ADVERTISEMENT

ಮೇಘಾಲಯದ ಮನಮೋಹಕ ಗುಹಾಲೋಕ

ಎಚ್.ಎಸ್. ನಂದಕುಮಾರ್
Published 21 ಸೆಪ್ಟೆಂಬರ್ 2024, 23:45 IST
Last Updated 21 ಸೆಪ್ಟೆಂಬರ್ 2024, 23:45 IST
ಮೇಘಾಲಯದ ಮೌಸ್ಮಯಿ ಗುಹೆಯ ಒಳನೋಟ
ಮೇಘಾಲಯದ ಮೌಸ್ಮಯಿ ಗುಹೆಯ ಒಳನೋಟ   

‘ಗುಹೆ’ ಎಂದರೆ ನಮಗೆ ತಕ್ಷಣ ಕಾಡುಮೃಗಗಳ ನೆನಪಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹಲವಾರು ಕಾಡು ಪ್ರಾಣಿಗಳು ಗುಹೆಯನ್ನು ಆಶ್ರಯ ತಾಣವಾಗಿರಿಸಿಕೊಂಡಿರುವುದು. ಅಂತೆಯೇ ಕಡಿಮೆ ಬೆಳಕು ಬೀಳುವ ಅಥವಾ ಬೆಳಕೇ ಬೀಳದ, ತಲೆ ಕೆಳಗಾಗಿ ನೇತಾಡುತ್ತಾ ವಿಚಿತ್ರ ಭಯ ಹುಟ್ಟಿಸುವ ಬಾವಲಿಗಳಿರುವ, ನೀರು ಹರಿಯುತ್ತಿರುವ, ಹಿಮ ಪ್ರವಾಹವಿರುವ, ಮನುಷ್ಯ ಒಳ ಪ್ರವೇಶಿಸಲು ಕಷ್ಟ ಪಡಬೇಕಾದ ಅಥವಾ ಸಾಧ್ಯವೇ ಇಲ್ಲದ ಗುಹೆಗಳಿರುವ ಕಾರಣದಿಂದಲೋ ಏನೋ, ಮನುಷ್ಯನಿಗೆ ಈ ಗುಹೆಗಳ ಕುರಿತು ಭಯ‌ ಮಿಶ್ರಿತ ಕುತೂಹಲವಿದೆ! ಆದರೆ ‘ನಾವು ಪ್ರವೇಶಿಸಲು ಹೆದರುವ ಗುಹೆ, ನಾವು ಬಯಸುವ ನಿಧಿಯನ್ನು ತನ್ನೊಳಗೆ ಹುದುಗಿಸಿಕೊಂಡಿದೆ’ ಎನ್ನುತ್ತಾರೆ ಅಮೆರಿಕದ ಪ್ರಸಿದ್ಧ ಸಾಹಿತಿ ಜೋಸೆಫ್ ಕ್ಯಾಂಬೆಲ್. ಇಲ್ಲಿ ನಿಧಿ ಎಂದರೆ ಬೆಳ್ಳಿ-ಬಂಗಾರದ ನಾಣ್ಯಗಳು, ಆಭರಣಗಳು ಅಲ್ಲ. ಪ್ರಕೃತಿಯ ವಿಶಿಷ್ಟ ರಚನೆಗಳು ಹಾಗೂ ಅನೂಹ್ಯ ಮಾಹಿತಿ. 

ಗವಿ, ಗಹ್ವರ ಎಂದೂ ಕರೆಯಲಾಗುವ ಗುಹೆಗಳು ಪ್ರಕೃತಿಯ ವಿಸ್ಮಯಕಾರಿ ನಿರ್ಮಿತಿಗಳಲ್ಲಿ ಒಂದು. ಕೋಟ್ಯಂತರ ವರ್ಷಗಳ ನೀರಿನ, ಹಿಮ ನದಿಗಳ ಪ್ರವಾಹ ಹಾಗೂ ಜ್ವಾಲಾಮುಖಿಯ ಸ್ಫೋಟಗಳಿಂದ ರಚನೆಯಾದ ವಿವಿಧ ಆಕಾರ, ಗಾತ್ರದ ಮಿಲಿಯಾಂತರ ಗುಹೆಗಳು ಈ ಭುವಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ಕೇವಲ ನೆಲದ ಮೇಲಷ್ಟೇ ಅಲ್ಲದೆ ನೀರಿನೊಳಗೂ ಸಹ ಸಾವಿರಾರು ಗುಹೆಗಳಿವೆ! ಹಾಗೆಯೇ ಸಂಪೂರ್ಣ ಮಂಜಿನಿಂದಾವರಿಸಿದ ನೀರ್ಗಲ್ಲ ಗುಹೆಗಳೂ ಇವೆ!

