ಶಿರಹಟ್ಟಿ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿ ಪಡೆದ ಕಪ್ಪತ್ತಗುಡ್ಡ ಮುಂಗಾರು ಮಳೆಯ ಸತತ ಸಿಂಚನದಿಂದ ಇದೀಗ ಹಸಿರು ಮೈಸಿರಿ ಹೊದ್ದುಕೊಂಡು ಕಂಗೊಳಿಸುತ್ತಿದೆ. ಆಯುರ್ವೇದಿಯ ಸಸ್ಯರಾಶಿ ಬೆಟ್ಟದ ತುದಿಗೆ ಕಾಲಿಡುತ್ತಿದ್ದಂತೆ ಮನೋಲ್ಲಾಸ ನೀಡುತ್ತಿರುವ ರಮಣೀಯ ತಾಣ ಕಪ್ಪತ್ತಗಿರಿ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಸದ್ಯ ಪ್ರವಾಸಿಗರು ಇಲ್ಲಿಗೆ ಬಂದರೆ ಅಕ್ಷರಶಃ ಮಲೆನಾಡಿನ ತಪ್ಪಲಿನಲ್ಲಿ ಬಂದಂತಹ ಅನುಭವ ಉಂಟಾಗುತ್ತದೆ. ಇಲ್ಲಿರುವ ವಿರಕ್ತ ಯತಿಗಳ ಗುಹೆಗಳು, ಎತ್ತುವ ಬಸವ, ಗುಡ್ಡದ ಮೇಲೆ ಜೋರಾಗಿ ಬೀಸುವ ಗಾಳಿಗೆ ಹಿತವಾಗಿ ತಲೆದೂಗು ಮರಗಿಡಗಳು ಮನಸ್ಸಿಗೆ ಮುದ ನೀಡುತ್ತವೆ. ಕಪ್ಪತ್ತಗಿರಿ ಹತ್ತಿ ನಿಂತರೆ ಸುತ್ತಲೂ ದೃಷ್ಟಿ ಹರಿಸಿದಷ್ಟು ಹಸಿರು, ಬೆಟ್ಟಗುಡ್ಡ ಗುಹೆಗಳ ಮೇಲಿನ ಹಸಿರಿನ ಹೊದಿಕೆ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ.
ಕಪ್ಪತ್ತಗುಡ್ಡದ ಇತಿಹಾಸ ಮತ್ತು ಹಾದಿಗಳು
ದಕ್ಷಿಣ ಸಹ್ಯಾದ್ರಿ ಬೆಟ್ಟ ಎಂದು ಗುರುತಿಸಿಕೊಂಡ ಕಪ್ಪತಗುಡ್ಡ ಒಟ್ಟು 32,346.534 ಹೆಕ್ಟೇರ್‌ನಲ್ಲಿ ವಿಸ್ತರಿಸಿದೆ. ಒಟ್ಟು 63 ಕಿ.ಮೀ. ಉದ್ದವಾಗಿದೆ ಮತ್ತು ಸಮುದ್ರದ ಮಟ್ಟದಿಂದ 2,700 ಅಡಿ ಎತ್ತರದಲ್ಲಿದ್ದು, ಕುರುಚುಲ ಹುಲ್ಲು ಬೆಳೆಯುವ ಪ್ರದೇಶ ಇದಾಗಿದೆ. ನೈಸರ್ಗಿಕ ಸಂಪತ್ತಿನ ಆಗರವಾಗಿರುವ ಕಪ್ಪತ್ತಗುಡ್ಡ ಗದಗ, ಮುಂಡರಗಿ, ಶಿರಹಟ್ಟಿ ತಾಲ್ಲೂಕುಗಳಲ್ಲಿ ಹಬ್ಬಿದೆ. ಗದಗದಿಂದ ಡೋಣಿ ಮೂಲಕ, ಮುಂಡರಗಿ ತಾಲ್ಲೂಕಿನ ಕೆಲವು ಹಳ್ಳಿ ಸೇರಿದಂತೆ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ಮೂಲಕವೂ ಕಪತ್ತಗುಡ್ಡವನ್ನು ಪ್ರವೇಶಿಸಬಹುದು.
ವಿವಿಧ ರಮಣೀಯ ತಾಣಗಳು
ಗುಡ್ಡಲ್ಲಿರುವ ಮಂಜಿನ ಡೋಣಿ, ಆಲದ ಕೆರೆ, ಕರಡಿಕೊಳ್ಳ, ಹುಲಿಗುಡ್ಡ, ಹಟ್ಟಿ ಲಕ್ಕವ್ವನ ಕೆರೆ, ಕಲ್ಲಡೋಣಿ, ಬೆಕ್ಕಿನ ಚಿರಲಿ ಕೊಳ್ಳ, ಪಾತಾಳ ಗಂಗೆ, ಹಾಗಲಬಿತ್ತಿ ಕೆರೆ, ಆರಿಕೊಳ್ಳ, ಬೇಡರ ಕೊಳ್ಳ, ಏಳು ಕೊಳ್ಳ, ನವಿಲು ಕೊಳ್ಳ, ಬಿದರಿ ಕೊಳ್ಳ, ಜವುಳು ಕೊಳ್ಳ, ನರಿ ಒರತೆ ಕೊಳ್ಳ, ಹುರಾಸಿಕೊಳ್ಳ ಮೊದಲಾದ ಕೆರೆ ಸರೋವರಗಳು ಮಳೆಗಾಲದಲ್ಲಿ ರಮಣೀಯವಾಗಿ ತುಂಬಿ ಹರಿಯುತ್ತವೆ. ಇಲ್ಲಿರುವ ಅನೇಕ ಕೆರೆ-ಕೊಳ್ಳಗಳ ಹೆಸರುಗಳು ಪ್ರಾಕೃತಿಕ ಜೀವ ವೈವಿಧ್ಯತೆಯ ಜೀವ ಸಂಕುಲದ ಇರುವಿಕೆಯನ್ನು ಸಾಕ್ಷೀಕರಿಸುತ್ತಿವೆ.
