ಕಣ್ಣಾಯಿಸಿದಷ್ಟೂ ದೂರ ಕನ್ನಂಬಾಡಿಕಟ್ಟೆಯ ಹಿನ್ನೀರು. ಪ್ರಶಾಂತವಾದ ವಾತಾವರಣ. ಆಲದ ಮರದ ನೆರಳು. ನದಿಯ ಜುಳು-ಜುಳು ನಾದ. ಮಂತ್ರ ಮುಗ್ದಗೊಳಿಸುವ ಹಿನ್ನೀರಿನ ಸೊಬಗು. ನಾಗರಿಕ ಪ್ರಪಂಚದಿಂದ ನಿಮ್ಮನ್ನು ಏಕಾಂತದ ಅನುಭವಕ್ಕೆ ಕೊಂಡೊಯ್ಯುವ ತಾಣ!
ಇದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ–ಸಂಗಾಪುರ –ಪುರ ಗ್ರಾಮಗಳ ಸಮೀಪವಿರುವ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಪವಿತ್ರ ತ್ರಿವೇಣಿ ಸಂಗಮ ತಾಣದ ದೃಶ್ಯಕಾವ್ಯ.
‘ಸಂಗಮ’ ಎಂದಾಗಲೆಲ್ಲಾ ನೆನಪಾಗುವುದು ಎರಡು ಜೀವಂತ ನದಿಗಳು, ಇನ್ನೊಂದು ಗುಪ್ತಗಾಮಿನಿಯಾಗುವ ನದಿಯೊಂದಿಗೆ ಕೂಡಿ ಮುಂದಕ್ಕೆ ಹರಿಯುವ ಜಾಗ. ಆದರೆ, ಇಲ್ಲಿ ಮೂರು ನದಿಗಳು ಸಂಗಮವಾಗುವುದನ್ನು ನೋಡಬಹುದು. ಕೊಡಗಿನಿಂದ ತಲಕಾವೇರಿ, ಚಿಕ್ಕಮಗಳೂರಿನ ಬಲ್ಲಾಳದುರ್ಗದಲ್ಲಿ ಹುಟ್ಟುವ ಹೇಮಾವತಿ ಹಾಗೂ ಹುಣಸೂರಿನ ಕಡೆಯಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಗಳು ಇಲ್ಲಿ ಸಂಗಮವಾಗುತ್ತವೆ. ಅದಕ್ಕೆ ಇದನ್ನು ಮೂರು ಜೀವ ನದಿಗಳ ಸಂಗಮ ಎನ್ನುತ್ತಾರೆ. ಸಂಗಮವಾಗುವ ಮೂರು ನದಿಗಳನ್ನು ಕಣ್ಣಾರೆ ಕಾಣುವುದೇ ಇಲ್ಲಿನ ವೈಶಿಷ್ಟ್ಯ!
ಪ್ರತಿವರ್ಷ ನಡೆಯುವ ಗ್ರಾಮದೇವತೆಗಳ ಹಬ್ಬ-ಜಾತ್ರೆ- ಉತ್ಸವಗಳ ಮುನ್ನ ದೇವರ ಉತ್ಸವಮೂರ್ತಿಗಳನ್ನು ಇದೇ ಸಂಗಮದಲ್ಲೇ ಶುಚಿಗೊಳಿಸಿದ ನಂತರವೇ ಉತ್ಸವ ಆರಂಭಿಸುತ್ತಾರೆ. ಇದು ವಾಡಿಕೆ. ಈ ಸಂಗಮದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇದು ಪುರಾತನದಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ.