ಇಂತಹ ವಿಸ್ಮಯಕಾರಿ ಗುಹೆಗಳ ಕುರಿತು ನನಗೆ ವಿಶೇಷ ಸೆಳೆತ. ಹಾಗಾಗಿ ನಮ್ಮ ಇತ್ತೀಚಿನ ಮೇಘಾಲಯ ಪ್ರವಾಸದ ವೇಳೆ ನಾವು ಆಕರ್ಷಕ ಗುಹೆಗಳಾದ ‘ಅರ್ವಾ’(Arwah) ಹಾಗೂ ‘ಮೌಸ್ಮಯಿ’(Mawsmai) ಗುಹೆಗಳನ್ನು ವೀಕ್ಷಿಸಿದೆವು. ಇಲ್ಲಿಯವರೆಗೆ ಅಜಂತಾ, ಎಲ್ಲೋರಾ, ಎಲಿಫೆಂಟಾ, ಕಾರ್ಲಾಬಾಜ ಹಾಗೂ ನಮ್ಮ ರಾಜ್ಯದ ಬಾದಾಮಿಯ ಗುಹೆಗಳನ್ನು ವೀಕ್ಷಿಸಿದ್ದ ನಮಗೆ ಇವು ವಿಭಿನ್ನ, ಅವಿಸ್ಮರಣೀಯ ಅನುಭವ ನೀಡಿದವು.

ADVERTISEMENT

ನಮ್ಮ ದೇಶದಲ್ಲಿ ಇಲ್ಲಿಯವರೆಗೆ 2,702 ಗುಹೆಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಇನ್ನೂ ಪತ್ತೆ ಹಚ್ಚಲಾಗದ ಅಪಾರ ಗುಹೆಗಳು ಇವೆ ಎಂಬುದು ಪರಿಣತರ ಅಭಿಮತ. ಇಲ್ಲಿಯವರೆಗೆ ಪತ್ತೆಯಾದ 2,702 ಗುಹೆಗಳಲ್ಲಿ ಹೆಚ್ಚಿನವು ‘ಮೇಘಗಳಿಗೆ ಮುತ್ತಿಕ್ಕುವ’ ಅಗಾಧ ಪರ್ವತಗಳ ನಾಡಾದ ಮೇಘಾಲಯದಲ್ಲಿನ ಜೈಂತಿಯಾ, ಗಾರೋ ಹಾಗೂ ಖಾಸಿ ಪರ್ವತ ಶ್ರೇಣಿಗಳಲ್ಲಿವೆ. ಈ ಪರ್ವತ ಶ್ರೇಣಿಗಳಲ್ಲಿ ಸುಮಾರು 1,700 ಪ್ರಕೃತಿ ನಿರ್ಮಿತ ಗುಹೆಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ಅವುಗಳಲ್ಲಿ 1,100 ಗುಹೆಗಳನ್ನಷ್ಟೇ ಪೂರ್ಣವಾಗಿ ಇಲ್ಲವೇ ಸ್ವಲ್ಪಮಟ್ಟಿಗೆ ಅನ್ವೇಷಿಸಲಾಗಿದೆ. ಪರಿಣತರ ಪ್ರಕಾರ ಇದು ಮೇಘಾಲಯದಲ್ಲಿರುವ ಗುಹೆಗಳ ಒಟ್ಟು ಸಂಖ್ಯೆಯ ಶೇಕಡ ಐದರಷ್ಟು ಮಾತ್ರ! ಭಾರತದಲ್ಲಿನ ಹತ್ತು ಉದ್ದವಾದ ಹಾಗೂ ಆಳವಾದ ಗುಹೆಗಳಲ್ಲಿ ಒಂಬತ್ತು ಮೇಘಾಲಯದಲ್ಲಿವೆ. 1844 ರಲ್ಲಿ ಬ್ರಿಟಿಷ್ ಲೆಫ್ಟಿನೆಂಟ್ ಯೂಲ್ ಕಂಡು ಹಿಡಿದ ಪೂರ್ವ ಖಾಸಿ ಪರ್ವತ ಶ್ರೇಣಿಯಲ್ಲಿನ ‘ಮಾಮ್ಲೂ’ (Mawmluh) ಹಾಗೂ ಗಾರೋ ಪರ್ವತ ಶ್ರೇಣಿಯಲ್ಲಿನ ‘ಶಿಜು’ (Siju) ಗುಹೆಗಳು ಮೇಘಾಲಯದ ಮೊದಲ ಅನ್ವೇಷಿತ ಗುಹೆಗಳಾಗಿವೆ.

