ADVERTISEMENT

ಲಂಡನ್: ಚುಂಬಕಶಕ್ತಿಯ ಅದ್ಭುತ ನಗರ

ಎಂ.ಎಸ್.ರಘುನಾಥ್
Published 29 ಸೆಪ್ಟೆಂಬರ್ 2024, 0:30 IST
Last Updated 29 ಸೆಪ್ಟೆಂಬರ್ 2024, 0:30 IST
<div class="paragraphs"><p>ಲಂಡನ್‌ ನಗರದ ದೃಶ್ಯ</p></div>

ಲಂಡನ್‌ ನಗರದ ದೃಶ್ಯ

   
ಲಂಡನ್‌ ಅದ್ಭುತ ನಗರ. ಅಲ್ಲಿನ ಐತಿಹಾಸಿಕ ಕಟ್ಟಡಗಳು, ಅರಮನೆಗಳು, ವಾಸ್ತುಶಿಲ್ಪ, ಬ್ರಿಟಿಷ್‌ ಮ್ಯೂಸಿಯಂ, ಬಹು ಆಕರ್ಷಕ ಲಂಡನ್‌ ಬ್ರಿಡ್ಜ್‌, ಕ್ವೀನ್ಸ್‌ ಕಲಾಗ್ಯಾಲರಿಗಳನ್ನು ನೋಡುವುದೇ ಸೊಗಸು. ಲೇಖಕರು ಕುತೂಹಲ ಮತ್ತು ಆಸಕ್ತಿಯಿಂದ ಅಲ್ಲೆಲ್ಲ ಸುತ್ತಾಡಿ, ಅನುಭವಿಸಿ ಬರೆದಿದ್ದಾರೆ.

