ದಕ್ಷಿಣ ಹಾಲೆಂಡಿನ ಪ್ರಮುಖ ಬಂದರು ನಗರಿ ಹಾಗೂ ಎರಡನೇ ಅತಿದೊಡ್ಡ ನಗರ ರೋಟರ್ ಡ್ಯಾಂ, ಯುರೋಪಿಯನ್ ಒಕ್ಕೂಟದ 10ನೇ ಅತಿದೊಡ್ಡ ನಗರ ಹಾಗೂ ನೆದರ್ಲೆಂಡ್ಸ್‌ನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೆಯ ಜಾಗತಿಕ ಮಹಾಯುದ್ಧದಲ್ಲಿ ನಗರದ ಕೇಂದ್ರಭಾಗವು ಸಂಪೂರ್ಣ ನಾಶವಾಯಿತು. ನಂತರದ ವರ್ಷಗಳಲ್ಲಿ ಪುನರ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ವೈವಿಧ್ಯಮಯ ನಗರವಾಗಿ ಪರಿವರ್ತನೆಗೊಂಡಿದೆ.
ವಿಶಿಷ್ಟ ವಾಸ್ತುಶಿಲ್ಪದ ಕಟ್ಟಡಗಳು, ನದಿತಟದಲ್ಲಿರುವ ಆಕರ್ಷಕ ಭವನಗಳು ಒಂದು ಭಾಗವಾದರೆ, ಮತ್ತೊಂದು ಕಡೆ ನಗರದ ಸಾಂಸ್ಕೃತಿಕ ಜೀವನ, ಕಡಲ ಪರಂಪರೆ ಹಾಗೂ ಆಧುನಿಕ ವಾಸ್ತುಶಿಲ್ಪಕ್ಕೆ ರೋಟರ್ ಡ್ಯಾಂ ಸಾಕ್ಷಿಯಾಗಿದೆ. ನೆದರ್ಲೆಂಡ್ಸ್‌ನಲ್ಲೇ ಅತಿ ಎತ್ತರದ ಗಗನಚುಂಬಿ ಕಟ್ಟಡಗಳಿರುವ ರೋಟರ್ ಡ್ಯಾಂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಉಭಯಚರಿ ಬಸ್!
ಬಸ್ಸುಗಳು ರಸ್ತೆಯಲ್ಲಿ ಹಾಗೂ ಹಡಗು ನೀರಿನಲ್ಲಿ ಚಲಿಸಬಲ್ಲ ವಿಷಯ ನಮಗೆಲ್ಲರಿಗೂ ಗೊತ್ತಿದೆ. ಆದರೆ, ರೋಟರ್ ಡ್ಯಾಂನಲ್ಲಿರುವ ಬಸ್‌ಗಳು ರಸ್ತೆಯಲ್ಲಿ ಹಾಗೂ ನೀರಿನಲ್ಲಿ ಚಲಿಸುವ ವಿನ್ಯಾಸವನ್ನು ಹೊಂದಿವೆ. ಗೈಡ್ ಸಹಿತ ರಸ್ತೆ ಹಾಗೂ ನೀರಿನಲ್ಲಿ ಚಲಿಸುವ ವಿಶಿಷ್ಟ ಬಸ್‌ಗಳು ನಗರದ ಆಕರ್ಷಣೆಯಾಗಿವೆ. ‘ಸ್ಪ್ಲ್ಯಾಶ್ ಟೂರ್ಸ್’ ಎಂದು ಕರೆಯಲ್ಪಡುವ ಈ ಬಸ್ ಟಿಕೆಟ್ ಪಡೆದು ಪ್ರಯಾಣಿಸಿದರೆ, ರಸ್ತೆಯಲ್ಲಿ ಸಂಚರಿಸುವಾಗ ಮಾರ್ಗದಲ್ಲಿ ಸಿಗುವ ಪ್ರಮುಖ ಕಟ್ಟಡಗಳು, ಸ್ಮಾರಕಗಳ ಬಗ್ಗೆ ವಿವರಣೆಯನ್ನು ಗೈಡ್ ನೀಡುತ್ತಾರೆ.