ಆಕರ್ಷಕ ಅರ್ವಾ

ದೇಶದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತವಾದ ಚಿರಾಪುಂಜಿಯ ಹತ್ತಿರವಿರುವ, ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದ ಖಾಸಿ ಪರ್ವತ ಶ್ರೇಣಿಯಲ್ಲಿರುವ ‘ಅರ್ವಾ’ ಗುಹೆ ಸುಣ್ಣಕಲ್ಲಿನದು. ಮಿಲಿಯಾಂತರ ವರ್ಷಗಳ ನೀರಿನ ಹರಿಯುವಿಕೆಯಿಂದ ರೂಪುಗೊಂಡ, ದಟ್ಟವಾದ ಅರಣ್ಯದ ಮಧ್ಯದಲ್ಲಿರುವ ಅರ್ವಾ ಗುಹೆ ತನ್ನೊಡಲಲ್ಲಿ ಮೀನು, ನಾಯಿಯ ತಲೆ ಬುರುಡೆ ಮುಂತಾದ ಪ್ರಾಣಿ, ಜಲಚರಗಳ ಪಳೆಯುಳಿಕೆಗಳನ್ನು ಹುದುಗಿಸಿಟ್ಟುಕೊಂಡಿದೆ. ಇದರ ಇನ್ನೊಂದು ಪ್ರಮುಖ ಆಕರ್ಷಣೆ ನೆಲದೊಳಗಿನ 12 ಮೀಟರ್ ಎತ್ತರದಿಂದ ಧುಮುಕುವ ಜಲಪಾತ! ಈ ಜಲಪಾತದ ಸದ್ದು ಗುಹೆಯಲ್ಲಿ ಪ್ರತಿಧ್ವನಿಸಿ ಇಡೀ ಗುಹೆಯಲ್ಲಿ ಅನುರಣಿಸುತ್ತದೆ. ಇಷ್ಟೇ ಅಲ್ಲದೇ ಈ ಗುಹೆಯ ಮಾಡಿನಿಂದ ಕೆಳಗೆ ಚಾಚಿಕೊಂಡಿರುವ ವಿವಿಧ ಆಕಾರ, ಗಾತ್ರಗಳ ‘ತೂಗುತೊಂಗಲುಗಳು’ (Stalagmites and stalactites formations) ಬಹಳ ಆಕರ್ಷಕವಾಗಿವೆ. ಇವು ‘ಅವರವರ ಭಾವಕ್ಕೆ, ಅವರವರ ಭಕುತಿಗೆ’ ಎಂಬ ನಾಣ್ಣುಡಿಯಂತೆ ವಿವಿಧ ಪ್ರಾಣಿ, ಪಕ್ಷಿ, ದೇವಾನುದೇವತೆಗಳ ಮೂರ್ತಿಗಳು, ಕಲ್ಲಿನಲ್ಲಿ ಕೆತ್ತಿದ ಅಮೂರ್ತ ಶಿಲ್ಪಗಳಂದದಿ ಗೋಚರಿಸಿ ಮನಸ್ಸಿಗೆ ಮುದ ನೀಡುತ್ತವೆ. ಈ ಗುಹೆ ಒಳಗೆ ಯಾವಾಗಲೂ ಇರುವ ನೀರಿನ ಹರಿವು ಮೊದಲೇ ತಣ್ಣಗಿನ ವಾತಾವರಣದ ಗುಹೆಯನ್ನು ಇನ್ನಷ್ಟು ತಂಪಾಗಿಸಿದೆ. ಈ ಗುಹೆಯ 300 ಮೀಟರಿನಷ್ಟು ಭಾಗದಲ್ಲಿ ಮಾತ್ರ ಪ್ರವಾಸಿಗರ ಭೇಟಿಗೆ ಅವಕಾಶವಿದೆ.

