ADVERTISEMENT

ಪ್ರವಾಸ: ಮಲೇಷ್ಯಾದ ವಿಶಿಷ್ಟ ಬಟು ಗುಹೆಗಳು

ಎಂ.ವೆಂಕಟಸ್ವಾಮಿ
Published 6 ಜುಲೈ 2024, 22:28 IST
Last Updated 6 ಜುಲೈ 2024, 22:28 IST
ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರದ ಬಳಿ ಇರುವ ಬಟು ಗುಹೆಯ ಪ್ರವೇಶದ್ವಾರ ಹಾಗೂ ಒಳಾಂಗಣ
ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರದ ಬಳಿ ಇರುವ ಬಟು ಗುಹೆಯ ಪ್ರವೇಶದ್ವಾರ ಹಾಗೂ ಒಳಾಂಗಣ   

ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಅಂಚಿನಲ್ಲಿರುವ ಬಟು ಗುಹೆಗಳ ಕಡೆಗೆ ವಾಹನ ಹೊರಟ್ಟಿತ್ತು. ದೂರದಿಂದಲೇ ರಸ್ತೆಯ ಎದುರಿಗೆ ಹಸಿರು ತುಂಬಿಕೊಂಡಿರುವ ದೊಡ್ಡ ಬೆಟ್ಟ, ಅದರ ಮುಂದೆ ಎತ್ತರವಾದ ಬಂಗಾರ ಬಣ್ಣದ ಮುರುಗನ್‌ ಪ್ರತಿಮೆ ಕಾಣಿಸಿತು. ಹತ್ತಿರಕ್ಕೆ ಹೋದಾಗ ದೇವಸ್ಥಾನದ ಮುಂದೆ ದೊಡ್ಡ ಜಾತ್ರೆ ನಡೆಯುತ್ತಿತ್ತು. ಅಲ್ಲಿ ಎಲ್ಲಿ ನೋಡಿದರೂ ತಮಿಳು ಮಾತನಾಡುವರು ಕಾಣಿಸುತ್ತಿದ್ದರು. ನಾವು ತಮಿಳುನಾಡಿನಲ್ಲಿ ಇದ್ದೆವೂ ಏನೋ ಎನ್ನುವ ಭಾವನೆ ಅರೆಗಳಿಗೆ ಮನದಲ್ಲಿ ಮೂಡಿತು. ನಾನು ಭೂಗರ್ಭಶಾಸ್ತ್ರಜ್ಞನಾಗಿರುವುದರಿಂದ ಮೊದಲು ಅಲ್ಲಿರುವ ಅದ್ಭುತ ಗುಹೆಗಳನ್ನು ನೋಡಿಕೊಂಡು ಬರಲು ಬಣ್ಣ ಬಣ್ಣದ ದೊಡ್ಡ ದೊಡ್ಡ ಮೆಟ್ಟಿಲುಗಳನ್ನು ಹತ್ತಿಕೊಂಡು ಹೊರಟೆ. 

