ಒಂದು ಭಾನುವಾರ, ಸೂರ್ಯ ನಡು ನೆತ್ತಿಗೆ ತಲುಪಲು ಕೆಲವೇ ನಿಮಿಷಗಳಿದ್ದಾಗ, ಸ್ನೇಹಿತ ಬೈಕಿನ ಟ್ಯಾಂಕ್ ಪೂರ್ತಿ ಪೆಟ್ರೋಲು ತುಂಬಿಸಿ, ನನಗೂ ಹೆಲ್ಮೆಟ್ ಒಂದನ್ನು ಕೈಗೆ ಸಿಕ್ಕಿಸಿಕೊಂಡು ತಯಾರಾಗಿ ಬಂದಿದ್ದ.
‘ನಡಿ, ಎಲ್ಲಾದರು ಹೋಗೋಣ’ ಅಂದ. ‘ದೊಡ್ಡ ಆಲದ ಮರದ ಬಳಿ ಹೋಗೋಣ’ ಎಂದೆ. ಸುಮಾರು ದಿನಗಳಿಂದ ಮನಸ್ಸಲ್ಲಿದ್ದದ್ದು, ನಿದ್ದೆಗಣ್ಣಲ್ಲೇ ನಾಲಿಗೆಯಿಂದ ಹೇಗೆ ಹೊರಬಿತ್ತೋ ತಿಳಿಯದು. ಮೇಕ್ರಿ ಸರ್ಕಲ್- ಯಶವಂತಪುರ-ರಾಜ್‌ಕುಮಾರ್ ಸಮಾಧಿ ಮಾರ್ಗವಾಗಿ ಹೊರವರ್ತುಲ ರಸ್ತೆಯಲ್ಲಿ ಗೂಗಲ್ ಮ್ಯಾಪ್ ನಮ್ಮನ್ನು ಮುನ್ನಡೆಸಿತು. ಮಾಗಡಿ ರಸ್ತೆಗೆ ನುಗ್ಗಿ, ಹಸಿರನ್ನು ಸೀಳಿ ಹಾವು ಹರಿದಂತೆ ಇದ್ದ ಅದ್ಯಾವುದೋ ಹಳ್ಳಿಯ ಅನಾಮಧೇಯ ರಸ್ತೆಯಲ್ಲಿ ಸಾಗಿ, ದೊಡ್ಡ ಆಲದ ಮರ ಬಳಿ ಬೈಕ್ ನಿಂತಿತು.
ಆಕಾಶ ಮಳೆರಾಯನ ಆಗಮನದ ಸೂಚನೆಯನ್ನು ನೀಡತೊಡಗಿತ್ತು. ಧಾವಂತದಿಂದ ದೊಡ್ಡ ಆಲದ ಮರದ ಪ್ರವೇಶ ದ್ವಾರದ ಬಳಿ ತಲುಪಿದೆವು. 400 ವರ್ಷ ಹಳೆಯದು ಎನ್ನಲಾದ ಈ ಮರವು ನಗರದ ಎಲ್ಲಾ ಬೆಳವಣಿಗೆಗೆ ಮೂಕ ಸಾಕ್ಷಿ ಎಂಬಂತಿದೆ. ಸುಮಾರು 4 ಎಕರೆ ವಿಶಾಲ ಪ್ರದೇಶದಲ್ಲಿ ಹರವಿಕೊಂಡಿರುವ ಈ ಮರವು, ಅಂದಾಜು 95 ಅಡಿ ಎತ್ತರವಿದೆ. ದೇಶದ ನಾಲ್ಕನೇ ಅತಿ ಪುರಾತನ ಆಲದ ಮರಗಳಲ್ಲಿ ಒಂದು ಎನ್ನುವುದು ಇದರ ಅಗ್ಗಳಿಕೆ.