ವನಸ್ಪತಿಗಳ ಆಗರ
ಪಂಚಲೋಹಗಳ ಗುಡ್ಡವಾಗಿರುವುದರಿಂದ ಇಲ್ಲಿ ಬೆಳೆಯುವ ವನಸ್ಪತಿಗಳು ನಾನಾ ರೋಗಗಳ ನಿವಾರಣೆಗೆ ತುಂಬಾ ಪರಿಣಾಮಕಾರಿಯಾಗಿವೆ. ದೇಶದ ನಾನಾ ಮೂಲೆಗಳಿಂದ ನಾಟಿ ವೈದ್ಯರು, ಪಾರಂಪರಿಕ ವೈದ್ಯರು ಇಲ್ಲಿಗೆ ಆಗಮಿಸಿ ವನಸ್ಪತಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ.
ಆಧ್ಯಾತ್ಮಿಕ ಕ್ಷೇತ್ರ
ಕಪ್ಪತ್ತಗುಡ್ಡ ಅನೇಕ ದೇವಾಲಯಗಳು, ಮಠಗಳು, ಶ್ರದ್ಧಾ ಕೇಂದ್ರಗಳನ್ನು ಹೊಂದಿರುವ ಆಧ್ಯಾತ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಹಬ್ಬ- ಹರಿದಿನಗಳು, ಹುಣ್ಣಿಮೆ, ಅಮಾವಾಸ್ಯೆ, ಜಾತ್ರೆ, ಉತ್ಸವ, ಆರಾಧನೆ ಸಮಯಗಳಲ್ಲಿ ಭಕ್ತ ಸಾಗರ ಕಪ್ಪತ್ತಗುಡ್ಡದತ್ತ ಹರಿದು ಬರುವುದು ವಿಶೇಷವಾಗಿದೆ.
ಎಪ್ಪತ್ತಗಿರಿಗಂತ ಕಪ್ಪತ್ತಗಿರಿ ಲೇಸು
ಎಪ್ಪತ್ತಗಿರಿ ನೋಡೋದಕ್ಕಿಂತ ಕಪ್ಪತ್ತಗಿರಿ ನೋಡೋದು ಲೇಸು ಎಂಬ ಹಿರಿಯರ ಮಾತಿನಂತೆ ಕಪ್ಪತ್ತಗುಡ್ಡದ ನೈಸರ್ಗಿಕ ಸಿರಿ ಸೌಂದರ್ಯ ಹೃನ್ಮನಗಳಿಗೆ ತಂಪೆರೆಯುತ್ತದೆ. ಬೇಸಿಗೆಯಲ್ಲಿ ದಣಿವಾರಿಸಿಕೊಳ್ಳಲು, ಮಳೆಗಾಲದಲ್ಲಿ ವರ್ಷಧಾರೆಯ ಸೊಬಗು ಕಣ್ತುಂಬಿಕೊಳ್ಳಲು, ಚಳಿಗಾಲದಲ್ಲಿ ಸೃಷ್ಟಿಯ ವಿಸ್ಮಯ ನೋಡಲು ಮಡಿಕೇರಿ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನಬೆಟ್ಟ, ನಂದಿ ಬೆಟ್ಟಕ್ಕೆ ಕಪ್ಪತ್ತಗುಡ್ಡ ಯಾವ ರೀತಿಯಲ್ಲಿಯೂ ಕಡಿಮೆ ಇಲ್ಲ. ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕಿನುಸುವ ಸುಂದರ ನೈಸರ್ಗಿಕ ತಾಣ ಇದಾಗಿದೆ.
ಕಪ್ಪತ್ತಗುಡ್ಡದ ಪ್ರಕೃತಿ ಸೌಂದರ್ಯವನ್ನು ಸವಿಯಲು ಎರಡು ಕಣ್ಣು ಸಾಲದು. ಮೈ ರೋಮಾಂಚನಗೊಳಿಸುವ ಈ ಸುಂದರ ತಾಣದ ಬಗ್ಗೆ ಸರ್ಕಾರ ಕಾಳಜಿ ವಹಿಸಿ ಇನ್ನಷ್ಟು ಅಭಿವೃದ್ಧಿಪಡಿಸಬೇಕು
ಸೋಮೇಶ್, ಪ್ರವಾಸಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.