ನಾವು ಲಂಡನ್‌ ನಗರಕ್ಕೆ ಭೇಟಿ ನೀಡಿದಾಗ ಇಡೀ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಪ್ರವಾಸಿಗರು ಮೊದಲು ವೀಕ್ಷಿಸಲು ಬಯಸುವುದು ಲಂಡನ್ ಐ, ವೀಕ್ಷಣಾ ಚಕ್ರ. ನವ ಸಹಸ್ರಮಾನಕ್ಕೆ ಸರಿಯಾಗಿ 2000 ರಲ್ಲಿ ಸ್ಥಾಪಿಸಲಾದ 135 ಮೀಟರ್ ಎತ್ತರದ ಅದ್ಭುತ ತಿರುಗುವ ಯಂತ್ರ. ಇದರಲ್ಲಿ ಕುಳಿತುಕೊಂಡು ನೋಡಿದರೆ, ಲಂಡನ್ ನಗರದ ಆಚೆಗೂ ಕಂಡುಬರುವ ವಿಹಂಗಮ ನೋಟ ನೀಡುವ ಅನುಭವ ಆಹ್ಲಾದಕರವಾದುದು. ವೆಸ್ಟ್ ಮಿನಿಸ್ಟರ್ ಎಂಬ ನಿಲ್ದಾಣದಲ್ಲಿ ಇಳಿದು ಹೊರಗೆ ಬಂದರೆ, ಎದುರಿಗೆ ಭವ್ಯವಾದ ಪಾರ್ಲಿಮೆಂಟ್ ಭವನ. ಈ ಸ್ಥಳ ತಲುಪಲು ಎಷ್ಟು ಅನುಕೂಲ ಎಂದು ಆಶ್ಚರ್ಯವಾಗುತ್ತದೆ. ನಮ್ಮ ದೇಶವೂ ಸೇರಿ ಜಗತ್ತಿನ ಮೂರನೆ ಎರಡು ಭಾಗವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡು ಮೆರೆದ ಸಾಮ್ರಾಜ್ಯದ ಅಧಿಕಾರ ಕೇಂದ್ರವನ್ನು ನೋಡಲು ಅಚ್ಚರಿಯಾಗುತ್ತದೆ. ಅದಕ್ಕೆ ಮುಂಚಿನ ಬೃಹತ್ ಗಡಿಯಾರ ಸ್ತಂಭ, ಎಡಕ್ಕೆ ಕಾಣುವ ಹರಿಯುವ ಥೇಮ್ಸ್ ನದಿ. ಅದರ ಪಕ್ಕದಲ್ಲೇ ಕಾಣುವ ಲಂಡನ್ ಐ, ಎಲ್ಲರ ಕಣ್ಣು ಕುಕ್ಕುತ್ತದೆ. ಪಾರ್ಲಿಮೆಂಟ್ ಭವನಕ್ಕೆ ತಾಗಿಕೊಂಡೇ ಇರುವ ಬಿಗ್‌ಬೆನ್ ಗಡಿಯಾರ, ಹೈಡ್ ಪಾರ್ಕ್ ಎಲ್ಲವೂ ಒಂದೇ ಕಡೆ ಇದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಅದರ ಎದುರು ವೆಸ್ಟ್ ಮಿನಿಸ್ಟರ್ ಅಬೇ, ರಾಜಮನೆತನದವರಿಗಾಗಿ ಇರುವ ಅಂತ್ಯಸಂಸ್ಕಾರದ ಭವನ. ಅದರ ಎದುರಿಗೆ ಇರುವ ಚೌಕದಲ್ಲಿ, ಹಿಂದಿನ ಬ್ರಿಟನ್ನಿನ ಕ್ರಾಮ್‌ವೆಲ್ ಮುಂತಾದ ಕೆಲವು ಪ್ರಮುಖ ಮುಖಂಡರ ಆಳೆತ್ತರದ ಪ್ರತಿಮೆಗಳಿವೆ. ಮೊದಲಿಗೆ ಎದ್ದು ಕಾಣುವುದು ಸಿಡುಕು ಮೋರೆಯ ವಿನ್‌ಸ್ಟನ್ ಚರ್ಚಿಲ್‌ರ ಆಕ್ರಮಣಕಾರಿ ಮಾತಿನಂತೆ ಕಾಣುವ ಪುತ್ಥಳಿ. ಮತ್ತೊಂದು ತುದಿಯಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧವೇ ಹೋರಾಟ ಮಾಡಿದ ಮಹಾತ್ಮಗಾಂಧಿ, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರ ಪ್ರತಿಮೆಗಳನ್ನು ಕಂಡು ಖುಷಿ ಆಯಿತು.

ಲಂಡನ್‌ನ ಬಕಿಂಗ್‌ಹ್ಯಾಮ್‌ ಅರಮನೆ

ADVERTISEMENT

ಲಂಡನ್ ನಗರದಲ್ಲಿ ಮೊದಲ ಆಕರ್ಷಣೆ ಅಲ್ಲಿಯ ಕಟ್ಟಡಗಳ ಭವ್ಯತೆ. ಬ್ರಿಟಿಷ್ ಮ್ಯೂಸಿಯಂ ಆಗಲಿ ಅಥವಾ ಬೇರಾವುದೇ ಕಟ್ಟಡವಾಗಲಿ, ಅವುಗಳ ವಾಸ್ತುಶಿಲ್ಪ ವೈಖರಿ ಎಂತಹವರನ್ನೂ ಆಕರ್ಷಿಸುತ್ತದೆ. ಈ ಕಟ್ಟಡವೇ ಹೀಗಿದ್ದರೆ, ಒಳಗಿನ ಸಂಗ್ರಹಗಳ ಸೌಂದರ್ಯ ಹೇಗಿರಬಹುದು ಎಂಬ ಬೆರಗು ನೋಡುಗರಿಗೆ ಉಂಟಾಗುವುದು ಸಹಜ. ಆ ಕಟ್ಟಡಗಳು ಪ್ರಾಚೀನತೆಗೂ ಸೈ, ಆಧುನಿಕತೆಗೂ ಸೈ ಎಂಬಂತೆ ಒಂದಕ್ಕಿಂತ ಮತ್ತೊಂದು ಸೌಂದರ್ಯವನ್ನು ಇಮ್ಮಡಿಸುವಂತಹುದು. ಈ ದೃಷ್ಟಿಯಿಂದ ನೋಡಿದರೆ, ಲಂಡನ್ ನಗರ ಪುರಾತನ ಹಾಗೂ ಆಧುನಿಕತೆ ಎರಡರ ನಂಬಲಾರದ ಮಿಳಿತ ಎಂದು ಕರೆಯಬಹುದು.

