ADVERTISEMENT

ವಾರ್ ಮ್ಯೂಸಿಯಂ

ವಿ.ವಿಜಯೇಂದ್ರ ರಾವ್
Published 27 ಫೆಬ್ರುವರಿ 2019, 19:45 IST
Last Updated 27 ಫೆಬ್ರುವರಿ 2019, 19:45 IST
   

ಗುಜರಾತ್‌ – ರಾಜಸ್ಥಾನ ಪ್ರವಾಸವೆಂದರೆ, ಒಂದು ರೀತಿ ರಾಜ ಮನೆತನಗಳು ಆಳಿದ ಕೋಟೆ ಕೊತ್ತಲಗಳನ್ನು ನೋಡುವುದು. ಮಹೋನ್ನತ ಶಿಲ್ಪ ಸೌಂದರ್ಯದ ದೇವಾಲಯಗಳಿಗೆ ಭೇಟಿ ನೀಡುವುದು. ಅಲ್ಲಿನ ವಿಶಿಷ್ಟ ಸಾಂಪ್ರದಾಯಿಕ ಉಡುಗೆ ತೊಟ್ಟು ಖುಷಿಪಡುವುದು. ಇತ್ತೀಚೆಗೆ ರಾಜ್ಯಗಳಿಗೆ ಪ್ರವಾಸ ಹೋಗಿದ್ದಾಗ ನಾವು ಹೀಗೆ ಮಾಡಿದೆವು. ಅದರ ಜತೆಗೆ, ರಾಜಸ್ಥಾನದ ಜೈಸಲ್ಮೇರ್‌ನಿಂದ ಹತ್ತು ಕಿ.ಮೀ ದೂರದಲ್ಲಿರುವ ‘ವಾರ್‌ ಮ್ಯೂಸಿಯಂ’ಗೆ ಭೇಟಿ ನೀಡಿದೆವು. ಈ ಮ್ಯೂಸಿಯಂ ನಮ್ಮ ಪ್ರವಾಸದ ಪಟ್ಟಿಯಲ್ಲಿರಲಿಲ್ಲ. ಆದರೆ, ಮ್ಯೂಸಿಯಂ ಬಗ್ಗೆ ಮಾಹಿತಿ ತಿಳಿದ ನಂತರ ಆ ಸ್ಥಳವನ್ನು ಪಟ್ಟಿಗೆ ಸೇರಿಸಿಕೊಂಡೆವು.

ಜೈಸಲ್ಮೇರ್ ನಗರದಿಂದ ಜೈಸಲ್ಮೇರ್– ಜೋಧಪುರ ರಸ್ತೆಯಲ್ಲಿ 10 ಕಿ.ಮೀ ಕ್ರಮಿಸಿದರೆ ಈ ಮ್ಯೂಸಿಯಂ ಸಿಗುತ್ತದೆ. ದೂರದಿಂದಲೇ ವಿಶಾಲವಾದ ಬಯಲಿನಲ್ಲಿ ಯುದ್ಧದ ಟ್ಯಾಂಕರ್‌ಗಳನ್ನು ನಿಲ್ಲಿಸಿರುವುದು ಕಾಣುತ್ತದೆ. ಹತ್ತಿರಕ್ಕೆ ಹೋದರೆ, ದೊಡ್ಡದಾಗಿ ವಾರ್‌ ಮ್ಯೂಸಿಯಂ ಎಂಬ ಫಲಕದ ದ್ವಾರ ನಿಮ್ಮನ್ನು ಸ್ವಾಗತಿಸುತ್ತದೆ.

24 ಆಗಸ್ಟ್ 2015ರಲ್ಲಿ ಈ ‘ವಾರ್ ಮ್ಯೂಸಿಯಂ’ ಆರಂಭವಾಗಿದೆ. ಈ ಸಂಗ್ರಹಾಲಯವನ್ನು ನಾಡಿನ ವೀರ ಯೋಧರಿಗೆ ಅರ್ಪಿಸಲಾಗಿದೆ. ಇಲ್ಲಿ, ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಹಾಗೂ ದೇಶ ರಕ್ಷಿಸುತ್ತಿರುವ ವೀರ ಯೋಧರ ಸಾಹಸಗಾಥೆಯನ್ನು ವಿವರಿಸುವ ಅನೇಕ ವಸ್ತುಗಳಿವೆ. 1965 ಮತ್ತು 1974ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ವಶಪಡಿಸಿಕೊಂಡ ಯುದ್ಧ ಟ್ಯಾಂಕರ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ADVERTISEMENT

ಎರಡು ದೊಡ್ಡ ಹಾಲ್‌ಗಳಿವೆ. ಲೋಂಗೆವಾಲ ಹಾಲ್ ಮತ್ತು ಇಂಡಿಯನ್ ಆರ್ಮಿ ಹಾಲ್. ಒಂದರಲ್ಲಿ ಆಡಿಯೊ ವಿಶ್ಯುಯಲ್ ಕೊಠಡಿ ಇದೆ. ಅಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಾರೆ. ಮಹಾವೀರಚಕ್ರ ಪುರಸ್ಕೃತ ಮೇಜರ್ ಕುಲದೀಪ್ ಸಿಂಗ್ ಚಾಂದಪುರಿ ಅವರ ಸಂದರ್ಶನ ಪ್ರಸಾರವಾಗುತ್ತದೆ. ಲೋಂಗೆವಾಲ ಯುದ್ಧದ ಮುಖ್ಯಾಂಶಗಳನ್ನು ಅವರು ವಿವರಿಸುತ್ತಾರೆ.

