ADVERTISEMENT

ಫ್ರಾನ್ಸ್ ಕಡಲತೀರದ ವಿಶಿಷ್ಟ ದ್ವೀಪ– ಮಾಂಟ್ ಸೇಂಟ್ ಮೈಕೆಲ್

ಪ್ರಹ್ಲಾದ ಪರ್ವತಿ
Published 3 ಆಗಸ್ಟ್ 2024, 23:58 IST
Last Updated 3 ಆಗಸ್ಟ್ 2024, 23:58 IST
<div class="paragraphs"><p>ನಾರ್ಮಂಡಿ ಕಡಲತೀರದಲ್ಲಿರುವ ‘ಮಾಂಟ್ ಸೇಂಟ್ ಮೈಕೆಲ್’ ದ್ವೀಪ</p></div>

ನಾರ್ಮಂಡಿ ಕಡಲತೀರದಲ್ಲಿರುವ ‘ಮಾಂಟ್ ಸೇಂಟ್ ಮೈಕೆಲ್’ ದ್ವೀಪ

   

ಫ್ರಾನ್ಸ್ ಮಧ್ಯಕಾಲೀನ ನಗರಗಳು, ಆಲ್ಪೈನ್ ಹಳ್ಳಿಗಳು ಮತ್ತು ಮೆಡಿಟರೇನಿಯನ್ ಕಡಲತೀರಗಳನ್ನು ಒಳಗೊಂಡ ದೊಡ್ಡ ದೇಶ. ಈ ದೇಶವು ಪ್ರಪಂಚದಲ್ಲಿ ಹೆಚ್ಚು ಪಾರಂಪರಿಕ ತಾಣಗಳನ್ನು ಹೊಂದಿದೆ. ವಾರ್ಷಿಕವಾಗಿ 8 ಕೋಟಿ ಪ್ರವಾಸಿಗರನ್ನು ಸೆಳೆಯುವ ಪಶ್ಚಿಮ ಯುರೋಪಿನ ಈ ಗಣರಾಜ್ಯವು, ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಹಾಗೂ ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರ ಪಡೆದಿರುವ ಪಕೃತಿ ಸೌಂದರ್ಯದ ನೆಲೆಯಾಗಿದೆ. ಈ ದೇಶದ ನಾರ್ಮಂಡಿ ಕಡಲತೀರದ ಅಂಚಿನಲ್ಲಿರುವ ‘ಮಾಂಟ್ ಸೇಂಟ್ ಮೈಕೆಲ್’ ದ್ವೀಪ ಪ್ರವಾಸಿತಾಣವಾಗಿ ಜನಪ್ರಿಯವಾಗಿದೆ. ಐಫೆಲ್ ಗೋಪುರದ ನಂತರ ಫ್ರಾನ್ಸ್‌ನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದು ಇದೇ ದ್ವೀಪ.

ಈ ತಾಣಕ್ಕೆ ತಲುಪಲು ಮೂರು ಕಿ.ಮೀ. ದೂರವಿರುವಾಗಲೇ ಕಂಡ ಈ ದ್ವೀಪ ತನ್ನ ಸೌಂದರ್ಯದಿಂದ ಮೋಡಿ ಮಾಡಿತು. ಸುತ್ತಲೂ ಜಲರಾಶಿ, ಹಿಂಭಾಗದಲ್ಲಿ ಇಂಗ್ಲಿಷ್ ಕಾಲುವೆಯ ಹರಿವನ್ನು ಕಂಡಾಗ ಪ್ರಕೃತಿ ಮಧ್ಯದಲ್ಲಿ ಮಾನವ ಪ್ರಯತ್ನದ ನಿರಂತರ ಸಾಧನೆಯ ಸಂಕೇತದಂತೆ ಈ ದ್ವೀಪ ಕಂಡಿತು. ತೆರೆಗಳ ಅಂಗಳದ ಉಬ್ಬರವಿಳಿತದ ಈ ಕಲ್ಲಿನದ್ವೀಪವನ್ನು ಈಗ ಸುಸಜ್ಜಿತವಾದ ಸೇತುವೆ ಮೂಲಕ ಮುಖ್ಯ ಭೂಭಾಗಕ್ಕೆ ಸಂಪರ್ಕಿಸಲಾಗಿದೆ. ವಾಹನ ಪಾರ್ಕಿಂಗ್ ಸ್ಥಳದಿಂದ ಕಾಲ್ನಡಿಗೆ ಇಲ್ಲವೇ ಉಚಿತ ಬಸ್ ಮೂಲಕ ದ್ವೀಪ ತಲುಪಬಹುದು.