ವರ್ಷಪೂರ್ತಿ ಇರುವ ಅತೀ ತಂಪಾದ ಹವೆಯಿಂದಲೋ, ಆಗಾಗ್ಗೆ ಸುರಿಯುತ್ತಲೇ ಇರುವ ತುಂತುರು ಅಥವಾ ಮಳೆಯಿಂದಲೋ, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶವೆಲ್ಲ ಹಸುರಿನಿಂದ ಕಂಗೊಳಿಸುತ್ತಿರುತ್ತವೆ. ಅದಕ್ಕಿಂತ ಮುಖ್ಯವಾದುದು ಅತ್ಯುತ್ತಮ ನಿರ್ವಹಣೆ. ಅದಕ್ಕೆ ತಕ್ಕಂತೆ ಜನಗಳಿಗಿರುವ ಹಸಿರು ಉಳಿಸಬೇಕೆನ್ನುವ ಬದ್ಧತೆ. ಹೆಚ್ಚು ಕಡಿಮೆಯಾದರೇ ಶಿಕ್ಷಾರ್ಹ ಅಪರಾಧವಾಗುವುದು ಎಂಬ ಎಚ್ಚರಿಕೆ.

ನಗರದ ಹೃದಯ ಭಾಗದಲ್ಲಿರುವ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್, ಅಲ್ಲಿನ ರಾಜ ಮನೆತನದವರ ಅಧಿಕೃತ ನಿವಾಸಕ್ಕೆ ಭೇಟಿ ಕೊಡಬೇಕೆನ್ನಿಸುತ್ತದೆ. ಅದನ್ನು ಪ್ರವೇಶಿಸಲು ಆಗಾಗ ಅನುಮತಿ ದೊರೆಯುವುದಾದರೂ, ಅದರ ಬಾಹ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರೆಲ್ಲಾ ಅಪೇಕ್ಷೆಪಡುತ್ತಾರೆ. ಅದರ ಸುತ್ತಾ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಅದರೊಳಗೆ ಪ್ರತಿಮೆಯಂತೆ ಸದಾ ನಿಂತಿರುವ ಸೇವಕರು. ಅದನ್ನೆಲ್ಲ ನೋಡುವುದು ಕುತೂಹಲದ ವಿಚಾರವೇ ಸರಿ.