ರೋಟರ್ ಡ್ಯಾಂನ ಅತ್ಯಂತ ಎತ್ತರದ ಗೋಪುರವಾದ ‘ಯೂರೋಮಾಸ್ಟ್’ ಬಳಿಯಿರುವ ‘ಪಾರ್ಕ್ ಹೇವನ್’ ಪ್ರದೇಶದಿಂದ ಪ್ರಾರಂಭವಾಗುವ ಸ್ಪ್ಲ್ಯಾಶ್ ಟೂರ್ಸ್ ಬಸ್ ಮಾರ್ಕೆಟ್ ಹಾಲ್, ಕ್ಯೂಬ್ ಹೌಸಸ್, ರೈಲು ನಿಲ್ದಾಣ, ಎರಾಸ್ಮಸ್ ಸೇತುವೆ ಹಾಗೂ ಇನ್ನಿತರೆ ಪ್ರೇಕ್ಷಣೀಯ ಸ್ಥಳಗಳ ಮೂಲಕ ಹೋಗುತ್ತದೆ. ಅಂತಿಮವಾಗಿ ಬಸ್ ಮ್ಯೂಸಿ ನದಿಯೊಳಗೆ ಪ್ರವೇಶಿಸುತ್ತದೆ. ಬಸ್ಸು ನದಿಯೊಳಗೆ ಪ್ರವೇಶಿಸುವಾಗ ಎಲ್ಲಾ ಕಿಟಕಿಗಳನ್ನೂ ಮುಚ್ಚಲಾಗುತ್ತದೆ, ಇಳಿಜಾರು ಪ್ರದೇಶದಲ್ಲಿ ಅತಿವೇಗವಾಗಿ ಮ್ಯೂಸಿ ನದಿಯನ್ನು ಪ್ರವೇಶಿಸುವಾಗ ರಭಸವಾಗಿ ನೀರನ್ನು ಚಿಮ್ಮುತ್ತಾ ಭಾಗಶಃ ಮುಳುಗಿದ ಬಸ್ ಹಡಗಿನಂತೆ ತೇಲುತ್ತಾ ಮುಂದೆ ಸಾಗುವ ಸಮಯದಲ್ಲಿ ಪ್ರವಾಸಿಗರು ಉತ್ಸಾಹಭರಿತರಾಗಿ ಕೇಕೆ ಹಾಕುತ್ತಾರೆ.
ಬಸ್ ನೀರಿನಲ್ಲಿ ಸಂಚರಿಸುವಾಗ ಬಂದರಿನ ಸುತ್ತಲೂ ಇರುವ ಪ್ರವಾಸಿ ತಾಣಗಳ ಹಾಗೂ ಬಂದರಿನಲ್ಲಿರುವ ಹಳೆಯ ಹಡಗುಗಳ ಇತಿಹಾಸವನ್ನು ಗೈಡ್ ತಿಳಿಸುತ್ತಾರೆ. ಈ ಉಭಯಚರಿ ಬಸ್ ಪ್ರವಾಸ ಜನಪ್ರಿಯವಾಗುತ್ತಿದ್ದು ಗೈಡ್ ಇಂಗ್ಲಿಷ್ ಹಾಗೂ ಡಚ್ ಭಾಷೆಗಳಲ್ಲಿ ಮಾಹಿತಿ ನೀಡುತ್ತಾರೆ. ‘ಸ್ಪ್ಲ್ಯಾಶ್ ಟೂರ್ಸ್’ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಸುಮಾರು ಒಂದೂವರೆ ಗಂಟೆಯ ಸ್ಪ್ಲ್ಯಾಶ್ ಟೂರ್ಸ್ ರೋಚಕ ಅನುಭವವನ್ನು ನೀಡುತ್ತದೆ.
ಕುದುರೆ ಲಾಳದ ಆಕೃತಿಯಲ್ಲಿರುವ ರೋಟರ್ ಡ್ಯಾಂನ ಅತ್ಯಂತ ಜನಪ್ರಿಯ ಸ್ಥಳ ಮಾರ್ಕೆಟ್ ಹಾಲ್. ರೋಟರ್ ಡ್ಯಾಂಗೆ ಬರುವ ಪ್ರವಾಸಿಗರು ತಪ್ಪದೆ ಭೇಟಿ ನೀಡುವ ಜನನಿಬಿಡ ಸ್ಥಳ. ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾದ ಮಾರ್ಕೆಟ್ ಹಾಲ್ ಮೇಲ್ಚಾವಣಿಯಲ್ಲಿ ಪ್ರಪಂಚದ ಅತಿದೊಡ್ಡ ಕಲಾಕೃತಿಗಳಲ್ಲಿ ಒಂದಾದ ಆನರ್ ಆಫ್ ಪ್ಲೆಂಟಿ ಪ್ರವಾಸಿಗರ ಗಮನ ಸೆಳೆಯುತ್ತದೆ. ಇಲ್ಲಿರುವ ಸುಮಾರು 20 ರೆಸ್ಟೊರೆಂಟ್‌ಗಳಲ್ಲಿ ಹಲವು ದೇಶಗಳ ಖಾದ್ಯಗಳು ಲಭ್ಯವಿದ್ದು ಪ್ರವಾಸಿಗರ ಬಾಯಲ್ಲಿ ನೀರೂರಿಸುತ್ತವೆ. ಮಾರ್ಕೆಟ್ ಹಾಲ್ ಒಳ ಆವರಣ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಾಗಿದ್ದರೆ, ಹೊರಮೈಯಲ್ಲಿ ವಸತಿ ಸಮುಚ್ಚಯವಿದೆ.
