕತೆಯೇ ಮೈವೆತ್ತಂತ್ತಿರುವ ಸಿಂಗಪುರ ಪ್ರಪಂಚದ ಎಲ್ಲಾ ಭಾಗದ ಪ್ರವಾಸಿಗರ ಸ್ವರ್ಗ. ಕಾರ್ಪೊರೇಟ್ ಜಗತ್ತಿನ ಹತ್ತು ಹಲವು ಬಹುರಾಷ್ಟ್ರೀಯ ಆರ್ಥಿಕ ಕಂಪನಿಗಳ ಮುಖ್ಯ ಕೇಂದ್ರ. ಕೇವಲ 700 ಚದರ ಕಿಲೊಮೀಟರ್ ವಿಸ್ತೀರ್ಣದ 50 ಲಕ್ಷ ಜನಸಂಖ್ಯೆಯ ಈ ನಗರ ಕಮ್‌ ದೇಶ ನೀರನ್ನು ಪಕ್ಕದ ಮಲೇಷ್ಯಾದಿಂದ ತರಿಸಿಕೊಳ್ಳುತ್ತದೆ. ಮಳೆ ಕೊಯ್ಲಿನ ವ್ಯವಸ್ಥೆ ಹಾಗೂ ಕೊಳಚೆ ನೀರಿನ ಶುದ್ಧೀಕರಣದ ಮೂಲಕ ನೀರಿನ ಮರುಬಳಕೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಲಾಗುತ್ತದೆ.

ಇಲ್ಲಿ ಏನನ್ನೂ ಬೆಳೆಯುವುದಿಲ್ಲ, ಯಾವುದೇ ರೀತಿಯ ಕೈಗಾರಿಕೆಗಳೂ ಇಲ್ಲ. ಪ್ರತಿಯೊಂದನ್ನೂ ಆಮದು ಮಾಡಿಕೊಳ್ಳುವ ಸಿಂಗಪುರ ಸುಂದರವಾಗಿ, ಶ್ರೀಮಂತವಾಗಿ ಬೆಳೆದಿದ್ದು ಹೇಗೆ?  ಉತ್ತರವೆಂದರೆ ಈ ದೇಶದ ಜನರಲ್ಲಿರುವ ಅಪಾರವಾದ ಹಸಿರು ಕಾಳಜಿ. ಭೂಮಿಯ ಸಮಭಾಜಕ ವೃತ್ತದಿಂದ ಕೇವಲ ಒಂದು ಡಿಗ್ರಿ ಕೆಳಗೆ ಇರುವ ಈ ದೇಶದಲ್ಲಿ ಸಹಜವಾಗಿಯೇ ಬಿರು ಬಿಸಿಲು. ಆದರೆ ಭೌಗೋಳಿಕ ತಾಪಮಾನ ಅತಿಯಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೂ ಇಲ್ಲಿನ ಉಷ್ಣತೆ 37 ಡಿಗ್ರಿ ಸೆಲ್ಸಿಯಸ್‌ ದಾಟಿಲ್ಲ! ಸಿಂಗಪುರ, ಏಷ್ಯಾದ ಅತ್ಯಂತ ಹಸಿರು ನಗರ ಎನ್ನುವ ಖ್ಯಾತಿಯನ್ನು ಪಡೆದಿದೆ. ವಿಶ್ವದ ಹಸಿರು ನಗರ ಸೂಚ್ಯಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 1965ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಈ ದೇಶದಲ್ಲೂ ಅಪಾರವಾದ ಕೊಳಚೆಯಿತ್ತು. ಗಲೀಜಿನ ಕಾಲುವೆಗಳಿದ್ದವು. ಮಣ್ಣು ತುಂಬಿದ ನದಿಗಳಿದ್ದವು. ನಿಯಂತ್ರಣಕ್ಕೆ ಸಿಗದ ತ್ಯಾಜ್ಯ ನೀರಿನ ಹರಿವಿತ್ತು. ಆದರೆ ದೂರದೃಷ್ಟಿ ಹೊಂದಿದ್ದ ಮೊದಲ ಪ್ರಧಾನಿ ಲೀ ಕ್ಯೂನ್ ಅವರ ಪ್ರಮುಖ ಆದ್ಯತೆ, ಸ್ವಚ್ಛ ಮತ್ತು ಹಸಿರು ಉದ್ಯಾನದ ನಗರವನ್ನಾಗಿಸುವುದು. ಹೀಗಾಗಿ ತಮ್ಮ 40 ವರ್ಷಗಳ ಆಡಳಿತದಲ್ಲಿ ಜನರಲ್ಲಿ ತಿಳಿವಳಿಕೆ ಮೂಡಿಸಿದರು. ವಿದ್ಯಾರ್ಥಿಗಳಲ್ಲಿ, ಯುವ ಸಮೂಹದಲ್ಲಿ ಇಂತಹ ಅವಶ್ಯಕತೆಯ ಅರಿವನ್ನು ತುಂಬುವ ಕೆಲಸವನ್ನು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ನಿರಂತರವಾಗಿ ಮಾಡಿದರು. ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಇದರಿಂದಲೇ ಸಿಂಗಪುರ ಸಂಪೂರ್ಣ ಆಧುನಿಕತೆಯ ನಡುವೆಯೂ ಹಸಿರುಮಯವಾಗಿದೆ.