ಸಂಗಮದ ಹಿನ್ನಲೆ
ಈ ಪವಿತ್ರ ಕ್ಷೇತ್ರವು ಕನ್ನಂಬಾಡಿಕಟ್ಟೆಯು ನಿರ್ಮಾಣವಾಗುವುದಕ್ಕೆ ಮುನ್ನ ತಿಪ್ಪೂರು ಬಳಿಯ ಸಾತಿ ಎಂಬ ಗ್ರಾಮದಲ್ಲಿತ್ತು. ಕನ್ನಂಬಾಡಿ ಕಟ್ಟೆಯ ನಿರ್ಮಾಣದ ನಂತರ ಈ ಸ್ಥಳ ಮುಳುಗಡೆಯಾಯಿತು. ಹಾಗಾಗಿ ಇಲ್ಲಿ ಆ ಕಾಲದಲ್ಲಿಯೇ ಸಂಗಮೇಶ್ವರ ದೇವಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಕನ್ನಂಬಾಡಿಕಟ್ಟೆ ನಿರ್ಮಾಣವಾದ ನಂತರ ಸಾತಿ ಗ್ರಾಮ ಮುಳುಗಡೆಯಾಯಿತು. ಅಲ್ಲಿಯೇ ಇದ್ದ ಅಂಬಿಗರಹಳ್ಳಿ ಗ್ರಾಮವು ಮುಳುಗಡೆಯಾಗಿ ಇಲ್ಲಿದ್ದ ಜನರು ಹೊಸ ಅಂಬಿಗರಹಳ್ಳಿ, ಸಂಗಾಪುರ ಮತ್ತು ಪುರ ಗ್ರಾಮಗಳಲ್ಲಿ ನೆಲೆಸಿದರೆಂದು ಇತಿಹಾಸ ಹೇಳುತ್ತದೆ.
ಇದನ್ನೂ ಓದಿ: ಶತಮಾನ ಕಂಡ ಕನ್ನಂಬಾಡಿ ಕಟ್ಟೆ
ವಚನ ಕ್ರಾಂತಿಯ ಸಮಯದಲ್ಲಿ ಬಸವಣ್ಣನವರ ಅನುಯಾಯಿ ಯಾಗಿದ್ದ ಮಹದೇಶ್ವರರು ಉತ್ತರದಿಂದ ದಕ್ಷಿಣಕ್ಕೆ ಬಂದರು. ಹಾಗೆ ಬಂದವರು ಇಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಲು ಅಂಬಿಗರ ಸಹಾಯ ಕೇಳಿದರು. ಇವರ ವೇಷ ಭೂಷಣ ಕಂಡ ಅಂಬಿಗರು ದಡ ದಾಟಿಸಲು ಹಣ ಕೇಳಿದರು. ಇವರನ್ನು, ದಿಕ್ಕಿಲ್ಲದವರು ಎಂದು ತಿಳಿದು, ಮಹದೇಶ್ವರರ ಕೋರಿಕೆಯನ್ನು ನಿರ್ಲಕ್ಷ್ಯಿಸಿದರು.
ಆಗ ಸಂಗಮೇಶ್ವರರನ್ನು ಧ್ಯಾನಿಸಿದ ಯತಿಗಳು ತಮ್ಮ ಮೇಲಿದ್ದ ಕಷಾಯದ (ಕಾವಿ) ಬಟ್ಟೆಯನ್ನು ನದಿ ಮೇಲೆ ಎಸೆದು ಅದರ ಮೇಲೆ ನಡೆಯುತ್ತಾ, ನದಿ ದಾಟಿ ಮುಂದೆ ಸಾಗಿದರು. ಅದೇ ರೀತಿ ಉತ್ತರದಿಂದ ಬಂದ ಸ್ವತಂತ್ರ ಸಿದ್ದಲಿಂಗೇಶ್ವರರು ಕೂಡ ಇಲ್ಲಿ ಇಂಥದ್ದೇ ಪವಾಡಗಳನ್ನು ಮಾಡಿ ಹೋಗಿದ್ದಾರೆ. ನಂತರ ಗಜರಾಜನಗಿರಿಯಲ್ಲಿ ನೆಲೆಸಿ ಕಾವ್ಯಗಳನ್ನು ಬರೆದಿದ್ದಾರೆ.
ಇಲ್ಲಿ ಮಹದೇಶ್ವರರ ಹಾಗೂ ಸಿದ್ದಲಿಂಗೇಶ್ವರರ ದೇವಸ್ಥಾನಗಳಿದ್ದು ಸ್ಥಳೀಯರು ಪ್ರತಿವರ್ಷ ಪೂಜಿಸುತ್ತಾರೆ. ‘ಇವತ್ತಿಗೂ ಮಲೈಮಹದೇಶ್ವರರ ಜಯಂತಿಯಂದು ಇಲ್ಲಿಂದಲೇ ಮಹದೇಶ್ವರ ಬೆಟ್ಟಕ್ಕೆ ಜ್ಯೋತಿಯನ್ನು ಕೊಂಡೊಯ್ಯುವ ಸಂಪ್ರದಾಯ ಇದೆ’ ಎನ್ನುತ್ತಾರೆ ಸ್ಥಳೀಯ ಶಿಕ್ಷಕ ಅಂ.ಚಿ.ಸಣ್ಣಸ್ವಾಮೀಗೌಡ.
