ADVERTISEMENT

ಸಪ್ತ ಸುಂದರಿಯರ ನಾಡಿನಲ್ಲಿ...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 1:20 IST
Last Updated 24 ನವೆಂಬರ್ 2024, 1:20 IST
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಬುದ್ಧನ ಬೃಹತ್‌ ಪ್ರತಿಮೆ
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರುವ ಬುದ್ಧನ ಬೃಹತ್‌ ಪ್ರತಿಮೆ   

ನಾವು ಅಸ್ಸಾಂನ ಗುವಾಹಟಿಗೆ ಕಾಲಿಟ್ಟ ದಿನ ದುರ್ಗಾದೇವಿಯನ್ನು ಬ್ರಹ್ಮಪುತ್ರ ನದಿಯಲ್ಲಿ ವಿಸರ್ಜಿಸುವ ಸಂಭ್ರಮ ಜೋರಾಗಿತ್ತು. ಮರುದಿನ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಭಾರತದಲ್ಲೇ ಹೆಚ್ಚು ಮಳೆ ಬೀಳುವ ಚಿರಾಪುಂಜಿಯತ್ತ ನಮ್ಮ ಪಯಣ. ಅದು ನಮ್ಮ ಆಗುಂಬೆ ಘಾಟಿಯನ್ನು ನೆನಪಿಸುತ್ತಿತ್ತು. ಕಾನನದ ಭಿತ್ತಿಯ ಮೇಲೆ ಮೇಘಮಾಲೆಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಪಯಣಿಸುವುದೇ ವಿಶಿಷ್ಟ ಅನುಭವ.

ಪಾದಚಾರಿಗಳಿಗೆಂದೇ ನಿರ್ಮಿಸಿರುವ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಸುಣ್ಣದ ಕಲ್ಲುಗಳಿಂದ ನೈಸರ್ಗಿಕವಾಗಿ ನಿರ್ಮಿತವಾದ ಮೇಘಾಲಯದ ಅರವನ್ ಗುಹೆ ಸಿಗುತ್ತದೆ. ಒಳಗೆ ತಣ್ಣನೆಯ ನೀರಿನ ಜುಳು ಜುಳು ನಿನಾದ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಗುಹೆಯ ಹೊರಭಾಗದಲ್ಲಿ ಆಳವಾದ ಪ್ರಪಾತವಿದೆ. ಅಲ್ಲಿಂದ ಸಪ್ತ ಸೋದರಿಯರ ಜಲಪಾತದತ್ತ ಹೊರಟೆವು. ಪರ್ವತದ ಭಿತ್ತಿಯಲ್ಲಿ ಜಲಪಾತ ಮನೋಹರವಾಗಿ ಕಾಣಿಸುತ್ತಿತ್ತು.

ಅಸ್ಸಾಂನ ತೇಜ್‌ಪುರವನ್ನು ಸಂಪರ್ಕಿಸುವ ಬ್ರಹ್ಮಪುತ್ರ ನದಿಯ ಮೂರು ಕಿಲೊಮೀಟರ್‌ ಉದ್ದದ ಸೇತುವೆ, ನದಿಯ ವಿಸ್ತಾರವು ಬೆರಗುಗೊಳಿಸುತ್ತದೆ. ತೇಜ್‌ಪುರ ಪುರಾಣದ ಶ್ರೀ ಕೃಷ್ಣನ ಮಗ ಅನಿರುದ್ಧ ಹಾಗೂ ಉಷೆಯರ ಪ್ರಣಯ ಹಾಗೂ ವಿವಾಹ ಏರ್ಪಟ್ಟ ನಗರ ಎಂದು ಪುರಾಣಕ್ಕೆ ಥಳುಕು ಹಾಕುತ್ತದೆ. ಬೆಟ್ಟದಲ್ಲಿ ಅವರ ಕಲಾಕೃತಿಗಳನ್ನು ಕಾಣಬಹುದು.