ಥೇಮ್ಸ್‌ ನದಿ ಬಳಿಯ ಲಂಡನ್‌ ಟವರ್‌

ಲಂಡನ್ ನಗರದಲ್ಲಿ ಇನ್ನೂ ಮುಂದಕ್ಕೆ ಹೋದರೆೆ, ಮೊದಲ ಆಕರ್ಷಣೆ ಲಂಡನ್ ಬ್ರಿಡ್ಜ್‌, ಮಕ್ಕಳ ಪದ್ಯದಲ್ಲಿ ಹಾಡುವಂತೆ, ಅದು ಬೀಳುತ್ತಿದೆಯೋ ಎಂದು ತಮಾಷೆಗೆ ಪರೀಕ್ಷೆ ಮಾಡುವ ತವಕ. ಅಲ್ಲದೇ ಟಿ.ಎಸ್.ಎಲಿಯಟ್ ಕೂಡ ತನ್ನ ವೇಸ್ಟ್ಲ್ಯಾಂಡ್ ಮಧ್ಯೆದಲ್ಲಿ ವ್ಯಂಗ್ಯವಾಗಿ ಹೇಳಿರುವ ಮಾತೂ ಸಹ ನೆನಪಿಗೆ ಬಂತು. ಅದರ ಭವ್ಯತೆ ಸೌಂದರ್ಯವನ್ನು ನೋಡಿಯೇ ಸವಿಯಬೇಕು. ಅದರಲ್ಲೂ ಟಿಕೆಟ್ ತೆಗೆದುಕೊಂಡು ಮೇಲೆ ಹೋಗಿ ನೋಡುವ ಅವಕಾಶವೂ ಇದೆ. ನಗರದಲ್ಲಿರುವ ಆರು ರಾಜಮನೆತನದ ಅರಮನೆಗಳ ಪೈಕಿ, ಬಕ್ಕಿಂಗ್ ಹ್ಯಾಮ್, ಕೆನ್ಸಿಂಗ್‌ಟನ್ ಹಾಗೂ ಸೇಂಟ್ ಜೇಮ್ಸ್ ಅರಮನೆಗಳು ಅಲ್ಲಿನ ರಾಜಮನೆತನದವರಿಂದ ಮಾತ್ರ ಬಳಕೆಯಾಗುತ್ತದೆ. ಬಕಿಂಗ್‌ಹ್ಯಾಮ್ ಅರಮನೆಯ ಒಳಗೆ ಕ್ವೀನ್ಸ್ ಗ್ಯಾಲರಿಯಲ್ಲಿ ರಾಜಮನೆತನದ ಕಲಾಕೃತಿಗಳ ಸಂಗ್ರಹವಿದೆ. ಅದಕ್ಕಿಂತ ಮುಖ್ಯವಾಗಿ ವಿಶ್ವ ವಿಖ್ಯಾತ ಕಲಾವಿದ ಲಿಯೊನಾರ್ಡೋ ದ ವಿಂಚಿಯ ಸುಂದರ ಕಲಾಕೃತಿಗಳಿವೆ. ಅರಮನೆಯ ಹೊರಗೆ, ಕಾವಲು ಭಟರು ದಿನಬಿಟ್ಟು ದಿನ ಬದಲಾಗುವ ಸನ್ನಿವೇಶವೂ ಸಾರ್ವಜನಿಕರಿಗೆ ನೋಡಲು ದೊರೆಯುತ್ತದೆ. ಅದನ್ನು ನೋಡಲು ಅರಮನೆಯ ಹೊರಗೆ ಸಾಕಷ್ಟು ಜನ ನಿರ್ದಿಷ್ಟ ವೇಳೆಯಲ್ಲಿ ಕಾದು ನಿಂತಿರುತ್ತಾರೆ.