ADVERTISEMENT

ಇದಕ್ಕಾಗಿ ‘ಹಸಿರು ಆಡಳಿತ’ ಮಾದರಿಯನ್ನು ಸರ್ಕಾರ ಅಳವಡಿಸಿಕೊಂಡಿದೆ. ತನ್ನ ಪ್ರಜೆಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವೇ ದೇಶದ ಭವಿಷ್ಯ ಹಾಗೂ ಆಸ್ತಿ ಎಂದು ಈ ದೇಶ ದೃಢವಾಗಿ ನಂಬಿದೆ. ಅದಕ್ಕಾಗಿ ಪರಿಸರ ಸ್ನೇಹಿ ಹಸಿರು ವಾತಾವರಣದ ಸೃಷ್ಟಿ ಹಾಗೂ ಅದರ ಸಮರ್ಪಕ ನಿರ್ವಹಣೆಯೇ ಈ ದೇಶದ ಮುಖ್ಯ ಗುರಿಯಾಗಿದೆ. ಇಲ್ಲಿನ ರಸ್ತೆಗಳಲ್ಲಿ ಪೊಲೀಸರು ಎಲ್ಲೂ ಕಂಡು ಬರುವುದಿಲ್ಲ. ಆದರೆ ನಮ್ಮ ಚಲನವಲನ ಗಮನಿಸುವ ಕಣ್ಣುಗಳು ಇರುತ್ತವೆ. ಇಲ್ಲಿ ಕಂಡ ಕಂಡಲ್ಲಿ ಕಸ ಎಸೆದರೆ ದಂಡ ಗ್ಯಾರಂಟಿ. ಜೊತೆಗೆ ಒಂದು ತಿಂಗಳು ರಸ್ತೆ ಗುಡಿಸುವ ಶಿಕ್ಷೆ!

1971ರಲ್ಲಿ ಶುದ್ಧಗಾಳಿ ಕಾಯ್ದೆಯನ್ನು ಅಳವಡಿಸಿಕೊಂಡ ಈ ದೇಶ, 1973 ರಲ್ಲಿಯೇ ಪರಿಸರ ಸಚಿವಾಲಯವನ್ನು ಆರಂಭಿಸಿತು. ಹಾಗೆ ಮಾಡಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1971ರಲ್ಲಿ 55,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಸಿಂಗಪುರದ ಪ್ರಜೆಗಳು, 2014ರ ಹೊತ್ತಿಗೆ ಅದನ್ನು 14 ಲಕ್ಷಕ್ಕೆ ಏರಿಸಿದರು. ಈಗ ಅವರ ಗುರಿ 2030 ರ ವೇಳೆಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವುದು. ಒಂದು ದಶಕಕ್ಕೆ 10 ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಉಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಈ ಗಗನಚುಂಬಿ ಕಟ್ಟಡಗಳ ಮಾಯಾನಗರಿ! ಹೀಗಾಗಿ ಈ ನಗರದ ಬೀದಿ ಬೀದಿಗಳಲ್ಲೂ ಗಿಡ ಮರಗಳನ್ನು ಹೇರಳವಾಗಿ ಕಾಣಬಹುದು. ಅಷ್ಟೇ ಏಕೆ ಇಲ್ಲಿನ ಎಲ್ಲಾ ಕಟ್ಟಡಗಳೂ ಹಸಿರುಮಯ.

ಇಲ್ಲಿ ಪ್ರಪಂಚದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳಿವೆ. ಆ ಜಾಗಕ್ಕೆ ಬಿಸಿನೆಸ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಆದರೆ ಈ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡಗಳಿಗೆ 2005 ರಲ್ಲಿ ಅಳವಡಿಸಲಾದ ಗ್ರೀನ್ ಮಾರ್ಕ್ ಸ್ಕೀಮ್ (GMS) ಪ್ರಮಾಣಪತ್ರ ವ್ಯವಸ್ಥೆ ಕಡ್ಡಾಯ. ಈ ಪ್ರಮಾಣಪತ್ರ ಅಂಕಗಳ ಆಧಾರದ ಮೇಲೆ ಕಟ್ಟಡಗಳನ್ನು ಸರ್ಟಿಫೈಡ್, ಗೋಲ್ಡ್, ಗೋಲ್ಡ್ ಪ್ಲಸ್ ಹಾಗೂ ಪ್ಲಾಟಿನಂ ಎಂಬುದಾಗಿ ವಿಂಗಡಿಸಲಾಗುತ್ತದೆ. ಈ ಕಟ್ಟಡಗಳಲ್ಲೆಲ್ಲ ಕಡ್ಡಾಯವಾಗಿ ಹಸಿರನ್ನು ಬೆಳೆಸಲೇಬೇಕು.