ADVERTISEMENT

ತೇಜ್‌ಪುರದಿಂದ ತವಾಂಗ್ ತಲುಪುವ ಮಾರ್ಗ ಅತ್ಯಂತ ದುರ್ಗಮ. ಎತ್ತರವಾದ ಅಸಂಖ್ಯಾತ ಪರ್ವತಗಳ ಸಾಲು. ಬಸ್ಸು ಹಾವಿನಂತೆ ಸಾಗುವ ಆ ಪರ್ವತಗಳ ರಸ್ತೆಯಲ್ಲಿ ಹತ್ತುವ, ಇಳಿಯುತ್ತಾ ಸಾಗುತ್ತಿತ್ತು. ಈ ಪರ್ವತಗಳ ಮುಂದೆ ನಮ್ಮ ಧರ್ಮಸ್ಥಳದ ಬೆಟ್ಟಸಾಲು ಏನೇನೂ ಅಲ್ಲ. ಮಳೆಗಾಲ ಮುಗಿದಿದ್ದರೂ ಅಲ್ಲಲ್ಲಿ ಎತ್ತರದಿಂದ ಧುಮುಕುವ ಜಲಪಾತಗಳ ಸೊಬಗು. ಕೊರೆಯುವ ಚಳಿ, ಕಿರಿದಾದ ರಸ್ತೆಯಲ್ಲಿ ಸಾಗುವ ವಾಹನ. ಚಾಲಾಕಿಗಳಾದ ಅಲ್ಲಿನ ವಾಹನ ಚಾಲಕರ ಕೌಶಲಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸಿದೆವು.

ಅರುಣಾಚಲ ಪ್ರದೇಶದ ತವಾಂಗ್ ಸಾಂಸ್ಕೃತಿಕ ಹಾಗೂ ರಾಜಕೀಯ, ವಾಣಿಜ್ಯ ದೃಷ್ಟಿಯಿಂದ ಪ್ರಮುಖ ಸ್ಥಳ. ತವಾಂಗ್‌ಗೆ ಪಯಣಿಸುವಾಗ ಮಾರ್ಗಮಧ್ಯೆ ಬೊಂಬಿಲಾ ಮಾರ್ಗದಲ್ಲಿ ಬುದ್ಧ ವಿಹಾರಗಳನ್ನು, ಅಲ್ಲಲ್ಲಿ ಜಲಪಾತಗಳನ್ನು, ಸೈನಿಕ ಶಿಬಿರಗಳನ್ನು ನೋಡುತ್ತಾ ಸಾಗಬಹುದು. ಮಾರ್ಗದಲ್ಲಿ ಸಿಗವುದೇ ಸೈನಿಕ ಜಸ್ವಂತ್ ಸಿಂಗ್ ರಾವತ್‌ನ ಸಮಾಧಿ. ಅವರ ಬಗ್ಗೆ ರೋಚಕ ಕಥೆಗಳನ್ನು ಹೇಳಲಾಗುತ್ತದೆ.

ತವಾಂಗ್‌ನಿಂದ 45 ಕಿಲೊಮೀಟರ್‌ ದೂರದಲ್ಲಿ ಭೂಮ್ ಲಾ ಪಾಸ್ ಇದೆ. ಅದೂ ಸಹ ದುರ್ಗಮ ದಾರಿ. ಮಾರ್ಗಮಧ್ಯೆ ಮಾಧುರಿ ಲೇಕ್ ನೋಡಬಹುದು. ಭೂಮ್ ಲಾ ಪಾಸ್‌ ಸಮುದ್ರ ಮಟ್ಟದಿಂದ 15,200 ಅಡಿ ಎತ್ತರದಲ್ಲಿದೆ. ಅಂದು ಅಲ್ಲಿನ ಹವಾಮಾನ ಮೈನಸ್ ಆರು ಡಿಗ್ರಿ ಇತ್ತು! ನಿಮಿಷ ನಿಮಿಷಕ್ಕೂ ಹವಾಮಾನ ಬದಲಾಗುತ್ತಿತ್ತು. ಕೊರೆಯುವ ಚಳಿಯಿಂದಾಗಿ ಮೈ ನಡುಗುತ್ತಿತ್ತು. ಹವಾಮಾನ ವೈಪರೀತ್ಯದಿಂದ ಗಡಿರೇಖೆಗೆ ನಮ್ಮನ್ನು ಕಳಿಸಲು ಸೈನಿಕರು ತಡ ಮಾಡಿದರು. ಎಷ್ಟೋ ವೇಳೆ ಹವಾಮಾನ ವೈಪರೀತ್ಯದಿಂದ ಅಲ್ಲಿಗೆ ಹೋಗಲು ಅನುಮತಿಯೇ ದೊರೆಯುವುದಿಲ್ಲ.