ಮಳೆಯಲ್ಲಿ ನೆನೆದ ಸುಂದರಿಯ ಕೂದಲಿನಿಂತೆ ನೆಲದವರೆಗೂ ಇಳಿದಿರುವ ಬೀಳಲುಗಳನ್ನು ನೋಡುವುದು ಕಣ್ಣಿಗೆ ಹಬ್ಬ. ತಾಯಿ ಮರದೊಂದಿಗೆ ಸಂಪರ್ಕ ಇರಿಸಿಕೊಂಡಿರುವ ಕಾಂಡಗಳು ಅಲ್ಲೇ ಹೊಸ ಸಂಸಾರವನ್ನು ಕಟ್ಟಿಕೊಂಡಿವೆ. ಮರದ ನಡುವೆ ನಿರ್ಮಿಸಲಾಗಿರುವ ನಡಿಗೆ ಮಾರ್ಗದಲ್ಲಿ ಸಾಗಿದರೆ ಚೇತೋಹಾರಿ ಅನುಭವ. ಉದ್ಯಾನದ ಮಾದರಿಯಲ್ಲಿ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮರದ ಬುಡದ ನಡುವೆ ಹಲವು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಪರಿಸರವಾಗಿದ್ದರೂ ಆ ಕುರಿತಾದ ಅಸಡ್ಡೆ ಎದ್ದು ಕಾಣಿಸುತ್ತದೆ. ವಿಶ್ರಮಿಸಲು ಅಲ್ಲಲ್ಲಿ ಕಲ್ಲಿನ ಬೆಂಚುಗಳಿವೆ. ಫೋಟೊ, ರೀಲ್ಸ್ ಪ್ರಿಯರಾಗಿದ್ದರೆ ಹತ್ತಾರು ಚೆಂದದ ದೃಶ್ಯಗಳಿವೆ. ಮೊಬೈಲು, ಕ್ಯಾಮೆರಾ, ಸೆಲ್ಫಿ ಸ್ಟಿಕ್‌ಗಳನ್ನು ಕೊಂಡೊಯ್ಯಬಹುದು. ಪ್ರವೇಶವೂ ಉಚಿತ.
ಒಳಗೆ ಹೋದ ಬಳಿಕ ಕೋತಿಗಳನ್ನು ಸಹಿಸಿಕೊಳ್ಳುವ ತಾಳ್ಮೆ ನಿಮ್ಮಲ್ಲಿರಬೇಕು. ಅಲ್ಲಲ್ಲಿ ಗೆದ್ದಲುಗಳ ಗೋಪುರ ಗೋಚರಿಸುತ್ತವೆ. ಬೀಳಲುಗಳನ್ನು ಜೋಕಾಲಿಯನ್ನಾಗಿ ಮಾಡಿಕೊಂಡು ಜೀಕುವಾಗ ಹೊರಡುವ ಶಬ್ದ, ಅಸಹಾಯಕ ಮರದ ರೋದನೆಯಂತೆ ಕೇಳಿಸಿತು. ಪೌರುಷ ತೋರಿಸಲು ನೇತಾಡುವವರ ಬೊಬ್ಬೆ, ರಚ್ಚೆ ಹಿಡಿಯುವ ಮಕ್ಕಳ ಸದ್ದು ಮನಸ್ಸನ್ನು ಕದಡುತ್ತದೆ. ಮೂಲೆಯಲ್ಲಿ ಜೋಡಿಗಳದ್ದು ಬೇರೆಯದೇ ಲೋಕ. ಲಾಠಿ ಹಿಡಿದು, ಸೀಟಿ ಊದುತ್ತಾ ಸುತ್ತು ಹಾಕುವ ಗಾರ್ಡ್ ಮುಖದಲ್ಲಿ ನಗುವಿನ ಕಳೆಯೇ ಕಾಣಿಸುವುದಿಲ್ಲ. ನಾವು ಇದ್ದಷ್ಟು ಹೊತ್ತು ಸ್ವಚ್ಛತಾ ಸಿಬ್ಬಂದಿ ಕಣ್ಣಿಗೆ ಬೀಳಲಿಲ್ಲ. ಬೀಳಲೊಂದು ಬಿದ್ದಿದ್ದರಿಂದ ನಡಿಗೆ ಮಾರ್ಗ ಅರ್ಧಕ್ಕೆ ಮೊಟಕಾಗಿದೆ. ಸಂಕ್ಷಿಪ್ತ ಮಾಹಿತಿ ನೀಡುವ ಫಲಕಗಳು ಇವೆ. ಅಲ್ಲಲ್ಲಿ ಕಬ್ಬಿಣದ ಫೆನ್ಸಿಂಗ್ ಅಳವಡಿಸಿ ಬೇರುಗಳನ್ನು ರಕ್ಷಿಸಲಾಗಿದೆ. ಅಲ್ಲಿರುವ ಮುನೇಶ್ವರನ ದೇವಾಲಯದ ಮುಂದೆ ಕೈ ಮುಗಿಯುವವರು ತುಂಬಾ ಮಂದಿಯಿದ್ದರು. ಮರ ಇರುವ ಇಡೀ ಪ್ರದೇಶವನ್ನು ಕಬ್ಬಿಣದ ಬೇಲಿಯಿಂದ ಸುತ್ತುವರಿಯಲಾಗಿದೆ.