ಸಿಂಗಪುರದ ಸುಪ್ರಸಿದ್ಧ ಜ್ಯೂಯೆಲ್ ಚೆಂಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಲಿಟ್ಟ ತಕ್ಷಣ ನಾವು ವೀಕ್ಷಿಸಿದ್ದು ಅಲ್ಲಿನ ಟರ್ಮಿನಲ್ ಒಂದರಲ್ಲಿರುವ ‘ರೈನ್ ವೊರ್ಟೆಕ್ಸ್’ ಎಂಬ ಮನಮೋಹಕ ಒಳಾಂಗಣ ಜಲಪಾತ. ಏಳು ಮಹಡಿಗಳ, ನಲವತ್ತು ಮೀಟರ್‌ಗಳ ಎತ್ತರದಿಂದ ತೆರೆದ ಗಾಜಿನ ಗೋಳದಿಂದ ಧುಮುಕುವ ಈ ಜಲಪಾತ ಪ್ರಪಂಚದ ಅತ್ಯಂತ ಎತ್ತರದ ಒಳಾಂಗಣ ಜಲಪಾತ. ಇದರ ಸುತ್ತಲೂ ವಿವಿಧ ಮರ ಗಿಡಗಳಿಂದ ಕಾಡಿನ ಕಣಿವೆಯನ್ನೇ ಸೃಷ್ಟಿ ಮಾಡಲಾಗಿದೆ. ಇದರಲ್ಲಿ ಪ್ರಪಂಚದ 120ಕ್ಕೂ ಹೆಚ್ಚು ಪ್ರಭೇದಗಳ  ಎರಡು ಸಾವಿರಕ್ಕೂ ಹೆಚ್ಚು ಮರಗಳು ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಗಿಡ ಬಳ್ಳಿಗಳಿವೆ. ಸಿಂಗಪುರದಲ್ಲಿ ಕಾಲಿಡುತ್ತಿದ್ದಂತೆಯೇ ಅಲ್ಲಿನ ತಂಪು ನೀಡುವ ಹಸಿರು ವಾತಾವರಣ ಸ್ವಾಗತಿಸುತ್ತದೆ. ಪ್ರವಾಸೋದ್ಯಮವೇ ಇಲ್ಲಿನ ಆರ್ಥಿಕತೆಯ ಆಧಾರ ಸ್ತಂಭವಾಗಿರುವುದರಿಂದ ಇವೆಲ್ಲವೂ ಕೂಡ ಈ ದೇಶಕ್ಕೆ ವರಮಾನದ ಮೂಲ ಕೂಡ ಆಗಿವೆ.

ಇಲ್ಲಿನ ಸೌತ್ ಗಾರ್ಡನ್ ಬೇನಲ್ಲಿರುವ ‘ಕ್ಲೌಡ್ ಫಾರೆಸ್ಟ್ ಡೂಮ್‌’ ಹಾಗೂ ‘ಫ್ಲವರ್ ಡೂಮ್‌’ಗಳು ವಿಶೇಷ ಹಸಿರು ಅನುಭವ ನೀಡುತ್ತವೆ. ಕಣ್ಮರೆಯಾಗುತ್ತಿರುವ ಮಳೆ ಕಾಡನ್ನು ‘ಕ್ಲೌಡ್ ಫಾರೆಸ್ಟ್ ಡೂಮ್‌’ನಲ್ಲಿ ಮರುಸೃಷ್ಟಿ ಮಾಡಲಾಗಿದೆ. ಇದರ 6ನೇ ಅಂತಸ್ತಿನಿಂದ ಮಾನವ ನಿರ್ಮಿತ ಜಲಧಾರೆಯೊಂದನ್ನು ಕೆಳಗೆ ಧುಮ್ಮಿಕ್ಕುವಂತೆ ಮಾಡಿರುವುದು ರೋಮಾಂಚನಕಾರಿಯಾಗಿದೆ. ಇದನ್ನು ಮೇಲೇರಿ ನೋಡಲು ಸ್ಕೈವಾಕ್ ಇದೆ. ಸಂಪೂರ್ಣ ವ್ಯಾವಹಾರಿಕ, ಜನನಿಬಿಡ ಗಗನಚುಂಬಿ ಕಟ್ಟಡಗಳ ನಗರದ ಮಧ್ಯದಲ್ಲಿಯೇ ದಟ್ಟ ಕಾಡಿನಲ್ಲಿ ಹಾದು ಹೋಗುತ್ತಿರುವಂಥ ಅನುಭವವನ್ನು ಈ ಫಾರೆಸ್ಟ್ ಡೂಮ್‌ನಿಂದ ಖಂಡಿತ ಪಡೆಯಬಹುದು. ಪ್ರಾಣಿಗಳನ್ನು, ಕೀಟಗಳನ್ನು ಹಿಡಿದು ತಿನ್ನುವ ಪಿಚ್ಚರ್ ಪ್ಲಾಂಟ್, ವೀನಸ್ ಫ್ಲೈ ಟ್ರ್ಯಾಪ್ ಮುಂತಾದ ಅಪರೂಪದ ಪ್ರಾಣಿ ಭಕ್ಷಕ ಗಿಡಗಳ ಸಂಗ್ರಹ ಇಲ್ಲಿವೆ. ಈ ಸಸ್ಯರಾಶಿಯ ಮಧ್ಯೆ ನಮ್ಮ ಕಣ್ಣಿಗೆ ಬಿದ್ದಿದ್ದು  ಕರ್ನಾಟಕ ಮೂಲದ ‘ಮೈಸೂರು ವೈನ್’ ಎಂಬ ಬಳ್ಳಿ!

