ADVERTISEMENT

ಪ್ರವಾಸ: ಝಕಿಂತೋಸ್ ದ್ವೀಪದ ನೀಲಿ ಕಡಲು!

ಅತ್ತಿಹಳ್ಳಿ ದೇವರಾಜ್ ಹಾಸನ
Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಕಣ್ಣು ಹಾಯಿಸಿದಷ್ಟು ನೀಲಿ ಸಮುದ್ರ. ಇದು ಝಕಿಂತೋಸ್‌ ಶಿಪ್‌ರೆಕ್‌ ಬೀಚ್‌ನ ನೋಟ.
ಕಣ್ಣು ಹಾಯಿಸಿದಷ್ಟು ನೀಲಿ ಸಮುದ್ರ. ಇದು ಝಕಿಂತೋಸ್‌ ಶಿಪ್‌ರೆಕ್‌ ಬೀಚ್‌ನ ನೋಟ.   

ಗ್ರೀಸ್‌ ದೇಶದ ಝಕಿಂತೋಸ್‌ ದ್ವೀಪ ಮತ್ತು ನೀಲಿ ಸಮುದ್ರದ ಸೌಂದರ್ಯ ಸಿರಿಗೆ ಮನಸೋಲದ ಪ್ರವಾಸಿಗರೇ ಇಲ್ಲ. ಅಲ್ಲಿ ಅಂಥದ್ದು ಏನಿದೆ?

***

ಗ್ರೀಸ್, ದ್ವೀಪಗಳ ಸಮೂಹ ದೇಶ. ನಾವು ಇತ್ತೀಚೆಗೆ ಆ ದೇಶದ ‘ಝುಕಿಂತೋಸ್’ ದ್ವೀಪವನ್ನು ನೋಡಲು ಹೋಗಿದ್ದೆವು. ಅಲ್ಲಿ ಅನೇಕ ಸುಂದರವಾದ ಬೀಚ್‌ಗಳಿವೆ. ಎಲ್ಲಾ ಬೀಚ್‌ಗಳಲ್ಲೂ ನಮ್ಮ ದೇಶದಂತೆಯೇ ವಾಟರ್ ಸ್ಪೋರ್ಟ್ಸ್, ಪ್ಯಾರಾ ಸೈಲಿಂಗ್, ಜೆಟ್ ಸ್ಕೀ, ಬನಾನ ಬೋಟ್ ರೈಡ್, ಬಂಪಿಂಗ್ ಬೋಟ್ ರೈಡ್, ವಾಟರ್ ಸ್ಕೂಟರ್ ರೈಡ್‌ಗಳಿವೆ. ಆದರೆ ಈ ಬೀಚ್‌ಗಳ ವಿಶೇಷವೆಂದರೆ ನಾವು ಸುಮಾರು 200 ರಿಂದ 300 ಮೀಟರ್ ದೂರದವರೆಗೆ ನೀರಿನಲ್ಲಿ ನಡೆದುಕೊಂಡು ಹೋಗಬಹುದು. ಅಲ್ಲಿ ಅಲೆಗಳ ಅಬ್ಬರವಿಲ್ಲ. ಅದೊಂದು ಪ್ರಶಾಂತ ಸಮುದ್ರ. ಹಾಗಾಗಿ ಮುಳುಗುವ ಭಯವಿಲ್ಲದೇ ಈಜು ಬಾರದಿದ್ದವರೂ ನೀರಿನೊಳಗೆ ಇಳಿದು ಸಾವಕಾಶವಾಗಿ ಆಟವಾಡಬಹುದು. ಸಣ್ಣ ಸಣ್ಣ ಮೀನುಗಳ ದಂಡು ಮಕ್ಕಳನ್ನು ಪುಳಕಗೊಳಿಸುತ್ತದೆ.