ಲಂಡನ್ನಿನ ಟವರ್ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಯುನೆಸ್ಕೊ ವಿಶ್ವ ಸಾಂಪ್ರದಾಯಿಕ ಸ್ಥಳ. ಇದು ಲಂಡನ್ನಿನ ಒಂದು ಸರ್ವೋತ್ಕೃಷ್ಟ ಹೆಗ್ಗುರುತು. ಟಿಕೆಟ್ ತೆಗೆದುಕೊಂಡು ಒಳಗೆ ಹೋಗಿ ಭದ್ರತಾ ಸುರಕ್ಷತೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ಕೊಹಿನೂರು ಕಿರೀಟ, ರಾಜಮನೆತನಕ್ಕೆ ಸಂಬಂಧಿಸಿದ ಚಿನ್ನ ಹಾಗೂ ವಜ್ರಾಭರಣಗಳು ಮನಸೂರೆಗೊಳ್ಳುತ್ತವೆ. ಈ ಚಿನ್ನದ ಆಭರಣಗಳೆಲ್ಲ ಕೊಳ್ಳೆ ಹೊಡೆದು ಬೇರೆ ದೇಶಗಳಿಂದ ತಂದಿರುವುದಲ್ಲವೇ ಎಂಬ ತಾತ್ಸಾರದ ನುಡಿಯೂ ಹೊರ ಹೊಮ್ಮುತ್ತದೆ. ಒಂದು ಕಾಲಕ್ಕೆ ಇದು ಶಸ್ತ್ರಾಗಾರ, ರಾಜಮನೆತನದ ವಾಸಸ್ಥಾನ ಹಾಗೂ ಬಂದೀಖಾನೆಯೂ ಆಗಿತ್ತು. ಈಗ ಅದೆಲ್ಲ ಇತಿಹಾಸ. ಐತಿಹಾಸಿಕ ಘಟನೆಗಳನ್ನು ರಾಜಮನೆತನದವರ ಐತಿಹ್ಯಗಳನ್ನು, ಆಕರ್ಷಣೀಯವಾದ ಹಿಂದಿನ ಇತಿಹಾಸವನ್ನು ಅಲ್ಲಿ ಬೆರಗುಗಣ್ಣಿನಿಂದ ನೋಡಬಹುದು. ಆಶ್ಚರ್ಯಚಿಕಿತವಾಗಿ ಅಲ್ಲಿನ ಪುರಾತನ ಕಟ್ಟಡದ ವಾಸ್ತುಶಿಲ್ಪವನ್ನು ಕಂಡು ಆಸ್ವಾದಿಸಬಹುದು. ಇದೂ ಸಹ ನಗರದ ಹೃದಯ ಭಾಗದಲ್ಲೇ ಇದ್ದು, ಹೆಚ್ಚು ದೂರ ಓಡಾಡ ಬೇಕಾದ ಪ್ರಮೇಯವಿಲ್ಲ. ಇದನ್ನೆಲ್ಲಾ ವೀಕ್ಷಿಸುವುದು ಒಂದು ಅಪೂರ್ವ ಅನುಭವವೇ ಸರಿ.

ಸೇಂಟ್ ಪಾಲ್ ಕೆಥಿಡ್ರಲ್ ಎನ್ನುವುದು ವಾಸ್ತು ವಿನ್ಯಾಸದ ಬೆರಗೇ ಸರಿ. ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಒಳಗೊಂಡ ಈ ಕಟ್ಟಡ, ಇತಿಹಾಸ ಹಾಗೂ ಸರ್ವೋತ್ಕೃಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಸಾರುವ ಪ್ರೌಢಿಮೆಯ ಜಗತ್ತಿಗೆ ಕರೆದೊಯ್ಯುತ್ತದೆ.

ಈ ನಗರದಲ್ಲಿ ಎಲ್ಲಾ ಮ್ಯೂಸಿಯಂಗಳು ಒಂದೆಡೆ ಹತ್ತಿರದಲ್ಲೇ ಇದ್ದು ಅವುಗಳ ಪ್ರವೇಶ ಉಚಿತ. ಸಾಂಸ್ಕೃತಿಕ ಜಗತ್ತಿನ ಪರಿಚಯ ಮಾಡಿಸುವ ಉದ್ದೇಶದಿಂದ ಹೀಗೆ ಮಾಡಿರುವುದು ಪ್ರಮುಖವಾದ ಹೆಜ್ಜೆಯಾಗಿದೆ. ಆಧುನೀಕರಣಗೊಂಡಿರುವ ಗ್ಲೋಬ್ ಥಿಯೇಟರ್ ಸಹ ರಂಗಭೂಮಿಯಲ್ಲಿ ಜೀವಂತವಾಗಿದ್ದು, ಎಲ್ಲಾ ದೇಶಗಳ ರಂಗಭೂಮಿ ಪ್ರಿಯರನ್ನು ಆಕರ್ಷಿಸುತ್ತದೆ.