ಜಗತ್ತಿನ ಹೆಚ್ಚೆಚ್ಚು ಪ್ರದೇಶಗಳಲ್ಲಿ ಸುಣ್ಣದ ಶಿಲೆಗಳಲ್ಲಿ (ಲೈಮ್ ಸ್ಟೋನ್) ಅಪರೂಪವಾದ ಮತ್ತು ಬಣ್ಣಬಣ್ಣದ ಗುಹೆಗಳು ರೂಪುಗೊಂಡಿರುವುದನ್ನು ನೋಡಬಹುದು. ಅದೇ ರೀತಿ ಮಲೇಷ್ಯಾದ ಬಟು ಹಳ್ಳಿಯ ಪಕ್ಕದಲ್ಲಿ ಸುಣ್ಣದ ಶಿಲೆಗಳ ಬೆಟ್ಟದಲ್ಲಿ ಸುಮಾರು 40 ಕೋಟಿ ವರ್ಷಗಳ ಹಿಂದೆ ನೈಸರ್ಗಿಕವಾಗಿ ಗುಹೆಗಳು ರೂಪುಗೊಂಡಿವೆ. ಈ ಗುಹೆಗಳನ್ನು ಮೊದಲಿಗೆ ಆದಿಮಾನವನು, ಅನಂತರ ಗುಹೆಗಳ ಪ್ರವೇಶ ದ್ವಾರಗಳನ್ನು ಸ್ಥಳೀಯ ತೆಮುವಾನ್ ಜನರು (ಒರಾಂಗ್ ಅಸ್ಲಿಯ ಬುಡಕಟ್ಟು) ಆಶ್ರಯಕ್ಕಾಗಿ ಬಳಸಿಕೊಳ್ಳುತ್ತಿದ್ದರು. 1860ರಲ್ಲಿ ಇಲ್ಲಿದ್ದ ಚೀನಿಯರು ಗುಹೆಗಳ ಒಳಗೆ ಬಿದ್ದಿದ್ದ ಬಾವಲಿ, ಇತರೆ ಪ್ರಾಣಿಗಳ ಹಿಕ್ಕೆ ಗೊಬ್ಬರವನ್ನು ಸಂಗ್ರಹಿಸಿ ಭೂಮಿಗೆ ಚೆಲ್ಲಿ ತರಕಾರಿ ಬೆಳೆಯುತ್ತಿದ್ದರು. 1878ರಲ್ಲಿ ಅಮೆರಿಕದ ವಿಜ್ಞಾನಿಗಳು ಬಟು ಸುಣ್ಣದ ಶಿಲೆಗಳ ಗುಹೆಗಳನ್ನು ಗುರುತಿಸಿದ ಮೇಲೆ ಈ ಪ್ರದೇಶ ಪ್ರಸಿದ್ಧಿಗೆ ಬಂದಿತು. ಬೆಟ್ಟದ ಶಿಲೆಗಳಲ್ಲಿರುವ ಸುಣ್ಣದ ಖನಿಜಾಂಶ ಮಳೆ ನೀರಿನ ಜೊತೆಗೆ ಬೆರೆಯುತ್ತಾ ಮಿಶ್ರಣಗೊಂಡು ಲಕ್ಷಾಂತರ ವರ್ಷಗಳಲ್ಲಿ ಕರಗುತ್ತಾ ರೂಪುಗೊಂಡಿರುವ ಸ್ಟಾಲಗ್ಮೆಟ್ ಮತ್ತು ಸ್ಟಾಲ್ಕಟೈಟ್ ಕಲ್ಲು ಹೂವುಗಳನ್ನು ನೋಡಬಹುದು. ಆದರೆ ಇಲ್ಲಿ ಅವು ಅಷ್ಟೊಂದು ವೈವಿಧ್ಯಮಯ ಬಣ್ಣಗಳಿಂದ ಬೆಳೆದಿಲ್ಲ.

ಈ ಗುಹೆಗಳು ನೆಲಮಟ್ಟದಿಂದ 100 ಮೀಟರ್‌ಗಳ ಎತ್ತರದಲ್ಲಿವೆ. ಇವುಗಳ ಇನ್ನೊಂದು ವಿಶೇಷವೆಂದರೆ ಒಳಗೆ ನಿಂತು ಬೆಟ್ಟದಲ್ಲಿ ಬಿದ್ದಿರುವ ಎರಡು ತೂತುಗಳಿಂದ ಆಕಾಶವನ್ನು ನೋಡಬಹುದು. ಅವು ಭೂಮಿಯಿಂದ ಆಕಾಶದ ಕಡೆಗೆ ನೋಡಿದರೆ ಓಝೋನ್ ತೂತುಗಳಂತೆ ಕಾಣಿಸುತ್ತವೆ. ನಾವು ಗುಹೆಯಲ್ಲಿ ನಿಂತು ಆಕಾಶದ ಕಡೆಗೆ ನೋಡಿದಾಗ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಬಿದ್ದ ನೀರು ‘ಜರೋ’ ಎಂದು ಸದ್ದು ಮಾಡುತ್ತ ಹರಿದುಹೋಗುತ್ತಿದ್ದರೂ ನಮಗೆ ಕಾಣಿಸಲಿಲ್ಲ. ಸೂರ್ಯನ ಬೆಳಕು ನೇರವಾಗಿ ಗುಹೆಗಳ ಒಳಕ್ಕೆ ಬೀಳುವುದರ ಜೊತೆಗೆ ಮಳೆಗಾಲದಲ್ಲಿ ಅಪಾರವಾದ ಮಳೆ ಗುಹೆಗಳ ಒಳಕ್ಕೆ ಸುರಿಯುತ್ತದೆ. ಬಿದ್ದ ಮಳೆ ಬೆಟ್ಟದ ಯಾವುದೊ ಕಡೆಗೆ ಬಿರುಕುಗಳ ಮೂಲಕ ಹರಿದುಹೋಗುತ್ತದೆ. ಅಂದರೆ ಎಷ್ಟೇ ಮಳೆ ಬಿದ್ದರೂ ಗುಹೆಗಳ ಒಳಗಿರುವ ದೇವಾಲಯಗಳಿಗೆ ಯಾವುದೇ ಅಪಾಯವಿಲ್ಲ. ಜೊತೆಗೆ ಮೆಟ್ಟಿಲುಗಳ ಮೂಲಕ ನೀರು ಹೊರಕ್ಕೆ ಹರಿದು ಬರದಂತೆ ಮೆಟ್ಟಿಲುಗಳಿರುವ ಕಡೆ ನೆಲವನ್ನು ಎತ್ತರಿಸಲಾಗಿದೆ. ಹಾಗಾಗಿ ಗುಹೆಗಳ ಒಳಗಿರುವ ದೇವಸ್ಥಾನಗಳಿಗಾಗಲಿ, ಯಾತ್ರಿಕರಿಗಾಗಲಿ ನೀರಿನ ಪ್ರವಾಹದ ಅಪಾಯವಿಲ್ಲ. ಕ್ವಾಲಾಲಂಪುರ ನಗರ ಬಟು ಹಳ್ಳಿಯ ಗುಹೆಗಳವರೆಗೂ ಬೆಳೆದು ಬಂದಿದ್ದು ಮಲೇಷ್ಯಾಗೆ ಹೋಗಿಬರುವ ಯಾತ್ರಿಕರಿಗೆ ಬಟು ಗುಹೆಗಳು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.