ಸಂಜೆ ಗಡಿಯಾರ ಮೂರು ದಾಟಿ ಅರ್ಧ ಗಂಟೆ ಕಳೆದಿರಬೇಕು. ಮೋಡಗಳು ಸೂರ್ಯನನ್ನು ಮರೆಮಾಚಿ ಆಕಾಶ ಕಪ್ಪಾಗತೊಡಗಿತು. ಆಗಸದಿಂದ ಮುತ್ತಿನ ಮಣಿಗಳು ಉದುರತೊಡಗಿದವು. ಬೀಸುತ್ತಿದ್ದ ಗಾಳಿ ವೇಗ ಪಡೆಯಿತು. ಧಾವಂತದಲ್ಲಿ ಬೈಕ್ ಬಳಿ ಬಂದರೆ ಅಬ್ಬರದ ಮಳೆ. ಪಕ್ಕದ ಅಂಗಡಿಯೊಂದರಲ್ಲಿ ಆಶ್ರಯ ಪಡೆದೆವು. ಎರಡು ಕಣ್ಣುಗಳಲ್ಲಿ ಬೆಳಕು ಚೆಲ್ಲಿ ಬಂದ ಬಿಎಂಟಿಸಿ ಬಸ್ಸೊಂದು ಕೆಲವರನ್ನು ಇಳಿಸಿ, ಇನ್ನು ಕೆಲವರನ್ನು ಹತ್ತಿಸಿ ಮುಂದೆ ಸಾಗಿತು. ‘ಫಳೀರ್’... ಆಗಸಲ್ಲಿ ಉದ್ದದ ಬೆಳ್ಳಿ ರೇಖೆಯೊಂದು ಮೂಡಿ ಮರೆಯಾಯಿತು. ಸುಮಾರು ಅರ್ಧಗಂಟೆ ಅತ್ತು ಸುಸ್ತಾದ ಆಕಾಶ ಸುಮ್ಮನಾಯಿತು. ಬೈಕ್ ಹತ್ತಿ ಕೇತೋಹಳ್ಳಿಯ ಗದ್ದೆಗಳ ನಡುವೆ ಹಳ್ಳಿ ರಸ್ತೆಯಲ್ಲಿ ಸಾಗುವಾಗ ತೇಲಿಬಂದ ಬಂದ ಗಾಳಿ ‘ಬರ್‌ಸೋರೆ ಮೇಘಾ ಮೇಘ..’ ಹಾಡನ್ನು ಕಿವಿಗೆ ಸೋಕಿಸಿ ಮುಂದೆ ಸಾಗಿತು. ಮೈ ತಬ್ಬಿಕೊಂಡಿದ್ದ ಚಳಿ ದೂರವಾಯಿತು, ಎನ್ನುವಷ್ಟರಲ್ಲಿ ಸೋನೆ ಮಳೆ. ಅಲ್ಲಲ್ಲಿ ದೀರ್ಘ ಹೊತ್ತು ಉರಿಯುತ್ತಿದ್ದ ಕೆಂಪು ದೀಪಗಳು ಬೆಂಗಳೂರು ನಗರ ಪ್ರವೇಶಿಸಿದ ಸೂಚನೆ ನೀಡಿದವು.
ತಲಪುವುದು ಹೇಗೆ?
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯಲ್ಲಿ ಈ ಮರ ಇದೆ. ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಕೆ.ಆರ್ ಮಾರುಕಟ್ಟೆಯಿಂದ ನೇರ ಬಿಎಂಟಿಸಿ ಬಸ್ ಇದೆ. ಮೆಟ್ರೊದಲ್ಲಿ ಹೋಗುವವರು ಕೆಂಗೇರಿ ಬಸ್ ಟರ್ಮಿನಲ್‌ವರೆಗೂ ಹೋಗಿ ಬಳಿಕ ವಾಹನ ಮಾಡಿಕೊಂಡು ಹೋಗಬಹುದು. ಗಾಡಿಯಲ್ಲಾದರೆ, ಮೈಸೂರು ರಸ್ತೆಯ ಕುಂಬಳಗೋಡು ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ, ತಾವರೆಕೆರೆ ಮಾರ್ಗದಲ್ಲಿ ತೆರಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.