ಸಾಹಿತ್ಯ ಪ್ರಿಯರಿಗಂತೂ, ಲಂಡನ್‌ ನಗರ ಸಾಕಷ್ಟು ಸಾಮಗ್ರಿಗಳನ್ನು ಉಣಬಡಿಸುತ್ತದೆ. ವೆಸ್ಟ್ ಮಿನಿಸ್ಟರ್ ಅಬೇ ಕವಿತೆಯಲ್ಲಿ, ಅಂತ್ಯಸಂಸ್ಕಾರಗೊಂಡ ಎಷ್ಟೊಂದು ಗಣ್ಯರ ನೆನಪುಗಳು ಆರ್ದ್ರವಾಗಿ ಬರೆದ ಸಾಲುಗಳು ಮನವನ್ನು ತಾಕುತ್ತವೆ.

ಎಲ್ಲಕ್ಕಿಂತ ಪ್ರಧಾನವಾಗಿ ಮನಸೆಳೆಯುವುದು ಸುಮಾರು 100 ಮೈಲಿ ದೂರದಲ್ಲಿರುವ ಸ್ಟ್ರಾಟ್‌ಫರ್ಡ್ ಅಪಾನ್ ಏವನ್. ಅದೇ ಪ್ರಖ್ಯಾತ ನಾಟಕಕಾರ, ಕವಿ ವಿಲಿಯಂ ಷೇಕ್ಸ್‌ಪಿಯರ್‌ಗಾಗಿ ಅವನ ಹುಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಪುಟ್ಟ ನಗರದಂತೆ ಕಾಣುವ ಗಮನಾರ್ಹ ಸ್ಮಾರಕ. ಅವನು ಹುಟ್ಟಿದ ಮನೆಯನ್ನು ಯಥಾವತ್ತಾಗಿ ಸಂರಕ್ಷಿಸಲಾಗಿದೆ. ಮನೆಯ ಅಂಗಳ, ಕೈತೋಟ, ಅವನು ಬಳಸುತ್ತಿದ್ದ ವಸ್ತುಗಳ ಸಂಗ್ರಹಾಲಯ ಸುರಕ್ಷಿತವಾಗಿದೆ. ಅಷ್ಟೇ ಗಮನಾರ್ಹವಾದುದು ಷೇಕ್ಸ್‌ಪಿಯರ್‌ನ ಅದ್ಭುತವಾದ ದೊಡ್ಡ ಪ್ರತಿಮೆ. ಅನತಿ ದೂರದಲ್ಲಿಯೇ ಏವನ್ ನದಿಯು ಹರಿಯುತ್ತದೆ. ಆಗಾಗ ಅವನ ನಾಟಕಗಳ ಪ್ರದರ್ಶನವೂ ಉಂಟು. ಪೂರ್ವ ಸಿದ್ದತೆಯೊಡನೆ ಹೋದರೆ ಮಾತ್ರ ಅವೆಲ್ಲವನ್ನು ಆಸ್ವಾದಿಸಬಹುದು.

ಇಲ್ಲಿ ಪ್ರಚಲಿತವಿರುವ ಪೌಂಡ್ ನೋಟುಗಳನ್ನು ಕುತೂಹಲದಿಂದ ಪರೀಕ್ಷಿಸಿ ನೋಡಿದಾಗ ನನಗೆ ಒಂದು ಸಂಗತಿ ಗಮನಾರ್ಹವಾಗಿ ಕಂಡಿತು– “ಏನೇ ಆದರೂ–ಓದುವುದಕ್ಕಿಂತ ಮತ್ತೊಂದು ಸಂತೋಷಕರವಾದುದು ಬೇರೇನೂ ಇಲ್ಲ ಎಂದು ನಾನು ಘೋಷಿಸುತ್ತೇನೆ” ಎಂಬ ಇಂಗ್ಲಿಷ್ ಪ್ರಮುಖ ಲೇಖಕಿಯರಲ್ಲೊಬ್ಬರಾದ ಜೇನ್ ಆಸ್ಟನ್‌ಳ ಚಿರಸ್ಮರಣೀಯವಾದ ಮಾತು.

ಹೌದು, ಓದು ಮತ್ತು ಸುತ್ತಾಟ ಹೊಸ ಹೊಸ ಲೋಕವನ್ನು ಪರಿಚಯಿಸುತ್ತವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.