ಮನಮೋಹಕ ಮೌಸ್ಮಯಿ‌

ಇದೂ ಸಹ ಲಕ್ಷಾಂತರ ವರ್ಷಗಳ ಸತತ ನೀರಿನ ಹರಿವಿನಿಂದ ನಿರ್ಮಾಣಗೊಂಡ ಸುಣ್ಣದ ಕಲ್ಲಿನ ಗುಹೆ. ‘ಶಿಲ್ಪಿಯ ಉಳಿ’ಯಂತೆ ಇಲ್ಲಿ ‘ನೀರು’ ಸುಣ್ಣದ ಕಲ್ಲಿನಲ್ಲಿ ವಿವಿಧ ರೀತಿಯ ಶಿಲಾ ರಚನೆಗಳನ್ನು ಕಡೆದು ‘ಕಲೆಯ ಬಲೆ’ಯನ್ನೇ ಹೆಣೆದಿದೆ. ವಿಸ್ಮಯಕಾರಿ, ಚಿತ್ತಾಪಹಾರಿ, ಮನಮೋಹಕ ಶಿಲಾ ರಚನೆಗಳನ್ನು ನೋಡುತ್ತಾ, ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಗಂಟೆಗಟ್ಟಲೆ ಮೈ ಮರೆಯಬಹುದು. ಇಲ್ಲಿಯೂ ಸಹ ಪಳೆಯುಳಿಕೆಯಾಗಿರುವ ಪ್ರಾಣಿಗಳನ್ನು ನೋಡಬಹುದು. ಚಿರಾಪುಂಜಿ ಬಳಿಯ ಪೂರ್ವ ಖಾಸಿ ಪರ್ವತ ಶ್ರೇಣಿಯಲ್ಲಿರುವ ಮೌಸ್ಮಯಿ ಗುಹೆ ಸುಮಾರು 150 ಮೀಟರ್ ಉದ್ದವಾಗಿದೆ. ಕೆಲವೆಡೆ ನೇರವಾಗಿ ನಡೆದು ಕ್ರಮಿಸಬಹುದಾದರೆ, ಇನ್ನೂ ಕೆಲವೆಡೆ ಬಾಗಿ, ಬಳುಕಿ, ಮೊಣಕಾಲೂರಿ ಮುಂದುವರಿಯಬೇಕಾಗುವಷ್ಟು ಕಿರಿದಾದ ಹಾದಿ. ಜೊತೆಗೆ ಸದಾ ನೀರಿನ ಹರಿವಿನಿಂದಾಗಿ ಕೆಳಗಿನ ಕಲ್ಲು, ಬಂಡೆಗಳ ಮೇಲೆ ಕಾಲಿಟ್ಟ ಕೂಡಲೇ ಜಾರುತ್ತದೆ. ಹಾಗಾಗಿ ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಆದ್ದರಿಂದ ಕೈ ಕಾಲು ಗಟ್ಟಿಯಾಗಿರುವ ಸಾಹಸ ಪ್ರಿಯರು ಮಾತ್ರ ಈ ಗುಹೆಯ ತುದಿಯವರೆಗೂ ಹೋಗಿ ವೀಕ್ಷಿಸಬಹುದು. ‘ತೂಕದ ವ್ಯಕ್ತಿ’ಗಳಿಗೆ, ‘ಅಜಾನುಬಾಹು’ಗಳಿಗೆ ಮುಂದೆ ಹೋಗಲು ಸಾಧ್ಯವೇ ಇಲ್ಲ. ತೀರಾ ಪ್ರಯತ್ನ ಪಟ್ಟರೆ ತೆವಳಿಕೊಂಡು ಹೋಗಬಹುದೇನೋ. ಆದ್ದರಿಂದಲೇ ಇಂತಹ ತೂಕದ ವ್ಯಕ್ತಿಗಳು, ಅಜಾನುಬಾಹುಗಳು ಒಳ ಹೋಗುವ ಸಾಹಸಿಗರನ್ನು ಹುರಿದುಂಬಿಸುತ್ತಾ, ಅವರ ಕೈಚೀಲ, ಚಪ್ಪಲಿ ಮುಂತಾದ ಸಾಮಾನುಗಳ ಮೇಲುಸ್ತುವಾರಿ ಮಾಡುತ್ತಾ ಹೊರಗೇ ಕುಳಿತಿರುವುದನ್ನು ನೋಡಬಹುದು.

ಗುಹೆಗಳು ಆದಿ ಮಾನವನ ಆಶ್ರಯ ತಾಣಗಳು ಹಾಗೂ ಆತನ ಚಿತ್ರಕಲಾ ಕೌಶಲ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟ ಪ್ರಕೃತಿದತ್ತ ‘ಮೊದಲ ಮನೆಗಳು’. ಇಂತಹ ಗುಹೆಗಳು ಕಾಲ ಕ್ರಮೇಣ ಆಧುನಿಕತೆ ಬೆಳೆದಂತೆ ಆತನಲ್ಲಿ ಭೀತಿ ಹುಟ್ಟಿಸುವ ತಾಣಗಳಾಗಿ ಪರಿವರ್ತಿತವಾಗಿರುವುದು ಸೋಜಿಗ. ಪ್ರಕೃತಿ ನಿರ್ಮಿತ ಈ ‘ಅನನ್ಯ ಕಲಾಕೃತಿ’ಗಳ ಕುರಿತು ಈಗ ಹಲವಾರು ಸಂಶೋಧನೆಗಳು ನಡೆದಿದ್ದು ಸಾಕಷ್ಟು ಮಾಹಿತಿ ಲಭ್ಯವಿದೆ. ಆದ್ದರಿಂದ ಕುತೂಹಲಕಾರಿಯಾದ ಈ ಗುಹೆಗಳು ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಚೆಲುವಿನ ತಾಣಗಳು.

ಅರ್ವಾ ಗುಹೆಯ ಹೊರನೋಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.