ADVERTISEMENT

‘ಝಕಿಂತೋಸ್’ನ ನವೋಜಿಯ ಬೀಚ್‌ನ ‘ಶಿಪ್ ಬ್ರೇಕ್ ನೀಲಿ ಸಮುದ್ರ’ ಪ್ರದೇಶವನ್ನು ನೋಡಬೇಕೆಂಬ ಹಂಬಲ ನಮ್ಮದಾಗಿತ್ತು. ನಾವು ಅಲ್ಲಿಗೆ ಹೋದಾಗ ಹತ್ತಾರು ಚಿಕ್ಕ, ಚಿಕ್ಕ ಹಡಗುಗಳು ಒಂದಾದ ನಂತರ ಒಂದರಂತೆ ಕೆಲ ಸಮಯ ಬಿಟ್ಟು, ಬಿಟ್ಟು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು. ನಮ್ಮ ಸರದಿ ಬಂದಾಗ ನಾವು ಬೇರೆ, ಬೇರೆ ದೇಶಗಳ 20 ಪ್ರವಾಸಿಗರೊಡನೆ  ಹೋದೆವು. ಎಲ್ಲರಿಗೂ ಕಡ್ಡಾಯವಾಗಿ ಲೈಫ್ ಜಾಕೆಟ್ ಹಾಕಿಸಿದರು. ಶಾಂತ ಸಾಗರದಲ್ಲಿ ಸುಮಾರು ಒಂದು ಗಂಟೆ ಪ್ರಯಾಣ. ನಮ್ಮ ಹಡಗು ರೇಸ್ ಕಾರಿನಂತೆ ಬಲು ವೇಗವಾಗಿ ಚಲಿಸುತ್ತಿತ್ತು. ಈ ಸಮುದ್ರದ ಅಂಚಿನಲ್ಲಿ ಅಲ್ಲಲ್ಲಿ ಸಿಗುವ ಗುಹೆಗಳು ನಮ್ಮನ್ನು ಅಚ್ಚರಿಗೆ ದೂಡಿದವು.

ನಮ್ಮ ಹಡಗು ಸಾಗಿ ‘ಶಿಪ್‌ ರೆಕ್’ ಸ್ಥಳಕ್ಕೆ ಹೋದಾಗ ಎಲ್ಲರು ಒಂದೇ ಸಲಕ್ಕೆ ‘ವಾವ್’ ಎಂದು ವಿಸ್ಮಯ ಭರಿತ ಉದ್ಗಾರ ತೆಗೆದರು. ಆ ನೋಟ ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ನಿಜಕ್ಕೂ ಅದೊಂದು ಅದ್ಭುತ ದೃಶ್ಯ, ಆನಂದದ ಕ್ಷಣ. ಕಾರಣ ಅದೇ ಸಮುದ್ರದ ಇತರ ಭಾಗಕ್ಕಿಂತ ಆ ಭಾಗವು ಸಂಪೂರ್ಣ ನೀಲಿ ಬಣ್ಣದಿಂದ ಕೂಡಿತ್ತು. ನೀರಿನ ಬಣ್ಣ ಸಾಮಾನ್ಯವಾಗಿದ್ದರೂ, ಸಮುದ್ರದ ಈ ಭಾಗ ಸುಮಾರು ನೂರು ಎಕರೆ ಪ್ರದೇಶ ಕಡು ನೀಲಿಯಾಗಿ  ಕಾಣುತ್ತದೆ. ಈ ಅನುಭವ ಬೇರೆ ಯಾವ ಸಮುದ್ರದಲ್ಲಿಯೂ ನಮಗೆ ಆಗಿರಲಿಲ್ಲ. ಅಲ್ಲಿ ಸಮುದ್ರವು ಆಳವಾಗಿದ್ದರೂ ಕೂಡ ನಮ್ಮ ಹಡಗಿನಲ್ಲಿ ಇದ್ದ ಈಜು ಬರುತ್ತಿದ್ದ ಎಲ್ಲರೂ ನೀರಿಗೆ ಹಾರಿಯೇ ಬಿಟ್ಟರು! ಈಜು ಬಾರದಿದ್ದವರು ಹಡಗಿನಲ್ಲಿಯೇ ಕುಳಿತು ಆ ನೀಲಿ ಸಮುದ್ರದ ಸಿರಿಯನ್ನು ನೋಡಿ ಆನಂದಿಸಿದರು. ಸಮುದ್ರ ದಂಡೆಯಲ್ಲಿ ಹಾಳಾದ ಹಡಗೊಂದರ ಅವಶೇಷವನ್ನು ಹಾಗೆಯೇ ಉಳಿಸಿದ್ದಾರೆ. ಆದ್ದರಿಂದ ಆ ಪ್ರದೇಶಕ್ಕೆ ‘ಶಿಪ್ ರೆಕ್ ಬ್ಲೂ ಸಿ’ ಎಂದು ಕರೆಯಲಾಗುತ್ತದೆ. ಸುಮಾರು ಒಂದು ಗಂಟೆ ಮಾತ್ರ ಅಲ್ಲಿದ್ದೆವು. ತಕ್ಷಣಕ್ಕೆ ವಾಪಸ್ ಬರಲು ಮನಸ್ಸು ಒಪ್ಪದಿದ್ದರೂ, ಬೇರೆ ಪ್ರವಾಸಿಗರಿಗೆ ಅನುವು ಮಾಡಿಕೊಡಲು ಅಲ್ಲಿಂದ ಹೊರಟೆವು.