ADVERTISEMENT

ವಾಯವ್ಯ ಕರಾವಳಿಯಿಂದ ಒಂದು ಕಿ.ಮೀ ದೂರದಲ್ಲಿ ‘ಕೌಸ್ನಾನ್’ ನದಿ ಮುಖಭಾಗದಲ್ಲಿರುವ ಈ ದ್ವೀಪವು ಏಳು ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಉಬ್ಬರದ ಸಮಯದಲ್ಲಿ ಇದು ಸಂಪೂರ್ಣವಾಗಿ ಮುಳುಗಿ ನಡುಗಡ್ಡೆಯಂತಾಗುತ್ತದೆ. ಉಬ್ಬರ ಕಡಿಮೆಯಾದಾಗ ಪ್ರವೇಶಾವಕಾಶ ತೆರೆದುಕೊಳ್ಳುತ್ತದೆ. ಈ ದ್ವೀಪ ತನ್ನೊಳಗೆ ಪ್ರಾಚೀನ ಚರ್ಚ್‌, ಮ್ಯೂಸಿಯಂ, ಉದ್ಯಾನ, ಕೋಟೆ ಹಾಗೂ ಜನವಸತಿ ಇಟ್ಟುಕೊಂಡಿರುವುದನ್ನು ಕಂಡಾಗ ಅಲ್ಲಿ ಇತಿಹಾಸ ಉಸಿರಾಡುತ್ತಿರುವ ಅನುಭವವಾಯಿತು.

ವಿಶಿಷ್ಟ ಕಟ್ಟಡ: ಸಂತ ಮೈಕೆಲರ ಮಧ್ಯಕಾಲೀನ ಈ ಆಬಿ(ವಾಸಿಸುವ ಜಾಗ) ವಿಶಿಷ್ಟ ಕಟ್ಟಡವಾಗಿದೆ. ಬೃಹತ್ ಬಂಡೆಯ ಮೇಲೆ ರಚಿತವಾದ ಈ ಚರ್ಚ್‌ ಸುತ್ತಲೂ ಕೋಟೆ ಕಟ್ಟಲಾಗಿದೆ. ಮುಖ್ಯ ಪ್ರವೇಶದ್ವಾರದ ಎಡಭಾಗದ ಕಮಾನುಗಳನ್ನು ದಾಟಿದ ನಂತರ ಬಲಭಾಗದಲ್ಲಿ ಚರ್ಚ್‌ ಮತ್ತು ಎಡಭಾಗದಲ್ಲಿರುವ ಆಬಿ ಕಟ್ಟಡಗಳ ನಡುವಿನ ಕಾಲುದಾರಿಯಲ್ಲಿ ಸಾಗಿದಾಗ ಗ್ರಾಂಡ್ ಡಿಗ್ರೆ ಎನ್ನುವ ಚಾವಣಿ ತಲುಪುತ್ತೇವೆ. ಇಲ್ಲಿಂದ ಕೊಲ್ಲಿಯಲ್ಲಿ ಕಾಣುವ ಸೌಂದರ್ಯವನ್ನು ಸವಿಯುವುದರ ಜೊತೆಗೆ ನಿಯೋ ಗೋಥಿಕ್ ಶೈಲಿಯ ಚರ್ಚ್‌ ಗೋಪುರ, ಅದರ ಮೇಲಿರುವ ಸಂತ ಮೈಕೆಲರ ಪ್ರತಿಮೆಯನ್ನು ನೋಡಬಹುದು.  ಆಬಿಯ ಚರ್ಚ್‌ ಅನ್ನು ಬಂಡೆಯ ಮೇಲ್ಭಾಗದಲ್ಲಿ 80 ಮೀಟರ್‌ ಎತ್ತರದಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ ನೀರಿನೊಂದಿಗೆ ಹೆಣೆದುಕೊಂಡ ಈ ದ್ವೀಪದ ರಮಣೀಯ ನೋಟ ಪರವಶಗೊಳಿಸುತ್ತದೆ.