ಈ ಸ್ಥಳ ಪ್ರಾಚೀನವಾದ ಶ್ರೀಕ್ಷೇತ್ರವಾಗಿದ್ದು ಇಲ್ಲಿನ ಸಂಗಮೇಶ್ವರ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳು ಶಿಥಿಲವಾಗಿದ್ದು ಅವುಗಳ ಪುನರ್ ನಿರ್ಮಾಣ ಕಾರ್ಯವನ್ನು ದಾನಿಗಳ ನೆರವಿನಿಂದ ಮಾಡಲಾಗುತ್ತಿದೆ. 2013 ರಲ್ಲಿ ನಡೆದ ಕುಂಭಮೇಳದ ನೆನಪಿಗಾಗಿ ಕೆ.ಆರ್.ಪೇಟೆ ತಾಲ್ಲೂಕು ಮತ್ತು ಕೆ.ಆರ್.ನಗರ ತಾಲ್ಲೂಕನ್ನು ಮೈಸೂರಿಗೆ ಸಂಪರ್ಕಿಸುವ 60 ಕೋಟಿ ವೆಚ್ಚದ ಹೊಸಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು ರಸ್ತೆ ನಿರ್ಮಾಣದ ಕಾರ್ಯ ನಡೆದರೆ ಇಲ್ಲಿನ ಚಿತ್ರಣವೇ ಸಂಪೂರ್ಣ
ಬದಲಾಗಲಿದೆ.
ಇಷ್ಟೆಲ್ಲ ಐತಿಹ್ಯವಿರುವ, ಸುಂದರ ಪ್ರವಾಸಿ ತಾಣ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಈ ಜಾಗ ತಲುಪಲು ಉತ್ತಮ ರಸ್ತೆಗಳಿಲ್ಲ. ವಾಹನ ಸೌಕರ್ಯವಿಲ್ಲ. ಉತ್ತಮ ಪ್ರವಾಸಿ ತಾಣವನ್ನಾಗಿಸುವ ಎಲ್ಲಾ ಅವಕಾಶಗಳು ಇಲ್ಲಿದ್ದರೂ ಯಾರೂ ಗಮನಹರಿಸುತ್ತಿಲ್ಲ.
ಹೋಗುವುದು ಹೇಗೆ?
ತ್ರಿವೇಣಿ ಸಂಗಮ ಸ್ಥಳ ಮಂಡ್ಯ ಜಿಲ್ಲೆಕೆ.ಆರ್.ಪೇಟೆ ತಾಲ್ಲೂಕಿನ ಗಡಿ ಅಂಚಿನಲ್ಲಿದೆ. ಕೆ.ಆರ್.ಪೇಟೆಯಿಂದ 30 ಕಿ.ಮೀ, ಕೆ.ಆರ್.ನಗರದಿಂದ 15 ಕಿ.ಮೀ, ಮಂಡ್ಯದಿಂದ 55 ಕಿ.ಮೀ ದೂರವಿದೆ.ಮೈಸೂರಿನಿಂದ ಬರುವವರು ಕೆ.ಆರ್.ನಗರ ಮಾರ್ಗವಾಗಿ, ಇಲ್ಲವೇ ಕೆ.ಆರ್.ಸಾಗರ ಮಾರ್ಗವಾಗಿ ಬಂದು ಬಲ್ಲೇನಹಳ್ಳಿರಸ್ತೆಯಲ್ಲಿ ಸೋಮನಹಳ್ಳಿಗೆ ಬಂದು ಹೋಗಬಹುದು.ಇಲ್ಲಿಂದ ದೋಣಿಯಲ್ಲಿ ಹೋದರೆ ಕೇವಲ 3 ಕಿ.ಮೀ ಕ್ರಮಿಸಿದರೆ ಪ್ರಸಿದ್ಧ ಭೂವರಹನಾಥ ದೇವಾಲಯವನ್ನೂ ನೋಡಿಬರಬಹುದು.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.