ADVERTISEMENT

ಬಟು ಗುಹೆಗಳ ಬಳಿ ತಮಿಳುನಾಡಿನ ವಾತಾವರಣ ಏಕೆ ಇದೆ ಎನ್ನುವ ಕುತೂಹಲ ತಣಿಸಿಕೊಳ್ಳಲು ಅಲ್ಲಿದ್ದವರನ್ನು ವಿಚಾರಿಸಿದೆ. ಆಗ ಗೊತ್ತಾಗಿದ್ದು ಇದಿಷ್ಟು.

ಬ್ರಿಟಿಷರು, ಭಾರತವನ್ನು ಆಳುತ್ತಿದ್ದಾಗ ಮಲೇಷ್ಯಾದಲ್ಲಿ ಕಲ್ಲಿದ್ದಲು ತಾಮ್ರ ಚಿನ್ನ (ತವರು) ಇತ್ಯಾದಿ
ಗಣಿಗಳು, ರಬ್ಬರ್ ತೋಟಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಸಾಕಷ್ಟು ತಮಿಳರನ್ನು ಮದ್ರಾಸ್ ಪ್ರೆಸಿಡೆನ್ಸಿಯಿಂದ ಕರೆದುಕೊಂಡು ಹೋದರು. ಅದಕ್ಕೂ ಮುಂಚೆ ನೂರಾರು ವರ್ಷಗಳ ಹಿಂದೆಯೇ ದಕ್ಷಿಣ ಭಾರತದ ಹಲವು ರಾಜವಂಶಗಳು ಕಾಂಬೋಡಿಯಾ, ವಿಯಟ್ನಾಂ, ಮಲೇಷ್ಯಾ, ಥೈಯ್ಲೆಂಡ್‌ ಇನ್ನಿತರ ಆಗ್ನೇಯ ಏಷ್ಯಾ ದೇಶಗಳ ಭಾಗಗಳನ್ನು ಆಳಿದ್ದು ಅಲ್ಲೆಲ್ಲ ಅದ್ಭುತವಾದ ಹಿಂದೂ ದೇವಾಲಯಗಳನ್ನು ನಿರ್ಮಿಸಿವೆ. 1892ರಲ್ಲಿ ಮಲೇಷ್ಯಾದಲ್ಲಿದ್ದ ತಮಿಳುನಾಡು ಮೂಲದ ಕೆ.ತಂಬಿಸಾಮಿ ಎಂಬ ವ್ಯಾಪಾರಿಗೆ ಬಟು ಗುಹೆಯ ಪ್ರವೇಶದ್ವಾರ ಮುರುಗನ್‌ ಶೂಲ (ವೆಲ್) ಆಕಾರದಲ್ಲಿರುವುದನ್ನು ಗಮನಿಸಿ ಅದರಿಂದ ಉತ್ತೇಜಿತರಾಗಿ ಅಲ್ಲಿ ದೇವಸ್ಥಾನ ಕಟ್ಟಲು ಪ್ರಾರಂಭಿಸಿದರು. ಇದಕ್ಕೂ ಮೊದಲು ಇವರು 1890ರಲ್ಲಿ ತಮಿಳರೇ ಹೆಚ್ಚಾಗಿರುವ ಕ್ವಾಲಾಲಂಪುರ ನಗರದ ಮಧ್ಯಭಾಗದಲ್ಲಿ ಮಾರಿಯಮ್ಮನ್ ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ ಪ್ರದೇಶವನ್ನು ‘ಮಿನಿ ತಮಿಳುನಾಡು’ ಎಂದೇ ಕರೆಯುತ್ತಾರೆ.