ವಾಸ್ತುಶಿಲ್ಪದ ಮೇರು ಕೃತಿ:

ದ್ವೀಪದ ಚರ್ಚ್‌ ವಿಭಿನ್ನ ಅವಧಿಯ ಮತ್ತು ಶಿಲ್ಪಕಲಾ ಶೈಲಿಗಳ ಮಿಶ್ರಣ ಹೊಂದಿದೆ. ಇದು ರೋಮನೆಸ್ಕ್ ಶೈಲಿಯಲ್ಲಿತ್ತು. ಮಾಂಟ್ ಆಬಿಯು ಮಧ್ಯಕಾಲೀನ ವಾಸ್ತುಶಿಲ್ಪದ ಮೇರು ಕೃತಿಯಾಗಿದ್ದು, ಇದು ಮೂರು ಹಂತದ ರಚನೆಯಾಗಿದೆ. ಕಟ್ಟಡದಲ್ಲಿ ಸನ್ಯಾಸಿಗಳು ವಾಸಿಸುತ್ತಿದ್ದ ಮರ್ವೀಲ್ ಕಟ್ಟಡ, ನೆಲಮಹಡಿಯಲ್ಲೊಂದು ನೆಲಮಾಳಿಗೆ, ಸನ್ಯಾಸಿಗಳು ಅಧ್ಯಯನ ಮತ್ತು ಧ್ಯಾನ ಮಾಡುವ ‘ನೈಟ್’ ಕೋಣೆ, ಮಧ್ಯಂತರದಲ್ಲಿ ಆತಿಥೇಯರ ಕೊಠಡಿಗಳಿವೆ. ಮೇಲಿನ ಹಂತದಲ್ಲಿ ಗ್ರಾನೈಟ್ ಕಲ್ಲು ಮತ್ತು ಅಮೃತಶಿಲೆ ಬಳಸಿ ಎರಡು ಸಾಲುಗಳ ಕಮಾನಿನ ಮೂಲೆಯಲ್ಲಿ ಸೂಕ್ಷ್ಮ ಕೆತ್ತನೆಗಳು ಆಕರ್ಷಕವಾಗಿದೆ. ಮೇಲ್ಭಾಗದಲ್ಲಿ ನಿಗೂಢಮಾರ್ಗಗಳಲ್ಲಿ ಸಂಚರಿಸಿ ಸನ್ಯಾಸಿಗಳ ಗೃಹ ಮತ್ತು ಭೋಜನಶಾಲೆ ನೋಡಬಹುದು. ಇದರ ಬದಿಯಲ್ಲಿ ಚಾಪೆಲ್ ಇದೆ. ಇಲ್ಲಿನ ನವರಂಗ, ನೆಲಮಹಡಿ ಮತ್ತು ಬಣ್ಣದ ಗಾಜಿನಕಿಟಕಿಗಳ ಎತ್ತರ ರೋಮನೆಸ್ಕ್ ವಾಸ್ತುಶಿಲ್ಪದ ಉತ್ಕೃಷ್ಟ ಉದಾಹರಣೆಗಳಾಗಿವೆ. ಬ್ರಿಟನ್ನರ ಮುತ್ತಿಗೆಯಿಂದ ಆಬಿಯ ಬಹುಭಾಗ ಅಗ್ನಿಗಾಹುತಿಯಾಗಿದ್ದರಿಂದ ಮತ್ತೆ ಎತ್ತರದ ತೆಳ್ಳಗಿನ ಕೆತ್ತಿದ ಕಮಾನುಗಳೊಂದಿಗೆ ಗೋಥಿಕ್ ಶೈಲಿಯಲ್ಲಿ ಚರ್ಚ್‌ ಅನ್ನು ವಿಸ್ತರಿಸಲಾಯಿತು. ಮುಂದಿನ ಶತಮಾನಗಳಲ್ಲಿ ಇವು ಮರುವಿನ್ಯಾಸಗೊಂಡು ರೋಮನೆಸ್ಕ್ ವಾಸ್ತು ಸೌಂದರ್ಯ ಶೈಲಿಯಲ್ಲಿ ನಿರ್ಮಾಣಗೊಂಡವು.