ಇಲ್ಲಿರುವ ಪ್ರತಿಯೊಂದು ಗಿಡ ಬಳ್ಳಿಗಳ ವೈಜ್ಞಾನಿಕ ವಿವರಗಳನ್ನು ಅಚ್ಚುಕಟ್ಟಾಗಿ ನೀಡಲಾಗಿದೆ. ಜಲಧಾರೆಯ ನೆತ್ತಿಯವರೆಗೂ ಹೋಗಿ ಸುತ್ತುವರಿದಿರುವ ಹಸಿರನ್ನು ಕಣ್ಬುಂಬಿಕೊಂಡು ಕೆಳಗೆ ಬರುವುದು ನಿಜಕ್ಕೂ ವಿಶೇಷ ಅನುಭವ. ಹಾಗೆಯೇ ಇದರ ಪಕ್ಕದಲ್ಲಿರುವ ಹೂಗಳ ಗೋಳ ‘ಫ್ಲವರ್ ಡೋಮ್’ ನಲ್ಲಿ ಪ್ರಪಂಚದ ಸಾವಿರಾರು ಬಗೆಯ ಹೂಗಳ ವರ್ಣಮಯ ಸುಂದರ ಲೋಕವನ್ನು ಸೃಷ್ಟಿ ಮಾಡಲಾಗಿದೆ. ಮೂರು ತಿಂಗಳಿಗೊಮ್ಮೆ ಒಂದು ಹೂವಿಗೆ ಪ್ರಾಧಾನ್ಯತೆ ಕೊಟ್ಟು ಅದರ ವಿಶೇಷ ಪ್ರದರ್ಶನವಿರುತ್ತದೆ. ನಾವು ಭೇಟಿ ನೀಡಿದಾಗ ಟ್ಯುಲಿಪ್ ಪ್ರದರ್ಶನ ಇತ್ತು.

ಏನೇನೂ ಇರದೆ ನಿದ್ರಿಸುತ್ತಿದ್ದ ಪುಟ್ಟ ಮೀನುಗಾರಿಕಾ ದ್ವೀಪವೊಂದರಲ್ಲಿ ಎಲ್ಲವನ್ನೂ ಸೃಷ್ಟಿಸಿ ಆಧುನಿಕತೆ, ಐಷಾರಾಮಿಗಳ ಜೊತೆ ಜೊತೆಗೇ ಪ್ರಪಂಚದ ಉಳಿವಿಗೆ ಅತ್ಯಂತ ಅಗತ್ಯವಾದ ಹಸಿರನ್ನು ರೂಪಿಸಿರುವುದು ಸಿಂಗಪುರವನ್ನು ಸೊಗಸಾಗಿಸಿದೆ.

ದೇಶಪ್ರೇಮವೆಂದರೆ ಹಸಿರು ಪ್ರೇಮ ಹಾಗೂ ಸ್ವಚ್ಛತೆಯ ಕಾಳಜಿಯೂ ಕೂಡ ಎಂದು ಸಾರಿ ಹೇಳುತ್ತಿರುವ ಸಿಂಗಪುರ ಪ್ರಪಂಚಕ್ಕೇ ಅನನ್ಯ ಮಾದರಿ.

ಸಿಂಗಪುರದಲ್ಲಿರುವ ಎಸ್‌.ಇ.ಎ. ಅಕ್ವೇರಿಯಂನಲ್ಲಿ ಜಲಚರಗಳ ಜಗತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.