ಇಲ್ಲಿಗೆ ಭೇಟಿ ನೀಡುವವರು ಶೀತಪ್ರದೇಶಕ್ಕೆ ಹೊಂದುವ ಉಡುಪು ಧರಿಸಿರಬೇಕು. ಇಲ್ಲದಿದ್ದರೆ ಕೊರೆಯುವ ಚಳಿಯಿಂದಾಗಿ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ಸಣ್ಣ ಹಿಮಾಪಾತ ನಿಂತ ಮೇಲೆ ಅಲ್ಲಿಗೆ ಹೋಗಲು ಅನುಮತಿ ದೊರೆಯಿತು. ಸೈನಿಕ ಮುಖ್ಯಸ್ಥರೊಬ್ಬರ ನೇತೃತ್ವದಲ್ಲಿ ಭಾರತ ಮತ್ತು ಚೀನಾ ಗಡಿರೇಖೆ ಸಮೀಪಕ್ಕೆ ಕರೆದೊಯ್ಯುತ್ತಾರೆ. ಗಡಿಯಲ್ಲಿ ಪ್ರವಾಸಿಗರು ಹೇಗೆ ನಡೆದುಕೊಳ್ಳಬೇಕೆಂದು ವಿವರಿದರು. ಅಲ್ಲಿ ಚೀನಾ ಗಡಿರೇಖೆಗೆ ಹೆಜ್ಜೆ ಇಡದಂತೆ ಮೊದಲೇ ಸೂಚಿಸುತ್ತಾರೆ. ಚೀನಾದ ಗಡಿರೇಖೆಯನ್ನು ಸ್ಪರ್ಶಿಸಬೇಕೆಂಬ ಅದಮ್ಯ ಬಯಕೆ ಇದ್ದರೂ ಮುಟ್ಟುವಂತಿಲ್ಲ. ಎರಡು ಕಡೆಯೂ ಕಣ್ಗಾವಲು. ಫೋಟೊ, ಮೊಬೈಲ್ ನಿಷಿದ್ಧ. ಇದೊಂದು ಭಾರತ ಚೀನಾದ ಸೌಹಾರ್ದ ಗಡಿ. ವರ್ಷದಲ್ಲಿ ಐದು ಬಾರಿ ಚೀನಾ ಸೈನ್ಯದ ಉನ್ನತ ಅಧಿಕಾರಿಗಳೊಡನೆ ಭಾರತ ಗಡಿಯಲ್ಲಿ ಹಾಗೂ ನಾಲ್ಕು ಬಾರಿ ಭಾರತ ಸೈನ್ಯದ ಉನ್ನತಾಧಿಕಾರಿಗಳೊಡನೆ ಚೀನಾ ಗಡಿಯಲ್ಲಿ ಸೌಹಾರ್ದ ಸಭೆ ನಡೆಯುತ್ತವೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಇದೊಂದು ವೇದಿಕೆ. ಇದೇ ಅಲ್ಲದೇ ಇಂತಹ ಇನ್ನೂ ನಾಲ್ಕು ಸೌಹಾರ್ದ ಗಡಿಗಳು ಬೇರೆಡೆ ಇವೆ. ಭಾರತ ಸೈನಿಕರು ದೀಪಾವಳಿ, ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಚೀನಾ ಸೈನಿಕರು, ಚೀನಾ ಸೈನಿಕರ ಶುಭ ಸಮಾರಂಭಗಳಿಗೆ ಭಾರತ ಸೈನಿಕರು ಶುಭ ಕೋರುವ ಪದ್ಧತಿ ಇದೆ ಎಂದು ನಮ್ಮ ಸೈನಿಕರು ತಿಳಿಸಿದರು.