ನಾವು ತಿರುಗಿ ಬರುವಾಗ ಅಲ್ಲಿನ ಗುಹೆಗಳ ಬಳಿ ಕರೆದುಕೊಂಡು ಹೋದರು. ಅವು ತುಂಬಾ ಸುಂದರವಾಗಿವೆ. ಗುಹೆಗಳ ಒಳಗೆ ಹೋಗಲು ಬಿಡುವುದಿಲ್ಲವಾದರೂ, ಈ ಚಿಕ್ಕ ಹಡಗುಗಳು ಸ್ವಲ್ಪ ದೂರ ಒಳಗೆ ಹೋಗಿ ವಾಪಸು ಬರುತ್ತವೆ. ಅಲೆಗಳು ಹೆಚ್ಚಾಗಿ ಇಲ್ಲದಿದ್ದರೂ ಈ ಪ್ರದೇಶದಲ್ಲಿ ಆ ಗುಹೆಗಳು ಹೇಗೆ ನಿರ್ಮಾಣವಾದವು ಎಂಬ ಪ್ರಶ್ನೆ ನಮ್ಮನ್ನ ಕಾಡುತ್ತಿತ್ತು. ಯಾವುದೋ ಕಾಲದಲ್ಲಿ ಸುನಾಮಿ ಅಪ್ಪಳಿಸಿ ಈ ಗುಹೆಗಳು ನಿರ್ಮಾಣವಾಗಿರಬಹುದೆಂದು ಅಭಿಪ್ರಾಯಕ್ಕೆ ಬಂದೆವು. ವಿಶೇಷವಾಗಿ ಈ ಸಮುದ್ರದ ನೋಟವೇ ನಯನ ಮನೋಹರವಾಗಿತ್ತು. ನೀಲಿ ಬಣ್ಣದ ಸಮುದ್ರವಂತೂ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿತು. ನಮ್ಮ ‘ಝಕಿಂತೋಸ್’ ಪ್ರವಾಸ ಸಾರ್ಥಕವಾಗಿತ್ತು. ‘ಬ್ಲೂ ಲಗೂನ್’ ಇಂಗ್ಲಿಷ್ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರ ಬಂದಂತಿತ್ತು ಆ ಕ್ಷಣ. ಹೀಗಾಗಿ ‘ಝಕಿಂತೋಸ್’ ಪ್ರವಾಸ ಮರೆಯಲಾಗದ ಒಂದು ಸುಂದರ ಸಮುದ್ರದ ಅನುಭವ.