ಮಿತವ್ಯಯದ ಸಾರಿಗೆ
ರೋಟರ್ ಡ್ಯಾಂ ನಗರವನ್ನು ವೀಕ್ಷಿಸಲು ಟ್ರಾಂ, ಟ್ಯಾಕ್ಸಿಗಳು ಲಭ್ಯವಿದ್ದರೂ ಮಿತವ್ಯಯದಲ್ಲಿ ರೋಟರ್ ಡ್ಯಾಂ ನಗರವನ್ನು ವೀಕ್ಷಿಸಲು ಹಾಪ್ ಆನ್- ಹಾಫ್ ಆಫ್ ಬಸ್ಸು ಟಿಕೆಟ್ ಖರೀದಿಸಿ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. ಬಸ್ಸಿನಲ್ಲಿ ನೀಡುವ ಪ್ರವಾಸಿ ತಾಣಗಳ ಪಟ್ಟಿಯನ್ನು ಅನುಸರಿಸಿ ನಾವು ನೋಡಬೇಕಾದ ಪ್ರವಾಸಿ ತಾಣದ ನಿಲುಗಡೆಯಲ್ಲಿ ಇಳಿದು, ವೀಕ್ಷಿಸಿದ ನಂತರ ಬರುವ ಮತ್ತೊಂದು ಬಸ್ಸನ್ನು ಹಿಡಿದು ಮುಂದಿನ ಪ್ರವಾಸಿ ತಾಣದ ನಿಲುಗಡೆಯಲ್ಲಿ ಇಳಿಯಬಹುದು. ಹೀಗೆ ಇಡೀದಿನ ನಗರವನ್ನು ವೀಕ್ಷಿಸಬಹುದು. ಪ್ರತೀ ನಿಲುಗಡೆಯಲ್ಲಿ ಸಾಮಾನ್ಯವಾಗಿ ಅರ್ಧಗಂಟೆಗೊಂದು ಬಸ್ ಬರುತ್ತದೆ. ಒಮ್ಮೆ ಟಿಕೆಟ್ ಖರೀದಿಸಿದರೆ ಸಾಕು, ಬೆಳಿಗ್ಗೆಯಿಂದ ಸಂಜೆವರೆಗೂ ಓಡಾಡಬಹುದು.
ಎರಡನೇ ಜಾಗತಿಕ ಮಹಾಯುದ್ಧದಲ್ಲಿ ನಾಶವಾದರೂ ಮತ್ತೆ ಫೀನಿಕ್ಸ್‌ನಂತೆ ಮರು ಜನ್ಮಪಡೆದು, ಪ್ರಪಂಚವನ್ನೇ ನಿಬ್ಬೆರಗಾಗಿಸಿದ ಖ್ಯಾತಿ ರೋಟರ್ ಡ್ಯಾಂ ನಗರಕ್ಕೆ ಸಲ್ಲುತ್ತದೆ.
ಕ್ಯೂಬ್ ಹೌಸ್
ಬ್ಲಾಕ್ (Blaak) ಮೆಟ್ರೊ ನಿಲ್ದಾಣದ ಓವರ್ ಬ್ಲಾಕ್ ರಸ್ತೆಯಲ್ಲಿರುವ ಕ್ಯೂಬ್ ಹೌಸ್‌ಗಳು ತಮ್ಮ ವಿಶಿಷ್ಟ ವಿನ್ಯಾಸ ಹಾಗೂ ಬಣ್ಣದಿಂದ ಪ್ರವಾಸಿಗರ ಗಮನ ಸೆಳೆಯುತ್ತವೆ. ಪ್ರಪಂಚದ ಮೂಲೆ ಮೂಲೆಗಳಿಂದ ರೋಟರ್ ಡ್ಯಾಂ ನಗರವನ್ನು ವೀಕ್ಷಿಸಲು ಬರುವ ಪ್ರತಿಯೊಬ್ಬ ಪ್ರವಾಸಿಗನೂ ಕ್ಯೂಬ್ ಹೌಸ್‌ಗಳನ್ನು ನೋಡದೆ ಹಿಂದಿರುಗುವುದಿಲ್ಲ.