ನಮ್ಮ ಮುಂದಿನ ಪಯಣ ಅಸ್ಸಾಂನ ಕಾಜಿರಂಗದ ಕಡೆಗೆ ಇತ್ತು. ಅದೊಂದು ರಾಷ್ಟ್ರೀಯ ಉದ್ಯಾನವನ. ಸಫಾರಿಯಲ್ಲಿ ಕಾಡು ಪ್ರಾಣಿಗಳನ್ನು ನೇರವಾಗಿ ನೋಡುವ ಸದಾವಕಾಶ. ಅಂದು ರಾತ್ರಿ ಅಲ್ಲಿನ ಸಾಂಸ್ಕೃತಿಕ ಸಂಘಟನೆಯೊಂದು ನಡೆಸಿಕೊಟ್ಟ ಗುಡ್ಡಗಾಡಿನ ಸಂಸ್ಕೃತಿಯನ್ನು ಬಿಂಬಿಸುವ ಬಿಹು, ಬಟರ್ ಫ್ಲೈ, ರಾಂಬೊ, ಸ್ಟಿಕ್ ಡಾನ್ಸ್ ಮುಂತಾದ ಅಲ್ಲಿನ ಬುಡಕಟ್ಟು ನೃತ್ಯಗಳು ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸಿದವು.

ಕಾಜಿರಂಗದಿಂದ ಕೊಹಿಮಾ ಕಡೆಗೆ ಪಯಣಿಸುವಾಗ ಮಾರ್ಗದ ಎರಡೂ ಕಡೆ ಕಣ್ಣು ಹಾಯಿಸಿದಷ್ಟೂ ಕಾಣುವ ಟೀ ತೋಟಗಳು, ಮುಂದೆ ಸಮತಟ್ಟಾದ ಭೂಮಿ, ಭತ್ತದ ಗದ್ದೆಗಳು ಭೂಮಿಗೆ ಹಸಿರು ಕಾರ್ಪೆಟ್ ಹೊದಿಸಿದಂತೆ ಕಾಣುತಿದ್ದವು. ಕೊಹಿಮಾ ನಾಗಾಲ್ಯಾಂಡಿನ ರಾಜಧಾನಿ. ಗುಡ್ಡಗಾಡು ಪ್ರದೇಶ. ಅಲ್ಲಿ ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೈನಿಕರಿಂದ ಹತರಾದ ನೂರಾರು ಸೈನಿಕರ ಸಮಾಧಿಗಳನ್ನು ನೋಡಿ ಯುದ್ಧದ ಬಗ್ಗೆ ತಿರಸ್ಕಾರ ಮೂಡಿ ಮೌನಕ್ಕೆ ಶರಣಾದೆವು.

ನಾಗ ಬುಡಕಟ್ಟಿನ ಜನರ ಜೀವನಕ್ರಮವನ್ನು ಬಿಂಬಿಸುವ ಕಿಸಮ ಹೆರಿಟೇಜ್ ಗ್ರಾಮ ಇಲ್ಲಿ ನೋಡಲೇಬೇಕಾದ ಸ್ಥಳ. ಪ್ರತಿ ವರ್ಷ ಡಿಸೆಂಬರ್ ಒಂದರಿಂದ ಹತ್ತು ದಿನ ಈ ಸ್ಥಳದಲ್ಲಿ ಹಾರ್ನ್‌ಬಿಲ್ ಉತ್ಸವ ನಡೆಯುತ್ತದೆ. ಅಲ್ಲಿನ 16 ಬಗೆಯ ಬುಡಕಟ್ಟು ಜನರ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಇದಾಗಿದ್ದು, ನಾಗಾಲ್ಯಾಂಡ್ ನ ಶ್ರೀಮಂತ ಸಂಸ್ಕೃತಿಯನ್ನು ಪುನರಜ್ಜೀವನಗೊಳಿಸಿ ರಕ್ಷಿಸುವ ಗುರಿಯನ್ನು ಈ ಉತ್ಸವ ಹೊಂದಿದೆ.