ಮಾಂಟ್ ಟೊಂಬೆ

ಸಮುದ್ರದ ಉಬ್ಬರ ಇಳಿಕೆಯಾಗುವ ಋತುವಿನಲ್ಲಿ ಮಾಂಟ್‌ ಸೇಂಟ್‌ ಮೈಕೆಲ್‌ ದ್ವೀಪಕ್ಕೆ ನಡೆದೇ ಹೋಗಬಹುದು

ಈ ಅನನ್ಯ ದ್ವೀಪ ಸುದೀರ್ಘ ಇತಿಹಾಸ ಹೊಂದಿದ್ದು, ವಿಭಿನ್ನ ಉದ್ದೇಶಗಳಿಗೆ ಬಳಕೆಯಾಗಿದೆ. 5ನೆಯ ಶತಮಾನದಲ್ಲಿ ಐರಿಷ್ ಸನ್ಯಾಸಿಗಳಿಂದ ಇದು ಮಾಂಟ್ ಟೊಂಬೆ ಎಂದು ಸ್ಥಾಪಿತವಾಗಿ, ಕಾಲಾಂತರದಲ್ಲಿ ಮಾಂಟ್ ಸೇಂಟ್ ಮೈಕೆಲ್ ಎಂದಾಯಿತು. ತದನಂತರ 300 ವರ್ಷಗಳು ಗ್ಯಾಲೋ ರೋಮನ್ ಸಂಸ್ಕೃತಿಯ ಕೇಂದ್ರವಾಗಿ ಕಾರ್ಯನಿರ್ವಹಿಸಿತು. ಇದನ್ನು ಪ್ರಾಂಕ್ಸರು (ಇವರಿಂದಲೇ ಫ್ರಾನ್ಸ್ ಹೆಸರು ಬಂದಿದೆ) ವಶಪಡಿಸಿಕೊಂಡಾಗ ಕೆಲ ಸಮಯ ತೀರ್ಥಯಾತ್ರಾ ತಾಣವಾಗಿತ್ತು. ಬಿಷಪ್ ಆಬರ್ಟರು ಅರ್ಚಾಂಗೆಲ್ಲರ ಗೌರವಾರ್ಥಕವಾಗಿ ಈ ಮಾಂಟ್ ಸೇಂಟ್ ಮೈಕೆಲ್ ದ್ವೀಪದಲ್ಲಿ ಸಣ್ಣ ಪ್ರಾರ್ಥನಾ ಮಂದಿರ ಸ್ಥಾಪಿಸಿದರು. 10ನೆಯ ಶತಮಾನದಲ್ಲಿ ಇದು ಬೆನೆಡಿಕ್ಟೆನ್ನರ ವಾಸಸ್ಥಾನದ ಭವ್ಯ ಆಬಿಯಾಗಿ ವಿಕಸನಗೊಂಡಿತು. ಹೀಗಾಗಿ ಎಲ್ಲಡೆಯಿಂದ ಯಾತ್ರಿಕರನ್ನು ಮತ್ತು ವಿದ್ವಾಂಸರನ್ನು ತನ್ನತ್ತ ಸೆಳೆದು ಮಧ್ಯಕಾಲೀನ ಶತಮಾನದ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಕೆಲವು ವರ್ಷ ಅಧಿಕಾರದ ಸ್ಥಳವಾಗಿ ಅಂತಿಮವಾಗಿ ಆಯಕಟ್ಟಿನ ಭದ್ರಕೋಟೆಯಾಗಿ ಮತ್ತು ಫ್ರೆಂಚ್ ಕ್ರಾಂತಿ ವಿರೋಧಿಸಿದವರನ್ನು ಹಿಡಿದಿಟ್ಟುಕೊಳ್ಳುವ ಕಾರಾಗೃಹವಾಗಿತ್ತು.