ಡಚ್ ವಾಸ್ತು ಶಿಲ್ಪಿ ಪಿಯೆಟ್ ಬ್ಲಾಮ್ ವಿನ್ಯಾಸಗೊಳಿಸಿದ ಕ್ಯೂಬ್ ಆಕೃತಿಯ ಮನೆಗಳ ಸಮುಚ್ಚಯ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. 1977ರಲ್ಲಿ ನಿರ್ಮಿಸಲಾದ 1,100 ಚದರ ಅಡಿ ವಿಸ್ತೀರ್ಣವುಳ್ಳ 38 ಸಣ್ಣ ಹಾಗೂ 2 ದೊಡ್ಡ, ಒಂದಕ್ಕೊಂದು ಹೊಂದಿಕೊಂಡಿರುವ ಕ್ಯೂಬ್ ಹೌಸ್‌ಗಳು ಆಧುನಿಕ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿವೆ. ಮನೆಯ ಜಾಗದ ಸದ್ಬಳಕೆ ಮಾಡುವುದೇ ಕ್ಯೂಬ್ ಹೌಸ್ ನಿರ್ಮಾಣದ ಮೂಲ ಉದ್ದೇಶ.
ಸಾಂಪ್ರದಾಯಿಕ ಮನೆಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಮನೆಗಳನ್ನು 45 ಡಿಗ್ರಿ ಘನರೂಪದ ಮನೆಗಳನ್ನಾಗಿ ನಿರ್ಮಿಸಿ ಷಟ್ಬುಜಾಕೃತಿಯು ದ್ವಾರದ ಮೇಲೆ ಇರುವಂತೆ ನೋಡಿಕೊಳ್ಳಲಾಗಿದೆ. ಮೂರು ಮಹಡಿಗಳನ್ನು ಹೊಂದಿರುವ ಮನೆಗಳ ನೆಲ ಅಂತಸ್ತಿನಲ್ಲಿ ಪ್ರವೇಶದ್ವಾರ, ಎರಡನೇ ಅಂತಸ್ತಿನಲ್ಲಿ ದೊಡ್ಡದಾದ ಹಾಲ್ ಹಾಗೂ ತೆರೆದ ಅಡುಗೆ ಮನೆಯನ್ನು ಹೊಂದಿದ್ದು, ಮೂರನೇ ಮಹಡಿಯಲ್ಲಿ ಎರಡು ಮಲಗುವ ಕೋಣೆಗಳು ಹಾಗೂ ಸ್ನಾನಗೃಹಗಳಿವೆ. ಒಂದೊಂದು ಮನೆಯೂ 1,100 ಚದರ ಅಡಿ ವಿಸ್ತೀರ್ಣವುಳ್ಳದ್ದಾಗಿದೆ.
ವಿಶಿಷ್ಟ ವಿನ್ಯಾಸವುಳ್ಳ ಮನೆಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಂದ ಮನೆಗಳಲ್ಲಿ ವಾಸಿಸುವವರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಒಂದು ಮನೆಯನ್ನು ವೀಕ್ಷಣೆಗೆಂದೇ ಮೀಸಲಾಗಿರಿಸಲಾಗಿದೆ. ಶೋ ಕ್ಯೂಬ್ ಮನೆಯಲ್ಲಿ ಸಂಚರಿಸಿ, ಕಟ್ಟಡಗಳ ವಿನ್ಯಾಸ, ಇತಿಹಾಸಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಬೆಳಿಗ್ಗೆ 11 ರಿಂದ ಸಂಜೆ 5ರ ವರೆಗೆ ವಾರದ ಏಳೂ ದಿನಗಳು ವೀಕ್ಷಣೆಗಾಗಿ ತೆರೆದಿರುತ್ತದೆ. ಪ್ರವೇಶದರ 3 ಯೂರೊಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.