ಒಳಗೆ ದೊಡ್ಡ ಹಾಲ್‌ನಲ್ಲಿ 1962ರ ಚೀನಾ ಯುದ್ಧ, ಪಾಕಿಸ್ತಾನದ ವಿರುದ್ಧ ನಡೆದ ಯುದ್ಧ ಸಂದರ್ಭಗಳಲ್ಲಿ ಹೇಗೆ ಆಕ್ರಮಣ ಮಾಡಿತು, ಆಗ ಇದ್ದ ಸೇನಾ ಮುಖ್ಯಸ್ಥರು ವಶಪಡಿಸಿಕೊಂಡ ಆಯುಧ, ಜಾಗ, ಯುದ್ಧ ಕೈದಿಗಳು, ನಮ್ಮ ಮುಖ್ಯ ಶಸ್ತ್ರಾಸ್ತ್ರ, ವಾಯುಪಡೆಯ ವಿಮಾನಗಳು, ಯೋಧರು ಕಾಲಕ್ಕೆ ತಕ್ಕಂತೆ ಧರಿಸಲೇಬೇಕಾಗಿದ್ದ ಅವರ ಯೂನಿಫಾರಂಗಳನ್ನು ಗಾಜಿನ ಕಪಾಟುಗಳಲ್ಲಿ ಜೋಡಿಸಿಟ್ಟಿದ್ದಾರೆ. ಕಾರ್ಗಿಲ್ ಯುದ್ಧ, ಸಿಯಾಚಿನ್ ಕಣಿವೆಯ ಬವಣೆ, ಯೋಧರ ಕಠಿಣ ತರಬೇತಿ ವೈಖರಿ ಇತ್ಯಾದಿಗಳನ್ನು ಬಣ್ಣಿಸುವ 10 ನಿಮಿಷಗಳ ಸಾಕ್ಷ್ಯಚಿತ್ರವನ್ನು ಸಹ ಪ್ರದರ್ಶಿಸಿದರು.

ವಾರ್ ಮೆಮೋರಿಯಲ್ ಸವನಿಯರ್ ಅಂಗಡಿಯೂ ಇದೆ. ಅದು ಲಾಭವಿಲ್ಲದೆ ನಡೆಯುವ ಸಂಸ್ಥೆ. ಈ ಅಂಗಡಿಯಲ್ಲಿ ದೊರೆಯುವ ಹಣವನ್ನು ವೀರಯೋಧರ ಕಲ್ಯಾಣಕ್ಕಾಗಿ ಬಳಕೆಯಾಗುತ್ತದೆ. ಹೀಗಾಗಿ, ನಾವು ಸ್ವಲ್ಪ ಹೆಚ್ಚಾಗಿಯೇ ವಸ್ತುಗಳನ್ನು ಖರೀದಿ ಮಾಡಿ ಹೊರಬಂದೆವು.

ಹೆಚ್ಚುವರಿಯಾಗಿ ಪ್ರವಾಸದ ಪಟ್ಟಿಗೆ ಸೇರಿದ ಈ ‘ವಾರ್ ಮ್ಯೂಸಿಯಂ’, ಪ್ರವಾಸದ ಅಂತ್ಯದಲ್ಲಿ ಅದೇ ಪ್ರಮುಖ ತಾಣವಾಗಿ ನೆನಪಲ್ಲಿ ಉಳಿಯಿತು. ನೀವುಗಳು ಆ ಕಡೆ ಪ್ರವಾಸ ಹೋದರೆ ತಪ್ಪದೇ ಈ ಮ್ಯೂಸಿಯಂ ನೋಡಿಬನ್ನಿ.

ಜೈಸಲ್ಮೇರ್ ವಾರ್‌ ಮ್ಯೂಸಿಯಂ ಪ್ರತಿ ದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ತೆರೆದಿರುತ್ತದೆ. ಮ್ಯೂಸಿಯಂ ವಿಕ್ಷಣೆಗೆ ಯಾವುದೇ ಶುಲ್ಕವಿಲ್ಲ.

**

ಹೋಗುವುದು ಹೇಗೆ?

ಬೆಂಗಳೂರಿನಿಂದ ಜೋಧಪುರಕ್ಕೆ ವಿಮಾನಗಳಿವೆ. ಜೈಸಲ್ಮೇರ್‌ಗೆ ಹೋಗಲು ದೇಶದ ಎಲ್ಲ ಭಾಗಗಳಿಂದ ರೈಲಿನ ವ್ಯವಸ್ಥೆ ಇದೆ. ಜೋಧಪುರ–ಜೈಸಲ್ಮೇರ್ 300 ಕಿ.ಮೀ ದೂರವಿದೆ. ಟ್ಯಾಕ್ಸಿ ಸ್ಥಳೀಯ ಸರ್ಕಾರಿ ಸಾರಿಗೆಯಲ್ಲಿ ಏರ್‌ಪೋರ್ಟ್‌ನಿಂದ ಜೈಸಲ್ಮೇರ್ ತಲುಪಬಹುದು. ಜೈಸಲ್ಮೇರ್‌ ನಗರದಿಂದ ವಾರ್‌ಮ್ಯೂಸಿಯಂಗೆ ಸಾಕಷ್ಟು ಆಟೊರಿಕ್ಷಾ, ಟ್ಯಾಕ್ಸಿಗಳಿವೆ.

ಬೇಸಿಗೆ ಕಾಲ ಹೊರತುಪಡಿಸಿ (ಮಾರ್ಚ್‌ನಿಂದ ಜುಲೈವರೆಗೆ), ಬೇರೆ ದಿನಗಳಲ್ಲಿ ಈ ಮ್ಯೂಸಿಯಂ ವೀಕ್ಷಣೆಗೆ ಜೈಸಲ್ಮೇರ್‌ಗೆ ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.