ಅಜೇಯ ಕೋಟೆ

ಇಲ್ಲಿನ ಕೋಟೆಯು ದಪ್ಪನೆಯ ಕಲ್ಲಿನಗೋಡೆ, ಕಾಲ್ದಾರಿ, ಸುತ್ತುವರೆದ ರಕ್ಷಣಾತ್ಮಕ ಗೋಪುರಗಳಂತಹ ಮಿಲಟರಿ ರಕ್ಷಣಾ ವಿಧಾನಗಳ ಪ್ರಾವಿಣ್ಯತೆಯಿಂದ ಹೆಸರುವಾಸಿಯಾಗಿದೆ. 30 ವರ್ಷಗಳು ಇಂಗ್ಲಿಷರ ಮುತ್ತಿಗೆಗಳನ್ನು ಯಶಸ್ವಿಯಾಗಿ ಎದುರಿಸಿದ್ದರಿಂದಾಗಿ ಈ ಕೋಟೆಯನ್ನು ‘ಅಜೇಯ ಕೋಟೆ’ ಎಂದು ಬಣ್ಣಿಸಲಾಗಿದೆ. ಆಬಿಯ ಜೊತೆಗೆ 1 ಸಾವಿರ ವರ್ಷಗಳಿಂದ ಈ ಕೋಟೆಯ ಹೊರವಲಯದಲ್ಲಿ (14ನೇ ಶತಮಾನದ ಹೊತ್ತಿಗೆ) ಒಂದು ಹಳ್ಳಿಯೇ ಕೋಟೆ ಗೋಡೆಗಳಗುಂಟ ಬೆಳೆಯಿತು. 18ನೆಯ ಶತಮಾನದ ವೇಳೆಗೆ ಆಡಳಿತಾಧಿಕಾರಿಗಳು, ಮಠಾಧೀಶರು ಈ ಸ್ಥಳವನ್ನು ತೊರೆದಿದ್ದರಿಂದ ಈ ಆಬಿ ರಾಜ್ಯದ ಆಸ್ತಿಯಾಯಿತು. 1874 ರಲ್ಲಿ ಈ ಆಬಿಯನ್ನು ಸ್ಮಾರಕವೆಂದು ಘೋಷಿಸಿದ ನಂತರ 1979 ರಲ್ಲಿ ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಪರಿಗಣಿಸಿದೆ. ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುವ ಈ ಕಟ್ಟಡವನ್ನು ಖ್ಯಾತ ಫ್ರೆಂಚ್ ಲೇಖಕ, ಚಿಂತಕ ವಿಕ್ಟರ್ ಹ್ಯೂಗೋ ಇದನ್ನು 19ನೇ ಶತಮಾನದ ‘ಅದ್ಭುತ ಪಿರಮಿಡ್’ ಎಂದು ಕರೆದಿದ್ದಾರೆ.