‘ಝುಕಿಂತೋಸ್’ನಿಂದ ವಾಪಸ್ ಬರುವ ಹೊತ್ತಿಗೆ ಸರಿಯಾಗಿ ಗ್ರೀಸ್‌ನ ಇನ್ನೊಂದು ದ್ವೀಪದಲ್ಲಿ ಕಾಡ್ಗಿಚ್ಚಿನಿಂದಾಗಿ ಇಡೀ ದ್ವೀಪವೇ ಹೊತ್ತಿ ಉರಿದ ಸುದ್ದಿ ಕೇಳಿ ಬೇಸರವೂ ಆಯಿತು.

ದೈತ್ಯ ಆಮೆಗಳು!

‘ಝಕಿಂತೋಸ್’ನ ಸಮುದ್ರ ದಂಡೆಯೊಂದರಲ್ಲಿ ಭಾರಿ ಗಾತ್ರ, ದೊಡ್ಡ ತಲೆಯ ಸಾವಿರಾರು ಕಡಲಾಮೆಗಳು ಬಂದು ರಾತ್ರಿ ಹೊತ್ತಿನಲ್ಲಿ ಮೊಟ್ಟೆ ಇಡುತ್ತವೆ. ಇವುಗಳು ಸುತ್ತಮುತ್ತಲ ಪ್ರದೇಶವಲ್ಲದೆ, ನೂರಾರು ಮೈಲಿಗಳ ದೂರದ ಬೇರೆ ದೇಶಗಳಿಂದಲೂ ಬಂದು ಇಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿಸಿಕೊಂಡು ಹೋಗುತ್ತವೆ. ಅವು ವರ್ಷದ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಇಲ್ಲಿಗೆ ಬರುತ್ತವೆ. ವಿಶೇಷವೆಂದರೆ ಇವು 80 ಕೆ.ಜಿ. ಇಂದ 200 ಕೆ.ಜಿ.ವರೆಗೆ ತೂಗುವ ದೈತ್ಯ ಆಮೆಗಳು.

ಇವುಗಳ ರಕ್ಷಣೆಗಾಗಿ ‘ಝಕಿಂತೋಸ್ ಮೆರಿನ್ ಪಾರ್ಕ್’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಇಲ್ಲಿ ಆಮೆಗಳಿಗಾಗಿಯೇ ಸುಂದರ ಮ್ಯೂಸಿಯಂ ಇದೆ. ಪ್ರವೇಶ ಉಚಿತ. ಅಲ್ಲಿನ ಸರ್ಕಾರ ಮತ್ತು ಪರಿಸರವಾದಿಗಳು, ಮೊಟ್ಟೆ ಇಡಲು ಬರುವ ಕಡಲಾಮೆಗಳಿಗೆ ಯಾವುದೇ ಹಾನಿಯಾಗದಂತೆ ನಿಯಮ ರೂಪಿಸಿ ಅವುಗಳ ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಆಮೆಗಳನ್ನು ನೋಡಲು ಬರುವ ಪ್ರವಾಸಿಗರು ಅವುಗಳಿಗೆ ಹಾನಿ ಮಾಡದಂತೆ ಜಾಗೃತಿಯನ್ನೂ ಮೂಡಿಸುತ್ತಾರೆ. ಇಲ್ಲಿ ಆಮೆಗಳ ಸವಾರಿಯನ್ನು ಮಾಡುತ್ತಾರೆಂದು ಹೇಳಿದರಾದರೂ ನಾವು ಆ ಪ್ರಯತ್ನ ಮಾಡಲಿಲ್ಲ.

ಝಕಿಂತೋಸ್‌ನ ಶಿಪ್‌ರೆಕ್‌ ಬೀಚ್‌ಗೆ ಹಡಗುಗಳಲ್ಲಿ ಬಂದ ಪ್ರವಾಸಿಗರ ದಂಡು...
ಝಕಿಂತೋಸ್‌ ನಗರದ ಬಂದರು ಒಂದರ ಬಳಿ ಕಂಡುಬಂದ ಹಡಗು
ದೈತ್ಯ ಆಮೆಗಳ ಪಾರ್ಕ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.