ಸುಮಾರು 500 ಅಡಿಗಳ ಎತ್ತರದ ಬಟು ಬೆಟ್ಟ ಹಸಿರಿನಿಂದ ಆವರಿಸಿಕೊಂಡಿದ್ದು, ಅದರ ತಳದಿಂದ 100 ಮೀಟರುಗಳ ಎತ್ತರದಲ್ಲಿ ಗುಹೆಗಳು ರೂಪುಗೊಂಡಿವೆ. ಬೆಟ್ಟದ ಕೆಳಗೆ ದೊಡ್ಡದಾದ ದೇವಾಲಯವಿದ್ದು ಗುಹೆಗಳ ಒಳಗೆ ಸಣ್ಣ ದೇವಾಲಯಗಳನ್ನು ನಿರ್ಮಿಸಲಾಗಿದೆ. ಗುಹೆಯ ಎದುರಿಗೆ ಮೆಟ್ಟಿಲುಗಳ ಪಕ್ಕದಲ್ಲಿ 146 ಅಡಿಗಳ ಎತ್ತರದ ಭವ್ಯವಾದ ಮುರುಗನ್‌ ಬಂಗಾರ ಬಣ್ಣದ ಶಿಲ್ಪವನ್ನು ಸ್ಥಾಪಿಸಲಾಗಿದೆ. ಬಟು ಗುಹೆಯ ಕುಮಾರಸ್ವಾಮಿ ಮತ್ತು ಮಾರಿಯಮ್ಮನ್ ದೇವಾಲಯ ಇರುವ ಪ್ರದೇಶದಲ್ಲಿ ತಮಿಳರ ಥೈಮಾಸಂ ತಿಂಗಳಲ್ಲಿ (ಜನವರಿ-ಫೆಬ್ರುವರಿ) ವಿಶೇಷ ಜಾತ್ರೆ ನಡೆಯುತ್ತದೆ.

ಬೆಟ್ಟದ ಒಳಗಿನ ಗುಹೆಗಳಲ್ಲಿ ಮುರುಗನ್‌ ಮತ್ತು ಶ್ರೀರಾಮ-ಆಂಜನೇಯರ ದೇವಸ್ಥಾನಗಳನ್ನು ನಿರ್ಮಿಸಿ ಮೊದಲಿಗೆ ಮರದ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. 1920ರಲ್ಲಿ ಅವುಗಳನ್ನು ಬದಲಿಸಿ 272 ಕಾಂಕ್ರಿಟ್ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಇತ್ತೀಚೆಗೆ ಈ ಮೆಟ್ಟಿಲುಗಳಿಗೆ ಸುಂದರ ಮತ್ತು ಆಕರ್ಷಕ ಬಣ್ಣಗಳನ್ನು ಬಳಿಯಲಾಗಿದೆ. ಗುಹೆಯ ಮುಂದೆ ನೆಲಮಟ್ಟದಲ್ಲಿ ನಿರ್ಮಿಸಿರುವ ಮುರುಗನ್ ಪ್ರತಿಮೆ 146 ಅಡಿಗಳ ಎತ್ತರವಿದ್ದು, ಇದು ಜಗತ್ತಿನ ಎತ್ತರದ ಮುರುಗನ್ ಪ್ರತಿಮೆಯಾಗಿದೆ. ಈ ಪ್ರತಿಮೆ ನೋಡಲು ಬಹಳ ಆಕರ್ಷಕವಾಗಿದ್ದು ದೂರದಿಂದಲೇ ಎದ್ದು ಕಾಣಿಸುತ್ತದೆ. ಇದರ ಆಕರ್ಷಣೆಗೆ ಇನ್ನೊಂದು ಕಾರಣವೆಂದರೆ ಬಂಗಾರ ಬಣ್ಣ ಮತ್ತು ಅದರ ಹಿನ್ನೆಲೆಯಲ್ಲಿ ಹಸಿರು ಹೊದ್ದುಕೊಂಡು ನಿಂತಿರುವ ಬಟು ಬೆಟ್ಟ. 

ಬಟು ಗುಹೆಯ ಒಳಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.