ಆನಂತರ ಇಲ್ಲಿ ನೋಡಲೇಬೇಕಾದ ಸ್ಥಳ ಎಂದರೆ ಕೊನೋಮಾ ಎಂಬ ಹಳ್ಳಿ. ಅಲ್ಲಿಗೆ ಭೇಟಿ ನೀಡಲು ಹೊರಟಾಗ ಮಾರ್ಗ ಮಧ್ಯೆ ಗುಡ್ಡ ಕುಸಿತ ಉಂಟಾಗಿತ್ತು. ಬಸ್ಸಿನ ಚಾಲಕ ಜಾಣ್ಮೆಯಿಂದ ಆ ಹಳ್ಳಿಗೆ ವಾಹನ ನಡೆಸಿದರು. ಕೊನೋಮಾಕ್ಕೆ ತಲುಪುವ ವೇಳೆಗೆ ಮಳೆ ಅಡ್ಡಿ ಉಂಟು ಮಾಡಿತು. ಹಳ್ಳಿಯ ಹೊರನೋಟವನ್ನಷ್ಟೇ ವೀಕ್ಷಿಸಲು ಸಾಧ್ಯವಾಯಿತು. ಕೊನೋಮಾ, ಸುತ್ತಲೂ ಸುಂದರ ಬೆಟ್ಟಗಳ ಹೂಮಾಲೆ ಧರಿಸಿರುವ ಒಂದು ಸ್ವಚ್ಛ ಗ್ರಾಮ. ಕುವೆಂಪು ಅವರ ಕುಪ್ಪಳಿಯನ್ನು ನೆನಪಿಸುತ್ತದೆ. ಆ ಹಳ್ಳಿಯ ಹೊರನೋಟದ ಸೌಂದರ್ಯದ ಜೊತೆಗೆ ಆ ಗ್ರಾಮದ ಸ್ವಚ್ಛತೆಯನ್ನು ಕಣ್ತುಂಬಿಕೊಂಡು ವಾಪಸ್ಸಾಗುವ ವೇಳೆಗೆ, ಮಾರ್ಗದ ಮಧ್ಯೆ ಮತ್ತೆ ಬೃಹತ್ ಗಾತ್ರದ ಬಂಡೆಯೊಂದು ಕುಸಿದು ಪಯಣಕ್ಕೆ ಅಡ್ಡಿಯಾಯಿತು. ಅಂದು ರಾತ್ರಿಯೇ ನಾವು ಗುವಾಹಟಿಗೆ ವಿಮಾನದಲ್ಲಿ ಪಯಣಿಸಬೇಕಿತ್ತು. ದೊಡ್ಡ ಹಿಟಾಚಿ ಮೂಲಕ ಆ ಬಂಡೆಯನ್ನು ತೆರವುಗೊಳಿಸಿ ದಾರಿಯನ್ನು ಸಂಚಾರಕ್ಕೆ ಸುಗಮಗೊಳಿಸಿದ್ದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು. ಸ್ವಲ್ಪ ಮುಂದೆ ಬಂದರೆ, ಮಳೆಯಿಂದಾಗಿ ಗುಡ್ಡದ ಮಣ್ಣು ರಸ್ತೆಗೆ ಜಾರುತ್ತಾ ಬರುತ್ತಿತ್ತು. ಬಸ್ ಚಾಲಕ ಬುದ್ದಿವಂತಿಕೆಯಿಂದ ವಾಹನ ಚಲಾಯಿಸಿ ಅದರಿಂದಲೂ ನಮ್ಮನ್ನು ಪಾರು ಮಾಡಿದರು. ಒಟ್ಟಾರೆ ದುರ್ಗಮ ಪಯಣ ಸುಖಾಂತ್ಯಗೊಂಡು ನೆಮ್ಮದಿ ತಂದಿತು.

ಈ ಸ್ಥಳಗಳಿಗೆ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಪ್ರವಾಸಿಗರು ಹೋಗುವುದು ಸೂಕ್ತ. ಹೋಗುವ ಮುನ್ನ ಹವಾಮಾನ ಇಲಾಖೆಯ ಸಲಹೆಯನ್ನು ಗಮನಿಸುವುದು ಮುಖ್ಯ. ಗಲಭೆಯ ಕಾರಣದಿಂದ ಮಣಿಪುರವನ್ನು ನೋಡಲಾಗಲಿಲ್ಲ ಎನ್ನುವ ಕೊರತೆ ಕಾಡುತ್ತಿದೆ.

ನಾಗಾಲ್ಯಾಂಡ್‌ನ ಕೊಹಿಮಾದಲ್ಲಿರುವ ಸೈನಿಕರ ಸಮಾಧಿ ಸ್ಥಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.