ಕೋಟೆಯೊಳಗಿನ ಉದ್ಯಾನದ ನೋಟ

ಕೋಟೆಯ ಕೆಳಭಾಗದಲ್ಲಿರುವ ಕೌಸ್ನಾನ್ ನದಿಯ ಹೂಳಿನಲ್ಲಿ ಮಕ್ಕಳಾದಿಯಾಗಿ ಪ್ರವಾಸಿಗರು ಸಂಚರಿಸಿ ದ್ವೀಪದ ಹೆಬ್ಬಾಗಿಲಿಗೆ ಬಂದು ಕೆಸರಾದ ತಮ್ಮ ಕಾಲು ತೊಳೆದುಕೊಂಡು ಒಳಗೆ ಬರುವ ದೃಶ್ಯ ವಿಸ್ಮಯ ಮೂಡಿಸಿತು. ಹಾಲಿವುಡ್ ಸೇರಿದಂತೆ ಅನೇಕರಿಗೆ ಈ ಆಬಿ ಸ್ಪೂರ್ತಿ ನೀಡಿದೆ. ಕೆಲವು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಅಚ್ಚುಕಟ್ಟಾದ ವ್ಯವಸ್ಥೆ, ಸುರಕ್ಷತೆ ಮತ್ತು ಸ್ಪಚ್ಛತೆಯ ಕಾರಣಗಳಿಂದ ಪ್ರತಿ ವರ್ಷ ಈ ದ್ವೀಪ 30 ಲಕ್ಷ ಪ್ರವಾಸಿಗರನ್ನು ಸೆಳೆಯುತ್ತಿದೆ.

ದ್ವೀಪದ ವಿಶಿಷ್ಟ ಜೀವವೈವಿಧ್ಯ, ಪರಿಸರ ಸಂರಕ್ಷಣೆಗೆ ಸಾಕಷ್ಟು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊಲ್ಲಿಯ ಉಬ್ಬರವಿಳಿತದ ಹರಿವು ನಿಯಂತ್ರಿಸಲು, ಹೂಳು ತುಂಬುವಿಕೆಯನ್ನು ತಡೆಗಟ್ಟಲು ಹೈಡ್ರಾಲಿಕ್ ಅಣೆಕಟ್ಟು ಹಾಗೂ ದ್ವೀಪ ಪ್ರವೇಶಿಸಲು ಎತ್ತರದ ಪಾದಚಾರಿ ಸೇತುವೆ ನಿರ್ಮಾಣವಾಗಿದ್ದರಿಂದ ವೀಕ್ಷಣೆ ಸುಲಭವಾಗಿದೆ. ಪಾಶ್ಚಿಮಾತ್ಯ ಪ್ರಪಂಚದ ಅದ್ಭುತ ಎಂದು ಕರೆಯಲಾದ ಈ ವಿಶ್ವ ಪಾರಂಪರಿಕ ತಾಣ, ಭೂ ವೈಜ್ಞಾನಿಕ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಸೊಗಸಾದ ವಾಸ್ತುಶಿಲ್ಪ ಮತ್ತು ಪ್ರಾಚೀನತೆಯಿಂದ ಈ ದ್ವೀಪ ನಮ್ಮನ್ನು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ದ ಅನುಭವದಿಂದ ವಿಸ್ಮಿತರನ್ನಾಗಿಸುತ್ತದೆ. ಫ್ರಾನ್ಸ್ ಪರಂಪರೆಯ ವಾಸ್ತುಶಿಲ್ಪ, ನೈಸರ್ಗಿಕ ಸೌಂದರ್ಯ ಹಾಗೂ ಇತಿಹಾಸ ಸಂಯೋಜನೆ–ಈ ಮಾಂತ್ರಿಕ ಸೌಂದರ್ಯದ ದ್ವೀಪಕ್ಕೆ ಒಮ್ಮೆ ಭೇಟಿ ನೀಡಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.